ಕನಕಪುರ: ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವ ಪಕ್ಷದ ಕಾರ್ಯಕರ್ತ. ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳುವ ಮೂಲಕ ಪಕ್ಷವನ್ನು ಮುಜುಗರಕ್ಕೀಡುಮಾಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕನಕಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಇಂದು ಮತ ಚಲಾಯಿಸಿದ ನಂತರ ಅವರು ಮಾತನಾಡಿದರು.
ಪಕ್ಷವನ್ನು ದುರ್ಬಲಗೊಳಿಸುವುದಕ್ಕೆ ನಾನು ಇಷ್ಟಪಡುವುದಿಲ್ಲ. ಪಕ್ಷ ಮತ್ತು ಕಾರ್ಯಕರ್ತರಿಂದ ನಾವು ಹೊರತು ನಮ್ಮಿಂದ ಪಕ್ಷವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಆಸ್ತಿ. ಅವರು ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಎರಡನೇ ಬಾರಿ ಸಿ.ಎಂ ಆಗಿ ಅರ್ಧ ಅವಧಿ ಮುಗಿಸಿರುವ ಅವರು ಮುಂದಿನ ಬಜೆಟ್ ಮಂಡಿಸುವುದಾಗಿ ಅವರೇ ಹೇಳಿದ್ದಾರೆ ಎಂದರು.
ತಮ್ಮ ಪರವಾಗಿ ಕೆಲ ಶಾಸಕರು ದೆಹಲಿಗೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಪರವಾಗಿ ದೆಹಲಿಗೆ ಹೋಗಿ ಎಂದು ಯಾರಿಗೂ ಒತ್ತಡ ಹೇರಿಲ್ಲ. ಹೋಗಿರುವವರಿಗೆ ಏಕೆ ಹೋಗಿದ್ದೀರಿ ಎಂದೂ ಕೇಳಲಾಗುವದಿಲ್ಲ. ಕೆಲವರು ಸಚಿವರಾಗಲು ಹೋಗಿರಬಹುದು. ಅದು ತಪ್ಪೇನಲ್ಲ ಎಂದು ಉತ್ತರಿಸಿದರು.
ಬಸವರಾಜ ರಾಯರಡ್ಡಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಅವರ ವಕ್ತಾರನಲ್ಲ ಎಂದರು. ಆನೇಕಲ್ ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಹಾಗೂ ಇತರರ ಇದ್ದರು.

