ಮಹಿಳಾ ದೌರ್ಜನ್ಯದ ಘೋರ ಅಪರಾಧಿ ಪ್ರಜ್ವಲ್ ನನ್ನು ಹಿಡಿಯುತ್ತಾರೋ? ಬಿಡುತ್ತಾರೋ?

Most read

ಇದು ಕೇವಲ ಪ್ರಜ್ವಲ್ ರೇವಣ್ಣ ಒಬ್ಬನ ಕೃತ್ಯವಲ್ಲ. ಅವನ ಜೊತೆಗೆ ಶಾಮೀಲಾಗಿರುವ ಅವನ ಸ್ನೇಹಿತರನ್ನೂ ಬಂಧಿಸಬೇಕು. ವಿದೇಶಕ್ಕೆ ಹಾರಿ ಹೋಗಿರುವ ಅವನಿಗೆ ವೀಸಾ ನೀಡಿರುವ ಕೇಂದ್ರ ಸರ್ಕಾರದ ನಡೆಯನ್ನೂ ಪ್ರಶ್ನಿಸ ಬೇಕು. ಮಹಿಳೆಯರ ಬಗ್ಗೆ ನಮ್ಮ ಪ್ರಧಾನಿಗೆ ಎಂತಹ ಗೌರವವಿದೆ ಎಂದು ಈಗಾಗಲೇ ನಾವು ಮಣಿಪುರ ಮತ್ತು ಮಹಿಳಾ ಕುಸ್ತಿಪಟುಗಳ ಘಟನೆಗಳಲ್ಲಿ ಕಂಡಿದ್ದೇವೆ- ಡಾ.ಕೆ.ಷರೀಫಾ

ಹಾಸನದ ಪ್ರಜ್ವಲ್ ರೇವಣ್ಣನ ಮಹಿಳಾ ದೌರ್ಜನ್ಯದ  ಪ್ರಕರಣ ದಿನಕ್ಕೊಂದು ಬಣ್ಣ ಬದಲಿಸುತ್ತಿದೆ. ತಂದೆ ಮಗನ ಈ ವಿಕೃತ ಲೈಂಗಿಕ ಪ್ರಕರಣವು ದೇಶ ವಿದೇಶಗಳಲ್ಲೂ ಸುದ್ದಿಯಾಗಿದೆ. ನಾಡಿನ ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಇದಾಗಿದೆ. ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಎಸಗಿದ್ದಾನೆ ಎನ್ನಲಾದ ಲೈಂಗಿಕ ದೌರ್ಜನ್ಯದ ಕುರಿತು 22-4-2024 ರಂದೇ ವಿಡಿಯೋಗಳು ವೈರಲ್ ಆಗಿ ಪ್ರಕರಣ ಹೊರ ಬಂದಿದ್ದರೂ ಸಹ 26-4-2024ರ ವರೆಗೂ ಅವನನ್ನು ಬಂಧಿಸದೇ ವಿಚಾರಿಸದೇ ಇರುವ ಸರ್ಕಾರವಿದೆ. ಸಂತ್ರಸ್ತರು ದೂರು ನೀಡದಂತೆ ಅವರನ್ನು ಅಪಹರಿಸುವುದು, ಬೆದರಿಸುವುದು ಮುಂತಾದ  ನಿರ್ಲಜ್ಜ ಘಟನೆಗಳಿವೆ.

ಇನ್ನೊಂದು ಕಡೆ ಸಂಸದನೊಬ್ಬನ ಚಾರಿತ್ರ್ಯದ ಬಗ್ಗೆ ಗುರುತರವಾದ ಅಪಾದನೆಗಳ ಸಾಕ್ಷ್ಯಾಧಾರವಾಗಿ ವಿಡಿಯೋಗಳು ವೈರಲ್ ಆದಾಗ ಅವನನ್ನು ಚುನಾವಣೆಯಿಂದ ಅನರ್ಹಗೊಳಿಸಿ ವಿಚಾರಣೆಗೆ ಒಳಪಡಿಸ ಬಹುದಾಗಿತ್ತು. ದೇಶದ ಪ್ರಧಾನಿಯಾಗಿ ಸಭ್ಯ ಸಜ್ಜನ ಎಂದು ಹೆಸರು ಮಾಡಿದ ಪ್ರಧಾನಿ ದೇವೇಗೌಡರು ಮೊಮ್ಮಗನ ಕಾಮಪುರಾಣ ಪ್ರಹಸನಗಳನ್ನು ಕೇಳಿ ನೊಂದುಕೊಂಡಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಂತ್ರಸ್ತೆಯರು ಭಯ ಆತಂಕ, ಅವಮಾನಗಳಿಗೆ ನೊಂದುಕೊಂಡು ಹಲವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದೂ ವರದಿಯಾಗಿದೆ. ಈ ಶತಮಾನದ ಅತ್ಯಂತ ಘೋರ ಪ್ರಕರಣ ಇದಾಗಿದ್ದರೂ ಅವರ ಕುಟುಂಬಕ್ಕಿರುವ ರಾಜಕೀಯ ಅಧಿಕಾರದ ಬಲದಿಂದ ಪ್ರಜ್ವಲನ ಪ್ರತಾಪಕ್ಕೆ ಕಡಿವಾಣವಿಲ್ಲದಂತಾಗಿದೆ. ಪಾಳೆಯಗಾರಿ ಊಳಿಗಮಾನ್ಯ ವ್ಯವಸ್ಥೆಯ ಕುಟುಂಬದಲ್ಲಿ, ಪ್ರಧಾನಿ, ಸಚಿವರು, ರಾಜ್ಯಸಭೆ, ಲೋಕಸಭೆ, ವಿಧಾನ ಸಭೆ, ವಿಧಾನ ಪರಿಷತ್ತಿನ ಸದಸ್ಯರು ಮತ್ತು ಮುಖ್ಯ ಮಂತ್ರಿಗಳಂತಹ ಪ್ರಧಾನ ರಾಜಕೀಯ ಹುದ್ದೆಗಳನ್ನು ಹೊಂದಿರುವ ಕುಟುಂಬದಲ್ಲಿ ಮಹಿಳಾ ವಿರೋಧಿ ಪಾಳೆಯಗಾರಿ ಪಟ್ಟುಗಳು ಹೇಗೆ ಪಸರಿಸುತ್ತವೆ ಎಂಬುದಕ್ಕೆ ಪ್ರಜ್ವಲನೇ ಜ್ವಲಂತ ಉದಾಹರಣೆಯಾಗಿದ್ದಾನೆ.

ರಾಜಕೀಯ ಪಕ್ಷಗಳು ಮತ್ತು ನಾಯಕರುಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಈ ಪ್ರಕರಣಗಳನ್ನು ರಾಜಕೀಯ ಚುನಾವಣೆಯ ಲಾಭಕ್ಕಾಗಿ ಬಳಸುತ್ತಿರುವ ಸಂಗತಿಯು ನಮ್ಮನ್ನು ತಲ್ಲಣಗೊಳಿಸಿದೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ದೇಶದಲ್ಲಿ ಇಂತಹ ರಾಜಕಾರಣದಿಂದಾಗಿಯೇ ನಿಜವಾದ ಅಪರಾಧಿಗಳು ನುಸುಳಿ ಹೋಗಲು ದಾರಿಯಾಗುತ್ತಿದೆ. ಅಪರಾಧಿಗಳ ಗುರುತರವಾದ ಅಪರಾಧಗಳನ್ನು ಇದು ಗೌಣಗೊಳಿಸುತ್ತಿದೆ. ಬೇರೆ ಬೇರೆ ಕಡೆಗಳಲ್ಲಿ ರಾಜಕಾರಣಿಗಳಿಂದ ನಡೆಯುತ್ತಿರುವ ಘೋರ ಲೈಂಗಿಕ ಹಗರಣಗಳಿಂದ ಮಹಿಳಾ ಲೋಕ ತಲ್ಲಣ ಗೊಂಡಿದೆ. ಲಿಂಗಸೂಕ್ಷ್ಮವಿಲ್ಲದ ಜನಪ್ರತಿನಿಧಿಗಳು, ರಾಜಕಾರಣಿಗಳು, ಮಾಧ್ಯಮದವರೂ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿಯೇ ತೊಡಗಿದ್ದಾರೆ. ಅವರು  ಸಂತ್ರಸ್ತರ ಗೌರವ ಕಾಪಾಡುವುದರ ಬದಲು ಅವರ ಘನತೆಯನ್ನು ಬೀದಿಪಾಲು ಮಾಡುತ್ತಿರುವುದು ಯೋಚಿಸಬೇಕಾದ ಸಂಗತಿಯಾಗಿದೆ. ಸರ್ಕಾರದ, ಮಾಧ್ಯಮದವರ ಇಂತಹ ನಡೆಗಳು ಮಹಿಳೆಯರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಅವರ ಗೌರವಕ್ಕೆ ಧಕ್ಕೆ ತರುವುದು ಮಾತ್ರವಲ್ಲದೆ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಿವೆ. ರಾಜಕೀಯದ ಇಂತಹ ನಡೆಗಳು ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತವೆ. ಸಂತ್ರಸ್ತೆಯರು ತಮ್ಮ ಗಂಡ, ಮಕ್ಕಳು, ಬಂಧುಗಳ ಮುಂದೆ ಬರುವುದಕ್ಕೂ ಯಾತನೆ ಪಡುವಂತಾಗಿದೆ. ಈ ನೋವು ಸಹಿಸಲಾರದೆ ಅನೇಕ ಕುಟುಂಬಗಳು ಈಗಾಗಲೇ ಊರು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಊರಲ್ಲಿರುವ ಒಬ್ಬಾಕೆಯನ್ನು ಅಪರಾಧಿಯ ತಂದೆಯೇ ಅಪಹರಿಸಿದ್ದು ಆತನೀಗ ಬೇಲ್‌ ಪಡೆದು ಜೈಲಿಂದ ಹೊರಬಂದಿದ್ದಾನೆ. ಅತನಿಗೆ  ಬೇಲ್‌ ನೀಡಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ.

ಇದನ್ನೂ ಓದಿ-ಪ್ರಜ್ವಲ್ ಈಗ ಶಿಶ್ನ ಗೊಂಚಲಿನ ಬೇತಾಳ !

ಅಪರಾಧಿಗಳ ಪರವಾಗಿರುವವರನ್ನು ಮತ್ತು ಕೋರ್ಟು ಜೀವಾವಧಿ ಶಿಕ್ಷೆ ನೀಡಿದ್ದರೂ, ಬಿಲ್ಕಿಸ್ ಬಾನು ಅವರ ಬಲತ್ಕಾರದ ಅಪರಾಧಿಗಳು ಸ್ವಾತಂತ್ರ ದಿನಾಚರಣೆಯಂದು ಸಚ್ಚಾರಿತ್ರ್ಯದ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಹೂ ಹಾರ ಸಿಹಿ ಹಂಚಿ ಸಂಭ್ರಮಿಸಲಾಯಿತು. ಪ್ರಜ್ವಲ್ ರೇವಣ್ಣನ ತಂದೆ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಬಂದ ತಕ್ಷಣ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆಯನ್ನು ಹೇಗೆ ನೋಡುವುದು?. ಸಂತ್ರಸ್ತೆಯರು ನಿರ್ಭೀತಿಯಿಂದ ಬಂದು ತಮ್ಮ ದೂರು ದಾಖಲಿಸುವಂತಹ ವಾತಾವರಣ ಸೃಷ್ಟಿಸಬೇಕಾಗಿದೆ. ಆಳುವ ಸರ್ಕಾರಗಳು ಹೆದರಬೇಡಿ ಭಗಿನಿಯರೇ ನಿಮ್ಮ ಸಹಾಯಕ್ಕೆ ನಾವಿದ್ದೇವೆ. ನಿಮ್ಮನ್ನು ಅವಹೇಳನ, ಅಪಪ್ರಚಾರ, ಅವಮಾನ ಮಾಡುವವರನ್ನು ನಾವು ಕಠಿಣವಾಗಿ ಶಿಕ್ಷಿಸುತ್ತೇವೆ ಎಂದು ಸಂತ್ರಸ್ತೆಯರಿಗೆ ಸಾಂತ್ವನ ನೀಡಬೇಕಿದೆ.

ಇದು ಕೇವಲ ಪ್ರಜ್ವಲ್ ರೇವಣ್ಣ ಒಬ್ಬನ ಕೃತ್ಯವಲ್ಲ. ಬದಲಾಗಿ ಅವನ ಜೊತೆಗೆ ಶಾಮೀಲಾಗಿರುವ ಅವನ ಸ್ನೇಹಿತರನ್ನು ಬಂಧಿಸಬೇಕು. ವಿದೇಶಕ್ಕೆ ಹಾರಿ ಹೋಗಿರುವ ಅವನಿಗೆ ವೀಸಾ ನೀಡಿರುವ ಕೇಂದ್ರ ಸರ್ಕಾರದ ನಡೆಯನ್ನೂ ಪ್ರಶ್ನಿಸಬೇಕಾಗುತ್ತದೆ. ಮಹಿಳೆಯರ ಬಗ್ಗೆ ನಮ್ಮ ಪ್ರಧಾನಿಗೆ ಎಂತಹ ಗೌರವವಿದೆ ಎಂದು ಈಗಾಗಲೇ ನಾವು ಮಣಿಪುರ ಮತ್ತು ಮಹಿಳಾ ಕುಸ್ತಿಪಟುಗಳ ಘಟನೆಗಳಲ್ಲಿ ಕಂಡಿದ್ದೇವೆ. ರಾಜ್ಯ ಸರ್ಕಾರ ಸೌಜನ್ಯ ಪ್ರಕರಣದಲ್ಲಿ ನಡೆದುಕೊಂಡ ಬಗೆ ನಮಗೆ ಗೊತ್ತಿದೆ. ನೇಹಾಳ ಕೊಲೆ ಪ್ರಕರಣವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೋಮುವಾದೀ ಪಕ್ಷ ಹೇಗೆ ಬಳಸಿಕೊಂಡಿತು ಎಂಬುದನ್ನೂ ನಾವು ನೋಡಿದ್ದೇವೆ. ತಂದೆ ಮಕ್ಕಳ ಈ ಕಾಮಪುರಾಣವನ್ನು ಮುಚ್ಚಿ ಹಾಕುತ್ತಾರೋ ಇಲ್ಲ ನಿಜವಾದ ಅಪರಾಧಿಗಳನ್ನು ಹಿಡಿಯುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ- ಪೆನ್ ಡ್ರೈವ್ ಪುರಾಣ ತೆರೆದು ತೋರುವ ಕೊಳಕು ವಾಸ್ತವ

ಪಿತೃಪ್ರಧಾನ, ಊಳಿಗಮಾನ್ಯ ವ್ಯವಸ್ಥೆಯನ್ನು ಉಳಿಸಿ, ಹೆಣ್ಣುಮಕ್ಕಳನ್ನು ಮತ್ತೆ ಹಿಂದಕ್ಕೆ ತಳ್ಳುವಂತಹ ಸರ್ಕಾರದ ಕೆಲಸಗಳನ್ನು ಮಹಿಳೆಯರು ಕಟುವಾಗಿ ವಿರೋಧಿಸ ಬೇಕಾಗಿದೆ.

ಡಾ.ಕೆ.ಷರೀಫಾ

ಹಿರಿಯ ಲೇಖಕರು

ಇದನ್ನೂ ಓದಿ-ಸಂವೇದನಾರಹಿತ ಸಮಾಜದಲಿ ಗಂಡಾಳ್ವಿಕೆಯ ಗಂಡಾಂತರ

More articles

Latest article