ಮಹಿಳಾ ದಿನ ವಿಶೇಷ | ಯುದ್ಧಗಳು ನಿಲ್ಲಲಿ, ಬದುಕು ಬೆಳಗಲಿ

ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಈ ಹೊತ್ತು ದೇಶ ದೇಶಗಳ ಓಣಿ ಓಣಿಗಳಲ್ಲಿ ಕಾಣ ಸಿಗುವ ಹೆಣ್ಣುಮಕ್ಕಳ ಆಶಯಗಳು ಒಂದೇ. ತನ್ನ ಕಂದಮ್ಮಗಳ ಎಳೆಯ ಕನಸುಗಳು ಛಿದ್ರಗೊಳ್ಳದಿರಲಿ. ಎದೆತೊಟ್ಟು ಬಾಯಲ್ಲಿಟ್ಟು ಚೀಪುವ ಪುಟ್ಟ ಮಗುವಿನ ಕೈ ಹಿಡಿದ ತಾಯಿಯ ಕಂಗಳಲ್ಲಿ, ನಿದ್ದೆಯಲ್ಲೂ ಎಚ್ಚರವಿರುವ ಹೆಣ್ಣೊಬ್ಬಳ ಎದೆಯಲ್ಲಿ ಮೂಡುವುದು ಒಂದೇ ಆಶಯ- ಈ ಯುದ್ಧಗಳು ನಿಲ್ಲಲಿ. ಬದುಕು ಬೆಳಗಲಿನಾಗರೇಖಾ ಗಾಂವಕರ, ಉಪನ್ಯಾಸಕರು.

ಇಂದು ಯುದ್ಧ ದೇಶದೇಶಗಳ ನಡುವೆ ಉರಿ ಹಚ್ಚಿದೆ. ನಂಬಿಕೆಗಳು ಕುಸಿಯುತ್ತಿವೆ. ಮಾನವೀಯ ಮೌಲ್ಯಗಳು ಅಧಃಪತನಗೊಂಡಿವೆ. ಸಿರಿವಂತರು ಯುದ್ಧಗಳ ಪೋಷಕರಾಗಿರಬಹುದು. ಯುದ್ಧದ ಸವಿಯನ್ನು ಉಣ್ಣಬಹುದು. ರಾಜಕಾರಣಿಗಳು ರಾಜಕೀಯ ದೊಂಬರಾಟಗಳಿಗೆ, ತೆವಲುಗಳಿಗೆ ಯುದ್ಧದ ಮೂಲಕ ಆಹಾರ ಹುಡುಕಬಹುದು. ಅವರುಗಳಿಗೆ ತಮ್ಮ ಅಧಿಕಾರದ ಗಟ್ಟಿತನಕ್ಕೆ ಭಿನ್ನ ದಾರಿಯ ಕಂಡುಕೊಳ್ಳುವಲ್ಲಿ ಯುದ್ಧವೂ ಒಂದು ಅಸ್ತ್ರವಾಗಿರಬಹುದು. ಆದರೆ ಇಲ್ಲಿ ಇಂತಹ ದೊಡ್ಡವರ ತೆವಲುಗಳಿಗೆ ಬಲಿಯಾಗುವವರು ಮಾತ್ರ ಜನಸಾಮಾನ್ಯರು, ಬಡವರು, ಮಹಿಳೆಯರು, ಮಕ್ಕಳು. ಇದು ಶತಶತನಮಾನಗಳಿಂದ ನಡೆದ ಕಥೆ. ದೇಶನಾಯಕರು ಎನ್ನಿಸಿಕೊಂಡವರಲ್ಲಿ ವಿವೇಕ ನಾಶವಾಗಿ ಆ ಸ್ಥಾನದಲ್ಲಿ ಅಹಂಕಾರ ಕುಣಿಯುತ್ತಿರುವುದರ ಪರಿಣಾಮವಿದು. ಯಾವ ಯುದ್ಧವೂ ಅಂತಿಮವಾಗಿ ಯಾವುದಕ್ಕೂ ಪರಿಹಾರವಲ್ಲ ಎಂಬ ಸತ್ಯ ತಿಳಿದೂ ಕದನಗಳು ನಡೆಯುತ್ತಲೇ ಇವೆ. ಇತಿಹಾಸ ಮರುಕಳಿಸುತ್ತಿದೆ.

ಕವಿ ಗಂಗಾಧರ ಚಿತ್ತಾಲರ ಕವಿತೆ ಮತ್ತೆ ನೆನಪಾಗುತ್ತಿದೆ.

“ಮನುಕುಲದ ರಕ್ತಮಯ ಇತಿಹಾಸ ಕೂಗಿತ್ತು,
ನೆಲವು ನಂದನವಾಗಲೇನು ಬೇಕು?

ಒಲವು ತುಂಬಿದ ಎದೆಯು
ತಿಳಿವು ತುಂಬಿದ ಮನವು
ಛಲವನರಿಯದ ಬದುಕು ಇಷ್ಟೇ ಸಾಕು.”

ಇಸ್ರೆಲ್‌ ಇರಾನ್‌ ಯುದ್ಧ

ಆದರೆ ಈಗ  ದೇಶದ ಚುಕ್ಕಾಣಿ ಹಿಡಿದಿರುವ ಬಹುತೇಕ ನಾಯಕರುಗಳು ಈ ತಿಳಿವು, ಒಲವು ಎಂಬ ಪದವನ್ನೆ ಅರಿಯರು. ಅಧಿಕಾರದ ಲಾಲಸೆ, ಸ್ವಕೇಂದ್ರಿತ ತತ್ವಗಳಲ್ಲಿ ಮುಳುಗೇಳುವ ದುಷ್ಟಕೂಟದ ಕೈಗಳಲ್ಲಿ ದೇಶಗಳೂ, ದೇಶದ ಜನರು ನಲುಗುತ್ತಿದ್ದಾರೆ. ಧರ್ಮದ ಅಂಧತೆ, ಅಧಿಕಾರದ ಮದ ಇವೇ ರಾಜ್ಯವಾಳುತ್ತಿವೆ. ಸ್ವಪ್ರತಿಷ್ಠೆ ಧರ್ಮಾಂಧತೆಗಳಲ್ಲಿ ಮುಳುಗಿಹೋದ ನಾಯಕರುಗಳು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಗಳಾಗಿದ್ದಾರೆ. ಅವರನ್ನು ಬೆಂಬಲಿಸುವ ಅಲ್ಪಸಂಖ್ಯಾತ ಮನಸುಗಳು ಅವರ ಅಭಿವ್ಯಕ್ತಿಯನ್ನೆ ಸತ್ಯವೆಂದು ಬಿಂಬಿಸಿ ಸಾಗುತ್ತಿವೆ. ಇಂದು ನಡೆಯುತ್ತಿರುವ ದಾಳಿಗಳಲ್ಲಿ ಮಾನವೀಯತೆ ಸತ್ತು ಹೋದಂತಿದೆ. ಇರಾನಿನ ಪ್ರಾಥಮಿಕ  ಶಾಲೆಯೊಂದರ ಮೇಲೆ ಅಮೇರಿಕಾ ಮತ್ತು  ಇಸ್ರೇಲ್ ನಡೆಸಿದ ಮಿಲಿಟರಿ ದಾಳಿ ಮನುಷ್ಯತ್ವದ ಕಗ್ಗೊಲೆಯಾಗಿದೆ. ನೂರಕ್ಕೂ ಹೆಚ್ಚು ಪುಟಾಣಿ ಮುದ್ದು ಮಕ್ಕಳ ಹತ್ಯೆ ಮನುಕುಲವೇ ನಾಚುವಂತದ್ದು. ಹತ್ಯೆಗೀಡಾದ ಮಕ್ಕಳ ಅಮ್ಮಂದಿರ ಹೃದಯಗಳು ಹೇಗೆ ಮಿಡಿಯುತ್ತಿರಬಹುದು ಎಂಬ ಮನುಷ್ಯತ್ವದ ಕಿಂಚಿತ್ತ ಕರುಣೆ ಈ ಯುದ್ಧಪ್ರಿಯರಿಗಿಲ್ಲ. ಇದು ಇವತ್ತಿನ ಕೃತ್ಯ ಮಾತ್ರವಲ್ಲ. ದೇಶದೇಶಗಳ ನಡುವೆ ನಡೆಯುವ ಯುದ್ಧವೇ ಆಗಿರಲಿ, ಇಲ್ಲ ಜನಾಂಗೀಯ  ಯುದ್ಧವೇ ಆಗಿರಲಿ ಈ ರಕ್ತಪಿಪಾಸುಗಳು ಹುಟ್ಟಿಕೊಳ್ಳುತ್ತಾರೋ ಅಲ್ಲೆಲ್ಲ ಅವರ ಕಣ್ಣುಗಳು ಹರಿಯುವುದು ಇಂತಹ ಮುಗ್ದ ಕಂದಮ್ಮಗಳ ಮೇಲೆ.

ಅದು  1963ರ ಸಮಯ. ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನ 16 ನೇ ರಸ್ತೆಯ ಬ್ಯಾಪ್ಟಿಸ್ಟ್ ಚರ್ಚ್‌ವೊಂದರ ಮೇಲೆ ಬಾಂಬ್ ದಾಳಿಯಾಗುತ್ತದೆ. ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಪಾಪಿಗಳು ಕರಿಯರು ಪ್ರಾರ್ಥಿಸುವ ಈ ಚರ್ಚಿನ ಮೇಲೆ ಬಾಂಬ್ ದಾಳಿ ಮಾಡುತ್ತಾರೆ. ಚರ್ಚಿನಲ್ಲಿ ದೇವ ಪ್ರಾರ್ಥನೆಯಲ್ಲಿ ತೊಡಗಿದ ನಾಲ್ಕು ಪುಟ್ಟ ಬಾಲಕಿಯರು ಹತರಾಗುತ್ತಾರೆ. ಈ ಪುಟ್ಟ ಮಕ್ಕಳ ನರಮೇಧವನ್ನು ಖಂಡಿಸಿ ಡಡ್ಲೀ ರಂಡಾಲ್ ಎಂಬ ಆಫ್ರಿಕನ್ ಅಮೇರಿಕನ್ ಕವಿಯೊಬ್ಬ ಬರೆದ ಕವಿತೆ “Ballad of Birmingham”.  ಅಲ್ಲೊಬ್ಬ ತಾಯಿ ತನ್ನ ಪುಟ್ಟ ಕಂದನನ್ನು ಚರ್ಚಿಗೆ ಹೋಗಲು ಸಿದ್ದಗೊಳಿಸಿದ್ದಾಳೆ. ಹೊಸ ಬಟ್ಟೆ, ಹೊಸ ಶೂ ತೊಟ್ಟ ಮಗಳನ್ನು ಪ್ರೀತಿಯಿಂದ ಮುದ್ದು ಮಾಡಿದ್ದಾಳೆ. ಆದರೆ ಆ ಕಂದನಿಗೆ ಚರ್ಚಿಗೆ ಹೋಗುವ ಬದಲು ಸ್ವಾತಂತ್ರ್ಯ ಚಳುವಳಿಯ ಮೆರವಣಿಗೆಯಲ್ಲಿ ಭಾಗವಹಿಸುವ ಆಸೆ. ಆದರೆ ಹೆತ್ತ ತಾಯಿಗೆ ಭಯ. ಮೆರವಣಿಗೆಯಲ್ಲಿ ಬಂದೂಕು, ಮದ್ದು ಗುಂಡುಗಳು ಇರುವುದೆಂದು ಪುಟ್ಟ ಮಕ್ಕಳಿಗೆ ಆ ಸ್ಥಳ ಸುರಕ್ಷಿತವಲ್ಲವೆಂದು ತಿಳಿ ಹೇಳಿದ್ದಾಳೆ.  ಆ ಮೆರವಣಿಗೆಯಲ್ಲಿ ಭಾಗವಹಿಸುವ ಆಸೆಯನ್ನು ಬಿಟ್ಟು ಚರ್ಚಿಗೆ ಹೋಗಿ ದೇವರಲ್ಲಿ ಪ್ರಾರ್ಥಿಸುವಂತೆ ಮಗಳನ್ನು ಪುಸಲಾಯಿಸಿ ಕಳಿಸಿದ್ದಾಳೆ. ದೇವರ ಸ್ಥಳವಾದ ಚರ್ಚ್‌  ಪುಟ್ಟ ಕಂದಮ್ಮಗಳಿಗೆ ಸುರಕ್ಷಿತವೆಂಬುದು ಅವಳ ನಂಬಿಕೆ. ಆದರೆ ಆ ತಾಯಯ ನಂಬಿಕೆ ಸುಳ್ಳಾಗುತ್ತದೆ.  ಸುರಕ್ಷಿತವೆಂದು ನಂಬಿದ ದೇವರ ಸ್ಥಳವನ್ನು ಬಿಡದ ಪಾಪಿಗಳು ಆ ಚರ್ಚಿಗೆ ಬಾಂಬನ್ನು ಹಾಕುತ್ತಾರೆ. ಹೊಸ ಬಟ್ಟೆ ಶೂ ತೊಟ್ಟ ಮಗು ಹೆಣವಾಗುತ್ತದೆ. ಓಡೋಡಿ ಬರುವ ತಾಯಿಗೆ ಮಗು ಸಿಗುವುದಿಲ್ಲ. ಆದರೆ  ಚರ್ಚಿನ ಕಟ್ಟಡಗಳ ಅವಶೇಷದಡಿಯಲ್ಲಿ ಮಗುವಿನ ಒಂದು ಜೊತೆ ಶೂ ಸಿಗುತ್ತದೆ.  ಆ ತಾಯಯ ಆಕ್ರಂದನ ಕರುಳು ಕೊಯ್ಯುತ್ತದೆ. ಇಂತಹ ಯುದ್ಧಗಳು ಯಾರಿಗೆ ಬೇಕು?. ದಿನದ ಬದುಕನ್ನು ಪ್ರೀತಿ ವಿಶ್ವಾಸಗಳಲ್ಲಿ ಕಾಣುವ ಮನಸ್ಸುಗಳಿಗೆ ಬೇಕೆ? ತಾಯಂದಿರಿಗೆ ಬೇಕೆ? ಮಹಿಳೆಯರಿಗೆ ಬೇಕೆ? ಸಾಮಾನ್ಯ ಬದುಕನ್ನು ತಮ್ಮಂತೆ ಬದುಕುವ, ಇದ್ದ ಸಂಪತ್ತಿನಲ್ಲಿ ಸ್ವರ್ಗ ಕಾಣುವ ಪುರುಷರಿಗೆ ಬೇಕೆ?.

ಜಗತ್ತಿನಾದ್ಯಂತ ಮಹಿಳಾ ಮನಸ್ಥಿತಿಯಲ್ಲಿ ಶೇ. 90 ರಷ್ಟು ಜನ ಶಾಂತಿ, ಸೌಹಾರ್ದ, ಪ್ರೀತಿ ಕರುಣೆಗಳ ಪ್ರತಿಪಾದಕರಿದ್ದಾರೆ. ಇಂದಿನ ಸುಶಿಕ್ಷಿತ ಮಹಿಳಾ ಪ್ರಜ್ಞೆ ಸ್ವಾಯತ್ತತೆ, ಮತ್ತು ಸಮಾನತೆಯ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಜಾಯಮಾನವನ್ನು ಹೊಂದಿದೆ. ಶೇ 95% ಮಹಿಳೆಯರು ಯುದ್ಧವನ್ನು ಸಮರ್ಥಿಸುವುದಿಲ್ಲ. ಕಾರಣ ಸರಳ. ಯುದ್ಧದ ಭೀಕರತೆಗೆ ನರಳುವವರು ಮೊದಲು ಮಕ್ಕಳು ಮತ್ತು ಮಹಿಳೆಯರು. ಅದರ ಪರಿಣಾಮಗಳು ಪುರುಷನಿಗಿಂತ ಮಹಿಳೆಯ ಬದುಕನ್ನು ದುರ್ಬರಗೊಳಿಸುತ್ತದೆ. ಮಹಿಳೆಯರ ಅಥವಾ ತಾಯಂದಿರ ಕಣ್ಣುಗಳಲ್ಲಿ  ಯುದ್ಧದ ವಿಕಾರಗಳ ವಿಶ್ಲೇಷಿಸಿದರೆ  ಯಾವ ತಾಯಿಯೂ ಯುದ್ಧವನ್ನು ಸಮರ್ಥಿಸಲಾರಳು. ಅತೀ ವಿರಳ ಸಂಖ್ಯೆಯ ಮಹಿಳೆಯರು ಅರೆ ಪ್ರಜ್ಞೆಯ ಮತ್ತಿನಲ್ಲಿ ಧಾರ್ಮಿಕ ಕುರುಡುತನಕ್ಕೆ ಒಳಗಾಗಿ ಉದ್ರೇಕಕಾರಿ ಹೇಳಿಕೆಗಳ ಕೊಡುತ್ತಿರಬಹುದು, ಸಾಮಾಜಿಕ ಜಾಲತಾಣಗಲ್ಲಿ ಅಂತಹ ಕೆಲವು ಧಾರ್ಮಿಕ ಭ್ರಮಿತರ ಪೋಸ್ಟುಗಳು ಹೆಚ್ಚಾಗಿ ಹರಿಯುತ್ತಿರಬಹುದು. ಆದರೆ ಆದು ಅಲ್ಪಸಂಖ್ಯೆಯ ಮಹಿಳೆಯರದ್ದು. ಯುದ್ಧ ಮಹಿಳೆಯರ ಆಯ್ಕೆಯಲ್ಲ.

ಪ್ರಜ್ಞಾವಂತ ಮಹಿಳೆಯರು ಅಮೇರಿಕ, ಇಸ್ರೇಲ್‌ನ ನಡೆಯನ್ನಾಗಲಿ ಅಥವಾ ಇರಾನಿನ ನಡೆಯನ್ನೇ  ಆಗಲಿ ಸಮರ್ಥಿಸಲಾರರು. ಇದೇ ಇರಾನಿನಲ್ಲಿ ನಾಲ್ಕು ವರ್ಷಗಳ ಹಿಂದೆ ಬಿಗಿಯಾದ ಉಡುಪು ಮತ್ತು ಹಿಜಾಬ್‍ ನ್ನು  ಸರಿಯಾಗಿ ಧರಿಸಿಲ್ಲದ ಕಾರಣ 2022ರ ಸಪ್ಟೆಂಬರ್‌ನಲ್ಲಿ ಇರಾನಿನಲ್ಲಿ 22 ವರ್ಷದ ಯುವತಿ ಮಹ್ಸಾ ಅಮಿನಿಯನ್ನು ಇಸ್ಲಾಮಿಕ್ ಧಾರ್ಮಿಕ ಪೋಲಿಸರು  ಬಂಧಿಸಿದ್ದರು.  ಪೊಲೀಸ್ ಬಂಧಿಖಾನೆಯಲ್ಲೇ ತೀವ್ರ ಥಳಿತದ ಕಾರಣ ಅರಳಬೇಕಾದ ಹೂವೊಂದು ಬಾಡಿಹೋಗಿತ್ತು. ಪುರುಷ ನಿಯಂತ್ರಿತ ಜಗತ್ತು ಮಹಿಳೆಯರಿಗೆ ಎಷ್ಟು ಅಸುರಕ್ಷಿತವಾಗಿದೆ ಎಂಬುದಕ್ಕೆ ಇರಾನ್ ಅಂದು ಸಾಕ್ಷಿಯಾಗಿತ್ತು. ಅಮಿನಿಯ ಸಾವು ಇರಾನಿನಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ದೊಡ್ಡ ಪ್ರಮಾಣದ ಹೋರಾಟವನ್ನು ಹುಟ್ಟುಹಾಕಿತ್ತು. ವ್ಯಕ್ತಿಸ್ವಾತಂತ್ರ್ಯ ಹರಣದಲ್ಲಿ ಇರಾನ್ ತನ್ನದೇ ಆದ ನಿಯಮಗಳ ರಚಿಸಿತ್ತು. ಅದನ್ನು ವಿರೋಧಿಸುವ ಮಹಿಳೆಯರು ಪ್ರಾಣ ಕಳೆದುಕೊಳ್ಳಬೇಕಿತ್ತು.  ಇದು ವ್ಯಕ್ತಿಸ್ವಾತಂತ್ರ್ಯದ ಹರಣ, ಮನುಷ್ಯತ್ವದ ಕೊಲೆ. ಅಯಾತುಲ್ಲ ಅಲಿ ಖಮೇನಿಯ ಹತ್ಯೆಯನ್ನು ಅಲ್ಲಿನ ಒಂದು ಗುಂಪಿನ ಮಹಿಳೆಯರು ಸಂಭ್ರಮಿಸಿದ್ದೂ ಇದೇ ಕಾರಣಕ್ಕೆ ಇರಬಹುದು.

ಆದರೆ, ಇಂತಹ ಅನ್ಯಾಯಗಳ ವಿರುದ್ಧ ಇರಾನಿಗೆ ಪಾಠ ಕಲಿಸುವ ದೊಡ್ಡ ಕೆಲಸವನ್ನು ಅಮೆರಿಕ ತನ್ನ ಹಕ್ಕು ಎಂಬಂತೆ ತೆಗೆದುಕೊಂಡು ಅಲ್ಲಿನ ಅಮಾಯಕರನ್ನು ಬಲಿ ಪಡೆಯುತ್ತಿರುವುದು ಕೂಡಾ ಮನುಷ್ಯತ್ವದ ಕೊಲೆಯೇ ಆಗಿದೆ. ಇಸ್ರೇಲ್ ಮತ್ತು ಇರಾನಿನ ನಡುವೆ ಇರುವ ವೈಷಮ್ಯಕ್ಕೆ ಬೆಂಬಲವಾಗಿ ನಿಂತ ಪ್ರಧಾನಿ ಟ್ರಂಪ್‌ ನ ನಡೆಯನ್ನು ಅಮೆರಿಕದ ಅರ್ಧದಷ್ಟು ಸಾಮಾನ್ಯ ಜನತೆ ತೀವ್ರವಾಗಿ ಖಂಡಿಸುತ್ತಿದ್ದಾರೆ. ತನ್ನ ದೇಶದ ಅಭಿವೃದ್ಧಿಪರ ಕೆಲಸಗಳ ಕಡೆ ಗಮನ ನೀಡದೇ, ಜಗತ್ತನ್ನು ಉದ್ಧರಿಸುವ ಕೆಲಸದಲ್ಲಿ ತೊಡಗಿಕೊಂಡಿರುವ ಪ್ರಧಾನಿ ಟ್ರಂಪ್‍ನ ವಿರುದ್ಧ ದನಿ ಎತ್ತುತ್ತಿದ್ದಾರೆ. ಯುದ್ಧಪ್ರಿಯ ದೇಶಗಳು ತಮ್ಮ ಸೈದ್ಧಾಂತಿಕ ನಿಲುವುಗಳು, ಬದ್ಧತೆಗಳು ಇತ್ಯಾದಿಗಳ ನೆವಮಾಡಿ ಜನಸಾಮಾನ್ಯರ ನಿದ್ದೆ ಕಸಿಯುತ್ತಿವೆ ಎಂಬ ಕೂಗು ಎದ್ದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಬಹುಸಂಖ್ಯೆಯಲ್ಲಿ ದನಿ ಎತ್ತುತ್ತಿದ್ದಾರೆ. ಈ ನಡೆಗಳು ಮೂರನೇ ಮಹಾಯುದ್ಧಕ್ಕೆ ಕಾರಣವಾಗದಿರಲಿ ಎಂಬ ಆಶಯ.

ಇರಾನಿನ ಮಹ್ಸಾ ಅಮಿನಿ

ಇರಾನ್‍ನಂತಹ ಸಂಪ್ರದಾಯಶೀಲ ರಾಷ್ಟ್ರಗಳು  ಗುಪ್ತಪಡೆಗಳನ್ನು ಹೊಂದಿರಬಹುದಾದ ಶಂಕೆಗಳು ಇವೆ. ಮುಂದುವರೆದ ರಾಷ್ಟ್ರಗಳು ಅಣುಬಾಂ,ಬ್‌ ನ್ಯೂಕ್ಲಿಯರ್‌ ಬಾಂಬುಗಳೂ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರ ಸಜ್ಜಿತ ರಾಷ್ಟ್ರಗಳಾಗಿ ಬೀಗುತ್ತಿದ್ದು, ಸಹಜ ಬದುಕನ್ನು ನಾಶಮಾಡಬಹುದಾದ ಸಾಧ್ಯತೆಗಳನ್ನು  ಅಲ್ಲಗಳೆಯುವಂತಿಲ್ಲ. ಹಿಂದಿನ ಮಹಾಯುದ್ದದ ಸಂದರ್ಭದಲ್ಲಿ ಜಪಾನ್ ಮೇಲೆ ನಡೆದ ಅಮೇರಿಕೆಯ ದಾಳಿಯ ಹಿನ್ನೆಲೆಯನ್ನು ಗಮನಿಸಿದರೆ ಇಂದು ಅಮೇರಿಕಾ ನಡೆಸುತ್ತಿರುವ ಈ ದಾಳಿಯ ಹಿನ್ನೆಲೆಯನ್ನು ಅರಿಯಬಹುದಾಗಿದೆ. ಇಡೀ ಜಗತ್ತನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಹುನ್ನಾರ ಕಾಣುತ್ತಿದೆ. ಜಾಗತಿಕ ಶಾಂತಿಯ ನೆಪದಲ್ಲಿ, ಧರ್ಮಾಂಧ, ಉಗ್ರವಾದಿ ನಿಲುವುಗಳ ದೇಶಗಳ ಸದೆಬಡಿಯುವ ಹೇಳಿಕೆಗಳ ಕೊಡುತ್ತಾ, ಜಗತ್ತಿನ ಶಾಂತಿಯನ್ನು ಕದಡುತ್ತಿರುವ ದೊಡ್ಡ ದೇಶದ ಕುತಂತ್ರಕ್ಕೆ ಏನನ್ನೋಣ?

ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಈ ಹೊತ್ತು ದೇಶ ದೇಶಗಳ ಓಣಿ ಓಣಿಗಳಲ್ಲಿ ಕಾಣ ಸಿಗುವ ಹೆಣ್ಣುಮಕ್ಕಳ ಆಶಯಗಳು ಒಂದೇ. ತನ್ನ ಕಂದಮ್ಮಗಳ ಎಳೆಯ ಕನಸುಗಳು ಛಿದ್ರಗೊಳ್ಳದಿರಲಿ. ಎದೆತೊಟ್ಟು ಬಾಯಲ್ಲಿಟ್ಟು ಚೀಪುವ ಪುಟ್ಟ ಮಗುವಿನ ಕೈ ಹಿಡಿದ ತಾಯಿಯ ಕಂಗಳಲ್ಲಿ, ನಿದ್ದೆಯಲ್ಲೂ ಎಚ್ಚರವಿರುವ ಹೆಣ್ಣೊಬ್ಬಳ ಎದೆಯಲ್ಲಿ ಮೂಡುವುದು ಒಂದೇ ಆಶಯ- ಈ ಯುದ್ಧಗಳು ನಿಲ್ಲಲಿ. ಬದುಕು ಬೆಳಗಲಿ.

ನಾಗರೇಖಾ ಗಾಂವಕರ

ಕನ್ನಡದ ಸೃಜನಶೀಲ ಬರಹಗಾರ್ತಿ, ಅನುವಾದಕಿ ಮತ್ತು ಅಂಕಣಕಾರ್ತಿ

More articles

Latest article

Most read