ಯಡಿಯೂರಪ್ಪ ಅವರೊಬ್ಬರೇ ಪಕ್ಷ ಕಟ್ಟಿಲ್ಲ; ಯತ್ನಾಳ್‌ ಆಕ್ರೋಶ

Most read

ಬೆಳಗಾವಿ: ತಮ್ಮದೇ ಪಕ್ಷದ ಮುಖಂಡರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಟೀಕಾಪ್ರಹಾರ ಮುಂದುವರೆಸಿದ್ದಾರೆ.

ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ನಾವೂ ಸಹ 35-40 ವರ್ಷಗಳಿಂದ ಬಿಎಸ್‌ವೈ ಜೊತೆಗೇ ಕೆಲಸ ಮಾಡಿದ್ದೇವೆ. ನಾವೇ ಅವರ ಕಾರ್‌ ಗೆ ಪೆಟ್ರೋಲ್ ಹಾಕಿಸಿದ್ದೇವೆ. ಬಸ್ ಟಿಕೆಟ್ ಕೊಡಿಸಿ ಕಳುಹಿಸಿ ಕೊಟ್ಟಿದ್ದೇವೆ. ಈಗ ಅವರ ಶಿಷ್ಯಂದಿರು ನಮಗೆ ಸೈಕಲ್ ಹೊಡೆದಿದ್ದು ಎಂದು ಹೇಳುತ್ತಾರೆ. ಸ್ವತಃ ಯಡಿಯೂರಪ್ಪ ಮನೆಯಲ್ಲೇ ಭಿನ್ನಮತೀಯರ ಸಭೆ ಆಗುತ್ತದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಜಯೇಂದ್ರ ಆಯೋಜಿಸಿದ್ದ ಔತಣ ಕೂಟದಲ್ಲಿ ನಾನು ಭಾಗವಹಿಸಿಲ್ಲ. ರಮೇಶ್ ಜಾರಕಿಹೊಳಿ ಅವರೂ ಹೋಗಿಲ್ಲ. ಅವರು ಇಲ್ಲಿ ಔತಣ ಕೂಟಕ್ಕೆ ಕರೆಯುತ್ತಾರೆ. ದಾವಣಗೆರೆಯಲ್ಲಿ ಚೇಲಾಗಳನ್ನು ಬಿಟ್ಟು ಸಭೆ ಮಾಡುತ್ತಾರೆ. ಅವರ ಗನ್‌ ಮ್ಯಾನ್‌ಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯತ್ನಾಳ್‌ ಉಚ್ಚಾಟನೆ ಮಾಡಿ ಎಂದು ಅವರು ಕುತಂತ್ರ ನಡೆಸಿರುವ ಮಾಹಿತಿ ನಮಗೆ ದೊರೆತಿದೆ. ಯಡಿಯೂರಪ್ಪ ಸೇರಿ ಕೆಲವು ಶಾಸಕರು ಮಾತನಾಡಿದ್ದು ತಿಳಿದು ಬಂದಿದೆ. ಇದರ ಹಿಂದೆ ಯಡಿಯೂರಪ್ಪ ಅವರ ಕುತಂತ್ರ ಯಾವಾಗಲೂ ಇದ್ದೇ ಇರುತ್ತದೆ. ಯತ್ನಾಳ್ ವಿಪಕ್ಷ ನಾಯಕ, ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗಲಿ ಎಂದು ಈ ಹಿಂದೆ ವಿಜಯೇಂದ್ರ ಹೇಳಿಕೆ ಕೊಟ್ಟಿದ್ದರು. ಆದರೆ, ಎರಡೇ ದಿನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಆಯಿತು. ಸಭೆ ಮಾಡಿದ್ದಕ್ಕೆ ನನ್ನ ವಿರೋಧ ಇದೆ ಎಂದು ವಿಜಯೇಂದ್ರ ಹೇಳುತ್ತಾರೆ. ಇವರದ್ದು ನಾಟಕದ ಕಂಪನಿ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ. ಪಕ್ಷದ ವರಿಷ್ಠರು ಯತ್ನಾಳ್ ಸೇರಿದಂತೆ ಭಿನ್ನಮತೀಯರನ್ನು ಕರೆದು ಮಾತನಾಡಿದ್ದರು. ಆದರೂ ಯತ್ನಾಳ್‌ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ.

More articles

Latest article