ಬೆಂಗಳೂರು : ಮಳೆ ನಿಂತರೂ, ಮಳೆ ಹನಿ ನಿಂತಿಲ್ಲ ಎಂಬಂತಾಗಿದೆ ಬೆಂಗಳೂರು. ನಗರದಲ್ಲಿ ನೂರಾರು ಮರಗಳು ಧರೆಗುರುಳಿವೆ. ಮಳೆಗೆ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ.
ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ‘ಕೃಷ್ಣ’ ಕಾಂಪೌಂಡ್ ಮೇಲೆ ಗಾಲ್ಫ್ ಕೋರ್ಟ್‌ನ ಕಬ್ಬಿಣದ ವಾಲ್‌ಗಳು ಕುಸಿದು ಬಿದ್ದಿವೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮನೆಯಲ್ಲೇ ಇದ್ದರು. ಯಾವುದೇ ಅವಘಡ ಸಂಭವಿಸಿಲ್ಲ. ವಾಲ್ ತೆರವುಗೊಳಿಸುವ ಕಾರ್ಯ ನಡೆದಿದೆ.
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಮೃತಪಟ್ಟಿದ್ದಾರೆ. ನಗರದ ವಿವಿದೆಡೆ ಇನ್ನೂ ಮೂವರು ಪ್ರಾಣಕಳೆದುಕೊಂಡಿದ್ದಾರೆ.
ಸಿಮೆಂಟ್ ಇಟ್ಟಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಮನೆಯ ಮೇಲಿನ ಶೀಟ್ ಹಾರದಂತೆ ಕಲ್ಲು ಇಡಲಾಗಿತ್ತು. ಗಾಳಿ ಮಳೆಗೆ ಶೀಟ್ ಬಿದ್ದಿದ್ದು ಈ ವೇಳೆ ಶೀಟ್ ಮೇಲಿಟ್ಟಿದ್ದ ಕಲ್ಲು ಮನೆಯಲ್ಲಿ ಮಲಗಿದ್ದ ಮಂಜುನಾಥ್ ಮೇಲೆ ಬಿದ್ದ ಪರಿಣಾಮ ಸಾವು ಸಂಭವಿಸಿದೆ.
ಯಾರಬ್ ನಗರದಲ್ಲಿ ವಿದ್ಯುತ್ ತಂತಿ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ನಿನ್ನೆ ಸಂಜೆ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ತನ್ನ ಬೈಕ್ ಪಾರ್ಕ್ ಮಾಡಲು ಸೈಯದ್ ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಆತ ಪ್ರಾಣಕಳೆದುಕೊಂಡಿದ್ದ.
.ಜೆ.ಪಿ. ನಗರದ ಮಿನಿ ಫಾರೆಸ್ಟ್ನ 15ನೇ ಕ್ರಾಸ್ ಬಳಿ ರಸ್ತೆಯಲ್ಲಿದ್ದ ವಿದ್ಯುತ್ ಕಂಬದ ಬಳಿ ಹರಿದುಬಿದ್ದಿದ್ದ ವಿದ್ಯುತ್ ತಂತಿ ತಗುಲಿದ ಪರಿಣಾಮ ಸುಮಾರು ರಘು ಎಂಬುವವರು ಮೃತರಾಗಿದ್ದಾರೆ.

