Thursday, December 12, 2024

ಒಳ ಮೀಸಲಾತಿಗೆ ಆಗ್ರಹಿಸಿ ತಮಟೆ ಚಳವಳಿ

Most read

ತುಮಕೂರು: ಸುಪ್ರೀಂ ಕೋರ್ಟ್ ಆದೇಶದಂತೆ ಆದಷ್ಟೂ ತ್ವರಿತವಾಗಿ ಬಹುದಿನಗಳ ಬೇಡಿಕೆಯಾದ ಒಳಮೀಸಲಾತಿಯನ್ನು ಜಾರಿ ಮಾಡಬೇಕೆಂದು ತುಮಕೂರು ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ಒಳಮೀಸಲಾತಿ ಹಕ್ಕೊತ್ತಾಯ ಸಮಿತಿಯಿ ಬೃಹತ್ ತಮಟೆ ಚಳುವಳಿಯನ್ನು ಹಮ್ಮಿಕೊಂಡಿತ್ತು.
ಕರ್ನಾಟಕದಲ್ಲಿ ಕಳೆದ 2023 ರ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಚಿತ್ರದುರ್ಗದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಪರಮೇಶ್ವರ್ ಮೊದಲಾದ ಮುಖಂಡರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಹಂತದಲ್ಲೇ ಮಾದಿಗರ ಬಹು ವರ್ಷಗಳ ಬೇಡಿಕೆಯಾದ ಒಳಮೀಸಲಾತಿಯನ್ನು ಜಾರಿಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದನ್ನು ಮತ್ತೊಮ್ಮೆ ನೆನಪು ಮಾಡಲು ಬಯಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ಆದರೆ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಒಳ ಮೀಸಲಾತಿಯನ್ನು ಜಾರಿಗೊಳಿಸಿಲ್ಲ. ನೀವು ನುಡಿಯದಂತೆ ನಡೆಯಬೇಕು. ಒಳಮೀಸಲಾತಿ ಜಾರಿಗೆ ಇದುವರೆಗೂ ಯಾವೆಲ್ಲಾ ಅಡೆತಡೆಗಳಿದ್ದವೋ ಗೊತ್ತಿಲ್ಲ. ಆದರೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರವೂ ಅಂಕಿಅಂಶಗಳಿಲ್ಲ ಎಂಬ ಕುಂಟುನೆಪಗಳನ್ನು ಹೇಳುತ್ತಾ ಕಾಲಕಳೆಯಬಾರದು. ಒಂದು ವೇಳೆ ಒಳಮೀಸಲಾತಿಯನ್ನು ಜಾರಿಗೊಳಿಸದಿದ್ದರೆ ಮತ್ತೊಮ್ಮೆ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ 7 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ 6:1 ರ ಬಹುಮತದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾಗಳಿಗೆ ಇದೆ ಎಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಅನುಸಾರ ಈಗಾಗಲೇ ಆಂಧ್ರಪ್ರದೇಶದ ರೇವಂತ್ ರೆಡ್ಡಿ ಸರ್ಕಾರ ಮುಂದಿನ ಎರಡು ತಿಂಗಳಲ್ಲಿ ಡೇಟಾ ಸಂಗ್ರಹಿಸುತ್ತೇವೆ. ಅದುವರೆಗೂ ಯಾವುದೇ ಹುದ್ದಗಳಿಗೆ ನೇಮಕಾತಿ ಮಾಡುವುದಿಲ್ಲ. ಒಳಮೀಸಲಾತಿ ಜಾರಿ ಗೊಳಿಸಿದ ನಂತರವಷ್ಟೇ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದೆ. ಹಾಗೆಯೇ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಭರವಸೆ ನೀಡಿದ್ದಂತೆ ಹರಿಯಾಣ ಮುಖ್ಯಮಂತ್ರಿ ನವಾಬ್ ಸಿಂಗ್ ಶೈನಿ ಸರ್ಕಾರ ಒಳಮೀಸಲಾತಿಯನ್ನು ಜಾರಿಮಾಡುವುದಾಗಿ ಘೋಷಿಸಿದೆ. ಇದೇ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವೂ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಪಡಿಸಿದರು.
ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದ ಹೋರಾಟಗಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಮಟೆ ಚಳುವಳಿಯಲ್ಲಿ ತುಮಕೂರಿನ 10 ತಾಲ್ಲೂಕುಗಳಿಂದಲೂ ತಮಟೆ ತಂಡಗಳು ಹಾಗೂ ಒಳಮೀಸಲಾತಿ ಹೋರಾಟಗಾರರು ಭಾಗವಹಿಸಿದ್ದರು.

More articles

Latest article