ಬೆಂಗಳೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ಐವರು ವಿದ್ಯಾರ್ಥಿಗಳ ಪೋಷಕರಿಂದ 6.38 ಕೋಟಿ ರೂ. ಪಡೆದು ವಂಚಿಸಿರುವ ಆರೋಪದ ಮೇಲೆ ಚೆನ್ನೈ ನಿವಾಸಿ ಮಹಿಳೆ ಅನ್ನಾ ಜಾಕಬ್ ವಿರುದ್ಧ ಸಿಸಿಬಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಈ ವಂಚಕಿ ವಿರುದ್ಧ ವಿಬ್ ಗಯಾರ್ ಶಾಲೆಯ ಶಿಕ್ಷಕಿ ದೀಪ್ತಿ ಕೆ.ಸಿಂಹ ದೂರು ನೀಡಿದ್ದರು.
ದೀಪ್ತಿ ಶಿಕ್ಷಕಿ ಕೆಲಸದ ಜತೆಗೆ ಮನೆ ಪಾಠ ಮಾಡುತ್ತಿದ್ದರು. ವಸುಂಧರಾ ಎಂಬುವರ ಮೂಲಕ ಅನ್ನಾ ಜಾಕಬ್ ಅವರ ಪರಿಚಯವಾಗಿತ್ತು. ಆಕೆ ಬೆಂಗಳೂರಿನ ಸೆಂಟ್ ಜಾನ್ ಮೆಡಿಕಲ್ ಕಾಲೇಜು ಮತ್ತು ವೆಲ್ಲೂರಿನ ಸಿಎಂಸಿ ಮೆಡಿಕಲ್ ಕಾಲೇಜಿನ ಟ್ರಸ್ಟಿ ಎಂದು ಹೇಳಿಕೋಡಿದ್ದರು. ಈ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಎಂಡಿ ಸೀಟುಗಳನ್ನು ಕೊಡಿಸುವುದಾಗಿ ಹೇಳಿಕೊಂಡಿದ್ದರು. ದೀಪ್ತಿ ಅವರು ತಾವು ಮನೆ ಪಾಠ ಮಾಡುತ್ತಿದ್ದ ವಿದ್ಯಾರ್ಥಿಗಳ ಪೋಷಕರಿಗೆ ಈ ವಿಷಯ ತಿಳಿಸಿದ್ದರು. ಇವರ ಮಾತು ನಂಬಿ ಎಂಟು ವಿದ್ಯಾರ್ಥಿಗಳ ಪೋಷಕರು ಅನ್ನಾ ಅವರನ್ನು ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಭೇಟಿ ಮಾಡಿದ್ದರು. ಹಣ ಕೊಟ್ಟರೆ ಸೀಟು ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಐವರು ವಿದ್ಯಾರ್ಥಿಗಳ ಪೋಷಕರು 6.38 ಹಣವನ್ನು ದೀಪ್ತಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ದೀಪ್ತಿ ಅವರು ಈ ಹಣವನ್ನು ಚೆನ್ನೈನ ಅನ್ನಾ ಜಾಕಬ್ ಅವರ ಖಾತೆಗೆ ವರ್ಗಾಯಿಸಿದ್ದರು. ಆದರೆ ಆರೋಪಿ ಮೆಡಿಕಲ್ ಸೀಟು ಕೊಡಿಸಿರಲಿಲ್ಲ. ಕಾಲೇಜುಗಳಲ್ಲಿ ಪರಿಶೀಲಿಸಿದಾಗ ಈಕೆ ಯಾವುದೇ ಕಾಲೇಜಿನ ಟ್ರಸ್ಟಿ ಅಲ್ಲ ಎನ್ನುವುದು ತಿಳಿದು ಬಂದಿತ್ತು. ನಂತರ ದೂರು ನೀಡಲಾಗಿದೆ.
ಅನ್ನಾ ಅವರು ಹೈದರಾಬಾದ್ ನಲ್ಲಿಯೂ ಮೆಡಿಕಲ್ ಕಾಲೇಜು ಸೀಟು ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ