ನೀನು ಸೂ*ಳಿ! ನಾನು ಸೂ*ಳಿ! ಎಲ್ಲಾ ಹೆಣ್ಮಕ್ಕಳು ಸೂ*ಳೆಯರೇ!

Most read

ಹೈಸ್ಕೂಲ್‌ಗೆ ಸೇರಿದಾಗಿಂದ ಹಾಸ್ಟೆಲ್ ಜೀವನವೇ ಪರಿಪಾಠ ಆಗಿಬಿಟ್ಟಿದೆ. ಹಾಗಾಗಿ ಊರಿಗೆ ಹೋದರೂ ಒಂದೆರಡು ದಿನ ಇದ್ದು ವಾಪಾಸಾಗುವ ಛಾತಿ ಈಗಲೂ ಮುಂದುವರೆದು ಬಿಟ್ಟಿದೆ. ದೀರ್ಘಕಾಲ ಮಂಡಿಯೂರಿ ಮನೇಲಿ ಇದ್ದಿದ್ದು, ಬಿದ್ದಿದ್ದು ಅದು ಲಾಕ್‌ಡೌನ್ ಕಾಲದಲ್ಲಿಯೇ!

ಬಹುಶಃ ಅದು ಆರೇಳು ವರ್ಷದ ಹಿಂದಿನ ಘಟನೆ. ಅದನ್ನು ನೀವು ಯಾವ ರೀತಿ ಗ್ರಹಿಸಿಕೊಳ್ಳುವಿರೋ ಗೊತ್ತಿಲ್ಲ .ಅದು ನಿಮ್ಮ ಗಮನಕ್ಕೆ  ಬರಬೇಕೆಂಬ ಆಲೋಚನೆಯೊಂದಿಗೆ ಈಗ ಬರೆಯುತ್ತಿದ್ದೇನೆ. 

ಬೀಡಿ ಸೇದುವ ಚಟದ ಇನ್ನೂ ಗಟ್ಟಿಮುಟ್ಟಾಗಿದ್ದ, ವಯಸ್ಸಾಗಿದ್ದರೂ ಯುವಕರು ನಾಚುವಂತೆ ಚಟಾಪಟ್ ಓಡಾಡುವ ಮುದುಕ ಆತ. ಇದು ನನ್ನ ಮನೆಯಿದೆ.. ಯಾರೇನನ್ನುವರು ಬಿಡು ಅಂತ ರಸ್ತೆಗೆ ಅಂಟಿಕೊಂಡು ಮನೆಯ ಮುಂದೆಯೇ ಏನೋ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ. ಆಗ ಅವನ ಮನೆಯ ಮುಂದೆ ಒಬ್ಬ ಮದುವೆ ವಯಸ್ಸಿಗೆ ಬಂದ ಹುಡುಗಿ ನಡೆದುಕೊಂಡು ಬಂದಳು. ಆ ಮುದುಕನಿಗೂ ಅವಳಿಗೂ ಒಂದು ಸಣ್ಣ ಜಗಳ ಆಗಿಯೇ ಬಿಡ್ತು. ಅವಳು ನೋಡಲು ಚೆನ್ನಿಯೇ(ಚೆಂದ) ಆಗಿದ್ದಳು. ಅವಳು ಏ ಮುದುಕಾ ಅಂತಾ ಏದುಸಿರಿನಲ್ಲಿ ಏನಿದು ಮನೆ ಮುಂದೆ ಹೋಗೋರು ಬರೋರು ಇರ್ತಾರೆ ಅಂತ ಗೊತ್ತಾಗಲ್ವಾ? ಈ ರೀತಿ ರಸ್ತೇಲಿ ಮಾಡೋದಕ್ಕೆ ನಾಚಿಕೆ ಆಗೋದಿಲ್ವಾ? ಮನೆಯ ಮುಂದೆ ಎಂಬ ಕಾರಣಕ್ಕೆ ಏನಾದರೂ ಮಾಡಬಹುದೇ ಎಂದು ಜೋರಾಗಿ ಕೇಳಿದಳು. ಮುದುಕ ಅವಳ ಅಂದ ಚೆಂದ ನೋಡಿಯೋ, ಮತ್ತೇನೋ ಕಲ್ಪನೆಯೋ ತಿಳಿಯದು! ನನಗೆ ಬೈತಾಳಾ ಇವ್ಳು ಅಂತಾ ಭಾವಿಸಿಯೋ ಗೊತ್ತಿಲ್ಲ. ತಕ್ಷಣ ಏಯ್ ಸೂ*ಳಿ! ಇದು ನನ್ನ ಮನೆ, ನನ್ನ ಮನೆಯ ಮುಂದಿನ ರಸ್ತೆ, ನಂಗೆ ಹೇಳ್ತೀಯಾ, ನನ್ನಿಷ್ಟ, ಏನಾದರೂ ಮಾಡ್ತೀನಿ. ನಿಮ್ಮ ಮನೆಗೇನೂ ಬಂದಿಲ್ಲವಲ್ಲ ಸುಮ್ಮನೇ ಇಲ್ಲಿಂದ ಹೋಗು ಅಂದ. ಇದನ್ನಾ ಗಂಡ ತನ್ನ ಹೆಂಡತಿಗೆ ಹೇಳುವ ದಾಟಿಯಲ್ಲಿ ಏನು ಮಾಡ್ತೀಯಾ ಮಾಡ್ಕೋ ಹೋಗೇ ಅನ್ನೋ ರೇಂಜ್‌ಗೆ ಅಂದು ಬಿಟ್ಟ.

ಆಗವಳು ಆ ಪದ ಕೇಳಿ ಒಂದು ಕ್ಷಣ ಏನು ಮಾಡಬೇಕೆಂದು ಗೊತ್ತಾಗದೇ ಸುಮ್ಮನೇ ಹೋದಳು! ಅದೇನೋ ಗೊತ್ತಿಲ್ಲ.. ಸ್ವಲ್ಪ ಸಮಯದ ನಂತರ ಕುಟುಂಬದ ಸದಸ್ಯರನ್ನು(ತಾಯಿ, ತಮ್ಮ) ಕರೆದುಕೊಂಡು ಆ ಮುದುಕನ ಜೊತೆ ಜಗಳಕ್ಕೆ ನಿಂತಳು. ಏ ಸೂಳಿ(ವೇಶ್ಯೆ) ಅಂತೀಯೇನಲೇ ಮುದಿಯಾ, ವಯಸ್ಸಾಗ್ಯಾದ ಅಲ್ಲಲೇ ಬುದ್ಧಿ ಎಲ್ಲಿಟ್ಟಿದ್ದೀಯಾ ಅಂತಾ ಹೊಡೆಯೋ ರೇಂಜ್‌ಗೆ ಬಂದು ಇನ್ನೇನೂ ಮಾತಿಗೆ-ಮಾತು ಬೆಳೆದು ಮುದುಕನಿಗೆ ದೈಹಿಕ ಹಲ್ಲೆ ಆಗಿಯೇ ಬಿಡ್ತು ಅನ್ನುವಷ್ಟರೊತ್ತಿಗೆ ಸಂತೆಗೆ ಹೋಗಿದ್ದ ಮುದುಕನ ಹೆಂಡತಿ ಬಂದೇಬಿಟ್ಟಳು.

ಆಗ ಆಕೆ ಏನೆಂದು ವಿಚಾರಿಸಬೇಕಾದರೆ ಅಯ್ಯೋ ಇದಾ! “ಏನವ್ವಾ ಹುಡುಗಿ ನೀನು ಸೂ*ಳಿ! ನಾನು ಸೂ*ಳಿ! ಈ ಭೂಮಿ ಮ್ಯಾಲೇ ಇರುವ ಎಲ್ಲಾ ಹೆಣ್ಮಕ್ಕಳು ಸೂ*ಳೆಯರೇ! ಬಿಡವ್ವಾ” ಅದಕ್ಯಾಕ ಹಿಂಗೆಲ್ಲಾ ಆಡ್ತೀರಿ ಅವನೇನೂ(ಗಂಡ) ಬಾಯಿತಪ್ಪಿ ಅಂದಿದ್ದಾನೆ ಅಂತ ಅಂದಿದ್ದೇ ತಡ ನಿಜವಾಗಿಯೂ ಎಲ್ಲಾ ಜಗಳ ಮಾಯವಾಗಿ ಆ ಹುಡುಗಿ (ಕುಟುಂಬದವರೂ) ತಕ್ಷಣ ಮರುಮಾತಾಡದೆ ತಟಸ್ಥಳಾಗಿ ಬಿಟ್ಟಳು. ಅಂದರೆ ಆ ಪದದ ವಿಷಯ ಮುಂದುವರಿಸದೇ ಎಲ್ಲರೂ ಅಲ್ಲಿಂದ ಜಾಗ ಖಾಲಿ ಮಾಡಿದರು. ಅಲ್ಲಿಗೆ ಆ ಜಗಳ ಮುಕ್ತಾಯಗೊಂಡಿತು.

ನಾನು ಅಲ್ಲೇ ಇದ್ದು ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡುತ್ತಿದ್ದೆ. ಮನೆಗೆ ಬಂದು ಸೀದಾ ನಮ್ಮ ಅಜ್ಜಿಗೆ, ಅಜ್ಜಿ ಹೆಣ್ಮಕ್ಕಳೆಲ್ಲಾ ಸೂ*ಳೆಯರೇ ಅಂದ್ಲು ಆ ಮನೆಯವಳು.. ಯಾಕೆ  ಅಂತ ಪ್ರಶ್ನೆ ಮುಂದಿಟ್ಟರೆ ಈ ಲೋಕಜ್ಞಾನದ ಅಜ್ಜಿ ಏನು ಹೇಳಿದಳು ಗೊತ್ತೇ…!? ಹೌದು.. ಅವಳು, “ನಾನು ಸೂ*ಳಿ, ನೀನು ಸೂ*ಳಿ, ಇಲ್ಲೆಲ್ಲರೂ ಸೂ*ಳ್ಯಾರೇ” ಈ ಮಾತು ಅಂದಿದ್ದಿಲ್ಲಾ ಅಂದರೆ ಆ ಮುದುಕ ಈ ಹುಡುಗಿಯ ಮತ್ತು ಅವರ ಮನೆಯವರಿಂದ ಉಳಿಯುತ್ತಿದ್ದನೇ ಅಂದಾಗ ಹೌದಲ್ವಾ, ಓಹೋ ಹೀಗಾ! ವಾದವಿವಾದದ ಜಗಳ ಬಿಡಿಸೋಕೆ ಅವಳ ಕಣ್ಣೋಟದಲ್ಲಿ ಇಲ್ಲೆಲ್ಲರೂ ಸೂಳೆಯರಾದರಾ ಅಂತ ಗಂಭೀರವಾಗಿ ಚಿಂತಿಸುವಂತಾಯ್ತು. ಹೌದು, ಅವಳ ಮಾತೇ ಸರಿ ಎನಿಸಿದರೂ ಅದುವೇ ಅಂತಿಮ ಉತ್ತರವಾಗಲಿ, ಸತ್ಯವಾಗಲಿ ಅಲ್ಲ ಅಂತ ಈಗಲೂ ಅನ್ನಿಸ್ತಿದೆ.

ಶಿವರಾಜ್ ಮೋತಿ

ಯುವ ಬರಹಗಾರರು, ಧಾರವಾಡ

ಇದನ್ನೂ ಓದಿ- http://ಅಂಬೇಡ್ಕರ್ ಎಂದೆ…!?https://kannadaplanet.com/ambedkar-ambedkar/

More articles

Latest article