ಬೆಂಗಳೂರು: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಮೂರೂ ಕ್ಷೇತ್ರಗಳಿಗೆ ಹೋಲಿಸಿದರೆ ಅವರು ಅತಿ ಹೆಚ್ಚು ಪ್ರಚಾರ ನಡೆಸಿದ್ದು ಸಂಡೂರು ಕ್ಷೇತ್ರದಲ್ಲಿ ಎಂದು ಹೇಳಬಹುದು. ಈ ಕ್ಷೇತ್ರದಲ್ಲಿ ಅವರು ಮೂರು ದಿನ ಪ್ರಚಾರ ನಡೆಸಿ ನಾನೇ ಅಭ್ಯರ್ಥಿ. ಅನ್ನಪೂರ್ಣ ಅವರಿಗೆ ಮತ ಹಾಕಿದರೆ ನನಗೆ ಮತ ಹಾಇದಂತೆ. ನನ್ನ ಶಕ್ತಿ ಹೆಚ್ಚುತ್ತದೆ ಎಂದು ಹೇಳಿಕೊಂಡಿದ್ದರು. ಬಹುಶಃ ಈ ಕ್ಷೇತ್ರ ಎಸ್ ಟಿ ಮೀಸಲು ಕ್ಷೇತ್ರವಾಗಿದ್ದು, ಅಹಿಂದ ನಾಯಕ ಎನ್ನುವುದನ್ನು ಸಾಬೀತುಪಡಿಸಲು ಒತ್ತು ನೀಡಿರಬಹುದು.
ಸಂಡೂರು ವಿಧಾನಸಭಾ ಕ್ಷೇತ್ರದ ಶೇ70 ರಷ್ಟು ಭೂ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದಾರೆ. 3 ದಿನಗಳಲ್ಲಿ ಪ್ರಯಾಣಿಸಿದ್ದು ಅಂದಾಜು 320 ಕಿಲೋ ಮೀಟರ್ ಪ್ರಯಾಣ ಬೆಳೆಸಿದ್ದಾರೆ. ಸಂಡೂರಿನಲ್ಲಿ ನಿರಂತರ ಮೂರು ದಿನಗಳ ಪ್ರಚಾರ ಕೈಗೊಂಡು 18 ಬಹಿರಂಗ ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಬಹಿರಂಗ ಸಭೆಗಳಲ್ಲಿ ನೇರವಾಗಿ ಭಾಗವಹಿಸಿ ಮುಖ್ಯಮಂತ್ರಿಗಳ ಭಾಷಣ ಕೇಳಿದ ಮತದಾರರ ಸಂಖ್ಯೆ 1.10 ರಿಂದ 1.23 ಲಕ್ಷ ಎಂದು ನಿರೀಕ್ಷಿಸಲಾಗಿದೆ.
28 ಗ್ರಾಮ ಪಂಚಾಯ್ತಿ, 3 ಪುರಸಭೆ, 1 ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಮುಖ್ಯಮಂತ್ರಿಗಳು ಮತಯಾಚನೆ ಮಾಡಿ ಮತದಾರರನ್ನು ನೇರವಾಗಿ ತಲುಪಿದ್ದಾರೆ. ರೈತರು ಮತ್ತು ಭೂ ಹೀನರು ಕಳೆದ 652 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೇ ಹೋಗಿ ಅವರ ಅಹವಾಲು ಕೇಳಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನಾನಾ ಕಾರಣಗಳಿಂದ ಮುನಿಸಿಕೊಂಡಿದ್ದ ನಾಲ್ಕು ಮಂದಿ ಸ್ಥಳೀಯ ನಾಯಕರ ಮನೆಗಳಿಗೇ ಭೇಟಿ ನೀಡಿ ಅವರ ಮನವೊಲಿಸಿ ತಮ್ಮ ಜೊತೆ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಪರಿವಾರ ಹರಡಿದ್ದ ಪ್ರತಿಯೊಂದು ಸುಳ್ಳುಗಳನ್ನೂ ಉಲ್ಲೇಖಿಸಿ ಅಧಿಕೃತ ಅಂಕಿ-ಅಂಶಗಳ ಸಮೇತ ಸ್ಪಷ್ಟನೆ ನೀಡಿ ಸತ್ಯ ಸಂಗತಿಗಳ ಮನವರಿಕೆ ಮಾಡಿಕೊಟ್ಟಿದ್ದಾರೆ. ಜನಾರ್ಧನರೆಡ್ಡಿಯವರು ಮತ್ತೆ ಬಳ್ಳಾರಿಗೆ ಬಂದಿದ್ದರಿಂದ ಆಗುತ್ತಿರುವ ಬೆಳವಣಿಗೆಗಳಿಂದ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಬಹುದು ಎಂದು ಹೆದರಿದ್ದ ಉದ್ಯಮಪತಿಗಳು ಹಾಗೂ ಜನತೆಗೆ ಆತ್ಮಸ್ಥೈರ್ಯ ತುಂಬಿದ್ದಾರೆ.