ಯಕ್ಷಗಾನದ ಹಳವಂಡ : ಪ್ರೊ ಬಿಳಿಮಲೆಯವರನ್ನು ಕಲಾವಿದರು ಯಾಕೆ ಬೆಂಬಲಿಸಬೇಕು !?

Most read

ಯಕ್ಷಗಾನದ ರಂಗದಲ್ಲಿ ದೇವರಾಗಿ ಕಾಣುವ ಕಲಾವಿದರು, ರಂಗದ ಹೊರಗೆ ಮಾನವನಾಗಿ ಬದುಕಲು ಅಗತ್ಯವಾದ ಗೌರವ, ಸುರಕ್ಷತೆ, ಸಮಾನ ಹಕ್ಕು ಪಡೆಯಬೇಕೇ ಅಥವಾ ‘ಹಳೆಯ ಮಾಮೂಲಿ ಸಂಗತಿ’ಗಳ ಹಿಡಿತಕ್ಕೆ ಅವರ ಬದುಕನ್ನು ಬಲಿಕೊಡಬೇಕೆ? ಪ್ರೊ. ಪುರುಷೋತ್ತಮ ಬಿಳಿಮಲೆಯವರ ವಿಚಾರವನ್ನು ವಿವಾದದ ಕಣ್ಣಲ್ಲಿ ನೋಡದೆ, ಕಲಾವಿದರ ಹಕ್ಕು-ಗೌರವಗಳ ಪ್ರಶ್ನೆಯಾಗಿ ನೋಡಿದರೆ ಯಕ್ಷಗಾನಕ್ಕೂ, ಸಮಾಜಕ್ಕೂ ಒಳಿತು -ನವೀನ್‌ ಸೂರಿಂಜೆ, ಪತ್ರಕರ್ತರು.

‘ಯಕ್ಷಗಾನದಲ್ಲಿನ ಸಲಿಂಗಕಾಮ’ದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆಯವರ ಹೇಳಿಕೆ ವಿವಾದ ಸೃಷ್ಟಿಸಿದೆ. ಪುರುಷೋತ್ತಮ ಬಿಳಿಮಲೆಯವರು ಸಲಿಂಗ ಕ್ರಿಯೆ ತಪ್ಪೆಂದಾಗಲೀ ಅಥವಾ ಸಲಿಂಗ ಕ್ರಿಯೆಯನ್ನು ಎಲ್ಲಾ ಯಕ್ಷಗಾನ ಕಲಾವಿದರು ಮಾಡುತ್ತಾರೆ ಎಂಬುದಾಗಲೀ ಆರೋಪಿಸಿಲ್ಲ. ಬದಲಾಗಿ, ಯಕ್ಷಗಾನದ ಕಲಾವಿದರ ವರ್ಗದೊಳಗೆ ನಡೆಯುವ ದೌರ್ಜನ್ಯವನ್ನು ಬಯಲು ಮಾಡಲು ‘ವೇಷದಲ್ಲಿ  ಮರೆಯಾಗಿರುವ ದೌರ್ಜನ್ಯ’ದ ಉದಾಹರಣೆ ನೀಡಿದ್ದಾರೆ. 

ಸಲಿಂಗಕಾಮವನ್ನು ಯಾವುದೇ ಕಲಾವಿದರ ಮೇಲೆ ಆರೋಪಿಸಲಾಗಿಲ್ಲ. ಯಕ್ಷಗಾನ ಮೇಳಗಳಲ್ಲಿ ಬೇರೂರಿರುವ ವರ್ಗ-ಜಾತಿ ಆಧಾರಿತ ಶೋಷಣೆಗಳನ್ನು ಉದಾಹರಣೆಯಿಂದ ವಿವರಿಸಲಾಗಿದೆ. ‘ಧಣಿ-ಕಲಾವಿದ’, ‘ಬಂಟ-ಬ್ರಾಹ್ಮಣ’, ‘ಮೇಲ್ವರ್ಗ-ಕೆಳವರ್ಗ’ ಎಂಬ ವಿಭಜನೆಗಳು ಪ್ರಸ್ತುತ ಕಲಾವಿದರ ಬದುಕಿನಲ್ಲಿ ಪರಿಣಾಮ ಬೀರುತ್ತಿವೆ ಎಂಬುದು ಸಂಶೋಧಕರಾಗಿ ಅವರ ಅಧ್ಯಯನವಾಗಿದೆ‌. ಕೆಲಸದ ಸ್ಥಳದಲ್ಲಿ ಈ ಮೇಲರಿಮೆಗಳು, ವರ್ಗದ ಅಹಂಕಾರಗಳು ‘ಲೈಂಗಿಕ ಶೋಷಣೆ’ ಮಾಡುವುದು ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಲ್ಲ. ಹಾಗಾಗಿ ಯಕ್ಷಗಾನವೂ ಅದರಿಂದ ಹೊರತಾಗಿಲ್ಲ ಎಂಬುದನ್ನು ನಾವು ಒಪ್ಪಲೇಬೇಕು. ಪರಂಪರೆಯ ಹೆಸರಿನಲ್ಲಿ ಮುಂದುವರಿಯುತ್ತಿರುವ ಅಸಮಾನತೆಯ ವಿರುದ್ಧ ಮಾತಾಡಿದವರ ಧ್ವನಿಯನ್ನು ವಿವಾದವೆಂದು ಕರೆಯುವುದು ಕಲೆಯ ಅಭಿವೃದ್ಧಿಗೆ ಪೂರಕವಲ್ಲ.

ಪ್ರೊ. ಪುರುಷೋತ್ತಮ ಬಿಳಿಮಲೆಯವರ ಮಾತುಗಳನ್ನು ಕಾನೂನಾತ್ಮಕವಾಗಿಯೇ ನೋಡೋಣ. ಪ್ರೊ. ಪುರುಷೋತ್ತಮ ಬಿಳಿಮಲೆಯವರು ಯಾವ ಆಧಾರದಲ್ಲಿ ಹೇಳಿಕೆ ನೀಡಿದರು ಎಂಬುದನ್ನು ನೋಡಿದರೆ, ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ವೇಷಧಾರಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೆಷ್ಟು ? ಉಡುಪಿಯಲ್ಲಿ ಯಾಕೆ ಯಕ್ಷಗಾನದ ಖ್ಯಾತ ಯುವ ಕಲಾವಿದರು ಸೂಸೈಡ್ ಮಾಡಿಕೊಂಡರು ? ಯಕ್ಷಗಾನದ ಪುರುಷ ಕಲಾವಿದರೇ ಹನಿಟ್ರ್ಯಾಪ್ ಮಾಡಿದ ಎಫ್ ಐ ಆರ್ ಕಾಸರಗೋಡಿನ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹನಿಟ್ರ್ಯಾಪ್ ನಡೆಸಿದ  ಮಂಗಳೂರಿನ ಖ್ಯಾತ ಯಕ್ಷಗಾನ ವೇಷಧಾರಿಯನ್ನು ಪೊಲೀಸರು ಬಂಧಿಸಿದ್ದರು. ಇಲ್ಲಿ ಹನಿಟ್ರ್ಯಾಪ್ ಗೆ ಯುವತಿಯನ್ನು ಬಳಸಿಲ್ಲ. ಇಂತಹ ಘಟನೆಗಳು ಏನನ್ನು ಸೂಚಿಸುತ್ತವೆ ? ಇದರ ಹಿಂದೆ ಇರುವ ದೌರ್ಜನ್ಯಗಳೇನು ? ಎಂಬುದನ್ನು ಅರಿಯದೇ ಬಿಳಿಮಲೆಯವರ ಹೇಳಿಕೆಯನ್ನು ವಿವಾದ ಮಾಡಲಾಗಿದೆ.

ಕಲಾವಿದರಿಗೆ ವೇತನ ಸೇರಿದಂತೆ ಎಲ್ಲಾ ಸವಾಲುಗಳ ಬಗ್ಗೆ ಮಾತನಾಡಿದ, ಪ್ರಶ್ನಿಸಿದ ಕಲಾವಿದರನ್ನು ಮೇಳದಿಂದ ಹೊರ ಹಾಕಿದ ಪ್ರಸಂಗಗಳು ಇವೆ. ಯಕ್ಷಗಾನ ಮೇಳಗಳ ಒಳನಿಯಂತ್ರಣದಲ್ಲಿ ಪಾರದರ್ಶಕತೆ ಮತ್ತು ಸಮಾನತೆ ಎಷ್ಟಿದೆ? ವೇಷ ಹಾಕಿದಾಗ ದೇವರೆನಿಸುವವರು, ವೇಷ ಕಳಚಿದ ನಂತರ ಸಾಮಾನ್ಯ ಕಾರ್ಮಿಕರಿಗಿಂತ ಕಡಿಮೆ ಗೌರವ ಪಡೆಯುವ ಪರಿಸ್ಥಿತಿ ಬದಲಾಗಬೇಕು ಎಂಬುದಷ್ಟೇ ಬಿಳಿಮಲೆಯವರ ಮಾತಿನ ಆಶಯವಾಗಿತ್ತು.

ಹಿಂದುಳಿದ, ದಲಿತ ವರ್ಗದ ಯಕ್ಷಗಾನದ ಕಲಾವಿದರು ಅನುಭವಿಸುವ ಸಾಮಾಜಿಕ ತಾರತಮ್ಯಗಳು ಕೇವಲ ಕಲಾವಿದರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಸಮಾಜಕ್ಕೂ ನೇರ ಸಂಬಂಧಪಟ್ಟದ್ದು. ಉದಾಹರಣೆಗೆ: ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ನೀವು ಇವತ್ತು ಹರಕೆಯ ಯಕ್ಷಗಾನ ಬುಕ್ ಮಾಡಿದರೆ ನಿಮ್ಮ ಮನೆಗೆ ಯಕ್ಷಗಾನ ಬರುವುದು ಬರೋಬ್ಬರಿ ಒಂದೋ ಎರಡೋ ವರ್ಷಗಳ ಬಳಿಕ ! ಅಷ್ಟೊಂದು ಯಕ್ಷಗಾನ ಬುಕ್ ಆಗಿರುತ್ತದೆ. ಇದನ್ನು ಯಾರೂ ಕೂಡ ಕಲೆ, ಸಂಸ್ಕೃತಿಯ ಭಾಗವಾಗಿ ಆಡುವುದಿಲ್ಲ. ಯಾವ ಜಾತಿಯವರೂ ಯಕ್ಷಗಾನವನ್ನು ಆಡಿಸಬಹುದು. ಕಟೀಲು ದುರ್ಗಾಪರಮೇಶ್ವರಿ ದೇವಿಯ ತಿರುಗಾಟದ ಬಂಡಾರದ ಜೊತೆ ಬುಕ್ ಮಾಡಿದ ಮನೆಗೆ ಕಲಾವಿದರು ಬರುತ್ತಾರೆ. ತಿರುಗಾಟದ ಬಂಡಾರದಲ್ಲಿರುವ ದೇವಿ ಉತ್ಸವ ಮೂರ್ತಿ ಬಂತೆಂದರೆ ಕಟೀಲು ದೇವಸ್ಥಾನವೇ ಮನೆಗೆ ಬಂದಂತೆ ಎಂಬ ಭಾವ ಭಕ್ತರಲ್ಲಿ ಇರುತ್ತದೆ. ವಿಪರ್ಯಾಸವೆಂದರೆ ಶೂದ್ರರು ಹರಕೆಯ ಯಕ್ಷಗಾನ ಬುಕ್ ಮಾಡಿದರೂ ದೇವಿಯ ಉತ್ಸವ ಮೂರ್ತಿಯ ಬಂಡಾರ ಶೂದ್ರರ ಮನೆಗೆ ಬರುವುದಿಲ್ಲ ! ಬದಲಾಗಿ ಪಕ್ಕದ ಬ್ರಾಹ್ಮಣರ ಮನೆಯಲ್ಲಿ ದೇವಿಯನ್ನು ಇರಿಸುತ್ತಾರೆ. ಯಕ್ಷಗಾನ ಬುಕ್ ಮಾಡಿದ್ದು ಶೂದ್ರರು, ದೇವಿಯ ಮೂರ್ತಿ ಇಟ್ಟು ಪೂಜೆ ಮಾಡುವುದು ಬ್ರಾಹ್ಮಣರ ಮನೆಯಲ್ಲಿ! ಇತ್ತಿಚೆಗೆ ಊರಿನ ದೇವಸ್ಥಾನದಲ್ಲಿ ದೇವಿಯ ಬಂಡಾರ ಇಡುವ ಪರಿಪಾಠ ಶುರುವಾಗಿದೆ. ದೇವಸ್ಥಾನ ದೂರ ಇದ್ದರೆ ಶೂದ್ರರ ಮನೆಗೆ ಹತ್ತಿರವಿರುವ ಬ್ರಾಹ್ಮಣರ ಮನೆಯಲ್ಲಿ ದೇವಿ ಸಹಿತ ಅರ್ಚಕರು ಬಿಡಾರ ಹೂಡುತ್ತಾರೆ. ಇದು ಯಕ್ಷಗಾನದೊಳಗಿನ ಜಾತಿ ತಾರತಮ್ಯದ ಸಾಮಾಜಿಕ ಮುಂದುವರಿಕೆ. ಕರಾವಳಿಯ ಶೂದ್ರ ಸಮುದಾಯಗಳು ಯಕ್ಷಗಾನವನ್ನು ಭಕ್ತಿಯ ವಿಚಾರವಾಗಿ ಮಾತ್ರ  ನೋಡದೆ ಸ್ವಾಭಿಮಾನ ಮತ್ತು ಹಕ್ಕಿನ ಪ್ರಶ್ನೆ ಎಂದು ಕೂಡಾ ಗಮನಿಸಬೇಕಿದೆ.

ಹಾಗಾಗಿ, ಯಕ್ಷಗಾನ ಮೇಳಗಳಿಗೊಂದು ಉತ್ತರದಾಯಿತ್ವ ಬೇಕಾಗಿದೆ. ಎಲ್ಲಾ ಯಕ್ಷಗಾನ ಮಂಡಳಿಯನ್ನು ಬಲಾಢ್ಯರ ಕಪಿಮುಷ್ಠಿಯಿಂದ ಹೊರತರಬೇಕು. ಇದನ್ನು ಬಂಟ, ಬಿಲ್ಲವ ಸಮುದಾಯ ಸೇರಿದಂತೆ ಎಲ್ಲಾ ಶೂದ್ರ ವರ್ಗದ ಕಲಾವಿದರು, ಪ್ರಜ್ಞಾವಂತರು ಸೂಕ್ಷ್ಮವಾಗಿ ಗಮನಿಸಬೇಕು.

ಯಕ್ಷಗಾನದ ರಂಗದಲ್ಲಿ ದೇವರಾಗಿ ಕಾಣುವ ಕಲಾವಿದರು, ರಂಗದ ಹೊರಗೆ ಮಾನವನಾಗಿ ಬದುಕಲು ಅಗತ್ಯವಾದ ಗೌರವ, ಸುರಕ್ಷತೆ, ಸಮಾನ ಹಕ್ಕು ಪಡೆಯಬೇಕೇ ಅಥವಾ ‘ಹಳೆಯ ಮಾಮೂಲಿ ಸಂಗತಿ’ಗಳ ಹಿಡಿತಕ್ಕೆ ಅವರ ಬದುಕನ್ನು ಬಲಿಕೊಡಬೇಕೆ? ಪ್ರೊ. ಪುರುಷೋತ್ತಮ ಬಿಳಿಮಲೆಯವರ ವಿಚಾರವನ್ನು ವಿವಾದದ ಕಣ್ಣಲ್ಲಿ ನೋಡದೆ, ಕಲಾವಿದರ ಹಕ್ಕು-ಗೌರವಗಳ ಪ್ರಶ್ನೆಯಾಗಿ ನೋಡಿದರೆ ಯಕ್ಷಗಾನಕ್ಕೂ, ಸಮಾಜಕ್ಕೂ ಒಳಿತು.

ನವೀನ್‌ ಸೂರಿಂಜೆ
ಪತ್ರಕರ್ತರು.

ಇದನ್ನೂ ಓದಿ- ಮಾತಾಡೋದು ದೈವವಾ.. ನರ್ತಕನಾ..!?‌

More articles

Latest article