ನಂಜನಗೂಡು: ಪತಿ ಕೊಲೆಗೀಡಾದ ಬಳಿಕ ಪತ್ನಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಪಟ್ಟ ಲಭಿಸಿರುವ ಘಟನೆ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ವಿಚಾರದಲ್ಲಿ ಅಲ್ಲಿನ ಪಂಚಾಯಿತಿ ಸದಸ್ಯೆ ಸೌಭಾಗ್ಯ ಎಂಬುವರ ಪತಿ ನಂಜುಂಡಸ್ವಾಮಿ ಅವರನ್ನು ಪಿತೂರಿ ಮಾಡಿ ಕೊಲೆ ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅಧಿಕಾರ ಹಂಚಿಕೆ ಪ್ರಕಾರ ಪತ್ನಿ ಸೌಭಾಗ್ಯ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಲಭಿಸಬೇಕು ಎಂದು ನಂಜುಂಡಸ್ವಾಮಿ ಕೆಲವು ಸದಸ್ಯರ ಜೊತೆ ಮಾತುಕತೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.
ಇದೀಗ ಅದೇ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಂಜುಂಡಸ್ವಾಮಿ ಅವರ ಪತ್ನಿ ಸೌಭಾಗ್ಯ ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಂಜುಂಡಸ್ವಾಮಿ ಕೊಲೆ ಘಟನೆಯಿಂದ ನೊಂದ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಸಂತ್ರಸ್ತೆ ಸೌಭಾಗ್ಯ ಅವರನ್ನು ಬೆಂಬಲಿಸಿದ್ದಾರೆ. ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಸೌಭಾಗ್ಯ ಅವರು ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೌಭಾಗ್ಯ ಅವರು ಆಯ್ಕೆಯಾಗುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಿಗೆ ಚುನಾವಣಾ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾಲಾರ್ಪಣೆ ಮಾಡಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷೆ ಸೌಭಾಗ್ಯ ಮತ್ತುಅವರ ಕುಟುಂಬಸ್ಥರು ಮೃತ ನಂಜುಂಡಸ್ವಾಮಿ ಅವರನ್ನು ನೆನೆದು ಕಣ್ಣೀರಿಟ್ಟರು.