ಧರ್ಮ ಮತ್ತು ಸಂಸ್ಕೃತಿಯ ನಡುವೆ ಮಹಿಳಾ ಅಸ್ಮಿತೆ

Most read

ಚಾಮುಂಡಿ ಬೆಟ್ಟ ನಾಗರಿಕರಿಗೆ ಸೇರಿದ ಆಸ್ತಿ. ಅಲ್ಲಿರುವ ದೇವಸ್ಥಾನ ಮುಜರಾಯಿ ಇಲಾಖೆಯ ಆಸ್ತಿ. ನಾಡಹಬ್ಬ ಎಂದೇ ಹೆಸರಾಗಿರುವ ದಸರಾ ಉತ್ಸವ, ಈ ಎರಡೂ ತಾಣಗಳನ್ನು ಒಳಗೊಂಡು ನಡೆಯುವ ಒಂದು ಜನಸಂಸ್ಕೃತಿಯ ಸಂಕೇತ. ನಾಡಿನ ಸಮಸ್ತ ಜನತೆಯೂ ಸಂಭ್ರಮಿಸುವ, ನಾಸ್ತಿಕರಾದಿಯಾಗಿ ಸಮಸ್ತ ನಾಗರಿಕರೂ ನಿರಪೇಕ್ಷತೆಯಿಂದ ವೀಕ್ಷಿಸುವ ಈ ಸಾಂಸ್ಕೃತಿಕ ಉತ್ಸವಕ್ಕೆ ಸಂಕುಚಿತ ರಾಜಕೀಯ ಉದ್ದೇಶಗಳಿಗಾಗಿ  ಧರ್ಮದ ಲೇಪನ ಮಾಡುವುದು ನಾಗರಿಕತೆಯ ಲಕ್ಷಣವಲ್ಲ ನಾ. ದಿವಾಕರ, ಚಿಂತಕರು.

ಮೈಸೂರು ದಸರಾ ಉದ್ಘಾಟನೆಯ ಸುತ್ತ ಎದ್ದಿರುವ ವಿವಾದ ಮತ್ತು ಸಂಘರ್ಷ ಅನಗತ್ಯ ಎನಿಸಿದರೂ, ಭಾರತದ ಸಾಂಸ್ಕೃತಿಕ ರಾಜಕಾರಣದಲ್ಲಿ ಇದೇನೂ ಅನಿರೀಕ್ಷಿತ ಎನಿಸುವುದಿಲ್ಲ. ಏಕೆಂದರೆ ಉದ್ಘಾಟನೆಗೆ ಆಹ್ವಾನಿಸಲಾಗಿರುವ ಸಾಹಿತಿ ಬಾನು ಮುಷ್ತಾಕ್‌ ಅವರ ಧಾರ್ಮಿಕ ಅಸ್ಮಿತೆಯೇ ಹಿಂದುತ್ವವಾದಿಗಳಿಗೆ ಬಹುದೊಡ್ಡ ತೊಡಕಾಗಿ ಕಾಣುತ್ತಿದೆ. ಮೇಲ್ನೋಟಕ್ಕೆ ಇದು ಧರ್ಮಗಳ ನಡುವಿನ ಸಂಘರ್ಷದ ಹಾಗೆ ಕಂಡರೂ, ಆಳಕ್ಕೆ ಹೊಕ್ಕು ನೋಡಿದಾಗ, ಅಲ್ಲಿ ಮಹಿಳಾ ಅಸ್ಮಿತೆಯನ್ನೂ ಗುರುತಿಸಬಹುದು. ಏಕೆಂದರೆ ಬಾನು ಮುಷ್ತಾಕ್‌ ದಸರಾ ಉದ್ಘಾಟನೆ ಮಾಡುತ್ತಿರುವ ಐದನೆಯ ಮಹಿಳೆ ಇರಬಹುದು. ಸಮಾನಾಂತರವಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳತ್ತ ಹೊರಳಿ ನೋಡಿದಾಗ ಅಲ್ಲೂ ಸಹ 86 ಸಮ್ಮೇಳನಗಳಲ್ಲಿ ಬಾನು ಮುಷ್ತಾಕ್‌ ಐದನೆಯ ಮಹಿಳೆಯಾಗಿ ಕಾಣುತ್ತಾರೆ. ಇದು ಕಾಕತಾಳೀಯವೇನಲ್ಲ, ಧರ್ಮ, ಸಂಸ್ಕೃತಿ, ಸಾಹಿತ್ಯ ಮತ್ತು ಇನ್ನಿತರ ಯಾವುದೇ ಸಾಮಾಜಿಕ ಚೌಕಟ್ಟುಗಳನ್ನು ಆವರಿಸಿರುವುದು ಒಂದೇ ಮೂಲಕ ಪಿತೃಪ್ರಧಾನ ಮೌಲ್ಯಗಳು ಮತ್ತು ಪುರುಷಾಧಿಪತ್ಯದ ಆಳ್ವಿಕೆಯ ತಂತ್ರಗಳು.

ಈ ಹಿನ್ನೆಲೆಯಲ್ಲೇ ದಸರಾ 2025ರ ಬೆಳವಣಿಗೆಗಳನ್ನು ಗಮನಿಸಿದಾಗ,  ಕಳೆದ ಮೂರ್ನಾಲ್ಕು ದಶಕಗಳಲ್ಲಿ ದೇಶ ಕಂಡಿರುವ ಸಾಂಸ್ಕೃತಿಕ ರಾಜಕಾರಣದಲ್ಲಿ ಸಮನ್ವಯತೆಯನ್ನು, ಸೌಹಾರ್ದತೆಯನ್ನು ಭಂಗಗೊಳಿಸುವಂತಹ ತಡೆಗೋಡೆಗಳನ್ನು ಕಟ್ಟುವ ಪ್ರಕ್ರಿಯೆ ತೀವ್ರವಾಗುತ್ತಿದ್ದು, ಅಧಿಕಾರ ರಾಜಕಾರಣ, ಸಾಂಸ್ಥಿಕ ಹಿತಾಸಕ್ತಿ, ಜಾತಿ ಶ್ರೇಷ್ಠತೆ ಮತ್ತು ಮೇಲರಿಮೆ ಹಾಗೂ ಯಜಮಾನಿಕೆಯ ಊಳಿಗಮಾನ್ಯ ಸಂಸ್ಕೃತಿಯ ಪ್ರಭಾವದಿಂದ, ಶತಮಾನಗಳ ಸಾಂಸ್ಕೃತಿಕ ಬೇರುಗಳು ಕ್ರಮೇಣ ಸಡಿಲವಾಗುತ್ತಿರುವುದನ್ನು ಗುರುತಿಸಬಹುದು. 12ನೆ ಶತಮಾನದಲ್ಲಿ ಕರ್ನಾಟಕವೇ ಸಾಕ್ಷಿಯಾದ ಶರಣ ಸಂಸ್ಕೃತಿ, ವಚನ ಚಳುವಳಿಯ ಬಹುಸಾಂಸ್ಕೃತಿಕ ನೆಲೆಗಳು ಇಂದಿಗೂ ಉಸಿರಾಡುತ್ತಿದ್ದರೂ, 21ನೆ ಶತಮಾನದಲ್ಲಿ ಸಮಾಜವನ್ನು ವಿರುದ್ಧ ದಿಕ್ಕಿನಲ್ಲಿ ಕರೆದೊಯ್ಯುವ ಸಾಂಸ್ಥಿಕ ಪ್ರಯತ್ನಗಳಿಂದ, ಭಾರತದ ಬಹುತ್ವದ ನೆಲೆಗಳು ಕ್ರಮೇಣವಾಗಿ ವಿಘಟನೆಗೊಳಗಾಗುತ್ತಿವೆ. ಇಲ್ಲಿ ಮತ್ತೊಮ್ಮೆ ಮಹಿಳೆಯೇ ಹೆಚ್ಚು ತಾರತಮ್ಯಕ್ಕೊಳಗಾಗುವುದನ್ನು ಕಾಣಬಹುದು.

ಬಾನು ಮುಷ್ತಾಕ್

ಈ ಸಾಮಾಜಿಕ ಬೆಳವಣಿಗೆಯ ನಡುವೆಯೇ ಬೌದ್ಧಿಕವಾಗಿಯೂ ಸಹ ಸಾಂಸ್ಥಿಕ ಧರ್ಮ ಮತ್ತು ತಳಸಮಾಜದ ಜನಸಂಸ್ಕೃತಿಯ ನಡುವೆ ಇರುವ ಅಪಾರ ಅಂತರವನ್ನೂ ಕಿರಿದಾಗಿಸುವ ಪ್ರಯತ್ನಗಳು, ಎಲ್ಲ ಸ್ತರಗಳಲ್ಲೂ, ಎಲ್ಲ ವಲಯಗಳಲ್ಲೂ ನಡೆಯುತ್ತಿವೆ. ರಾಜಕೀಯ, ಸಂವಹನ ಮಾಧ್ಯಮ, ಶೈಕ್ಷಣಿಕ-ಬೌದ್ಧಿಕ ವಲಯ, ಅಧ್ಯಾತ್ಮ ಹಾಗೂ ಸಾರ್ವಜನಿಕ ಸಂಸ್ಥೆಗಳ ನಡುವೆ ಬಲವಾಗಿ ಬೇರೂರಿರುವ ಈ ಸಾಂಸ್ಥಿಕ ಹಿತಾಸಕ್ತಿಗಳು ಉತ್ಪಾದಿಸುತ್ತಿರುವ ಹೊಸ ನಿರೂಪಣೆಗಳೇ ಧರ್ಮ ಮತ್ತು ಸಂಸ್ಕೃತಿಯ ನಡುವೆ ಇರುವ ಅಂತರವನ್ನು ಕಿರಿದಾಗಿಸುತ್ತಾ, ಎರಡೂ ಒಂದೇ ಎಂಬ ವ್ಯಾಖ್ಯಾನವನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ , ಭಾರತದ ಮೂಲ ಸಂಸ್ಕೃತಿ ಎಂದು ಪರಿಗಣಿಸಬಹುದಾದ ನೂರಾರು ಜನಸಾಂಸ್ಕೃತಿಕ ಆಚರಣಾತ್ಮಕ ನೆಲೆಗಳೂ ಸಹ, ವಿಶಾಲ ಧರ್ಮದ ಆವರಣದೊಳಗೆ ಸಿಲುಕಿ, ತಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿವೆ.

2025ರ ದಸರಾ ಉತ್ಸವ ವಿವಾದಾಸ್ಪದವಾಗಿರುವುದು ಈ ಯಾವುದೇ ಕಾರಣಗಳಿಗಾಗಿ ಅಲ್ಲ. ಬದಲಾಗಿ ಈ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಲು, ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವ ಕಾರಣಕ್ಕಾಗಿ. ದಸರಾ ಉತ್ಸವದ ಸಂದರ್ಭದಲ್ಲಿ ಸಾಂಕೇತಿಕವಾಗಿ ಆರಾಧಿಸಲ್ಪಡುವ ಚಾಮುಂಡೇಶ್ವರಿ ಮತ್ತು ಬಾನು ಮುಷ್ತಾಕ್‌ ಅವರ ಮುಸ್ಲಿಂ ಅಸ್ಮಿತೆ, ಆಕೆಯ ಆಯ್ಕೆಯನ್ನು ವಿರೋಧಿಸಲು ಪ್ರಧಾನ ಕಾರಣವಾಗಿದೆ. ಬಿಜೆಪಿ ನಾಯಕರು  “ ದನ ತಿನ್ನುವ ಹೆಣ್ಣು ದಸರಾ ಉದ್ಭಾಟಿಸುವುದು ಬೇಡ ”,  “ ಮುಸ್ಲಿಂ ಮಹಿಳೆ ಚಾಮುಂಡಿ ಬೆಟ್ಟ ಹತ್ತಕೂಡದು ”, “ಇದು ಹಿಂದೂಗಳ ಹಬ್ಬ ಸಾಬರಿಗೇನು ಕೆಲಸ ”, ಇವೇ ಮುಂತಾದ ಹೇಳಿಕೆಗಳನ್ನು ನೀಡಿರುವುದು ನಾಗರೀಕತೆಯ ಚೌಕಟ್ಟುಗಳನ್ನು ಮೀರಿದ ಮಾತುಗಳಾಗಿಯೇ ಕೇಳಿಸಲು ಸಾಧ್ಯ. ಈ ಹೇಳಿಕೆಗಳಲ್ಲಿ ಹೆಣ್ಣು ಎಂಬ ಪದವನ್ನು ವಿಶಾಲಾರ್ಥದಲ್ಲಿ ಕಾಣಬೇಕಿದೆ. ಇಲ್ಲಿ ಬಾನು ಮುಷ್ತಾಕ್‌ ಎರಡು ರೀತಿಯ ದಾಳಿ ಎದುರಿಸುತ್ತಾರೆ. ಧಾರ್ಮಿಕ ಯಜಮಾನಿಕೆಯು ಧರ್ಮಕೇಂದ್ರಿತ ಅಸ್ಮಿತೆಯನ್ನು ಮುನ್ನಲೆಗೆ ತಂದರೆ, ಪುರುಷಾಧಿಪತ್ಯದ ವಾರಸುದಾರಿಕೆಯು ಆಕೆಯ ಲಿಂಗತ್ವ ಅಸ್ಮಿತೆಯನ್ನು ಮುಖ್ಯವಾಗಿ ಪರಿಗಣಿಸುತ್ತದೆ. ಅನ್ಯ ಧರ್ಮೀಯರೇ ಆದರೂ ಮುಸ್ಲಿಂ ಪುರುಷರ ಮೇಲೆ ಹೇರದ ಷರತ್ತುಗಳನ್ನು, ನಿಬಂಧನೆಗಳನ್ನು, ಮುಸ್ಲಿಂ ಮಹಿಳೆಯ ಮೇಲೆ ಹೇರುವುದು ಈ ಅಂಶವನ್ನು ಸಾಬೀತುಪಡಿಸುತ್ತದೆ.

ಮೈಸೂರು ದಸರಾ

ಇವೆಲ್ಲವನ್ನೂ ಮೀರಿಸುವ ಹಾಗೆ ಸರ್ಕಾರಕ್ಕೆ ದಸರಾ ಉದ್ಘಾಟಿಸಲು ಹಿಂದೂ ಸಾಹಿತಿ ಯಾರೂ ಕಾಣಲಿಲ್ಲವೇ ಎಂಬ ಪ್ರಶ್ನೆ , ಇಡೀ ಕನ್ನಡ ಸಾಹಿತ್ಯ ಪರಂಪರೆಯನ್ನು ಅವಮಾನಿಸುವ ಒಂದು ಮಾತು. ಸಮಕಾಲೀನ ಕನ್ನಡ ಸಾಹಿತ್ಯದ ಓದು, ಅಧ್ಯಯನ  ಬೇಡ, ಅದರ ಚಾರಿತ್ರಿಕ ನಡಿಗೆಯ ಪರಿಚಯವಿದ್ದವರೂ ಸಹ ಈ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಸಾಹಿತ್ಯದಲ್ಲಿ ಹಿಂದೂ-ಮುಸ್ಲಿಂ ವಿಭಜನೆ ಮಾಡುವ ರಾಜಕೀಯ ನಾಯಕರಿಗೆ ಕನ್ನಡದ ನಿತ್ಯೋತ್ಸವ ಕವಿ ನಿಸ್ಸಾರ್‌ ಅಹಮದ್‌ ಹೇಗೆ ಕಾಣುತ್ತಾರೆ ? ಪದೇ ಪದೇ “ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ” ಎಂಬ ಪಾರಂಪರಿಕ ಗಾದೆಗೆ ಆತುಕೊಂಡು, ಈ ಡಿಜಿಟಲ್‌ ಯುಗದಲ್ಲೂ ಸಾಹಿತಿಯೊಬ್ಬರನ್ನು ʼ ಮುಸ್ಲಿಂ ಸಾಹಿತಿ ʼ ಎಂದು ಪರಿಗಣಿಸಿ, ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ದಸರಾ ಉದ್ಘಾಟನೆ ಮಾಡುವ ಸಾಂವಿಧಾನಿಕ ಸ್ವಾತಂತ್ರ್ಯವನ್ನು ಪ್ರಶ್ನಿಸುವುದು, ಕನ್ನಡದ ಶ್ರೇಷ್ಠ ಸಾಹಿತ್ಯ ಪರಂಪರೆಯನ್ನು ಅಪಮಾನಿಸಿದಂತೆ ಮಾತ್ರವೇ ಅಲ್ಲ, ನಮ್ಮ ಸಮಾಜ ಮತ್ತು ದೇಶ ಸಾಗುತ್ತಿರುವ ಅಪಾಯಕಾರಿ ಹಾದಿಯ ಸಂಕೇತವಾಗಿ ಕಾಣುತ್ತದೆ.

ಬಹುತ್ವದ ಸಾಂಸ್ಕೃತಿಕ ಚಹರೆ ದಸರಾ

ಏಕೆಂದರೆ ದಸರಾ ಉತ್ಸವದ ಸಂದರ್ಭದಲ್ಲಿ, ಅಂಬಾರಿ ಹೊರುವ ಮತ್ತು ಅದರೊಂದಿಗೆ ಮೆರವಣಿಗೆಯಲ್ಲಿ ಸಾಗುವ ಆನೆಗಳ ಮಾವುತರಿಂದ ಹಿಡಿದು, ನವರಾತ್ರಿಯ ಉದ್ದಕ್ಕೂ ಪ್ರತಿಯೊಂದು ಹಂತದಲ್ಲೂ ಕಾಣಬಹುದಾದ ಸಂಭ್ರಮ-ಉತ್ಸಾಹದಲ್ಲಿ, ಯಾವುದೇ ಜನಾಂಗೀಯ ಕುರುಹುಗಳನ್ನು ಗುರುತಿಸಲಾಗುವುದಿಲ್ಲ. ಅಂಬಾರಿ ಆನೆಗಳಿಗೆ ಅಲಂಕಾರಿಕ ವಸ್ತ್ರ ಇತ್ಯಾದಿಗಳನ್ನು ತಯಾರಿಸುವಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಇರುವುದನ್ನು ಮೈಸೂರಿನ ಸಮಸ್ತರೂ ಅರಿತಿರುತ್ತಾರೆ. ನಮ್ಮ ಪುಣ್ಯ ಎಂದರೆ ಆನೆಗಳಿಗೆ ಜಾತಿ-ಧರ್ಮಗಳ ಗೊಡವೆ ಇಲ್ಲ. ಇದ್ದಿದ್ದರೆ, ಮುಸ್ಲಿಂ ಆನೆ, ಹಿಂದೂ ಆನೆ ಎಂಬ ವಿಭಜನೆಯ ರೇಖೆಗಳು ರಂಗೋಲಿಗಳಾಗಿ ಹಾದಿಯುದ್ದಕ್ಕೂ ರಾರಾಜಿಸಿಬಿಡುತ್ತಿದ್ದವು. ಈ ಆನೆಗಳನ್ನು ಸಾಕಿ, ಪಳಗಿಸಿ, ದಸರಾ ದಿನಕ್ಕೆ ಸಜ್ಜುಗೊಳಿಸುವ ಮಾವುತರು, ನಗರ ನಾಗರಿಕತೆಗೆ ಒಡ್ಡಿಕೊಂಡವರಲ್ಲ. ಈ ಸಾಧಾರಣ ಜನರಲ್ಲಿರುವುದು ದಸರಾ ಉತ್ಸವದ ಹೆಮ್ಮೆ, ದೈವ ಶ್ರದ್ಧೆ ಮತ್ತು ತಮ್ಮ ಕಾಯಕದಲ್ಲಿ ಪ್ರಾಮಾಣಿಕತೆ. ಈ ಅರೆ ಅಕ್ಷರಸ್ಥ ಸಮಾಜದಲ್ಲಿ ಇರುವ ಪರಿವೆ, ವಿವೇಕ, ವಿವೇಚನೆ, ಪರಿಜ್ಞಾನವೂ, ನಾಗರಿಕರು ಎನಿಸಿಕೊಂಡ ನಮ್ಮ ಸಮಾಜದಲ್ಲಿ ಇಲ್ಲವಲ್ಲಾ ಎಂಬ ವ್ಯಥೆ ಕಾಡುತ್ತದೆ.

ಡಾ. ರಾಜ್‌ ನಟನೆಯ ಕಲಾತ್ಮಕ ʼ ಸನಾದಿ ಅಪ್ಪಣ್ಣ ʼ ಚಿತ್ರದಲ್ಲಿ, ಕಥಾ ಹಂದರದ ಒಂದು ಭಾಗವಾಗಿ ಚಿತ್ರದುದ್ದಕ್ಕೂ ನಾದ ಸುಧೆಯನ್ನು ಹರಿಸುವ ಶಹನಾಯ್‌ ವಾದಕ ಬಿಸ್ಮಿಲ್ಲಾ ಖಾನ್‌ ಅವರನ್ನು ಹುಟ್ಟಿನಿಂದ ಮುಸ್ಲಿಂ ಎನ್ನಬಹುದು ಆದರೆ ಅವರ ವಾದ್ಯದಿಂದ ಹೊರಬರುವ ಸುಸ್ವರ-ಆಲಾಪನೆಗಳನ್ನು ಹೀಗೆ ವಿಭಜಿಸಿ ನೋಡಲು ಸಾಧ್ಯವೇ ? ಇಂದಿಗೂ ಸಹ ನಮ್ಮ ನಡುವೆ ರಷೀದ್‌ ಖಾನ್‌, ಫಯಾಜ್‌ ಖಾನ್‌ ಅವರ ಮಧುರ ಕಂಠದಿಂದ ಹೊರಡುವ ಕೃಷ್ಣ ಭಜನೆಗಳು, ಸುಶ್ರಾವ್ಯ ಸಂಗೀತ ನಮ್ಮ ನಡುವಿನ ಸಾಂಸ್ಕೃತಿಕ ಚೈತನ್ಯವನ್ನು ಶ್ರೀಮಂತಗೊಳಿಸುತ್ತಿದೆ ಅಲ್ಲವೇ ? ಜಾನ್‌ ಹಿಗಿನ್ಸ್‌ ಅವರ ಕರ್ನಾಟಕ ಸಂಗೀತ, ಅವರ ಕಂಠದಲ್ಲಿ ಬರುತ್ತಿದ್ದ “ಕೃಷ್ಣಾ ನೀ ಬೇಗನೆ ಬಾರೋ” ಗಾಯನ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದನ್ನು ಮರೆಯಲಾಗುವುದೇ ? ಕೆ ಜೆ ಏಸುದಾಸ್‌ ಅವರ ಅಯ್ಯಪ್ಪ ಸ್ತುತಿ ಗೀತೆ “ಹರಿವರಾಸನಂ” ಇಂದಿಗೂ ಅಯ್ಯಪ್ಪ ಭಕ್ತರ ನಡುವೆ ಹರಿಯುತ್ತಿರುವುದನ್ನು ಅಲ್ಲಗಳೆಯಲಾಗುವುದೇ ? ದನ ತಿನ್ನುವುದಕ್ಕೂ, ಸಾಂಸ್ಕೃತಿಕ ಕಲಾಭಿವ್ಯಕ್ತಿಗೂ ಎತ್ತಣಿಂದೆತ್ತ ಸಂಬಂಧ? ಈ ಎಲ್ಲ ಸಾಂಸ್ಕೃತಿಕ ದನಿಗಳ ಒಂದು ಚಾರಿತ್ರಿಕ-ಸಮಕಾಲೀನ ಸಮ್ಮಿಲನವಾಗಿ ದಸರಾ ಉತ್ಸವವನ್ನು ನಾವು ನೋಡಬೇಕಲ್ಲವೇ?

ಬಾನು ಮತ್ತು ಸಿದ್ದರಾಮಯ್ಯನವರು

ಇಂದು ಬಾನು ಮುಷ್ತಾಕ್‌ ನಾಳೆ ಮತ್ತೊಬ್ಬರು. ಸಾಹಿತ್ಯವನ್ನೂ ಧರ್ಮಾಧಾರಿತವಾಗಿ ವಿಭಜಿಸುವ ವಿಕೃತಿ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ?  ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಗೋಷ್ಠಿಯ ಹಾಗೆಯೇ ಇಲ್ಲಿಯೂ ಸಹ ಮಹಿಳಾ ದಸರಾ ಆಚರಿಸುವುದು, ಪಿತೃಪ್ರಧಾನ ಸಮಾಜದ ʼ ಅವಕಾಶ ಕಲ್ಪಿಸುವ ಯಜಮಾನಿಕೆಯ ಹಕ್ಕಿನ ʼ ಪ್ರತಿಪಾದನೆಯಾಗಿಯೇ ಕಾಣುತ್ತದೆ. ಚಾಮುಂಡಿ ಬೆಟ್ಟ ನಾಗರೀಕರಿಗೆ ಸೇರಿದ ಆಸ್ತಿ. ಅಲ್ಲಿರುವ ದೇವಸ್ಥಾನ ಮುಜರಾಯಿ ಇಲಾಖೆಯ ಆಸ್ತಿ. ನಾಡಹಬ್ಬ ಎಂದೇ ಹೆಸರಾಗಿರುವ ದಸರಾ ಉತ್ಸವ, ಈ ಎರಡೂ ತಾಣಗಳನ್ನು ಒಳಗೊಂಡು ನಡೆಯುವ ಒಂದು ಜನಸಂಸ್ಕೃತಿಯ ಸಂಕೇತ. ನಾಡಿನ ಸಮಸ್ತ ಜನತೆಯೂ ಸಂಭ್ರಮಿಸುವ, ನಾಸ್ತಿಕರಾದಿಯಾಗಿ ಸಮಸ್ತ ನಾಗರಿಕರೂ ನಿರಪೇಕ್ಷತೆಯಿಂದ ವೀಕ್ಷಿಸುವ ಈ ಸಾಂಸ್ಕೃತಿಕ ಉತ್ಸವಕ್ಕೆ ಸಂಕುಚಿತ ರಾಜಕೀಯ ಉದ್ದೇಶಗಳಿಗಾಗಿ  ಧರ್ಮದ ಲೇಪನ ಮಾಡುವುದು ನಾಗರಿಕತೆಯ ಲಕ್ಷಣವಲ್ಲ. ಸಾಂಸ್ಕೃತಿಕ ಜಗತ್ತನ್ನು ವಿಭಜಿಸುವ ಪ್ರಯತ್ನಗಳು ಸಾಹಿತ್ಯ, ಕಲೆ, ಸಂಗೀತ ಎಲ್ಲವನ್ನೂ ಆವರಿಸಿದೆ, ಮೈಸೂರು ರಂಗಾಯಣದಲ್ಲಿ ರಂಗಭೂಮಿಯನ್ನೂ ಸೋಂಕಿದ ಗಳಿಗೆಗಳನ್ನು ನೋಡಿದ್ದೇವೆ.

ಇದರಿಂದಾಚೆಗೂ ವಿಶಾಲ ಸಮಾಜ ಎನ್ನುವುದೊಂದಿದೆ. ಆ ಸಮಾಜ ದಸರಾ ಉತ್ಸವವನ್ನು ಸಾಂಸ್ಕೃತಿಕ ಹಬ್ಬವಾಗಿ ಅಚರಿಸಿ, ಸಂಭ್ರಮಿಸುತ್ತದೆ. ಅದರ ಪಾಡಿಗೆ ಅದು ನಡೆಯಲಿ ಬಿಟ್ಟುಬಿಡಿ.

ನಾ ದಿವಾಕರ

ಚಿಂತಕರು

ಇದನ್ನೂ ಓದಿ- ಕನ್ನಡ ಭಾಷೆಯ ವಿವಾದದಲ್ಲಿ ಬಾನು ಮುಷ್ತಾಕ್

More articles

Latest article