SIT ತನಿಖೆಯ 39/2025 FIR ಗೆ ತಡೆಯಾಜ್ಞೆ ಯಾಕೆ ?ಧರ್ಮಸ್ಥಳದ ಅಸಹಜ ಸಾವು ಪ್ರಕರಣಗಳ ಭವಿಷ್ಯ ಏನು?

Most read

ಮುಖ್ಯವಾಗಿ “ಚಿನ್ನಯ್ಯರ ಹೇಳಿಕೆ ಆಧಾರದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮಾತ್ರ ತನಿಖೆ ಮಾಡುತ್ತೇವೆ. ಆತ ಸುಳ್ಳು ಹೇಳಿದ್ದಾನೆ ಎಂಬ ವಿಚಾರ ನಮಗೆ ಸಂಬಂಧಿಸಿದ್ದಲ್ಲ.‌ ಅದು ನ್ಯಾಯಾಲಯದ ವಿಚಾರಣೆ ಮತ್ತು ವಿವೇಚನೆಗೆ ಬಿಟ್ಟಿರುವ ವಿಷಯ. ಹಾಗಾಗಿ ನಾವು ಚಿನ್ನಯ್ಯರ ದೂರಿನ ಎಫ್ಐಆರ್ ನಲ್ಲಿರುವ ಆರೋಪಗಳ ಬಗ್ಗೆ ಮಾತ್ರ ತನಿಖೆ ನಡೆಸುತ್ತೇವೆ” ಎಂದು ಎಸ್ಐಟಿ ಹೈಕೋರ್ಟಿಗೆ ಅಫಿದಾವಿತ್ ಹಾಕಬೇಕು. Shoot the messenger ಎಂಬ ಧೋರಣೆಯನ್ನು ಬಿಟ್ಟು ನ್ಯಾಯಯುತ ತನಿಖೆಯ ಭರವಸೆಯನ್ನು ಸರ್ಕಾರ/ಎಸ್ಐಟಿ ನೀಡಬೇಕಿದೆ – ನವೀನ್ ಸೂರಿಂಜೆ, ಪತ್ರಕರ್ತರು.

ಚಿನ್ನಯ್ಯ (ಮಾಸ್ಕ್ ಮ್ಯಾನ್/ ಭೀಮ) ನ್ಯಾಯಾಧೀಶರ ಮುಂದೆ ದಾಖಲಿಸಿದ್ದ ಹೇಳಿಕೆ ಆಧರಿಸಿ ಬೆಳ್ತಂಗಡಿ ಪೊಲೀಸರು 39/2025 ಎಫ್ಐಆರ್ ದಾಖಲಿಸಿದ್ದರು. ಆ ಎಫ್ಐಅರ್ ಸಾರಾಂಶದಲ್ಲಿ ‘ತಾನು ನೂರಾರು ಮಹಿಳೆಯರು/ಬಾಲಕಿಯರ ಶವ ಹೂತಿದ್ದೇನೆ’ ಎಂದು ಹಲವರ ಹೆಸರನ್ನು ಚಿನ್ನಯ್ಯ ಪ್ರಸ್ತಾಪಿಸಿದ್ದರು. ಇದರ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿತ್ತು. 

ಎಸ್ಐಟಿ ಬಗ್ಗೆ ಹೋರಾಟಗಾರರೆಲ್ಲರಿಗೂ ನಂಬಿಕೆ ಇತ್ತು. ಯಾವಾಗ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ‘ಈ ಎಸ್ಐಟಿ ರಚನೆಯಾಗಿದ್ದೇ ಅವರ ಕಳಂಕ ತೊಳೆದು ಶುಭ್ರ ಮಾಡಲು’ ಎಂದು ಹೇಳಿಕೆ ನೀಡಿತ್ತೋ ಅಂದಿನಿಂದ ಎಸ್ಐಟಿ ತನಿಖೆ ದಿಕ್ಕುತಪ್ಪಿತ್ತು. ಈ ಮಧ್ಯೆ ಉಪಮುಖ್ಯಮಂತ್ರಿಗಳು ‘ತಿಮರೋಡಿಯನ್ನು ಒದ್ದು ಒಳಹಾಕಬೇಕು’ ಎಂದು ಹೇಳಿಕೆ ನೀಡಿ ಎಸ್ಐಟಿಗೆ ಸ್ಪಷ್ಟ ಸಂದೇಶ ನೀಡಿದ್ರು. 

ಈ ಮಧ್ಯೆ ನ್ಯಾಯಾಲಯಕ್ಕೆ ‘ದೊಡ್ಡವರ’ ವಿರುದ್ಧ ಹೇಳಿಕೆ ದಾಖಲಿಸಿದ ಚಿನ್ನಯ್ಯರು ತಮ್ಮ ವರಸೆ ಬದಲಿಸಿ ‘ನಾನು ಮೊದಲ ಹೇಳಿಕೆಯನ್ನು ಸುಳ್ಳು ದಾಖಲಿಸಿದ್ದೆ.‌ ಅದು ತಿಮರೋಡಿ, ಮಟ್ಟೆಣ್ಣ, ಜಯಂತ್, ವಿಠಲ ಗೌಡರ ಪ್ರಚೋದನೆಯಿಂದ ಮಾಡಿದ್ದೆ” ಎಂದು ಹೇಳಿಕೆ ನೀಡಿದ್ದರು. ಎಸ್ಐಟಿ ಈಗ ಚಿನ್ನಯ್ಯರ ಮೂಲ ಹೇಳಿಕೆಯನ್ನು ಬಿಟ್ಟು ಎರಡನೆಯ ಹೇಳಿಕೆಯ ಆಧಾರದ ಮೇಲೆ ತನಿಖೆ ಆರಂಭಿಸಿತು. ಒಟ್ಟಾರೆ ಎಸ್ಐಟಿ ಪೂರ್ತಿಯಾಗಿ ಚಿನ್ನಯ್ಯ ಮತ್ತು ಹೋರಾಟಗಾರರ ವಿರುದ್ಧದ ತನಿಖಾ ಸಂಸ್ಥೆಯಾಗಿ ಬದಲಾಯಿತು. ಅದರ ಭಾಗವಾಗಿ ಹೋರಾಟಗಾರರಿಗೆ ಹತ್ತಾರು ನೋಟಿಸ್ ನೀಡಲಾರಂಭಿಸಿದರು. ಅಂತಿಮವಾಗಿ ಹೋರಾಟಗಾರರಾದ ತಿಮರೋಡಿ, ಮಟ್ಟೆಣ್ಣನವರ್, ಜಯಂತ್, ವಿಠಲಗೌಡರಿಗೆ ಆರೋಪಿಗಳಿಗೆ ನೀಡುವ ಮಾದರಿಯ ನೋಟಿಸ್ ನೀಡಿತ್ತು. 

ನಾವು ಇಡೀ ಪ್ರಕರಣವನ್ನು ಪರಿಶೀಲಿಸಿದಾಗ ಎಸ್ಐಟಿಯ ಅಪಾಯ ಕಣ್ಣಮುಂದೆ ಬಂತು. ಅಕ್ಟೋಬರ್ 31 ರಂದು ಎಸ್ಐಟಿ ಅಂತಿಮ ವರದಿ ಸಲ್ಲಿಸಿ, ಚಿನ್ನಯ್ಯ ಮತ್ತು ನಾಲ್ವರು ಹೋರಾಟಗಾರರನ್ನೇ ಅಪರಾಧಿಗಳನ್ನಾಗಿಸಿ ಹೆಸರಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ತಯಾರಿ ನಡೆಸಿತ್ತು. ಹಾಗಾಗಿಯೇ ಹಿರಿಯ ವಕೀಲ ಎಸ್ ಬಾಲನ್ ಅವರ ಜೊತೆ ನಾವು ಸರಣಿ ಚರ್ಚೆ ನಡೆಸಿ ಎಫ್ಐಆರ್ ಮತ್ತು ನೋಟಿಸ್ ಪ್ರಶ್ನಿಸಿ ಅರ್ಜಿ ಹಾಕುವ ಬಗ್ಗೆ ನಿರ್ಧಾರಕ್ಕೆ ಬರಲಾಯಿತು. 

ಎಸ್ಐಟಿ ಪೊಲೀಸರು ದಾಖಲಿಸಿರುವ ಚಿನ್ನಯ್ಯನ ದೂರಿನ/ನ್ಯಾಯಾಲಯದ ಮೊದಲ ಹೇಳಿಕೆಯನ್ನು ‘ಸುಳ್ಳು ಹೇಳಿಕೆ’ ಎಂದು ಪರ್ಜುರಿ ದಾಖಲಿಸಿ ಅದರಲ್ಲೇ ತಿಮರೋಡಿ, ಮಟ್ಟೆಣ್ಣನವರ್, ಜಯಂತ್, ವಿಠಲಗೌಡರನ್ನು ಆರೋಪಿಯನ್ನಾಗಿ ಹೆಸರಿಸಿತ್ತು. ಇದು BNSS 215(1)(b) ಪ್ರಕಾರ ಪೊಲೀಸರ ತಪ್ಪು ಕ್ರಮವಾಗಿದೆ. ಚಿನ್ನಯ್ಯ ಸುಳ್ಳು ಹೇಳಿದ್ದಾರೋ ನಿಜ ಹೇಳಿದ್ದಾರೋ ಎನ್ನುವುದು ಕೋರ್ಟ್ ವಿಚಾರಣೆಯಲ್ಲಿ ಸಾಬೀತಾಗಬೇಕು. ಸಾಬೀತಾದ ಬಳಿಕ ಚಿನ್ನಯ್ಯನ ಮೇಲೆ ಕೇಸು ದಾಖಲಿಸಬೇಕೋ, ಬೇಡವೋ ಎಂದು ನ್ಯಾಯಾಧೀಶರು ನಿರ್ಧರಿಸಿ ಲಿಖಿತವಾಗಿ ಪೊಲೀಸರಿಗೆ ನೀಡಬೇಕು. ಆದರೆ ನ್ಯಾಯಾಧೀಶರ ಕೆಲಸವನ್ನು ಪೊಲೀಸರೆ ಅಕ್ರಮವಾಗಿ ನಿರ್ವಹಿಸಿ ತಿಮರೋಡಿ, ಮಟ್ಟೆಣ್ಣನವರ್, ಜಯಂತ್, ವಿಠಲಗೌಡರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಇದು ಅಕ್ರಮ. ಇದು ದೊಡ್ಡವರನ್ನು ರಕ್ಷಿಸಲು ಹೋರಾಟವನ್ನು ಸಂಪೂರ್ಣ ನಿಲ್ಲಿಸಲು ಮಾಡಿದ ಪಿತೂರಿ. 

ಇಷ್ಟೆಲ್ಲಾ ಆದರೂ ನಮ್ಮ ವಕೀಲರಾದ ಎಸ್ ಬಾಲನ್ ಅವರು ಕ್ವಾಶ್ ಪಿಟಿಷನ್ ನಲ್ಲಿ ಕೇಳಿರುವುದು “ನೋಟಿಸ್ ಗೆ ತಡೆ ನೀಡಿ” ಎಂಬ ಮನವಿ ಮಾತ್ರ. ಆದರೆ ವಾದ ವಿವಾದ ನಡೆಯುತ್ತಿದ್ದಂತೆ ಸರ್ಕಾರವೇ ‘ನಾಲ್ವರು ಆರೋಪಿ’ಗಳನ್ನು ಉಲ್ಲೇಖಿಸಿದ್ದರಿಂದ ಪೂರ್ತಿ ತನಿಖೆಗೆ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್ ಕಲಾಪ ಸಾರಾಂಶ ಹೀಗಿದೆ : 

ಎಸ್ ಬಾಲನ್ : ಚಿನ್ನಯ್ಯ ವಿರುದ್ಧ ಪರ್ಜುರಿ ಕೇಸ್ ಹಾಕಿ ಅದರ ಆಧಾರದ ಮೇಲೆ ಹೋರಾಟಗಾರರಿಗೆ ನೋಟಿಸ್ ಕೊಡುವುದು BNSS 215(1)(b) ಪ್ರಕಾರ ಎಸ್ಐಟಿ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ. 

ಸರ್ಕಾರ : ಗಿರೀಶ್ ಮಟ್ಟೆಣ್ಣನವರ್, ತಿಮರೋಡಿ, ಜಯಂತ್, ವಿಠಲಗೌಡ ರೇ ಈ ಪ್ರಕರಣದ ಆರೋಪಿಗಳು. Answer ಅವರನ್ನು ತನಿಖೆ ಮಾಡಬೇಕಿದೆ.

ಹೈಕೋರ್ಟ್ : ಅವರು ಆರೋಪಿಗಳಾಗಿದ್ದರೆ ಪ್ರತ್ಯೇಕ ಎಫ್ಐಆರ್ ಮಾಡಬೇಕಿತ್ತು. ಅದರ ಬದಲು ಕಾನೂನು ಉಲ್ಲಂಘಿಸಿ ಯಾಕೆ ಎಫ್ಐಆರ್ ಮಾಡಬೇಕು?.

ಎಸ್ ಬಾಲನ್ : ನಾಲ್ವರು ಹೋರಾಟಗಾರರ ಹೆಸರು ಎಫ್ಐಆರ್ ನಲ್ಲಿ ಇಲ್ಲ. ಎಲ್ಲಾ ನೋಟಿಸ್ ಗೆ ಹಾಜರಾಗಿದ್ದಾರೆ. 9 ನೋಟಿಸ್ ಪೈಕಿ 9 ನೋಟಿಸ್ ಗೆ ಹಾಜರಾಗಿದ್ದಾರೆ. ಸುಮಾರು 100 ಗಂಟೆ ವಿಚಾರಣೆ ಎದುರಿಸಿದ್ದಾರೆ. ಆದರೂ ಹೋರಾಟಗಾರರನ್ನು ಆರೋಪಿ ಮಾಡಿದ್ರೆ ಹೇಗೆ ? 

ಹೈಕೋರ್ಟ್ : ನಾಲ್ವರು ಆರೋಪಿಗಳು ಅನ್ನೋದನ್ನು ರೆಕಾರ್ಡ್ ಮಾಡಿಕೊಳ್ಳೋದಾ ? 

ಸರ್ಕಾರ : ಎಸ್. ಈ ನಾಲ್ವರು (ಮಟ್ಟೆಣ್ಣನವರ್, ತಿಮರೋಡಿ, ಜಯಂತ್, ವಿಠಲ ಗೌಡ) ಆರೋಪಿಗಳು. ಅವರು ಜಾಮೀನು ತಗೊಳ್ಳಲಿ.

ಹೈಕೋರ್ಟ್ : ಕಾನೂನು ಬಾಹಿರವಾಗಿ ಹೇಗೆ ಎಫ್ಐಆರ್ ಮಾಡಿದ್ರಿ ? ನ್ಯಾಯಾಧೀಶರ ಕೆಲಸವನ್ನು ಪೊಲೀಸರು ಹೇಗೆ ಮಾಡಿದರು ?

ಹೈಕೋರ್ಟ್ ಆದೇಶ : ನಾಲ್ವರ ಮೇಲೆ ಯಾವುದೇ ದೌರ್ಜನ್ಯ ಮಾಡಬಾರದು 

ಸರ್ಕಾರ : ಅವರೇ ಆರೋಪಿಗಳು.‌ ಜಾಮೀನು ತಗೊಳ್ಳಲಿ. ಅದು ಬಿಟ್ಟು ಸ್ಟೇ ಯಾಕೆ ತಗೋತಾರೆ ?

ಬಾಲನ್ : ಯಾಕೆ ಜಾಮೀನು ತಗೋಬೇಕು ? ಹೋರಾಟಗಾರರನ್ನು, ದೂರುದಾರರನ್ನೇ ಕಾನೂನು ಉಲ್ಲಂಘಿಸಿ ಎಫ್ಐಆರ್ ಮಾಡಿದ್ರೆ ಅದನ್ನು ಒಪ್ಪಬೇಕಾ ? BNSS 215(1)(b) ಪ್ರಕಾರ ಇದು ಕಾನೂನು ಬಾಹಿರ.

ಹೈಕೋರ್ಟ್ : ಪೂರ್ತಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗಿದೆ – ಹೈಕೋರ್ಟ್ ಆದೇಶ

ಇದು ಹೈಕೋರ್ಟ್ ವಾದ ವಿವಾದದ ಸಣ್ಣ ಸಾರಾಂಶವಷ್ಟೆ. ಎಸ್ ಬಾಲನ್ ಅವರು ಕೇವಲ ನೋಟಿಸ್ ಗೆ ತಡೆಯಾಜ್ಞೆ ಕೇಳುವ ಸಂಬಂಧ ವಾದ ಮಾಡುತ್ತಿದ್ದರು. ಆದರೆ ಇಡೀ ಎಸ್ಐಟಿ ಯಾವುದೇ ಅಸಹಜ ಸಾವುಗಳ ತನಿಖೆ ನಡೆಸುತ್ತಿಲ್ಲ, ಬದಲಿಗೆ ಹೋರಾಟಗಾರರ ವಿರುದ್ಧದ ತನಿಖೆಗೆ ಸೀಮಿತವಾಗಿದೆ ಎಂಬ ಅರ್ಥದಲ್ಲಿ ಸರ್ಕಾರವೇ ಹೈಕೋರ್ಟಿಗೆ ಹೇಳಿದಾಗ, ಎಸ್ಐಟಿಯ ಅಕ್ರಮ ತನಿಖೆಯನ್ನು ಬಿಎನ್ಎಸ್ಎಸ್ ಸೆಕ್ಷನ್ ಗಳ ಮೂಲಕ ಕೋರ್ಟಿಗೆ ಮನವರಿಕೆ ಮಾಡಲಾಯಿತು. ಆದ್ದರಿಂದ ನ್ಯಾಯಾಲಯವು ‘ಎಸ್ಐಟಿಯ ಅಕ್ರಮ ತನಿಖೆ’ಗೆ ತಡೆಯಾಜ್ಞೆ ನೀಡಿದೆ.

ಸರ್ಕಾರ ಮತ್ತು ಎಸ್ಐಟಿ ಪ್ರಾಮಾಣಿಕವಾಗಿದ್ದರೆ ಮಾಡಬೇಕಿರೋದು ಏನು ?

ಚಿನ್ನಯ್ಯ ನ್ಯಾಯಾಲಯಕ್ಕೆ ನೀಡಿರುವ ಎರಡು/ ಮೂರು ಹೇಳಿಕೆಯ ಮೇಲೆ ಟ್ರಯಲ್ (ಪಾಟಿ ಸವಾಲಿನ ವಿಚಾರಣೆ) ಪ್ರಾರಂಭಿಸಲು ಕಾನೂನಿನ ಕ್ರಮ ತೆಗೆದುಕೊಳ್ಳಬೇಕು.

ಎಸ್ಐಟಿ ರಚನೆಯ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿತವಾಗಿರುವಂತೆ ’20 ವರ್ಷಗಳ ಅಸಹಜ ಸಾವುಗಳ ತನಿಖೆ’ಯನ್ನು ಎಸ್ಐಟಿ ಮಾಡಬೇಕು. 

ಎಲ್ಲಕ್ಕಿಂತ ಮುಖ್ಯವಾಗಿ “ಚಿನ್ನಯ್ಯನ ಹೇಳಿಕೆ ಆಧಾರದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮಾತ್ರ ತನಿಖೆ ಮಾಡುತ್ತೇವೆ. ಆತ ಸುಳ್ಳು ಹೇಳಿದ್ದಾನೆ ಎಂಬ ವಿಚಾರ ನಮಗೆ ಸಂಬಂಧಿಸಿದ್ದಲ್ಲ.‌ ಅದು ನ್ಯಾಯಾಲಯದ ವಿಚಾರಣೆ ಮತ್ತು ವಿವೇಚನೆಗೆ ಬಿಟ್ಟಿರುವ ವಿಷಯ. ಹಾಗಾಗಿ ನಾವು ಚಿನ್ನಯ್ಯನ ದೂರಿನ ಎಫ್ಐಆರ್ ನಲ್ಲಿರುವ ಆರೋಪಗಳ ಬಗ್ಗೆ ಮಾತ್ರ ತನಿಖೆ ನಡೆಸುತ್ತೇವೆ” ಎಂದು ಎಸ್ಐಟಿ ಹೈಕೋರ್ಟಿಗೆ ಅಫಿದಾವಿತ್ ಹಾಕಬೇಕು.

Shoot the messenger ಎಂಬ ಧೋರಣೆಯನ್ನು ಬಿಟ್ಟು ನ್ಯಾಯಯುತ ತನಿಖೆಯ ಭರವಸೆಯನ್ನು ಸರ್ಕಾರ/ಎಸ್ಐಟಿ ನೀಡಬೇಕಿದೆ.

ನವೀನ್‌ ಸೂರಿಂಜೆ
ಪತ್ರಕರ್ತರು
.

ಇದನ್ನೂ ಓದಿ- ಬಂಜಾರ ಅಕಾಡೆಮಿ ಅಧ್ಯಕ್ಷರ ತಲೆದಂಡ

More articles

Latest article