ಮುಸ್ಲಿಂ ಸಮುದಾಯಕ್ಕೆ ತಲೆನೋವಾಗಿರುವ ಸಚಿವ ಝಮೀರ್ ಅಹಮದ್..

Most read

ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಇರುವ ಮುಸ್ಲಿಂ ಸಮುದಾಯಕ್ಕೆ ನಾಯಕರಾಗುವಷ್ಟು ಪ್ರಬುದ್ಧ ವ್ಯಕ್ತಿತ್ವ ಜಮೀರ್‌ ಅವರಲ್ಲಿಲ್ಲ ಎನ್ನುವುದು ಸತ್ಯ..ಇತಿಹಾಸದ ಪುಟಗಳನ್ನು ತೆರೆದು ನಜೀರ್ ಸಾಬ್, ಅಜೀಜ್ ಸೇಠ್, ಎಸ್ ಎಮ್ ಯಾಹ್ಯ, ಜಾಫರ್ ಷರೀಫ್ ರಂತಹ ನಾಯಕರ ರಾಜಕೀಯ ಜೀವನದ ಅಧ್ಯಯನವನ್ನು ಝಮೀರ್ ಮಾಡಬೇಕಿದೆ. ಝಮೀರ್ ಮಾತು ಕೃತಿ ಎರಡರಲ್ಲೂ ಕೂಡ ಸಮುದಾಯಕ್ಕೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸ‌ ಬೇಕಿದೆ – ಮುಷ್ತಾಕ್ ಹೆನ್ನಾಬೈಲ್, ಬರಹಗಾರರು.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಝಮೀರ್ ಅಹಮದ್ ರನ್ನು ಮುಸ್ಲಿಮರ ನಾಯಕ ಎಂಬಂತೆ ಬಿಂಬಿಸಿದಾಗಲೇ ಅಪಾಯದ ಸೂಚನೆಗಳು ಸಿಕ್ಕಿದ್ದವು. ಮೊದಲೇ ಈ ಝಮೀರ್ ಗೆ ಮಾತಿನ ಮೇಲೆ ಹಿಡಿತ ಇಲ್ಲ. ಯಾವುದೇ ಕ್ಲಿಷ್ಟಕರ ಪರಿಸ್ಥಿತಿ ಮತ್ತು ವಿಷಯವನ್ನು ತಿಳಿಗೊಳಿಸಬಲ್ಲ ವಿದ್ಯೆಯಾಗಲಿ ಚಾಕಚಕ್ಯತೆಯಾಗಲಿ ಇಲ್ಲ. ಇಡೀ ದೇಶದಲ್ಲೇ, ಕರ್ನಾಟಕದಲ್ಲಿ ಮುಸ್ಲಿಮರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವಷ್ಟು ಯಾವ ರಾಜ್ಯಗಳಲ್ಲೂ ಮಾಡುವುದಿಲ್ಲ. ಇಂತಹ ಸೂಕ್ಷ್ಮ ಪರಿಸ್ಥಿತಿ ಇರುವಾಗ ಜಮೀರ್ ತರಹದ ಭಾಷಾ ಪ್ರಜ್ಞೆ ಇಲ್ಲದ ಮತ್ತು ಸಾಮಾಜಿಕ ಸೂಕ್ಷ್ಮತೆಗಳನ್ನು ಅರಿಯದ ಮಂತ್ರಿ ಇನ್ನಷ್ಟು ಸಂಕಷ್ಟಗಳನ್ನು ಸಮುದಾಯ ಮತ್ತು ಸರ್ಕಾರಕ್ಕೆ ತರುತ್ತಾರೆ ಎಂಬುದು ಸಾಮಾನ್ಯ ಜ್ಞಾನ. ‌

ಯಾವುದೇ ವಿವಾದಾತ್ಮಕ ವಿಚಾರಗಳು ಬಂದಾಗ ಝಮೀರ್ ಅಗತ್ಯಕ್ಕಿಂತ ಹೆಚ್ಚು ಉದ್ವೇಗಕ್ಕೆ ಒಳಗಾಗುತ್ತಾರೆ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಾರೆ .ವಕ್ಫ್ ವಿಚಾರದಲ್ಲಿಯೂ ಕೂಡ, ನೋಟಿಸ್ ಹಿಂದಿನ ಸರ್ಕಾರಗಳೂ ಕೂಡ ನಿರಂತರವಾಗಿ ನೀಡಿವೆ, ಇದೊಂದು ನಿರಂತರವಾದ ಸಾಮಾನ್ಯ ಪ್ರಕ್ರಿಯೆ ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡುವಲ್ಲಿಯೂ ಇವರು ದೊಡ್ಡ ಮಟ್ಟದಲ್ಲಿ ಸೋತಿದ್ದಾರೆ.

ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರಗಳಿಗೆ ಇವರು ಮಾತನಾಡಲು ಹೋದರೆ ಗೆಲ್ಲುವ ಅಭ್ಯರ್ಥಿಯನ್ನೂ ಕೆಲವೊಮ್ಮೆ ಸೋಲಿಸಿ ಬರುತ್ತಾರೆ. ಕಳೆದ ತೆಲಂಗಾಣ ಚುನಾವಣೆಯಲ್ಲಿ ಕೂಡ ಕರ್ನಾಟಕ ಸ್ಪೀಕರ್ ಹುದ್ದೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಈಗ ಚನ್ನಪಟ್ಟಣ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದು ಬಹುತೇಕ ಗೆಲುವಿನ ಸನಿಹದಲ್ಲಿದ್ದ ಕಾಂಗ್ರೆಸ್‌ ಗೆ ಇರಿಸು ಮುರಿಸು ಉಂಟು ಮಾಡಿದ್ದಾರೆ. ಮೊದಲೇ ಶಿಗ್ಗಾವಿಯ ಗೆಲ್ಲಬಹುದಾದ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಅವಕಾಶ ಕೊಡದೆ ಅಷ್ಟೇನೂ ಜನಪ್ರಿಯರಲ್ಲದ ಅಭ್ಯರ್ಥಿಗೆ ಅವಕಾಶ ನೀಡಿ ಕ್ಷೇತ್ರವನ್ನು ಬಿಜೆಪಿಗೆ ತಟ್ಟೆಯಲ್ಲಿಟ್ಟು ಕಾಂಗ್ರೆಸ್‌ ನವರು ಕೊಟ್ಟಾಗಿದೆ. ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಮುಸ್ಲಿಮರು ಕುಂತರೂ ತಪ್ಪು ನಿಂತರೂ ತಪ್ಪು ಎನ್ನುವ ವಾತಾವರಣ ಇರುವಾಗ ಝಮೀರ್ ರಂತಹ ಸಚಿವರು ಆಡುವ ಮಾತು ಮತ್ತು ಮಾಡುವ ಕಾರ್ಯ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಸಮಸ್ಯೆಯನ್ನು ತಂದಿಡುತ್ತಿದೆ.

ನಿಸ್ಸಂಶಯವಾಗಿ ಜಮೀರ್ ಒಬ್ಬ ಉತ್ತಮ ಸಮಾಜ ಸೇವಕರು. ಇಡೀ ರಾಜ್ಯದಲ್ಲಿ, ಜಾತಿ ಧರ್ಮ ನೋಡದೆ ಕ್ಷೇತ್ರದ ಜನರಿಗೆ ಅತಿಹೆಚ್ಚು ಸಹಾಯ ಮಾಡುವ ಶಾಸಕರಲ್ಲಿ ಇವರು ಮೊದಲನೆಯ ಸ್ಥಾನದಲ್ಲಿದ್ದಾರೆ. ಹೀಗಿದ್ದರೂ, ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಇರುವ ಮುಸ್ಲಿಂ ಸಮುದಾಯಕ್ಕೆ ನಾಯಕರಾಗುವಷ್ಟು ಪ್ರಬುದ್ಧ ವ್ಯಕ್ತಿತ್ವ ಇವರಲ್ಲಿಲ್ಲ ಎನ್ನುವುದು ಸತ್ಯ..ಇತಿಹಾಸದ ಪುಟಗಳನ್ನು ತೆರೆದು ನಜೀರ್ ಸಾಬ್, ಅಜೀಜ್ ಸೇಠ್, ಎಸ್ ಎಮ್ ಯಾಹ್ಯ, ಜಾಫರ್ ಷರೀಫ್ ರಂತಹ ನಾಯಕರ ರಾಜಕೀಯ ಜೀವನದ ಅಧ್ಯಯನವನ್ನು ಝಮೀರ್ ಮಾಡಬೇಕಿದೆ. ಝಮೀರ್ ಮಾತು ಕೃತಿ ಎರಡರಲ್ಲೂ ಕೂಡ ಸಮುದಾಯಕ್ಕೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸ‌ ಬೇಕಿದೆ.

ಮುಷ್ತಾಕ್ ಹೆನ್ನಾಬೈಲ್

ಬರಹಗಾರರು

ಇದನ್ನೂ ಓದಿ- ಕಾಲಾ ಕುಮಾರಸ್ವಾಮಿ ಹೇಳಿಕೆಗೆ ಕ್ಷಮೆ ಕೇಳಿದ ಸಚಿವ ಜಮೀರ್

More articles

Latest article