ಆಂಟಿಗುವಾ: ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿಯೇ ಉಳಿದಿರುವ ಭಾರತಕ್ಕೆ ಇಂದು ಬಾಂಗ್ಲಾದೇಶದ ಸವಾಲು ಒಡ್ಡಲಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಂಗ್ಲಾದೇಶ, ಭರ್ಜರಿ ಲಯದಲ್ಲಿ ಆತ್ಮವಿಶ್ವಾಸದಿಂದಿರುವ ಭಾರತವನ್ನು ಎದುರಿಸಲಿದೆ.
ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿಂದು ಭಾರತ ಮತ್ತೊಂದು ಗೆಲುವು ದಾಖಲಿಸಿದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ.
ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಬೌಲಿಂಗ್ ಪಡೆ ಟೂರ್ನಿಯುದ್ದಕ್ಕೂ ಮಿಂಚುತ್ತಿದೆ. ಜಸ್ಪೀತ್ ಬುಮ್ರಾ ನೇತೃತ್ವದಲ್ಲಿ ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಆಡಿದ ಕುಲದೀಪ್ ಯಾದವ್ ಪಂದ್ಯ ಗೆಲ್ಲಿಸಿಕೊಡುವ ಶಕ್ತಿ ಹೊಂದಿದ್ದಾರೆ. ಭಾರತದ ಬ್ಯಾಟಿಂಗ್ ಕೂಡ ಚೇತರಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ ಸರಣಿಯಲ್ಲಿ ಎರಡು ಅರ್ಧ ಶತಕ ಗಳಿಸಿ ಲಯ ಕಂಡುಕೊಂಡಿದ್ದಾರೆ. ರಿಷಬ್ ಪಂಥ್ ಎಂಥ ಪಿಚ್ ನಲ್ಲೂ ಆಕ್ರಮಣಕಾರಿ ಆಟ ಪ್ರದರ್ಶಿಸುವ ತಮ್ಮ ಧೈರ್ಯವನ್ನು ಪ್ರದರ್ಶಿಸುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಭಾರತದ ಲೆಜೆಂಡರಿ ಆಟಗಾರ ವಿರಾಟ್ ಕೊಹ್ಲಿ ತಮ್ಮ ಎಂದಿನ ಆಟವನ್ನು ಪ್ರದರ್ಶಿಸುವುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನೊಂದೆಡೆ ನಜ್ಮುಲ್ ಹುಸೇನ್ ಶಾಂತೋ ನೇತೃತ್ವದ ಬಾಂಗ್ಲಾದೇಶ ತಂಡ, ಅತ್ಯುತ್ತಮ ಆಟಗಾರರ ದಂಡೇ ಇದ್ದರೂ ಸಾಂಘಿಕ ಪ್ರದರ್ಶನ ತೋರಲು ಪದೇ ಪದೇ ವಿಫಲವಾಗುತ್ತಿದೆ. ತಂಡದ ಆಟಗಾರರೆಲ್ಲರೂ ತಮ್ಮ ನೈಜ ಆಟ ಪ್ರದರ್ಶಿಸಿದರೆ ಯಾವುದೇ ತಂಡವನ್ನಾದರೂ ಸೋಲಿಸುವ ಶಕ್ತಿ ಈ ತಂಡಕ್ಕಿದೆ. ಆದರೆ ತಂಡ ಲಯ ಕಳೆದುಕೊಂಡಿದ್ದು, ಬಲಿಷ್ಠ ಭಾರತ ವಿರುದ್ಧ ಜಯಗಳಿಸಲು ಅದು ಪವಾಡವನ್ನೇ ಮಾಡಬೇಕಿದೆ.
ಪಂದ್ಯ ಇಂದು ರಾತ್ರಿ ಭಾರತೀಯ ಕಾಲಮಾನ 8 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಫೋರ್ಟ್ಸ್ ನಲ್ಲಿ ನೇರಪ್ರಸಾರವಿರುತ್ತದೆ. ಹಾಟ್ ಸ್ಟಾರ್ ಆಪ್ ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ನೋಡಬಹುದಾಗಿದೆ.