ನಾವು ಬೀದಿಗೆ ಇಳಿದರೆ ನೀವು ಮನೆಗೆ ಹೋಗಬೇಕಾಗುತ್ತದೆ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

Most read

ಬೆಂಗಳೂರು: ನಮ್ಮ ತಂದೆಯವರಿಗೆ ಗೌರವ ಕೊಟ್ಟು ನಾನೂ ಸುಮ್ಮನೆ ಇದ್ದೇನೆ. ನಮಗೂ ಮಾತನಾಡಲು ಬರುತ್ತದೆ. ನಾವು ಬೀದಿಗೆ ಇಳಿದರೆ ನೀವು ಮನೆ ಸೇರಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಪ್ರಕರಣದಲ್ಲಿ ಬಿಜೆಪಿ ಮುಖಂಡರು ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ಸಚಿನ್ ಪಾಂಚಾಳ್ ಕುಟುಂಬದವರ ಜೊತೆ ನಾನು ಮಾತನಾಡಿದ್ದೇನೆ. ಬಿಜೆಪಿಯವರು ಹೇಳಿದಂತೆ ನಾವು ಕುಣಿಯಲು ಸಾಧ್ಯವಿಲ್ಲ. ಪಾರದರ್ಶಕವಾಗಿ ತನಿಖೆ ಮಾಡಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಚಿನ್ ಕುಟುಂಬದವರಿಗೆ ನಾನೂ ಭರವಸೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.

ಬಿಜೆಪಿಯವರಿಗೆ ಸಿಬಿಐ ಮೇಲೆ ಯಾಕೆ ಪ್ರೀತಿ? ಬಿಜೆಪಿ ಮುಖಂಡರ ಸ್ಕ್ರಿಪ್ಟ್ಗೆ ನಾವು ನಟನೆ ಮಾಡಲು ಸಾಧ್ಯವಿಲ್ಲ. ಒಂದು ಜೀವ ಹೋಗಿದೆ, ಅದಕ್ಕೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸರ್ಕಾರದ ವಿರುದ್ದ ಹೇಳಿಕೆ ನೀಡುವಂತೆ ಸಚಿನ್ ಕುಟುಂಬದವರಿಗೆ ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಬೆರೆಸುತ್ತಿರುವುದು ಬಿಜೆಪಿ. ಹೆಣ ಬಿದ್ದರೆ ಬಿಜೆಪಿಯವರಿಗೆ ಸಂಭ್ರಮ ಎಂದು ವ್ಯಂಗ್ಯವಾಡಿದರು.
ಚಂದು ಪಾಟೀಲ ಯಾರು? ಸುಪಾರಿ ಕೊಡಲು ನಮಗೆ ಬೇರೆ ಕೆಲಸ ಇಲ್ಲವೇ? ನಾವು ಕಲಬುರಗಿಯಲ್ಲಿ ಸುಪಾರಿ ರಾಜಕೀಯ ಮಾಡಿಕೊಂಡು ಬಂದಿಲ್ಲ. ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರ ವರ್ತನೆ ಮಿತಿ ಮೀರುತ್ತಿದೆ. ನಮ್ಮ ತಂದೆಯವರಿಗೆ ಗೌರವ ಕೊಟ್ಟು ನಾನೂ ಸುಮ್ಮನೆ ಇದ್ದೇನೆ. ನಮಗೂ ಮಾತನಾಡಲು ಬರುತ್ತದೆ. ನಾವು ಬೀದಿಗೆ ಇಳಿದರೆ ಬಿಜೆಪಿಯವರು ಮನೆ ಸೇರಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಸಿಐಡಿ ತನಿಖೆ ಆರಂಭವಾಗಿ ಎರಡು ದಿನ ಮಾತ್ರ ಆಗಿದೆ. ಈಗಾಗಲೇ ಮಹಜರು ಮಾಡಿದ್ದಾರೆ. ಪಾರದರ್ಶಕವಾಗಿ ತನಿಖೆ ನಡೆಸುವುದು ಸರ್ಕಾರದ ಕೆಲಸ ಎಂದರು.

ಸಿಬಿಐ ತನಿಖೆಗೆ ಕೊಡಬೇಕು ಎಂದು ಬಿಜೆಪಿಯವರು ಹೇಳಿದ ಮಾತ್ರಕ್ಕೆ ಕೇಳಲು ಆಗುವುದಿಲ್ಲ. ಗಂಗಾ ಕಲ್ಯಾಣ, ಪಿಎಸ್ಐ ಹಗರಣಗಳನ್ನು ಇವರ ಅವಧಿಯಲ್ಲಿ ಸಿಬಿಐ ತನಿಖೆಗೆ ಕೊಟ್ಟಿದ್ದಾರೆಯೇ ಇವರ ಅವಧಿಯಲ್ಲಿ ಎಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು ಮಾನವ ಸಂಪನ್ಮೂಲ ಇಲ್ಲ, ಸುಮ್ಮನೆ ಕೊಡಬೇಡಿ ಎಂದು ಸಿಬಿಐನವರೇ ಹೇಳತ್ತಿದ್ದಾರೆ ಎಂದರು. ವಿರೋಧ ಪಕ್ಷದಲ್ಲಿ ಇದ್ದವರು ಜವಾಬ್ದಾರಿಯುತವಾಗಿ ಇರಬೇಕು. ಪ್ರತಿಭಟನೆಗೆ ಬನ್ನಿ ಎಂದು ಸಚಿನ್ ಕುಟುಂಬವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪದೇ ಪದೇ ಕರೆ ಮಾಡಿ ಸರ್ಕಾರದ ವಿರುದ್ದ ಹೇಳಿಕೆ ಕೊಡುವಂತೆ ಹೇಳುತ್ತಿದ್ದಾರೆ ಎಂದು ಆಪಾದಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ ಕುಟುಂಬಕ್ಕೆ ಬಿಜೆಪಿಯವರು ಏಕೆ ಸಹಾಯ ಮಾಡಲಿಲ್ಲ. ಆಗ ವಿಜಯೇಂದ್ರ ಗುತ್ತಿಗೆದಾರ ಸಂತೋಷ್ ಮನೆಗೆ ಎಷ್ಟು ಬಾರಿ ಹೋಗಿದ್ದರು ಎಂದು ಪ್ರಿಯಾಂಕ್ ಪ್ರಶ್ನಿಸಿದರು.

More articles

Latest article