ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡೋದಾದ್ರೆ ನೀವ್ಯಾರು(ಎಂಇಎಸ್) ಕರ್ನಾಟಕದಲ್ಲಿ ಇರಬಾರದು. ಇವತ್ತೆ ಗಂಟು-ಮೂಟೆ ಕಟ್ಟಿಕೊಂಡು ಮಹಾರಾಷ್ಟ್ರಕ್ಕೆ ಹೋಗಿ. ಎಂಇಎಸ್ ಮರಾಠಿ ಗುಂಡಾಗಳಿಗೆ ಇದು ನೇರವಾದ ಎಚ್ಚರಿಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ್ರು ಆಕ್ರೋಶ ವ್ಯಕ್ತಪಡಿಸಿದರು.
ಮರಾಠಿ ಮತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕ ಮತ್ತು ಚಾಲಕರ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿರುವುದನ್ನು ಖಂಡಿಸಿ ಟಿ.ಎ.ನಾರಾಯಣಗೌಡ್ರು ಇಂದು ಬೆಳಗಾವಿಗೆ ತೆರಳಿದ್ದಾರೆ. ಇಂದು(ಫೆ 25) ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು, ಮಸಿ ಬಳಿಯುವುದು ನಾನು ಹಲವಾರು ವರ್ಷಗಳಿಂದ ನೋಡಿದ್ದೆನೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅದನ್ನು ಬಿಟ್ಟು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿದರೆ ಕರವೇ ಸಹಿಸೊಲ್ಲ ಎಂದರು.
ಮರಾಠಿಗರು ಕರ್ನಾಟಕದ ಅತಿಥಿಗಳು ಎಂಬ ಅರಿವಿನಿಂದ ಬೆಳಗಾವಿಯಲ್ಲಿ ಇರಬೇಕು. ಮರಾಠ ಸಂಸ್ಕೃತಿ, ಆಚಾರ-ವಿಚಾರಗಳು ಇದ್ದರೆ ಮಹಾರಾಷ್ಟ್ರಕ್ಕೆ ಹೋಗಿ. ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡದಲ್ಲೇ ಮಾತಾನಾಡಬೇಕು. ಇಲ್ಲವಾದರೆ ಕರವೇ ನಿಮಗೆ ತಕ್ಕ ಪಾಠ ಕಲಿಸುತ್ತೆ ಎಂದು ಎಚ್ಚರಿಕೆ ಸಂದೇಶ ಕೊಟ್ಟರು.
ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮನ ನೆಲ, ಸಂಗೊಳ್ಳಿ ರಾಯಣ್ಣನ ಪುಣ್ಯ ಭೂಮಿ. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿರಬೇಕು. ಮರಾಠಿಗರೇ ನಿಮ್ಮ ಭಾಷಾ ಪ್ರೇಮ ಇದ್ದರೆ ಮಹಾರಾಷ್ಟ್ರಕ್ಕೆ ತೆರಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.