ಚನ್ನಪಟ್ಟಣ ಉಪಚುನಾವಣೆ : ಮೈತ್ರಿ ಅಭ್ಯರ್ಥಿ ನಿಖಿಲ್‌ ಪರವಾಗಿ ಯದುವೀರ್‌ ಮತಯಾಚನೆ

Most read

ಚನ್ನಪಟ್ಟಣ : ಮೈತ್ರಿ ಪಕ್ಷದ  ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಇಂದು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಹಾಗೂ ಮಳೂರು ಜಿಲ್ಲಾಪಂಚಾಯತಿ ವ್ಯಾಪ್ತಿಯಲ್ಲಿ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಮೈಸೂರು-ಕೊಡಗು ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರು ಅವರು ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.

ಇಂದು ಬೆಳಿಗ್ಗೆ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಿಂದ ಮತಯಾಚನೆಯನ್ನು ಪ್ರಾರಂಭಿಸಿದ ಕುಮಾರಸ್ವಾಮಿ ಮತ್ತು ಯದುವೀರ್ ಅವರು ಮಧ್ಯಾಹ್ನ ಕೂಡ್ಲೂರು ಗ್ರಾಮ, ನೀಲಕಂಠನಹಳ್ಳಿ, ಮಸಿಗೌಡನದೊಡ್ಡಿ, ಸುಣ್ಣಘಟ್ಟ ಗ್ರಾಮ, ನೀಲಸಂದ್ರ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು. ಸಂಜೆ ಮೊಳೆದೊಡ್ಡಿ, ಕೋಡಿಪುರ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಎನ್‌ಡಿಎ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರು ನಿನ್ನೆ ಮೂರು ಪಂಚಾಯಿತಿ ವ್ಯಾಪ್ತಿಯ 16 ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದರು. ಇಂದು ಕೋಡಂಬಳ್ಳಿ, ಜೆ.ಬ್ಯಾಡರಹಳ್ಳಿ, ವೈಟಿಹಳ್ಳಿ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.

ಈ ಉಪಚುನಾವಣೆಯಲ್ಲಿ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷದ ಹಲವಾರು ಹಿರಿಯ ನಾಯಕರುಗಳು ಅಭ್ಯರ್ಥಿ ನಿಖಿಲ್‌ ಪರವಾಗಿ ಮತಯಾಚನೆ ನಡೆಸಲಿದ್ದಾರೆ.

ಉಪ ಚುನಾವಣೆ ಹತ್ತಿರವಾಗುತ್ತಿದ್ದು, ಕದನ ಕಣ ರಂಗೇರುತ್ತಿದೆ. ಮೂರು ಕ್ಷೇತ್ರಗಳಲ್ಲೂ ಮಳೆ ಬಿಸಿಲು ಎನ್ನದೆ ಪ್ರಚಾರದ ಅಖಾಡದಲ್ಲಿ ನಾಯಕರ ಬೆವರು ಹರಿಸುತ್ತಿದ್ದಾರೆ. ಜಿದ್ದು-ಪ್ರತಿಷ್ಠೆ- ಅಸ್ತಿತ್ವ ಮೂರು ಪಕ್ಷಗಳಿಗೂ ಎಲೆಕ್ಷನ್​ ಗೆಲುವುದ ಅನಿವಾರ್ಯವಾಗಿಸಿದೆ. ಇದೀಗ ಮೂರೂ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ.

More articles

Latest article