ಹಾಸನ: ಮದ್ಯ ಮಾರಾಟದಿಂದ ಬರುವ ಆದಾಯ ಪಾಪದ ಹಣ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಿದರೆ ನಾನು ಅವರಿಗೆ ಸಾವಿರ ಸಲಾಂ ಹೊಡೆಯುತ್ತೇನೆ ಎಂದು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಬಿ.ಆರ್. ಪಾಟೀಲ್ ಹೇಳಿದ್ದಾರೆ.
ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಭಾರತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಸಮುದಾಯಲ್ಲಿ ಮದ್ಯ ಸೇವನೆಯ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಬಡವರ ಜೀವನದ ಮೇಲೆ ಇದು ದುಷ್ಪರಿಣಾಂ ಬೀರುತ್ತಿದೆ. ಆದ್ದರಿಂದ ದೇಶಾದ್ಯಂತ ಮದ್ಯ ನಿಷೇಧವನ್ನು ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಾನು ಆಗ್ರಹಪಡಿಸುತ್ತೇನೆ ಎಂದರು.
ದೇಶಾದ್ಯಂತ ಮದ್ಯನಿಷೇಧ ಮಾಡಿದರೆ ಜನ ಸಾಮಾನ್ಯರ ಬದುಕಿನಲ್ಲಿ ಸುಧಾರಣೆಯಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮದ್ಯ ಸೇವನೆಯ ದುಷ್ಪರಿಣಾಮ ಕುರಿತು ಕಳಕಳಿ ಇದೆ. ಆದರೆ ಇಡೀ ದೇಶದಲ್ಲಿ ಮದ್ಯ ನಿಷೇಧ ನೀತಿ ಜಾರಿಗೆ ತಂದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಮದ್ಯ ಮಾರಾಟದಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ಬರಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಸಣ್ಣ ಸಣ್ಣ ಅಂಗಡಿಗಳಲ್ಲೂ ಮದ್ಯ ಸುಲಭವಾಗಿ ಸಿಗುತ್ತಿದ್ದು, ಬಡತನಕ್ಕೆ ಪ್ರಾಥಮಿಕ ಕಾರಣವಾಗಿದೆ ಎಂದು ಬಿ.ಆರ್ ಪಾಟೀಲ್ ಅಭಿಪ್ರಾಯಪಟ್ಟರು.
ಸಮಾಜದ ಎಲ್ಲ ಧರ್ಮಗುರುಗಳು ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಕೇವಲ ಒಂದು ತಾಲ್ಲೂಕಿನಲ್ಲಿ ಮಾತ್ರ ಹೋರಾಟ ಮಾಡಿದರೆ ಸಾಲದು. ರಾಜ್ಯಾದ್ಯಂತ ಮದ್ಯ ನಿಷೇಧ ವಿರುದ್ಧ ಆಂದೋಲನ ನಡೆಯಬೇಕು. ಇದರಿಂದ ಡ್ರಗ್ಸ್ ಮುಕ್ತ ಸಮಾಜ ಮತ್ತು ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ ಮಾಡಬಹುದು ಎಂದರು.