ಆಪರೇಷನ್ ಕಮಲ ಪ್ರಯತ್ನಕ್ಕೆ ಯತ್ನಾಳ್ ಹೇಳಿಕೆಯೇ ಸಾಕ್ಷಿ;ಡಿಕೆ ಶಿವಕುಮಾರ್

Most read

ಬೆಂಗಳೂರು: ಆಪರೇಷನ್ ಕಮಲ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯೇ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ಆಮಿಷ ಒಡ್ಡಿರುವ ಬಗ್ಗೆ ಹೇಳಿದ್ದರು. ಇದೇ ಯತ್ನಾಳ್ ಅವರು ಸರ್ಕಾರ ಬೀಳಿಸಲು 1 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಆಪರೇಷನ್ ಕಮಲಕ್ಕೆ ಪ್ರಯತ್ನ ನಡೆಯುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಎಂದು ಹೇಳಿದರು.

ಶಾಸಕರ ಖರೀದಿ ಬಗ್ಗೆ ತನಿಖೆ ಮಾಡಿ. ಖರೀದಿ ಮಾಡಲು ಶಾಸಕರು ಕುರಿಗಳೇ ಎಂದು ಬಿಜೆಪಿಯವರು ಕೇಳಿದ್ದಾರೆ. ಹಾಗಾದರೆ ಈ ಹಿಂದೆ ಖರೀದಿ ಮಾಡಿದ್ದ ಶಾಸಕರು ಕುರಿಗಳಲ್ಲವೇ? ಬಿಜೆಪಿಯವರು ಕುರಿಗಳನ್ನೇ ಖರೀದಿ ಮಾಡಿದ್ದರಲ್ಲವೇ? ದನ, ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು. ಸಿ.ಪಿ.ಯೋಗೇಶ್ವರ್ ಅವರು ಅಶ್ವತ್ ನಾರಾಯಣ್ ಜೊತೆಗೂಡಿ ಶ್ರೀನಿವಾಸ್ ಗೌಡರ ಮನೆಗೆ ಹೋಗಿ ಹಣವಿಟ್ಟು ಬಂದಿದ್ದೆವು ಎಂದು ಸದನದಲ್ಲಿ ಹೇಳಿರಲಿಲ್ಲವೇ ಎಂದು ಪ್ರಶ್ನಿಸಿದರು. ಈ ಹಿಂದೆ ಆಡಳಿತ ಪಕ್ಷದಲ್ಲಿ ಇದ್ದಾಗ ಬಿಜೆಪಿಯವರು ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ನೀಡಿದ್ದರು ಎಂದು ಈ ಹಿಂದೆ ಯತ್ನಾಳ್ ಆರೋಪ ಮಾಡಿದ್ದರು. ಈಗ ವಿರೋಧ ಪಕ್ಷದ ಸದಸ್ಯರಾಗಿದ್ದಾಗಲೂ ಇದೇ ಆರೋಪ ಮಾಡುತ್ತಿದ್ದಾರೆ. ಯತ್ನಾಳ್ ಕೇಂದ್ರದಲ್ಲಿ ಸಚಿವರಾಗಿದ್ದವರು, ಈ ರೀತಿಯ ಹೇಳಿಕೆಯನ್ನು ನೀಡಲು ಅವರೇನು ದಡ್ಡರೇ? ಎಂದರು.


ವಕ್ಫ್ ನೋಟಿಸ್ ವಿಷಯದಲ್ಲಿ ಬಿಜೆಪಿ ಅಭಿಯಾನ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ಇದು ಬಿಜೆಪಿಯ ಮೂರ್ಖತನ. ರೈತರ ಪಹಣಿಗಳಲ್ಲಿ ವಕ್ಫ್ ಎಂದು ಬಿಜೆಪಿ ಕಾಲದಲ್ಲಿ ನಮೂದಾಗಲು ಪ್ರಾರಂಭವಾಯಿತು. ನಮ್ಮ ಸರ್ಕಾರ ಇದನ್ನು ತಡವಾಗಿ ಗಮನಿಸಿದೆ. ಈ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಚುನಾವಣೆಗಳು ಇದ್ದಿದ್ದರಿಂದ ಇವುಗಳನ್ನು ಬಹಿರಂಗಪಡಿಸಲು ಆಗಿಲ್ಲ. ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

More articles

Latest article