ತಿರುವನಂತಪುರ: ಮದುವೆಯಾದ ಮಹಿಳೆಯರ ಉದ್ಯೋಗಕ್ಕೆ ಅಪಾಯ ಎದುರಾಗುತ್ತಿರುವ ಹೊಸ ಟ್ರೆಂಡ್ ಆರಂಭವಾಗಿದೆ. ವಿವಾಹ ಮತ್ತು ಮಕ್ಕಳನ್ನು ಪಡೆಯುವುದರಿಂದ ಮಹಿಳೆಯರ ಉದ್ಯೋಗಕ್ಕೆ ಅಪಾಯ ಎದುರಾಗುತ್ತಿದೆ ಎಂದು ಮಹಿಳಾ ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಕುರಿತು ಚರ್ಚಿಸಲು ಕೇರಳ ಮಹಿಳಾ ಆಯೋಗ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಈ ರೀತಿ ತಮಗೆ ದುರಾಗುತ್ತಿರುವ ಹೊಸ ಸಮಸ್ಯೆಗಳನ್ನು ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಭೆಯಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ನೂರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದೆ. ಕೇರಳದ ಐಟಿ ವಲಯದಲ್ಲಿ 2.5 ಲಕ್ಷ ಮಹಿಳಾ ಉದ್ಯೋಗಿಗಳಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಉದ್ಯೋಗಸ್ಥ ಮಹಿಳೆಯರು ಹೇಳಿಕೊಂಡ ಸಮಸ್ಯೆಗಳೆಂದರೆ ಹೆರಿಗೆ ರಜೆ ನೀಡಲು ಸಂಸ್ಥೆಗಳ ಹಿಂದೇಟು, ವಿವಾಹಿತ ಮಹಿಳೆಯರಿಗೆ ಬಡ್ತಿ ನಿರಾಕರಣೆ, ಹೆರಿಗೆ ರಜೆ ನೀಡಿದಲ್ಲಿ ಸಂಸ್ಥೆಗೆ ಆರ್ಥಿಕವಾಗಿ ಹೊರೆಯಾಗುತ್ತದೆ ಎಂಬ ಭಾವನೆ,ವಿವಾಹಿತರಾದ ನಂತರ ಹೆಚ್ಚಿನ ಕೆಲಸ ಮಾಡಿಸಿಕೊಳ್ಳಲು ಆಗದು ಎಂಬ ಆತಂಕ, ಗರ್ಭಿಣಿ ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ ಹೇರುವ ಮೂಲಕ ಅವರು ಕೆಲಸಕ್ಕೆ ರಾಜೀನಾಮೆ ನೀಡುವಂತೆ ಪರೋಕ್ಷವಾಗಿ ಒತ್ತಡ ಹೇರುತ್ತಿರುವುದು ಮತ್ತು ಹೆರಿಗೆ ರಜೆ ನಂತರ ವಾಪಸಾಗುವ ಮಹಿಳೆಯರ ಕಡೆಗಣನೆ ಮಾಡಲಾಗುತ್ತಿದೆ ಎಂಬ ಅಂಶಗಳು ವ್ಯಕ್ತವಾಗಿವೆ.