ದಾವಣಗೆರೆ: ರಾಜ್ಯ ಮಟ್ಟದ ಯುವಜನೋತ್ಸವ ಜನವರಿ 5 ಮತ್ತು 6 ರಂದು ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈ ಮೇಳದಲ್ಲಿ ಸ್ಪರ್ಧಾಳುಗಳಿಗೆ ರಾತ್ರಿ ಊಟಕ್ಕೆ ಮಾಂಸಾಹಾರವನ್ನು ಜಿಲ್ಲಾಡಳಿತ ನೀಡಲಿದೆ. ಈ ಮೇಳದಲ್ಲಿ ಏಳು ವಿಭಾಗಗಳಲ್ಲಿ ಸಮನಾಂತರ ವೇದಿಕೆಗಳಲ್ಲಿ ಏಕ ಕಾಲಕ್ಕೆ ಸ್ಪರ್ಧೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಜನವರಿ 5 ರಂದು ಬೆಳಗ್ಗೆ 10.30 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವಜನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಇಲ್ಲಿ ವಿಜೇತರಾದವರು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದಾರೆ. ಜನಪದ ನೃತ್ಯ, ಜನಪದ ಗೀತೆ, ವಿಜ್ಞಾನ ವಸ್ತು ಪ್ರದರ್ಶನ, ಕಥೆ, ಕವನ ರಚನೆ, ಚಿತ್ರಕಲೆ ಮತ್ತು ಚರ್ಚೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಒಂದೂವರೆ ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಇವರೆಲ್ಲರ ರಾತ್ರಿ ಊಟಕ್ಕೆ ಮಾಂಸಾಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.