ಮೈಸೂರು: ಬಿಜೆಪಿ ಭಿನ್ನಮತೀಯ ಗುಂಪಿನ ನಾಯಕತ್ವ ವಹಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದಿಂದ ಸುಪಾರಿ ಪಡೆದು ತಾನು ಶಾಸಕನಾಗಿರುವ ಪಕ್ಷದ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯತ್ನಾಳ್ ಮತ್ತು ಅವರ ತಂಡ ಕಾಂಗ್ರೆಸ್ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಹೀಗಾಗಿ ಮುಡಾ ಪಾದಯಾತ್ರೆಯಲ್ಲೂ ಅವರು ಭಾಗವಹಿಸಲಿಲ್ಲ. ಈ ಮೂಲಕ ಅವರು ಭ್ರಷ್ಟಾಚಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಈ ರೀತಿಯ ಬ್ಲಾಕ್ ಮೇಲ್ ರಾಜಕಾರಣ ಬಹಳ ದಿನ ನಡೆಯದು ಎಂದು ವಾಗ್ದಾಳಿ ನಡೆಸಿದರು.
ಇವರೆಲ್ಲಾ ಶಕುನಿ ಮತ್ತು ಮೀರ್ ಸಾದಿಕ್ ಗಳಿದ್ದ ಹಾಗೆ. ಯಡಿಯೂರಪ್ಪ ಅವರಿಗೆ ಕಾಟ ಕೊಡುತ್ತಲೇ ಇರುತ್ತಾರೆ. ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು ಪಕ್ಷದ ಹೈಕಮಾಂಡ್. ಯಡಿಯೂರಪ್ಪ ಅವರಲ್ಲ. ಆದ್ದರಿಂದ ವಿಜಯೇಂದ್ರ ಅವರನ್ನು ಬೈಯ್ದರೆ ಹೈಕಮಾಂಡ್ ಗೆ ನಿಂದಿಸಿದಂತೆ ಎಂದು ಟೀಕಿಸಿದರು.
ಯತ್ನಾಳ್ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಅವರ ಹರುಕು ಬಾಯಿಂದಲೇ ಪಕ್ಷಕ್ಕೆ ಸೋಲಾಯಿತು. ಉಪ ಚುನಾವಣೆ ಸೋಲಿಗೆ ಯತ್ನಾಳ್ ಕಾರಣ. ಅವರು ವಿಜಯಪುರದ ಪ್ರಭಾವಿ ಸಚಿವರೊಬ್ಬರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯತ್ನಾಳ್ ವಿರುದ್ಧ ಮಾತನಾಡಿದ್ದಕ್ಕೆ ನನಗೆ ನಿನ್ನೆಯಿಂದ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ನಾನು ಯಾವುದಕ್ಕೂ ಬಗ್ಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಸವಣ್ಣ ಎಲ್ಲ ವರ್ಗದವರಿಗೆ ಸೆರಿದ ವಿಶ್ವಗುರು. ಅಂತಹ ಮಹಾನ್ ವ್ಯಕ್ತಿಗೆ ಅಪಮಾನ ಮಾಡಿದ ಯತ್ನಾಳ್ ಗೆ ಮಠಾಧೀಶರು ಛೀಮಾರಿ ಹಾಕಬೇಕು ಎಂದರು. ನಾವು ಬಣ ರಾಜಕೀಯ ಮಾಡುತ್ತಿಲ್ಲ. ವಿಜಯೇಂದ್ರ ಒಂದು ಶಕ್ತಿ ಇದ್ದ ಹಾಗೆ. ಯತ್ನಾಳ್ ಅವರದ್ದು ನಾಲ್ವರ ಒಂದು ಗುಂಪು. ಚಾಮುಂಡೇಶ್ವರಿ ಇಂತಹ ದುಷ್ಟರನ್ನು ಸಂಹಾರ ಮಾಡಲಿ ಎಂದರು. ಶೀಘ್ರದಲ್ಲೇ ದಾವಣಗೆರೆಯಲ್ಲಿ 3-4 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇವೆ. ಯತ್ನಾಳ್ ಉಚ್ಛಾಟನೆಗೆ ಒತ್ತಾಯಿಸಿ ದೆಹಲಿಗೆ ಬೇಟಿನೀಡಿ ಕೇಂದ್ರದ ನಾಯಕರು ಮತ್ತು ವರಿಷ್ಠರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ. ಪಾಟೀಲ್ ಮೊದಲಾದ ಮುಖಂಡರು ಉಪಸ್ಥಿತರಿದ್ದರು.