ಈ ವಾರ ಎತ್ತಿನ ಹೊಳೆ ಪ್ರದೇಶದಲ್ಲಿ ಆದ ಭೂಕುಸಿತವನ್ನೇ ಗಮನಿಸಿದರೂ ಇದರ ಲಕ್ಷಣಗಳು 2018ರಲ್ಲಿಯೇ ಸ್ಪಷ್ಟವಾಗಿ ಕಂಡಿದ್ದವು. ಅನೇಕ ಕಡೆಗಳಲ್ಲಿ ಕುಸಿತವಾಗಿತ್ತು. ಆನೆ ಗಾತ್ರದ ಪೈಪುಗಳು ಜಾರಿ ಹೋಗಿದ್ದವು. ನಮ್ಮ ಹಾಗೆಯೇ ಅನೇಕರು ಈ ಬಗ್ಗೆ ಎಚ್ಚರಿಸಿದ್ದರು ಕೂಡಾ. ಅದರೆ ಅದು ಯಾವುದೂ ಅಭಿವೃದ್ಧಿಯ ಅಮಲೇರಿಸಿ ಕೊಂಡವರಿಗೆ ನಾಟಲಿಲ್ಲ- ಪ್ರಸಾದ್ ರಕ್ಷಿದಿ, ಪರಿಸರ ಬರಹಗಾರರು.
ಯೆತ್ನಳ್ಳಕ್ಕೆ ಎತ್ತಿನ ಹೊಳೆ ಎನ್ನುವ ಹೆಸರಿಟ್ಟು ಒಂದು ದಶಕವೇ ಕಳೆಯಿತು. ಇದೊಂದು ರೀತಿಯಲ್ಲಿ ಬಲಿಗೆ ಮುನ್ನ ಕೊರಳಿಗೆ ಹಾರ ಹಾಕಿದ ಹಾಗೆ..ಈಗ ಯೆತ್ನಳ್ಳದ ಜೊತೆಗೆ ಘಟ್ಟ ಸೀಮೆಯನ್ನೂ ಬಲಿಹಾಕಲಾಗಿದೆ. ಆದರೆ ಮನುಷ್ಯನೆಂಬ ಪ್ರಾಣಿ ಎಷ್ಟು ಬಲಶಾಲಿ ಎಂದು ಆರ್ಭಟಿಸಿದರೂ ಪಕೃತಿಯ ಮುಂದೆ ಹುಲು ಮಾನವ ಅಷ್ಟೇ ಅನ್ನುವುದನ್ನು ಸದ್ಯದ ಘಟನೆಗಳು ಮತ್ತೆ ಮತ್ತೆ ಹೇಳುತ್ತಿವೆ.
2018 ರಲ್ಲಿ ಕರ್ನಾಟಕದ ಮಲೆನಾಡಿನಲ್ಲಿ ಮೊದಲಬಾರಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿ ಕುಸಿಯಿತು. ಅದು ಕೊಡಗಿನಲ್ಲಿ ಅತ್ಯಂತ ಘೋರವಾಗಿತ್ತು. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕಳಸ ಭಾಗದಲ್ಲಿಯೂ ಸಾಕಷ್ಟು ಹಾನಿಯಾಗಿತ್ತು. ಹಾಸನ ಜಿಲ್ಲೆಯ ಮಲೆನಾಡಿನಲ್ಲಿ ಈ ವಿಪತ್ತಿನ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ.
ಆಗ ನಾವೊಂದಷ್ಟು ಜನ ಗೆಳೆಯರು ಹೀಗೆ ಭೂಕುಸಿತ ಮತ್ತಿತರ ಸಂಕಷ್ಟಕ್ಕೀಡಾದ ಪ್ರದೇಶಗಳಲ್ಲಿ ಸುತ್ತಾಡಿ ಬಂದೆವು. ಕೊಡಗಿನ ಜೋಡುಪಾಲದಿಂದ ಕಳಸದವರೆಗಿನ ಹಲವಾರು ಸ್ಥಳಗಳಿಗೆ ಮೂರು ತಿಂಗಳ ಅಂತರದಲ್ಲಿ ಕನಿಷ್ಟ ಮೂರು ಸಲ ಹೋಗಿ, ನೋಡಿ ಮಾಹಿತಿ ಸಂಗ್ರಹ ಮಾಡಿದೆವು. ಆಗ ನಮಗೆ ಗೊತ್ತಾದ ಸಂಗತಿ ಎಂದರೆ ಅನಾಹುತಕ್ಕೆ ಒಳಗಾದ ಪ್ರದೇಶಗಳಲ್ಲಿ ಶೇ 80 ರಷ್ಟು ಸ್ಥಳಗಳಲ್ಲಿ ಈ ದುರಂತಕ್ಕೆ ಮನುಷ್ಯರೇ ಕಾರಣವೆಂದು ಎದ್ದು ಕಾಣುತ್ತಿತ್ತು. ಉಳಿದ ಕೆಲವು ಸ್ಥಳಗಳಲ್ಲಿ ಅತಿಯಾದ, ಮೇಘ ಸ್ಫೋಟದಂತಹ ಮಳೆ, ಅಥವಾ ಸಂಭವಿಸಿರಬಹುದಾದ ಭೂಕಂಪ ಕಾರಣವಿದ್ದಿರಬಹುದು. ಇದರಲ್ಲೂ ಇಡೀ ಭೂಮಿಯಲ್ಲಿ ಮನುಷ್ಯರ ಅಭಿವೃದ್ಧಿಯ ಅಪಸವ್ಯಗಳ ಪರೋಕ್ಷ ಕಾರಣಗಳಂತೂ ಇವೆ.
ಹೌದು ಹಿಂದೆಯೂ ಪ್ರಕೃತಿ ವಿಕೋಪಗಳಾಗಿವೆ. ಆದರೆ ಅದರ ಪರಿಣಾಮ ಮತ್ತು ವ್ಯಾಪಕತೆ ಇಂದಿನ ದುರಂತಗಳಿಗೆ ಹೋಲಿಸಿದರೆ ಕಡಿಮೆ. ಇದನ್ನು ಉದಾಹರಿಸಿ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು ಆತ್ಮವಂಚನೆ.
ಎತ್ತಿನ ಹೊಳೆ ಯೋಜನೆಯ ಪ್ರಾರಂಭದಲ್ಲೇ ಪ್ರತಿಭಟನೆಯೂ ದೊಡ್ಡ ಹುಮ್ಮಸ್ಸಿನಲ್ಲಿಯೇ ಪ್ರಾರಂಭವಾಯಿತು. ಅದಕ್ಕೆ ಕಾರಣವೂ ಇತ್ತು. ಜನರ ಹೋರಾಟದಿಂದಾಗಿ ಗುಂಡ್ಯ ಜಲವಿದ್ಯುತ್ ಯೋಜನೆ ನಿಂತುಹೋಯಿತೆಂಬ ನಂಬಿಕೆ ಜನರದ್ದು ಮತ್ತು ಹೋರಾಟಗಾರರದ್ದೂ ಆಗಿತ್ತು..ಆದರೆ ಒಳಗಿನ ಸಂಗತಿ ಬೇರೆಯೇ ಆಗಿತ್ತು. ನಮ್ಮ ಅಭಿವೃದ್ದಿ ಪೀಡಿತರಿಗೆ ಆಗಲೇ ಗುಂಡ್ಯ ಜಲವಿದ್ಯುತ್ ಯೋಜನೆಗಿಂತ ಎತ್ತಿನಹೊಳೆ ಎನ್ನುವ ನದೀ ತಿರುವು ಯೋಜನೆ ಹಲವರ ರಾಜಕೀಯದ ಫಲವತ್ತಾದ ಹೊಲವಾಗಿ, ಹಣದ ಖಜಾನೆಯಾಗಿ ಕಂಡಿತ್ತು.
ಈಗ ಈವಾರ ಎತ್ತಿನ ಹೊಳೆ ಪ್ರದೇಶದಲ್ಲಿ ಆದ ಭೂಕುಸಿತವನ್ನೇ ಗಮನಿಸೋಣ. ಇದರ ಲಕ್ಷಣಗಳು 2018ರಲ್ಲಿಯೇ ಸ್ಪಷ್ಟವಾಗಿ ಕಂಡಿದ್ದವು. ಅನೇಕ ಕಡೆಗಳಲ್ಲಿ ಕುಸಿತವಾಗಿತ್ತು. ಆನೆ ಗಾತ್ರದ ಪೈಪುಗಳು ಜಾರಿ ಹೋಗಿದ್ದವು. ನಮ್ಮ ಹಾಗೆಯೇ ಅನೇಕರು ಈ ಬಗ್ಗೆ ಎಚ್ಚರಿಸಿದ್ದರು ಕೂಡಾ. ಅದರೆ ಅದು ಯಾವುದೂ ಅಭಿವೃದ್ಧಿಯ ಅಮಲೇರಿಸಿಕೊಂಡವರಿಗೆ ನಾಟದು.
ಎತ್ತಿನಹೊಳೆ ಯೋಜನೆಯ ವಿರುದ್ಧದ ದನಿಯ ಸದ್ದಡಗಿಸುವ ಕೆಲಸ ಬಹಳ ನಾಜೂಕಾಗಿ ನಡೆಯಿತು. ಕೆಲವೇ ಕಾಲದಲ್ಲಿ ವಿರೋಧವಾಗಿದ್ದವರಲ್ಲಿ ಹಲವರು ಅದರ ಪರವಾಗಿ ನಿಂತರು. ಈ ಬಾರಿ ಪಡುಬಿದ್ರಿಯ ನಂದಿಕೂರು ಉಷ್ಣ ವಿದ್ಯುತ್ ಕೇಂದ್ರದ ವಿರುದ್ಧದ ಹೋರಾಟವನ್ನು ತಣ್ಣಗೆ ಮಾಡಿದ ಅನುಭವ ಆಳುವವರಲ್ಲಿ ಇತ್ತು..
ಈಗ ಎತ್ತಿನ ಹೊಳೆ ಯೋಜನೆಯ ಪ್ರದೇಶದ ಹಾರ್ಲೆ ನಡಹಳ್ಳಿ ರಸ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಬೆಳಗಿನ ಆರು ಗಂಟೆಯ ವೇಳೆಗೆ ಕುಸಿತ ಪ್ರಾರಂಭವಾಗಿದೆ. ಈ ರಸ್ತೆ ಹಾಸನ ಮಂಗಳೂರು ಹೆದ್ದಾರಿಯಿಂದ ಸಕಲೇಶಪುರ ಮೂಡಿಗೆರೆ ರಸ್ತೆಗೆ ಸಂಪರ್ಕ ಮಾಡಿಕೊಡುತ್ತದೆ. ಹೆದ್ದಾರಿ ಕುಸಿದಿದ್ದರಿಂದ ಈ ದಾರಿಯಾಗಿ ವಾಹನಗಳನ್ನು ಬಿಟ್ಟಿದ್ದರು. ರಸ್ತೆ ಕುಸಿಯುವ ಕೆಲವೇ ನಿಮಿಷಗಳ ಮೊದಲು ಖಾಸಗಿ ಬಸ್ಸೊಂದು ಇಲ್ಲಿ ದಾಟಿ ಹೋಗಿತ್ತು. ನಂತರ ಕುಸಿತವಾದ್ದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ.
ಆದರೆ ಸುಮಾರು ನಲುವತ್ತು ಹಳ್ಳಿಗಳಿಗೆ ಇದು ಸಂಪರ್ಕ ರಸ್ತೆಯಾಗಿದ್ದು ಸುಮಾರು ನೂರು ಅಡಿಗಳಷ್ಟು ಅಗಲ ನೂರೈವತ್ತು ಅಡಿ ಆಳ ಮತ್ತು ಆರುನೂರು ಅಡಿಗಳಿಗೂ ಹೆಚ್ಚು ಪ್ರಮಾಣದಲ್ಲಿ ಕುಸಿದು ಹೋಗಿದೆ. ಪಕ್ಕದಲ್ಲಿ ಎತ್ತರವಾದ ಬೆಟ್ಟವಿದ್ದು ಅದೂ ಕೂಡಾ ಕುಸಿಯುವ ಹಂತದಲ್ಲಿದೆ. ಕುಸಿತಕ್ಕೆ ಕಾರಣವಾದ ಎಲ್ಲ ಅಂಶಗಳೂ ನಮ್ಮ ಕಣ್ಣೆದುರೇ ಇದೆ. ಚಿತ್ರಗಳೇ ಎಲ್ಲವನ್ನೂ ಹೇಳುತ್ತಿವೆ.
ಬೆಳಗ್ಗೆಯೇ ಅಲ್ಲಿನ ಪಂಚಾಯತ್ ನ ಮಾಜಿ ಅಧ್ಯಕ್ಷರು ಎತ್ತಿನಹೊಳೆ ಯೋಜನೆಯ ಅಧಿಕಾರಿಗಳಿಗೆ ಸುದ್ದಿ ತಿಳಿಸಿದಾಗ ಅದು ಹೇಗೆ ಎಲ್ಲವನ್ನೂ ನಮ್ಮ ತಲೆಗೆ ಕಟ್ಟುತ್ತೀರಿ ? ಎಂದು ಕೇಳಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಅವರಲ್ಲಿ ಉತ್ತರವಿರಲಿಲ್ಲ.
ಇದೊಂದೇ ಕಡೆ ಅಲ್ಲ, ಅಲ್ಲಿಂದ ಕೆಳಗೆ ಎತ್ತಿನಹೊಳೆ ಹರಿಯುವ ಜಾಗಕ್ಕೆ ಕೇವಲ ಒಂದು ಕಿ.ಮೀ ದೂರವಿದೆ. ಅಲ್ಲಿಯೂ ಕೂಡಾ ಹಲವು ಕಡೆಗಳಲ್ಲಿ ಪೈಪ್ ಲೈನ್ ಗಳ ಪಕ್ಕದಲ್ಲಿ ಕುಸಿತ ಪ್ರಾರಂಭವಾಗಿದೆ. ಎತ್ತಿನ ಹೊಳೆ ಯೋಜನೆ ಪ್ರಾರಂಭವಾದಾಗ ಇದೇ ಸೇತುವೆಯ ಪಕ್ಕದಿಂದಲೇ ಹೋರಾಟ ಈ ಭಾಗದಲ್ಲಿ ಪ್ರಾರಂಭವಾಗಿತ್ತು. ಈಗ ಅದೇ ಸೇತುವೆಯ ಪಕ್ಕದಲ್ಲಿ ಆನೆ ಗಾತ್ರದ ಪೈಪುಗಳು ಹಾದು ಹೋಗಿವೆ. ಅದರ ಪಕ್ಕದಲ್ಲೇ ರಸ್ತೆ ಕುಸಿಯುತ್ತಿದೆ. ಪೈಪಿನಲ್ಲಿ ಇಳಿಜಾರಿನಲ್ಲಿ ತುಂಬಿ ಹರಿಯುವ ರಭಸದ ನೀರನ್ನು ಅದೇ ಹೊಳೆಗೇ ಬಿಡುತ್ತಿದ್ದಾರೆ..ಇದಕ್ಕಿಂತ ಕ್ರೂರ ವ್ಯಂಗ್ಯ ಬೇಕೆ?
ಪ್ರಕೃತಿ ತಿರುಗಿ ಬಿದ್ದಿದೆ..
ಬಲಿಯಾಗುತ್ತಿರುವವರು ನಾವು ನೀವು…ಮಾತ್ರ
ಅವರಲ್ಲ…..
ಪ್ರಸಾದ್ ರಕ್ಷಿದಿ
ಪರಿಸರ ಬರಹಗಾರರು, ರಂಗಕರ್ಮಿ
ಇದನ್ನೂ ಓದಿ- ದೇಶವನ್ನೇ ಸುಡಬಲ್ಲ ದ್ವೇಷವನ್ನು ನಿಗ್ರಹಿಸಲು ಬೇಕಿದೆ ಕಠಿಣ ಕಾನೂನು !!!