ಮಹಿಳಾ ದಿನ ವಿಶೇಷ | ಕಮರುತ್ತಿರುವ ಕನಸುಗಳ ಸುತ್ತ…….

ಡಾ. ಆಶಾ ಬಗ್ಗನಡು, ಅಧ್ಯಾಪಕಿ.

“ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಹಕ್ಕುಗಳು, ನ್ಯಾಯ, ಕ್ರಿಯೆ”. ಎಂಬ ವಿಷಯದ ಅಡಿಯಲ್ಲಿ  ವಿಶ್ವಸಂಸ್ಥೆ ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತದೆ. ಆ ಮೂಲಕ ಸಮಾನ ನ್ಯಾಯಕ್ಕೆ ಇರುವ ರಚನಾತ್ಮಕ ಅಡೆತಡೆಗಳನ್ನು ನಿವಾರಿಸಲು ತಾರತಮ್ಯದ ಕಾನೂನುಗಳು, ದುರ್ಬಲ ಕಾನೂನು ರಕ್ಷಣೆಗಳು ಮತ್ತು ಮಹಿಳೆಯರ ಹಕ್ಕುಗಳನ್ನು ನಾಶ ಮಾಡುವ ಹಾನಿಕಾರಕ ಅಭ್ಯಾಸಗಳು ಮತ್ತು ಸಾಮಾಜಿಕ ರೂಢಿಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕರೆ ನೀಡಿದೆ . ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.

ಬಾಲ್ಯ ವಿವಾಹ ಮುಕ್ತ ದೇಶಕ್ಕಾಗಿ 100 ದಿನಗಳ ಜಾಗೃತಿ ಅಭಿಯಾನದೊಂದಿಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸಂದರ್ಭ 2005-06ರಲ್ಲಿ 47.4% (NFHS-3) ರಿಂದ 2019-21 23.3% (NFHS-5) ಬಾಲ್ಯ ವಿವಾಹಗಳ ಪ್ರಮಾಣ ನಿರಂತರವಾಗಿ ಇಳಿಕೆಯಾಗಿದ್ದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ((SDG) ಮೂಲಕ 2030 ರ ವೇಳೆಗೆ ಬಾಲ್ಯ ವಿವಾಹವನ್ನು ಕೊನೆಗಾಣಿಸಲು ಭಾರತ ಬದ್ಧವಾಗಿದೆ ಎಂದಿದೆ.

ಯುನಿಸೆಫ್ ತನ್ನ ವರದಿಯಲ್ಲಿ ಜಾಗತಿಕವಾಗಿ ಸುಮಾರು 64 ಕೋಟಿ ಹೆಣ್ಣುಮಕ್ಕಳು ಬಾಲ್ಯದಲ್ಲಿಯೇ ವಿವಾಹವಾಗಿದ್ದು ಭಾರತವು ಅದರ ಮೂರನೆಯ ಒಂದು ಭಾಗದಷ್ಟಿದೆ ಎಂದಿದೆ. ಇದೇ ವೇಗದಲ್ಲಿ  ಮುಂದುವರಿದರೆ ಬಾಲ್ಯ ವಿವಾಹಗಳನ್ನು ನಿರ್ಮೂಲನೆ ಮಾಡಲು ಭಾರತಕ್ಕೆ 300 ವರ್ಷಗಳು ಬೇಕಾಗುತ್ತದೆ. ಹಾಗಾಗಿ 2030 (SDG) ಗುರಿಮುಟ್ಟಲು ಈಗಿನ ಪ್ರಗತಿಯ ದರದಲ್ಲಿ ಅದು 20 ಪಟ್ಟು ವೇಗವನ್ನು ಪಡೆಯಬೇಕಿದೆ ಎಂದಿದೆ. ಅಲ್ಲದೇ ಬಾಲ್ಯವಿವಾಹಗಳನ್ನು ನಿರ್ಮೂಲನೆ ಮಾಡುವಲ್ಲಿ ಭಾರತ ವಿಫಲವಾದರೆ ಆರೋಗ್ಯ, ಶಿಕ್ಷಣ, ಬಡತನ ನಿರ್ಮೂಲನೆ, ಮತ್ತು ಆರ್ಥಿಕ ಬೆಳವಣಿಗೆ ಸೇರಿದಂತೆ ಕನಿಷ್ಠ ಒಂಬತ್ತು  ಸುಸ್ಥಿರ ಅಭಿವೃದ್ಧಿ ಗುರಿಗಳು ಹಳಿತಪ್ಪುತ್ತವೆ ಎಂದೂ ತಜ್ಞರು ಎಚ್ಚರಿಸಿದ್ದಾರೆ.

ಕಳೆದ ದಶಕಗಳಲ್ಲಿ ಬಾಲ್ಯ ವಿವಾಹಗಳ ಗಮನಾರ್ಹ ಕುಸಿತದ ಹೊರತಾಗಿಯೂ ಭಾರತದ ಹಲವಾರು ರಾಜ್ಯಗಳಲ್ಲಿ ಪ್ರಗತಿ ನಿಧಾನವಾಗಿದ್ದು ಅಸಮಾನವಾಗಿದೆ. ಇದಕ್ಕೆ ಕರ್ನಾಟಕ ರಾಜ್ಯವೂ ಹೊರತಲ್ಲ. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಕಟ್ಟುನಿಟ್ಟಿನ ಕಾನೂನುಗಳಿದ್ದಾಗ್ಯೂ 2 ವರ್ಷಗಳಲ್ಲಿ 1,419 ಬಾಲ್ಯವಿವಾಹ ಪ್ರಕರಣಗಳು ಮತ್ತು ಕಳೆದ ಮೂರು ವರ್ಷಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 80,813 ಬಾಲಕಿಯರು ಗರ್ಭಿಣಿಯರಾಗಿರುವ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಬಾಲ್ಯ ವಿವಾಹವು ಬಹುತೇಕ ಸಾರ್ವತ್ರಿಕವಾಗಿ ಖಂಡಿಸಲ್ಪಟ್ಟಿದ್ದು ಕಟ್ಟುನಿಟ್ಟಿನ ಕಾನೂನುಗಳು ಮತ್ತು ಯೋಜನೆಗಳ ಹೊರತಾಗಿಯೂ ವ್ಯಾಪಕವಾದ ಸಾಮಾಜಿಕ ಸಮಸ್ಯೆಯಾಗಿಯೇ ಉಳಿದಿದೆ. ಬಾಲ್ಯ ವಿವಾಹವನ್ನು ಇತರ ಸಮಸ್ಯೆಗಳಿಗೆ ಪರಿಹಾರವೆಂದು ಪರಿಗಣಿಸುವುದರಿಂದ, ಮತ್ತು ಸರ್ಕಾರಗಳ ಸಮರ್ಪಕ ಕಾರ್ಯಯೋಜನೆಗಳ ಅನುಷ್ಠಾನದ ಕೊರತೆಯ ಕಾರಣಗಳಿಂದಲೂ ಅದು ಭಾಗಶಃ ವ್ಯಾಪಕವಾಗಿಯೇ ಉಳಿದಿದೆ.

ಚಿತ್ರ ಕೃಪೆ : ದಿ ಗಾರ್ಡಿಯನ್

ಹದಿನೆಂಟು ವರ್ಷಕ್ಕೆ ಮೊದಲು ಮದುವೆ ಮಾಡುವುದು ಮಾನವ ಹಕ್ಕುಗಳ ಮೂಲಭೂತ ಉಲ್ಲಂಘನೆಯಾಗಿದ್ದರೂ ಇಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ವ್ಯಾಪಕ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಿಂದ ಆತಂಕವಾಗಿರುವ ಪೋಷಕರು ಹೆಣ್ಣುಮಕ್ಕಳನ್ನು ಚಿಕ್ಕವಯಸ್ಸಿಗೆ ಮದುವೆ ಮಾಡುತ್ತಿದ್ದಾರೆ. ಜೊತೆಗೆ ಮದುವೆಯು ಮಗಳ ಭವಿಷ್ಯವನ್ನು ಭದ್ರ ಪಡಿಸುತ್ತದೆ ಎಂದು ನಂಬುತ್ತಾರೆ. ಏಕೆಂದರೆ ಗಂಡನು ಅವಳನ್ನು ಆರ್ಥಿಕವಾಗಿ ಬೆಂಬಲಿಸುವ ಮತ್ತು ಹಿಂಸೆಯಿಂದ ರಕ್ಷಿಸುವ ಜವಾಬ್ದಾರಿಯನ್ನು ಹೊಂದುತ್ತಾನೆ ಎಂಬುದು ಅವರ ಬಲವಾದ ನಂಬಿಕೆಯಾಗಿರುತ್ತದೆ. ಕೆಲವೊಮ್ಮೆ ಹುಡುಗಿ ಗರ್ಭಿಣಿಯಾದ ನಂತರ ಅಥವಾ ಕೆಲವು ಸಂದರ್ಭಗಳಲ್ಲಿ ಆಕೆಯ ಮತ್ತು ಕುಟುಂಬದ ಗೌರವವನ್ನು ಕಾಪಾಡಲು ಬಾಲ್ಯ ವಿವಾಹವನ್ನು ಪರಿಹಾರವೆಂದು ಪರಿಗಣಿಸಲಾಗುತ್ತದೆ. ಇನ್ನೂ ಅನೇಕ ಸಂದರ್ಭಗಳಲ್ಲಿ ಪ್ರೇಮ ಪ್ರಕರಣಗಳು ಬಾಲ್ಯ ವಿವಾಹಗಳಿಗೆ ಪ್ರಮುಖ ಕಾರಣಗಳಾಗಿವೆ.

ಭಾರತ ಸರ್ಕಾರ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು 2006ರಲ್ಲಿ ಜಾರಿ ಗೊಳಿಸಿದ್ದು ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳ ಅಂಕಿ ಅಂಶಗಳು ಕಾನೂನಿನ ಅಪರೂಪದ ಅನ್ವಯ ಮತ್ತು ಕಡಿಮೆ ಶಿಕ್ಷೆಯ ಪ್ರಮಾಣವನ್ನು ಸೂಚಿಸುತ್ತದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಕಠಿಣ ಶಿಕ್ಷೆಗಳ ಭಯದಿಂದ ಅನೇಕ ಅಪ್ರಾಪ್ತ ವಯಸ್ಸಿನ ಹುಡುಗಿಯರು ಪ್ರಕರಣಗಳನ್ನು ದಾಖಲಿಸಲು ಹಿಂಜರಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ  ಪಶ್ಚಿಮ ಬಂಗಾಳದ ವ್ಯಕ್ತಿಯ ವಿರುದ್ದ ಪೋಕ್ಸೊ ಕೇಸ್ ದಾಖಲಾಗಿತ್ತು. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲು ಏರಿದ ಸಂತ್ರಸ್ತ ಬಾಲಕಿ ಈಗ ತಾನು ಗರ್ಭಿಣಿಯಾಗಿದ್ದು ಪರಸ್ಪರ ಒಪ್ಪಂದದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಇಚ್ಚಿಸಿದ್ದೇನೆ. ಹಾಗಾಗಿ ಆರೋಪಿ ಯುವಕನನ್ನು ಪೋಕ್ಸೋ ದಿಂದ ಮುಕ್ತಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿರುವ ಘಟನೆ ನಡೆದಿದೆ. ಹೆಣ್ಣುಮಕ್ಕಳ ಇಂತಹ ಅಜ್ಞಾನ ಅಸಹಾಯಕತೆಗಳು ಬಾಲ್ಯ ವಿವಾಹಗಳು ಹೆಚ್ಚಲು ಕಾರಣವಾಗುತ್ತಿವೆ.

ಬಾಲ್ಯ ವಿವಾಹಗಳು ಯಾವುದೇ ಸಮಸ್ಯೆಗಳಿಗೆ ನಿಜವಾದ ಪರಿಹಾರವಾಗಿರದೆ, ಹೆಣ್ಣುಮಕ್ಕಳ ಭವ್ಯ ಭವಿಷ್ಯಕ್ಕೆ ಬೀಳುವ ಕೊಡಲಿ ಪೆಟ್ಟಾಗಿವೆ. ಹತ್ತಾರು ಕನಸುಗಳ ಕತ್ತು ಹಿಸುಕಿಕೊಂಡು ಚಿಕ್ಕ ವಯಸ್ಸಿಗೆ ತಾಳಿಗೆ ಕೊರಳೊಡ್ಡಿ ಬದುಕಿಡೀ ಬಿಕ್ಕುವ ಎಳೆ ಬಾಲೆಯರ ಸಂಕಟ ನಿಜಕ್ಕೂ ಕೊನೆಮೊದಲಿಲ್ಲದ್ದು. ದೇಶದಾದ್ಯಂತ ಲಕ್ಷಾಂತರ ಹುಡುಗಿಯರ ಮೇಲೆ ಬಾಲ್ಯವಿವಾಹಗಳು ಮಾರಕ ಪರಿಣಾಮಗಳನ್ನು ಬೀರುತ್ತಿದ್ದು ಅವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಾಲ್ಯದಲ್ಲೇ ವಿವಾಹವಾಗುವ ಈ ಹೆಣ್ಣು ಮಕ್ಕಳು ಯಾವ ಕೌಶಲ್ಯಗಳಿಲ್ಲದೆ, ನಿರುದ್ಯೋಗಿಗಳಾಗುತ್ತಾ ಬಡತನಕ್ಕೆ ತುತ್ತಾಗುತ್ತಿದ್ದಾರೆ.  ತಮ್ಮ ಆತ್ಮೀಯ ಸಂಗಾತಿಗಳಿಂದ ಹೆಚ್ಚಿನ ಮಟ್ಟದ ದೈಹಿಕ ಮತ್ತು ಭಾವನಾತ್ಮಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಹದಿಹರೆಯದ ಗರ್ಭಧಾರಣೆ ಹೆರಿಗೆಯ ಸಮಸ್ಯೆಗಳು ಭಾರತದಲ್ಲಿ ಹುಡುಗಿಯರ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಹದಿಹರೆಯದ ತಾಯಿಗೆ ಜನಿಸುವ ಶಿಶುಗಳ ಮರಣದ ಸಾಧ್ಯತೆಗಳು ಹೆಚ್ಚಾಗಿದ್ದು ಅಪೌಷ್ಟಿಕ, ಅಶಕ್ತ ಮಕ್ಕಳ ಜನನ ಕೂಡ ಅತ್ಯಂತ ಸಾಮಾನ್ಯ ಸಂಗತಿ ಆಗಿರುತ್ತದೆ.

ಚಿತ್ರ ಕೃಪೆ : ಡೌನ್‌ ಟು ಅರ್ಥ್

ಹೆಣ್ಣು ಮಕ್ಕಳ ಶಿಕ್ಷಣ ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖವಾಗಿದ್ದು ಸರ್ಕಾರ ಭೇಟಿ ಪಡಾವೋ ಅಂತಹ ಯೋಜನೆಗಳನ್ನು ಜಾರಿಗೊಳಿಸಿದ್ದಾಗಿಯೂ ಬಾಲ್ಯ ವಿವಾಹಗಳು ಹೆಚ್ಚುತ್ತಲೇ ಇವೆ. ಹದಿಮೂರರಿಂದ ಹದಿನೆಂಟು ವರ್ಷ ವಯಸ್ಸಿನ ಅವಿವಾಹಿತ ಶಾಲಾ ವಿದ್ಯಾರ್ಥಿನಿಯರಿಗೆ ಸಾವಿರ ರೂಪಾಯಿಗಳ ನಗದು ನೀಡಿ ಅವರ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿರುವ ‘ಕನ್ಯಾಶ್ರೀ ಪ್ರಕಲ್ಪ’ ಎನ್ನುವ ಯೋಜನೆಯ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಬಾಲ್ಯ ವಿವಾಹಗಳು ನಡೆಯುತ್ತಿವೆ. ‘ಭೇಟಿ ಪಡಾವೋ’ ಅಂತಹ ಯೋಜನೆಗಳು ಅತ್ಯಂತ ದುರ್ಬಲ ಸಮುದಾಯಗಳನ್ನು ತಲುಪಬೇಕಾದರೆ ಸ್ವಚ್ಛ ಶೌಚಾಲಯಗಳು ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆ ಸೇರಿದಂತೆ ಮೂಲಸೌಕರ್ಯಗಳು ಜಾರಿಯಲ್ಲಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

 ಶೈಕ್ಷಣಿಕವಾಗಿ ದೇಶದಲ್ಲಿ ಹೆಣ್ಣು ಮಕ್ಕಳು ಪ್ರಗತಿ ಕಾಣುತ್ತಿದ್ದರಾದರೂ ಆಳದಲ್ಲಿ ಅಸಮಾನತೆಗಳು ಹಾಗೆಯೇ ಉಳಿದಿವೆ. ಯುಡೈಸ್ ಅಂಕಿ ಅಂಶಗಳ ಪ್ರಕಾರ ಪ್ರಾಥಮಿಕ ಹಂತಕ್ಕಿಂತ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಂತದಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಕಡಿಮೆ ಹಂತದಲ್ಲಿದ್ದು ಪ್ರಾಥಮಿಕ ಹಂತದಲ್ಲಿ ಶಾಲೆ ಬಿಡುವ ಹೆಣ್ಣು ಮಕ್ಕಳ ಪ್ರಮಾಣ 2.3% ಇದ್ದರೆ ಮಾಧ್ಯಮಿಕ ಹಂತದಲ್ಲಿ ಹೆಣ್ಣುಮಕ್ಕಳು ಶಾಲೆ ಬಿಡುವ ಪ್ರಮಾಣ 8.2% ಇದೆ. UNICEF ಅಂಕಿ ಅಂಶದ ಪ್ರಕಾರ ಜಾಗತಿಕವಾಗಿ ಮೂರನೆಯ  ಒಂದು ಭಾಗದಷ್ಟು ಹುಡುಗಿಯರು ಪ್ರೌಢಶಾಲೆಯನ್ನು ಮುಗಿಸಿಲ್ಲ ಅಲ್ಲದೇ ಜಗತ್ತಿನಾದ್ಯಂತ 113 ಮಿಲಿಯನ್ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

 ಹೆಣ್ಣು ಮಕ್ಕಳ ಶಿಕ್ಷಣದ ಹೊರತಾಗಿ ಆರೋಗ್ಯ ಮತ್ತು ಸ್ವಾಯತ್ತತೆಯ ವಿಚಾರಕ್ಕೆ ಬಂದಾಗ ಇಂದಿಗೂ ದೇಶ ಬಹಳಷ್ಟು ಹಿಂದುಳಿದಿದೆ. (ಜಾಗತಿಕ ವಿಶ್ವ ವೇದಿಕೆಯ  ಲಿಂಗತ್ವ ಅಂತರ ವರದಿ -2025) ಭಾರತದಲ್ಲಿ 15 ರಿಂದ 49 ವರ್ಷ ವಯಸ್ಸಿನ ಮಹಿಳೆಯರ ಪೈಕಿ ಸುಮಾರು ಶೇಕಡ 57% ರಷ್ಟು ಮಂದಿ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ.  (NFHS 5)  ಇದು ಹೆಣ್ಣು ಮಕ್ಕಳ ಕಲಿಕೆ ವೃತ್ತಿ, ಗರ್ಭಧಾರಣೆ ಮೇಲೆ ಪರಿಣಾಮ ಬೀರುತ್ತಿದೆ. ಬಾಲ್ಯವಿವಾಹ ಬಡತನ, ಕಡಿಮೆ ಶೈಕ್ಷಣಿಕ ಸಾಧನೆ, ಲಿಂಗ ಅಸಮಾನತೆ,  ಸಾಮಾಜಿಕ ರೂಢಿಗಳೊಡನೆ ಸಂಬಂಧ ಹೊಂದಿ ಆಳವಾಗಿ ಬೇರೂರಿರುವ ಸಾಮಾಜಿಕ ಪದ್ಧತಿಯಾಗಿದ್ದು ಕೇಂದ್ರ ಸರ್ಕಾರವು ಗಂಭೀರ ಕ್ರಮಗಳನ್ನು ತೆಗೆದುಕೊಂಡು ಯೋಜನೆಗಳನ್ನು ರೂಪಿಸುವ ಅಗತ್ಯವಿದೆ.

ಲಿಂಗ ಅಸಮಾನತೆಯನ್ನು ನಿವಾರಿಸಲು ದಣಿವರಿಯದ ಪ್ರಯತ್ನಗಳ ಕಾರಣ ಮೂರು ದಶಕಗಳ ಹಿಂದೆ ಹುಡುಗಿಯೊಬ್ಬಳು ಶಾಲೆಗೆ ಹೋಗುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಿವೆ ಮತ್ತು  ಬಾಲ್ಯದಲ್ಲಿ ಮದುವೆಯಾಗುವ ಅಥವಾ ಗರ್ಭಿಣಿಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ. ಸಂಭ್ರಮಿಸಲು ಸಾಕಷ್ಟು ಇದೆ. ಆದರೆ ಅದೇ ಸಮಯದಲ್ಲಿ ಈ ಪ್ರಗತಿ ದುರ್ಬಲ, ಅಸಮಾನತೆಯಿಂದ ಕೂಡಿದೆ.

ಜಗತ್ತಿನಾದ್ಯಂತ ಕಾನೂನುಗಳು ಅಸ್ತಿತ್ವದಲ್ಲಿವೆ. ಆದರೆ ಅವು ಮಹಿಳೆಯರಿಗೆ ನ್ಯಾಯ ರಕ್ಷಣೆಯನ್ನು ನೀಡಲು ವಿಫಲವಾಗುತ್ತಿವೆ. ಹಾಗಾಗಿಯೇ “ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಹಕ್ಕುಗಳು, ನ್ಯಾಯ, ಕ್ರಿಯೆ”. ಎಂಬ ವಿಷಯದ ಅಡಿಯಲ್ಲಿ  ವಿಶ್ವಸಂಸ್ಥೆ ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತದೆ. ಆ ಮೂಲಕ ಸಮಾನ ನ್ಯಾಯಕ್ಕೆ ಇರುವ ರಚನಾತ್ಮಕ ಅಡೆತಡೆಗಳನ್ನು ನಿವಾರಿಸಲು ತಾರತಮ್ಯದ ಕಾನೂನುಗಳು, ದುರ್ಬಲ ಕಾನೂನು ರಕ್ಷಣೆಗಳು ಮತ್ತು ಮಹಿಳೆಯರ ಹಕ್ಕುಗಳನ್ನು ನಾಶ ಮಾಡುವ ಹಾನಿಕಾರಕ ಅಭ್ಯಾಸಗಳು ಮತ್ತು ಸಾಮಾಜಿಕ ರೂಢಿಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕರೆ ನೀಡಿದೆ.

ಭಾರತೀಯ ಹೆಣ್ಣು ಮಕ್ಕಳು ಅವರ ಹಕ್ಕುಗಳನ್ನು ನಿರಾಕರಿಸುವ ಆಯ್ಕೆಗಳನ್ನು ನಿರ್ಬಂಧಿಸುವ,  ಭವಿಷ್ಯವನ್ನು ಸೀಮಿತಗೊಳಿಸುವ ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದು ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಹಿಂದುಳಿದಿದೆ, ಇನ್ನೂ ಹಲವಾರು ಹುಡುಗಿಯರಿಗೆ ಶಿಕ್ಷಣ ನಿರಾಕರಿಸಲಾಗಿದೆ. ಲಿಂಗ ವೇತನದ ಅಂತರವು ಹೆಚ್ಚಿದೆ. ಪ್ರತಿ 10 ನಿಮಿಷಗಳಿಗೊಮ್ಮೆ ಮಹಿಳೆಯರನ್ನು ತನ್ನ ಸ್ವಂತ ಕುಟುಂಬದ ಯಾರೋ ಒಬ್ಬರು ಕೊಲ್ಲುತ್ತಾರೆ. ಲಿಂಗ ಸಮಾನತೆಗೆ  ಪ್ರತಿಭಟನಾತ್ಮಕ ಪ್ರತಿರೋಧವು ಎದುರಾಗುತ್ತಿದ್ದು ಮಹಿಳಾ ಪರ ಕಾನೂನುಗಳು ದುರ್ಬಲ ಗೊಳ್ಳುತ್ತಿವೆ. ಇಂತಹ ಸಂದರ್ಭ ನ್ಯಾಯದ ಸಹಾಯ ಹೆಣ್ಣು ಮಕ್ಕಳ ಜೀವನವನ್ನು ಬದಲಾಯಿಸುತ್ತದೆ. ಸಮುದಾಯ ಸಮಾಜಗಳು ಅಭಿವೃದ್ಧಿಗೊಳ್ಳುತ್ತವೆ. ಆ ದೆಸೆಯಲ್ಲಿ ಸಮಾಜ ವ್ಯವಸ್ಥೆಗಳು ಚಿಂತಿಸಬೇಕಿದೆ. ಕೊನೆಗೂ ಲಿಂಗ ಸಮಾನತೆ ಹೆಣ್ಣು ಮಕ್ಕಳ ಬದುಕಿನ ಹಸನತೆ ಮಾತ್ರವಾಗಿರದೆ ನೆಮ್ಮದಿಯ ನಾಳೆಗಳಿಗೆ ಸಾಧಿಸಿಕೊಳ್ಳಲೇ ಬೇಕಾದ ಗುರಿಯಾಗಿದೆ.

ಡಾ. ಆಶಾ ಬಗ್ಗನಡು

ಅಧ್ಯಾಪಕಿ, ತುಮಕೂರು ವಿಶ್ವವಿದ್ಯಾನಿಲಯ.

ಫೋ-8296171380

More articles

Latest article

Most read