ಭಾಗ -1
2,000 ವರ್ಷಗಳಿಂದ ಈ ದೇಶದಲ್ಲಿ ಜನಸಮೂಹಗಳ ಹೆಗಲ ಮೇಲೆ ಹೇರಿದ್ದ ಬ್ರಾಹ್ಮಣವಾದ- ಮನುವಾದದ ಬಹುಭಾರವಾದ ನೊಗವನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ವಿದ್ವತ್ತು ಮತ್ತು ಪರಿಶ್ರಮಗಳ ಮೂಲಕ ಎತ್ತಿ ಬಿಸಾಕಿಬಿಟ್ಟರು. ಈ ಕಾರಣದಿಂದಲೇ ಇಂದು ಕನಿಷ್ಟ ಪಕ್ಷ ನಾವೆಲ್ಲರೂ ಸ್ವಾಭಿಮಾನದಿಂದ ತಲೆ ಎತ್ತಿ ನಡೆಯಲು ಶಕ್ತರಾಗಿದ್ದೇವೆ. ಹಾಗಾದರೆ, ಬಾಬಾಸಾಹೇಬರಿಗೆ ಇದು ಸಾಧ್ಯವಾಗಿದ್ದು ಹೇಗೆ? ಈ ಕುರಿತು ಪತ್ರಕರ್ತ ಹರ್ಷಕುಮಾರ ಕುಗ್ವೆಯವರು ಬರೆಯುವ ಸರಣಿ ಲೇಖನಗಳಲ್ಲಿ ಮೊದಲನೆಯದು ಇಲ್ಲಿದೆ
ಇಡೀ ದೇಶ ಬಾಬಾಸಾಹೇಬರ ಜನುಮದಿನವನ್ನು ಮತ್ತೊಮ್ಮೆ ಸಂಭ್ರಮಿಸುತ್ತಿದೆ. We are because, He was… ಎಂಬ ಮಾತೊಂದನ್ನು ನಾವು ಬಾಬಾಸಾಹೇಬರನ್ನು ನೆನೆದು ಹೇಳುತ್ತಿರುತ್ತೇವೆ. ಈ ಮಾತು ಇಡೀ ದೇಶದ ಸಮಸ್ತ ಜನತೆಗೆ ಅನ್ವಯಿಸುತ್ತದೆ. 2000 ವರ್ಷಗಳಿಂದ ಈ ದೇಶದಲ್ಲಿ ಜನಸಮೂಹಗಳ ಹೆಗಲ ಮೇಲೆ ಹೇರಿದ್ದ ಬ್ರಾಹ್ಮಣವಾದ- ಮನುವಾದದ ಬಹುಭಾರವಾದ ನೊಗವನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ವಿದ್ವತ್ತು ಮತ್ತು ಪರಿಶ್ರಮಗಳ ಮೂಲಕ ಎತ್ತಿ ಬಿಸಾಕಿಬಿಟ್ಟರು. ಈ ಕಾರಣದಿಂದಲೇ ಇಂದು ಕನಿಷ್ಟ ಪಕ್ಷ ನಾವೆಲ್ಲರೂ ಸ್ವಾಭಿಮಾನದಿಂದ ತಲೆ ಎತ್ತಿ ನಡೆಯಲು ಶಕ್ತರಾಗಿದ್ದೇವೆ. ಹಾಗಾದರೆ, ಬಾಬಾಸಾಹೇಬರಿಗೆ ಇದು ಸಾಧ್ಯವಾಗಿದ್ದು ಹೇಗೆ?
ಮಧ್ಯಪ್ರದೇಶದ ಮೋವ್ ಎಂಬಲ್ಲಿ ʼಅಸ್ಪೃಶ್ಯʼ ಎಂದು ಪರಿಗಣಿಸಲ್ಪಟ್ಟಿದ್ದ ಮಹಾರ್ ಸಮುದಾಯದ ಸುಬೇದಾರ್ ಕುಟುಂಬವೊಂದರಲ್ಲಿ ಜನಿಸಿದ ಭೀಮ ಮುಂದೆ ಅಂಬೇಡ್ಕರ್ ಆಗಿ, ನಂತರ ಬಾಬಾಸಾಹೇಬರಾಗಿ ಬೆಳೆದು ಇಡೀ ದೇಶಕ್ಕೆ ಬೆಳಕು ನೀಡಿದ್ದು ಇತಿಹಾಸ. ಅಂದಿನ ಕಾಲದಲ್ಲಿ ಅತ್ಯಂತ ದಮನಿತ ಸಮುದಾಯವಾಗಿದ್ದ ಒಂದು ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಬೆಳೆದ ಒಬ್ಬ ವ್ಯಕ್ತಿ ಹೀಗೆ ಇಡೀ ದೇಶಕ್ಕೇ ಮುಖ್ಯವಾಗಬೇಕಾಗಿ ಬಂದ ಬಗೆ ಏನಿರಬಹುದು? ಅನುಮಾನವೇ ಇಲ್ಲ ಇದು ಆ ಮಹಾನ್ ವ್ಯಕ್ತಿ ಗಳಿಸಿಕೊಂಡಿದ್ದ ಜ್ಞಾನ ಮತ್ತು ಅದನ್ನು ಆಧರಿಸಿ ಅವರು ಪಡೆದುಕೊಂಡಿದ್ದ ಸ್ಥಾನ, ಮಾನಗಳು. ಆ ಜ್ಞಾನದ ಬುನಾದಿಯ ಮೇಲೆ ಅವರು ಸ್ವಯಂ ಕಟ್ಟಿ ಬೆಳೆಸಿದ ಚಳವಳಿ, ಸಂಘಟನೆಗಳು, ಪಡೆದ ಅಧಿಕಾರಗಳು. ಆ ಜ್ಞಾನದ ಬೆಳಕಿನಲ್ಲೇ ಆ ವ್ಯಕ್ತಿ ಪಡೆದುಕೊಂಡು ಸಾಕ್ಷಾತ್ಕಾರದ ಮೂಲಕ ಈ ದೇಶದ ಬಹುಜನರಿಗೆ ತೋರಿದ ಪ್ರಬುದ್ಧ ಭಾರತದ ಧರ್ಮಮಾರ್ಗ, ನೀತಿ ಮಾರ್ಗ.
ಹಾಗಾದರೆ, ಡಾ.ಬಿ.ಆರ್.ಅಂಬೇಡ್ಕರ್ ಪಡೆದುಕೊಂಡ ಜ್ಞಾನದ ಮಾದರಿ ಮತ್ತು ಅದನ್ನು ಗಳಿಸಲು ಅವರು ಸಾಗಿದ ದಾರಿ ಎರಡೂ ನಮಗೆ ಮುಖ್ಯವಾಗುತ್ತವೆ. ಹೀಗಾಗಿ ಅಂಬೇಡ್ಕರರ ಓದಿನ ಮಾದರಿಯನ್ನು ಕೊಂಚ ಅರಿಯುವ ಪ್ರಯತ್ನವನ್ನು ಈ ಲೇಖನ ಸರಣಿಯಲ್ಲಿ ಮಾಡೋಣ.
ಬಾಬಾಸಾಹೇಬರು ಎರಡು ಪ್ರಕಾರಗಳಲ್ಲಿ ಜ್ಞಾನ ಮಾರ್ಗವನ್ನು ಕಂಡುಕೊಂಡರು. ಮೊದಲನೆಯದು ಅವರ ಅಕಡೆಮಿಕ್ ಶಿಕ್ಷಣವಾದರೆ ಎರಡನೆಯದು ಅವರ ಆಸಕ್ತಿ ಮತ್ತು ತಮ್ಮ ಬದುಕಿನ ಧ್ಯೇಯವನ್ನು ಸಾಕಾರಾಗೊಳಿಸುವ ಮಾರ್ಗದಲ್ಲಿ ಪಡೆದುಕೊಳ್ಳುತ್ತಾ ಮತ್ತು ಹಂಚಿಕೊಳ್ಳುತ್ತಾ ಸಾಗಿದ ಜ್ಞಾನ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಅಕಡೆಮಿಕ್ ಶಿಕ್ಷಣ ಅವರ ಕಾಲದಲ್ಲಿದ್ದ ದೇಶದ ಮಹಾನ್ ರಾಜಕೀಯ ಧುರೀಣರಿಗಿಂತ ತೀರಾ ಭಿನ್ನವಾಗಿತ್ತು. ಆ ಕಾಲದಲ್ಲಿ ಮಹಾತ್ಮಾ ಗಾಂಧೀಜಿಯಂತವರು ಸ್ವಾತಂತ್ರ್ಯ ಚಳವಳಿಗಾಗಿ ದೇಶದ ಯುವಕರಲ್ಲಿ ಶಾಲಾ ಕಾಲೇಜುಗಳನ್ನು, ವೃತ್ತಿಗಳನ್ನು ತೊರೆಯುವ ಕರೆ ನೀಡಿದ್ದರು. ಅದರಂತೆ ಮೇಲ್ವರ್ಗ, ಮೇಲ್ಜಾತಿಗಳಿಂದ ಎಷ್ಟೋ ಜನರು ತಮ್ಮ ಶಿಕ್ಷಣವನ್ನು ತೊರೆದಿದ್ದರು, ವಕೀಲಿಕೆಯಂತಹ ವೃತ್ತಿಗಳನ್ನು ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಆದರೆ, ಇಂತಹ ಲಕ್ಸುರಿ ಅವಕಾಶ ಅಂಬೇಡ್ಕರರಿಗೆ ಖಂಡಿತಾ ಇರಲಿಲ್ಲ. ಅವರ ಬಾಲ್ಯ ಮತ್ತು ಕಾಲೇಜು ದಿನಗಳ ಹೋರಾಟ ಪ್ರಮುಖವಾಗಿ ತಮ್ಮ ಕೌಟುಂಬಿಕ ಹಿನ್ನೆಲೆಯವರಿಗೆ ಸಾಧ್ಯವೇ ಆಗದಿದ್ದ ಉನ್ನತ ಶಿಕ್ಷಣವನ್ನು ಪಡೆಯುವುದಾಗಿತ್ತು. ಅಂಬೇಡ್ಕರ್ ಅವರ ತಂದೆ ರಾಮ್ ಜಿ ಸಕ್ಬಾಲ್ ಬ್ರಿಟಿಷರ ಸೈನ್ಯದಲ್ಲಿ ಸುಬೇದಾರರಾಗಿ ಕೆಲಸ ಮಾಡುತ್ತಿದ್ದ ಕಾರಣ ಅಂಬೇಡ್ಕರ್ ಅವರನ್ನು ಆರಂಭಿಕವಾಗಿ ಒಳ್ಳೆಯ ಶಾಲೆಗೆ ಸೇರಿಸಲು ಸಾಧ್ಯವಾಗಿತ್ತು. ತನ್ನ ಮಗನನ್ನು ಬಿಎ ಓದಿಸಲೇಬೇಕು ಎಂಬುದು ಅವರ ಛಲವಾಗಿತ್ತು. ಬರೀ ಪಾಸು ಮಾಡಿಸುವುದಷ್ಟೇ ಅಲ್ಲ, ಡಿಸ್ಟಿಂಕ್ಷನ್ ನಲ್ಲಿ ಪಾಸು ಮಾಡಿಸಬೇಕು ಎಂದು ಹಠತೊಟ್ಟಿದ್ದರು. ಇಂದಾದರೆ ಬಹಳಷ್ಟು SC, St, OBC ವರ್ಗಗಳ ಪೋಷಕರು ತಮ್ಮ ಮಕ್ಕಳು ಡಿಸ್ಟಿಂಕ್ಷನ್ ಪಾಸಾಗಲಿ ಎಂದೇ ಬಯಸುತ್ತಾರೆ. ಆದರೆ ಅಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನ ದಮನಿತ ಸಮುದಾಯಗಳ ಜನರಿಗೆ ಅಕ್ಷರಾಭ್ಯಾಸ, ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ಕನಸಿನಲ್ಲಿಯೂ ಸಾಧ್ಯವಿರಲಿಲ್ಲ. ಅಂತಾದ್ದರಲ್ಲಿ ಸೇನಾ ತರಬೇತಿ ಕೇಂದ್ರದಲ್ಲಿದ್ದು ಸ್ವತಃ ತಮ್ಮ ತಂದೆಯಿಂದ ಶಿಕ್ಷಣ ಪಡೆದುಕೊಂಡಿದ್ದ ರಾಮಜಿ ಸಕ್ಪಾಲರಿಗೆ ಆ ಅರಿವು ಚೆನ್ನಾಗಿಯೇ ಇತ್ತು. ಹೀಗಾಗಿ ಅವರು ಭೀಮನ ಪರೀಕ್ಷೆಯ ದಿನಗಳಲ್ಲಿ ರಾತ್ರಿ ಎರಡು ಗಂಟೆಯವರೆಗೆ ಎಚ್ಚರವಾಗಿದ್ದು ಮಗನನ್ನು ಎಚ್ಚರಿಸಿ ಓದಲು ಬಿಟ್ಟು ತಾವು ನಿದ್ದೆ ಹೋಗುತ್ತಿದ್ದರು. ನಂತರ ಅವರು ಮುಂಬೈಗೆ ಹೋದ ನಂತರ ಹೊಸ ಹೊಸ ಪುಸ್ತಕಗಳನ್ನು ತಂದು ಮಗನಿಗೆ ಕೊಡುತ್ತಿದ್ದರು. ಮೊದಮೊದಲು ಭೀಮ ಓದುವುದರಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಕ್ರಮೇಣವಾಗಿ ಅವನಿಗೆ ಪುಸ್ತಕ ಓದುವುದರ ರುಚಿ ಹತ್ತಿತು. ನಂತರ ತಾನಾಗಿಯೇ ತಂದೆಯ ಬಳಿ ಪುಸ್ತಕಗಳನ್ನು ಕೇಳಿ ತರಿಸಿಕೊಳ್ಳ ತೊಡಗಿದ. ಭೀಮ ಕೇಳಿದ ಯಾವುದೇ ಪುಸ್ತಕವಿರಲಿ ರಾಮಜಿ ಸಕ್ಪಾಲ್ ಇಲ್ಲ ಎನ್ನುತ್ತಿರಲಿಲ್ಲ. ತಮ್ಮ ಪಿಂಚಣಿ ಹಣದಿಂದಲೇ ತಂದು ಕೊಡುತ್ತಿದ್ದರು. ಅಕಸ್ಮಾತ್ ದುಡ್ಡು ಕಡಿಮೆ ಬಿದ್ದರೆ ತಂಗಿಯ ವಡವೆಗಳನ್ನು ಗಿರವಿಯಿಟ್ಟು ಪುಸ್ತಕ ಖರೀದಿ ಮಾಡಿ ಮಗನಿಗೆ ಕೊಟ್ಟು ನಂತರ ಮತ್ತೆ ಪಿಂಚಣಿ ಬಂದಾಗ ತೀರಿಸುತ್ತಿದ್ದರು.
1904ರಲ್ಲಿ ರಾಮಜಿ ಸಕ್ಪಾಲ್ ಸೈನ್ಯದಲ್ಲಿ ತಮ್ಮ ಹುದ್ದೆಯನ್ನು ಕಳೆದುಕೊಂಡು ನಂತರದಲ್ಲಿ ಮಕ್ಕಳಿಬ್ಬರಿಗೂ ಒಳ್ಳೆಯ ಶಾಲೆಗೆ ಸೇರಿಸುವುದು ಸಾಧ್ಯವೇ ಆಗದ ಪರಿಸ್ಥಿತಿಗೆ ಬಂದು ತಲುಪಿತ್ತು. ತಮ್ಮ ಪಿಂಚಣಿಯಲ್ಲೆ ಇಬ್ಬರು ಮಕ್ಕಳನ್ನು ಓದಿಸುವುದು ಅವರಿಗೆ ಕಷ್ಟವಾಗಿತ್ತು. ಹೀಗಾಗಿ ಹಿರಿಮಗ ಬಲರಾಮನನ್ನು ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಸಿದರು. ಚಿಕ್ಕ ಮಗ ಭೀಮನನ್ನು ಎಲ್ಫಿನ್ ಸ್ಟನ್ ಹೈಸ್ಕೂಲ್ ಗೆ ಕಳಿಸಿದ್ದರು. ಅಲ್ಲಿ ಸ್ವಲ್ಪ ಶುಲ್ಕ ವಿನಾಯಿತಿಯೂ ಸಿಕ್ಕಿತ್ತು. ಆಗ ಅಂಬೇಡ್ಕರ್ ಗೆ ಹೆಚ್ಚು ಸ್ನೇಹಿತರಿರಲಿಲ್ಲ. ಅಷ್ಟರಲ್ಲಾಗಲೇ ಅವರು ಯಾವುದಾದರೂ ಪುಸ್ತಕ ಹಿಡಿದು ಓದುತ್ತಾ ಕೂರುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅಲ್ಲೇ ಸನಿಹದಲ್ಲಿದ್ದ ಉದ್ಯಾನವನವೊಂದರಲ್ಲಿ ಅವರು ಹೀಗೆ ಗಂಟೆಗಟ್ಟಲೆ ಓದುತ್ತಾ ಕೂರುವುದನ್ನು ಬಹಳ ದಿನಗಳ ಕಾಲ ಗಮನಿಸಿದ್ದ ಪಕ್ಕದ ವಿಲ್ಸನ್ ಹೈಸ್ಕೂಲಿನ ಪ್ರಿನ್ಸಿಪಾಲ್ ಕೃಷ್ಣಾ ಅರ್ಜುನ್ ರಾವ್ ಕೇಲುಸ್ಕರ್ ಅವರು ತಾವಾಗಿಯೇ ಹೋಗಿ ಈ ಬಾಲಕ ಭೀಮನನ್ನು ಪರಿಚಯ ಮಾಡಿಕೊಂಡು ಮಾತಾಡಿಸಿದ್ದರು. ಈ ಬಾಲಕನ ಆಸಕ್ತಿಯನ್ನು ತಿಳಿದ ಕೇಲುಸ್ಕರ್ ಮುಂದೆ ಅಂಬೇಡ್ಕರ್ ಅವರಿಗೆ ಬಹುಕಾಲ ಬೆಂಬಲ ನೀಡುತ್ತಾರೆ. ಅಂಬೇಡ್ಕರ್ ಬದುಕಿನಲ್ಲಿ ಇದೊಂದು ದೊಡ್ಡ ತಿರುವು ನೀಡಿದ ಘಟನೆ ಎನ್ನಬಹುದು.
1907ರಲ್ಲಿ ಭೀಮ ಮೆಟ್ರಿಕ್ಯುಲೇಶನ್ (10ನೇ ತರಗತಿ) ಪಾಸಾದಾಗ ಅದೊಂದು ದೊಡ್ಡ ಸಾಧನೆಯಾಗಿ ಸಂಭ್ರಮದ ವಾತಾವರಣದಲ್ಲಿ ಭೀಮನಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಬ್ರಾಹ್ಮಣೇತರ ಚಳುವಳಿಯ ರಾಜಕೀಯ ಮುಖಂಡ ಎಸ್ ಕೆ ಬೋಲೆ ಮತ್ತು ಮೇಲೆ ತಿಳಿಸಿದ ಕೇಲುಸ್ಕರ್ ಅವರು ಈ ಸಮಾರಂಭದಲ್ಲಿ ಹಾಜರಿದ್ದರು. ನಂತರ ಕೇಲುಸ್ಕರ್ ಅವರು ಬರೋಡಾ ಸಂಸ್ಥಾನದ ಮಹಾರಾಜರ ಬಳಿ ಮಾತಾನಾಡಿ, ಭೀಮನ ಬಡತನವನ್ನು ಸಯ್ಯಾಜಿರಾವ್ ಗಾಯಕವಾಡ್ ಅವರಿಗೆ ಮನವರಿಕೆ ಮಾಡಿಸಿ ಕಾಲೇಜು ಶಿಕ್ಷಣಕ್ಕೆ ಸ್ಕಾಲರ್‌ಶಿಪ್ ಕೊಡಿಸಿದರು. ಇದರಿಂದಾಗಿ ಅಂಬೇಡ್ಕರ್ ತಮ್ಮ ಕಾಲೇಜು ಶಿಕ್ಷಣವನ್ನು ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಪಡೆಯಲು ಸಾಧ್ಯವಾಯಿತು. ಅಲ್ಲಿ ಅವರು ಇಂಗ್ಲಿಷ್ ಮತ್ತು ಪರ್ಷಿಯನ್ ಸಾಹಿತ್ಯಗಳನ್ನು ಓದಿದರು.
ಬಿಎ ಡಿಗ್ರಿಯ ನಂತರದಲ್ಲಿ ಬರೋಡಾ ಮಹಾರಾಜರ ಸಂಸ್ಥಾನದಲ್ಲಿ ಕೆಲಸ ಮಾಡಲು ಬಯಸಿದರು. ಆದರೆ ಇದು ರಾಮಜಿ ಸಕ್ಪಾಲರಿಗೆ ಇಷ್ಟವಿರಲಿಲ್ಲ. ಯಾಕೆಂದರೆ ಬರೋಡಾ ಎಂದರೆ ಜಾತಿವಾದಿಗಳ ಗೂಡಾಗಿದ್ದು ಅಲ್ಲಿ ಅಂಬೇಡ್ಕರ್ ತೀರಾ ಕಷ್ಟಪಡಬೇಕಾಗುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಮೊದಲಿಗೆ ಇದನ್ನು ಒಪ್ಪದ ಅಂಬೇಡ್ಕರ್ ಯಾವಾಗ ಅಲ್ಲಿ ಕೆಲಸ ಮಾಡಲು ಪ್ರಯತ್ನ ಪಟ್ಟರೋ ಆಗ ಅವರಿಗೆ ಜಾತಿ ತಾರತಮ್ಯದ ಬಿಸಿ ತಟ್ಟಿತು. ಅವರಿಗೆ ಅಲ್ಲಿ ರಾತ್ರಿ ತಂಗಲೂ ವಸತಿ ಸಿಗುತ್ತಿರಲಿಲ್ಲ. ಒಳ್ಳೆಯ ಕೆಲಸವೂ ಸಿಗಲಿಲ್ಲ. ಸಂಸ್ಥಾನದ ಯಾವುದೇ ಇಲಾಖೆ ಅವರನ್ನು ಹತ್ತಿರ ಸೇರಿಸಿಕೊಳ್ಳಲಿಲ್ಲ. ಈ ಹೊತ್ತಿಗೆ ತಂದೆಯವರು ತೀರಿಕೊಂಡ ಸುದ್ದಿ ಬಂದಿದ್ದರಿಂದ ಮತ್ತೆ ಅಂಬೇಡ್ಕರ್ ಮುಂಬೈಗೆ ಮರಳಿದರು. ನಂತರ ಬರೋಡಾ ಮಹಾರಾಜರಿಗೆ ತಾವು ಎದುರಿಸಿದ ಪರಿಸ್ಥಿತಿಯನ್ನು ತಿಳಿಸಿದರು. ಆಗ ಮಹಾರಾಜರೇ ಹೆಚ್ಚಿನ ವಿದ್ಯಾರ್ಥಿ ವೇತನ ನೀಡಿ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಹೆಚ್ಚಿನ ಓದಿಗೆ ಕಳಿಸುವುದಾಗಿ ಹೇಳಿದರು. ಈ ರೀತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸುವುದು ಸಯ್ಯಾಜಿರಾವ್ ಗಾಯಕವಾಡರ ಗುರಿಯಾಗಿತ್ತು. ಅಂಬೇಡ್ಕರ್ ಅವರ ನಿರರ್ಗಳ ಇಂಗ್ಲಿಷ್ ನೋಡಿ ಬೆರಗಾಗಿ ವಿದೇಶಿ ಶಿಕ್ಷಣಕ್ಕೆ ಅಂಬೇಡ್ಕರ್ ಸೂಕ್ತ ಅಭ್ಯರ್ಥಿ ಎಂದು ಅವರಿಗೆ ಅನಿಸಿತ್ತು.
ಹೀಗೆ 1913ರ ಜುಲೈನಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಭಾರತದ ನೆಲದ ಗಡಿಗಳಾಚೆ ವಿಶ್ವಮಟ್ಟದಲ್ಲಿ ಉನ್ನತ ಶಿಕ್ಷಣಕ್ಕೆ ಹೆಸರಾಗಿದ್ದ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕಾಲಿಟ್ಟರು.
ಈ ನಡುವೆ ನಾವೊಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಅಂಬೇಡ್ಕರ್ ತಮ್ಮ ಈ ಶಿಕ್ಷಣದ ಅವಧಿಯಲ್ಲಿ ಸಂಸಾರಸ್ಥರೂ ಆಗದ್ದರು. 1905ರಲ್ಲೇ ಇನ್ನೂ ತಮ್ಮ 14ನೇ ವಯಸ್ಸಿನಲ್ಲೇ 9 ವರ್ಷದ ರಮಾಬಾಯಿವರೊಂದಿಗೆ ಅಂಬೇಡ್ಕರ್ ಅವರ ಮದುವೆ ಆಗಿ ಹೋಗಿತ್ತು. ಅಂದಿನ ಸಂಪ್ರದಾಯಗಳು, ಸಾಮಾಜಿಕ ಪರಿಸ್ಥಿತಿಗಳು ಹಾಗೇ ಇದ್ದವು. 1912ರಲ್ಲಿ ಅಂಬೇಡ್ಕರ್ – ರಮಾ ದಂಪತಿಗಳ ಮೊದಲ ಮಗ ಯಶವಂತನೂ ಹುಟ್ಟಿದ್ದ. ನಂತರ 19013ರಿಂದ 1924ರ ನಡುವೆ ಹುಟ್ಟಿದ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ. ಅಪೌಷ್ಟಿಕತೆ, ಅನಾರೋಗ್ಯದಿಂದ ಅವರು ತೀರಿಕೊಂಡರು. ಅದರಲ್ಲೂ ರಾಜರತ್ನ ಎಂಬ ಮಗನನ್ನು ಕಳೆದುಕೊಂಡಾಗ ಅಂಬೇಡ್ಕರ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಂತಹ ಒಂದು ಮಗುವನ್ನೇ ನಾನು ನೋಡಿರಲಿಲ್ಲ, ಅಷ್ಟು ಅದ್ಭುತವಾದ ಮಗು ಅದಾಗಿತ್ತು, ಆದರೆ ಅದನ್ನೂ ಉಳಿಸಿಕೊಳ್ಳಲಾಗಲಿಲ್ಲʼ ಎಂದು ತಮ್ಮ ಸಂಕಟವನ್ನು ಅಂಬೇಡ್ಕರ್ ಪತ್ರವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಂಬೇಡ್ಕರ್ ಅಮೆರಿಕಕ್ಕೆ ಹೊರಡುವಾಗ ಅವರ ಕುಟುಂಬದಲ್ಲಿ 10ರಿಂದ 12 ಜನರಿದ್ದರು. ಅವರೆಲ್ಲರನ್ನೂ ಸಲಹುವ ಹೊಣೆ ಸೋದರ ಬಲರಾಮನ ಮೇಲೆಯೇ ಬಿದ್ದಿತ್ತು. ಅವನಾದರೋ ಒಬ್ಬ ಸಾಮಾನ್ಯ ಲೇಬರರ್ ಆಗಿ ದುಡಿದು ಎಲ್ಲವನ್ನೂ ನಿಭಾಯಿಸಬೇಕಿತ್ತು.
(ಮುಂದುವರೆಯುವುದು…)
ಹರ್ಷಕುಮಾರ್ ಕುಗ್ವೆ
ಇದನ್ನೂ ಓದಿ- ಸ್ಮರಣೆ | ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ: ಡಾ. ಬಿ.ಆರ್. ಅಂಬೇಡ್ಕರ್