ನವದೆಹಲಿ ಸೆ 10: ರಾಷ್ಟ್ರೀಯ ಮಹಿಳಾ ಆಯೋಗ (NCW) ಹರಿಯಾಣದ ಫರಿದಾಬಾದ್‌ನಲ್ಲಿ ಆಯೋಜಿಸಿದ್ದ ಮಹಿಳಾ ಶಾಸಕರ ಎರಡು ದಿನಗಳ ಸಾಮರ್ಥ್ಯವರ್ಧನಾ ಕಾರ್ಯಾಗಾರದಿಂದ ಕೇರಳದ ಎಂಟು ಮಹಿಳಾ ಶಾಸಕರು ವಾಕ್‌ಔಟ್ ಮಾಡಿದ್ದಾರೆ. ಕಾರ್ಯಾಗಾರದಲ್ಲಿ ಬಹುತೇಕ ವಿಷಯಗಳನ್ನು ಹಿಂದಿಯಲ್ಲೇ ನಡೆಸಲಾಗಿದ್ದು, ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳ ಶಾಸಕರಿಗೆ ಭಾಷೆ ಅರ್ಥಮಾಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಾರ್ಯಾಗಾರವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉದ್ಘಾಟಿಸಿದ್ದರು. ದೇಶದ ವಿವಿಧ ರಾಜ್ಯಗಳ ಮಹಿಳಾ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಶಾಸಕರಿಗೆ ಹೇಳುವಷ್ಟು ಹೊಸ ವಿಚಾರಗಳಿರಲಿಲ್ಲ’
ಕೇರಳ ವಿಧಾನಸಭೆಯ ಉಪಸಭಾಧ್ಯಕ್ಷೆ ಶಾನಿಮೋಲ್ ಉಸ್ಮಾನ್ ಸೇರಿದಂತೆ ಕೇರಳದ ಪ್ರತಿನಿಧಿಗಳು, ಶಾಸಕರಿಗೆ ಅಗತ್ಯವಿರುವ ಶಾಸನಾತ್ಮಕ ಹಾಗೂ ನೀತಿ ರೂಪಿಸುವ ವಿಚಾರಗಳ ಬದಲು ಅತ್ಯಂತ ಮೂಲಭೂತ ವಿಷಯಗಳ ಕುರಿತು ತರಗತಿಗಳನ್ನು ನಡೆಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಸಹಾಯ ಸಂಘಗಳು ಎಂದರೇನು, ಪೊಲೀಸ್ ಠಾಣೆಗೆ ದೂರು ಅಥವಾ ಅರ್ಜಿ ಸಲ್ಲಿಸುವುದು ಹೇಗೆ ಎಂಬಂತಹ ವಿಷಯಗಳನ್ನು ಕಾರ್ಯಾಗಾರದಲ್ಲಿ ವಿವರಿಸಲಾಗಿತ್ತು. ಇವು ಶಾಸಕರಿಗೆ ಈಗಾಗಲೇ ತಿಳಿದಿರುವ ಮೂಲಭೂತ ವಿಚಾರಗಳು ಎಂದು ಅವರು ಹೇಳಿದ್ದಾರೆ.
ಹಿಂದಿಯೇತರ ರಾಜ್ಯಗಳ ಜನ ಏನು ಮಾಡಬೇಕು?
ತಮ್ಮ ವಿರೋಧ ಹಿಂದಿ ಭಾಷೆಯ ವಿರುದ್ಧವಲ್ಲ, ಆದರೆ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ಬಂದ ಪ್ರತಿನಿಧಿಗಳಿಗೂ ಅರ್ಥವಾಗುವಂತೆ ಇಂಗ್ಲಿಷ್ ಅಥವಾ ಇತರ ಭಾಷೆಗಳ ನೆರವು ನೀಡಬೇಕಿತ್ತು ಎಂಬುದು ಅವರ ವಾದ.
ಕಾರ್ಯಾಗಾರದ ಬಹುತೇಕ ಚರ್ಚೆಗಳು ಹಿಂದಿಯಲ್ಲೇ ನಡೆದ ಹಿನ್ನೆಲೆಯಲ್ಲಿ ಇಂಗ್ಲಿಷ್ ಬಳಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರೂ ಅದನ್ನು ಪರಿಗಣಿಸಲಾಗಲಿಲ್ಲ ಎಂದು ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬಿಂದು ಕೃಷ್ಣ ಆರೋಪಿಸಿದ್ದಾರೆ.
ಕೇರಳದ ಪ್ರತಿನಿಧಿಗಳು ರಾಷ್ಟ್ರೀಯ ಮಹಿಳಾ ಆಯೋಗದ ನೇತೃತ್ವಕ್ಕೆ ತಮ್ಮ ಆಕ್ಷೇಪವನ್ನು ಸಲ್ಲಿಸಿ, ದೇಶದ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನೂ ಒಳಗೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಘೋಷಣೆಗಳ ಬಳಿಕ ವಾಕ್‌ಔಟ್
ಭಾಷಾ ವಿಚಾರವಾಗಿ ಆಕ್ಷೇಪ ವ್ಯಕ್ತವಾದ ಸಂದರ್ಭದಲ್ಲಿ ಕೆಲವರು ‘ಭಾರತ ಮಾತಾ ಕಿ ಜೈ’ ಮತ್ತು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದರು ಎಂದು ಕೇರಳದ ಶಾಸಕರು ಆರೋಪಿಸಿದ್ದಾರೆ. ಉತ್ತರ ಭಾರತದ ಕೆಲ ಪ್ರತಿನಿಧಿಗಳು ಹಿಂದಿಯೇ ರಾಷ್ಟ್ರೀಯ ಭಾಷೆ, ಚರ್ಚೆಗಳು ಹಿಂದಿಯಲ್ಲೇ ನಡೆಯಬೇಕು ಎಂದು ಹೇಳಿದ್ದಾಗಿ ಕೂಡ ಅವರು ತಿಳಿಸಿದ್ದಾರೆ. ಬಳಿಕ ಕೇರಳದ ಎಂಟು ಮಹಿಳಾ ಶಾಸಕರು ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.
ಕೇರಳದ ನಿಯೋಗದಲ್ಲಿ ಉಪಸಭಾಧ್ಯಕ್ಷೆ ಶಾನಿಮೋಲ್ ಉಸ್ಮಾನ್, ಸಚಿವರಾದ ಬಿಂದು ಕೃಷ್ಣ ಮತ್ತು ಕೆ.ಎ. ತುಳಸಿ ಹಾಗೂ ಶಾಸಕರಾದ ಕೆ.ಕೆ. ರೇಮಾ, ಫಾತಿಮಾ ತಹ್ಲಿಯಾ, ವಿದ್ಯಾ ಬಾಲಕೃಷ್ಣನ್ ಮತ್ತು ಉಷಾ ವಿಜಯನ್ ಸೇರಿದಂತೆ ಎಂಟು ಮಂದಿ ಇದ್ದರು.
ಈ ಘಟನೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಪ್ರತಿಕ್ರಿಯಿಸಿದ್ದು, ಸರ್ಕಾರ ‘ಒಕ್ಕೂಟ ವ್ಯವಸ್ಥೆ’ಯ ಅರ್ಥವನ್ನು ತಪ್ಪಾಗಿ ಗ್ರಹಿಸುತ್ತಿದೆ ಎಂದು ಟೀಕಿಸಿದ್ದಾರೆ.

