ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದು ಏಕೆ ಎಂದು ಪ್ರಧಾನಿ ಮೋದಿ ತಿಳಿಸಬೇಕು: ಸಚಿವ ಲಾಡ್‌ ಆಗ್ರಹ

Most read

ಬೆಂಗಳೂರು: ಪಾಕಿಸ್ತಾನ ದುಂಬಾಲು ಬಿದ್ದ ಕಾರಣಕ್ಕೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳುತ್ತಿರುತ್ತಾರೆ. ಆದರೆ, ಅದಕ್ಕೂ ಮೊದಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೇ ಕದನ‌ ವಿರಾಮ ಆಗಿದೆ ಎಂದು ಪ್ರಸ್ತಾಪಿಸಿದ್ದರು. ಇಡೀ ದೇಶ ಅಮೆರಿಕ ಅಧ್ಯಕ್ಷರ ಮೂಲಕ ಕದನ ವಿರಾಮ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾಯಿತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಂಪ್ ಹೇಳಿದ ಮಾದರಿಯಲ್ಲಿ ವ್ಯಾಪಾರಕ್ಕಾಗಿ ಯುದ್ಧ ನಿಲ್ಲಿಸಲಾಯಿತೇ ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು. ಬಿಜೆಪಿಯವರು ತಿರಂಗಾ ಯಾತ್ರೆ ಮಾಡುತ್ತಿದ್ದಾರೆ. ಅವರು ತಿರಂಗಾ ಯಾತ್ರೆ ಬದಲು ಟ್ರಂಪ್ ಯಾತ್ರೆ ಮಾಡಲಿ ಎಂದು ವ್ಯಂಗ್ಯವಾಡಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಲಾಗಿದೆ ಎನ್ನವುದು ತಿಳಿದಿಲ್ಲ. ಪ್ರಧಾನಿ ಮೋದಿ ತಾವೇ ಸುಪ್ರೀಂ ಎಂಬಂತೆ ವರ್ತಿಸುತ್ತಿದ್ದಾರೆ. ಕದನ ವಿರಾಮದ ಬಳಿಕವೂ ಪಾಕಿಸ್ತಾನ ದಾಳಿ ನಡೆಸಿದೆ. ಸರ್ಕಾರಕ್ಕೆ ದೇಶದ ಜನತೆಯ ಬೆಂಬಲ ಇತ್ತು. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕು ಎಂಬ ನಿರೀಕ್ಷೆ ಇತ್ತು. ಆದರೆ ಅವರು ಯಾವ ಕಾರಣಕ್ಕೆ ಕದನ ವಿರಾಮ ಘೋಷಣೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಬೇಕು ಎಂದು ಒತ್ತಾಯಿಸಿದರು.

ಕಳೆದ 20 ದಿನಗಳಿಂದ ದೇಶದಲ್ಲಿ ಏನಾಗಿದೆ ಎಂದು ಜನರಿಗೆ ಗೊತ್ತಿದೆ. ದೇಶವನ್ನು ಮೂರೂ ಸೇನಾ ಪಡೆಗಳು ಕಾಪಾಡಿವೆ. ಪಾಕಿಸ್ತಾನದ ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೂ ಕೆಲವೊಂದು ಪ್ರಶ್ನೆಗಳು ಮೂಡುತ್ತಿವೆ. ಪ್ರತಿಯೊಂದು ವಿಚಾರಕ್ಕೂ ಪ್ರಧಾನಿ ಅವರನ್ನೇ ಸುಪ್ರೀಂ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕಿಡಿ ಕಾರಿದರು.

ಏಪ್ರಿಲ್ 22 ರಂದು ಪ್ರಧಾನಿ ನರೇಂದ್ರ ಮೋದಿ ಸೌದಿಯಿಂದ ಮರಳುತ್ತಾರೆ. ಆದರೆ ಪತ್ರಿಕಾಗೋಷ್ಠಿ ನಡೆಸಲ್ಲ, ಬದಲಾಗಿ ಬಿಹಾರ ಚುನಾವಣಾ ಪ್ರಚಾರಕ್ಕೆ ಹೋಗ್ತಾರೆ. ಸರ್ವಪಕ್ಷ ಸಭೆಗೂ ಗೈರಾಗಿದ್ದಾರೆ. ನಾನು ಸುಪ್ರೀಂ, ಯಾವ ಸಭೆಯಲ್ಲೂ ಭಾಗಿಯಾಗಲ್ಲ. ಈ ಮೂಲಕ ಪ್ರಧಾನಿ ಮೋದಿ ಯಾವ ಸಂದೇಶವನ್ನು ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.

ಮೋದಿ ಯಾರೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಸಂಸತ್ತಿಗೂ ಬರುತ್ತಿಲ್ಲ. ಸರ್ವಪಕ್ಷ ಸಭೆಗೂ ಬರುತ್ತಿಲ್ಲ. ದೇಶದ 140 ಕೋಟಿ ಜನ ಯುದ್ಧ ಮಾಡಬೇಕೆಂಬ ನಿರೀಕ್ಷೆ ಹೊಂದಿದ್ದರು. ಯುದ್ಧ ಆಗಬೇಕು ಎಂದು ದೇಶದ ಜನರು ಬಯಸಿದ್ದರು. ಆದರೆ, ರಾತ್ರೋರಾತ್ರಿ ಕದನ ವಿರಾಮ ಘೋಷಣೆಯಾಗುತ್ತದೆ. ಯಾವ ಕಾರಣಕ್ಕಾಗಿ ಕದನ ವಿರಾಮ ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು ಎಂದರು.

More articles

Latest article