Thursday, December 12, 2024

ವಕ್ಫ್ ಆಸ್ತಿ ತೆರವುಗೊಳಿಸಲು ನೋಟೀಸ್ ಕೊಟ್ಟಿದ್ದು ಏಕೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

Most read

ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ವಿರುದ್ಧವಾಗಿ ಮಾತನಾಡುತ್ತಾರೆ ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಪಕವಾಗಿ ಟೀಕಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿ ರಾಜಕಾರಣಕ್ಕಾಗಿ ಈ ವಿಚಾರವನ್ನು ಇಟ್ಟುಕೊಂಡು ಹೋರಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟೀಸು ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟೀಸು ನೀಡಲಾಗಿದೆ ಎಂದು ಜನರಿಗೆ ಅರ್ಥವಾಗಿದೆ.

ನಾನು ಸಚಿವರಾದ ಹೆಚ್.ಕೆ ಪಾಟೀಲ್, ಕೃಷ್ಣ ಬೈರೇಗೌಡ ಅವರೊಂದಿಗೆ ಸಭೆ ನಡೆಸಿ ಯಾವುದೇ ನೋಟೀಸು ನೀಡಿದ್ದಲ್ಲಿ ಅದನ್ನು ವಾಪಸ್ಸು ಪಡೆಯಬೇಕು ಅಥವಾ ವಿಚಾರಣೆ ಇಲ್ಲದೆಯೇ ಯಾವುದಾದರೂ ಪಹಣಿ ದಾಖಲೆ ಬದಲಾವಣೆಯಾಗಿದ್ದರೆ ಅದನ್ನು ರದ್ದು ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾಗಿದೆ. ಮುಸ್ಲಿಂ , ಹಿಂದೂ, ಕ್ರಿಶ್ಚಿಯನ್ ಆಗಿರಲಿ, ಒಕ್ಕಲೆಬ್ಬಿಸಬಾರದು ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

ವಕ್ಫ್ ಆಸ್ತಿ ವಿಚಾರ ನಮಗೆ ಗೊತ್ತಾದ ತಕ್ಷಣವೇ ನೋಟೀಸು ಹಿಂಪಡೆಯಲಾಗಿದೆ . ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟೀಸು ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟೀಸು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.

ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ 16 ನೇ ಹಣಕಾಸು ಆಯೋಗದವರು ಬೆಂಗಳೂರಿಗೆ ಭೇಟಿ ನೀಡಿದಾಗ 15 ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಸುಮಾರು 4.50 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವರ್ಷಕ್ಕೆ ತೆರಿಗೆ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ವಾಪಸ್ಸು ಬರುವುದು 55 ರಿಂದ 60 ಸಾವಿರ ಕೋಟಿ ರೂಪಯಿಗಳಷ್ಟು ಮಾತ್ರ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು. ಈ ಬಗ್ಗೆ ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಬಿಜೆಪಿಯ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರು ಈ ಬಗ್ಗೆ ಮಾತನಾಡಿದ್ದಾರೆಯೇ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ:
ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಅದು ರಾಜಕೀಯ ಎಂದರು ಇದಕ್ಕೆ ಏನು ಹೇಳಬೇಕು? ಎಂದರು. ನ್ಯಾಯಾಲಯಕ್ಕೆ ಹೋದರೆ ನ್ಯಾಯ ಸಿಗುತ್ತದೆ ಎಂದು ಭಾವಿಸಿಲ್ಲ, ಏಕೆಂದರೆ 5 ವರ್ಷಕ್ಕೊಮ್ಮೆ ಸಂವಿಧಾನದ ಪ್ರಕಾರ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಅವರ ಶಿಫಾರಸ್ಸಿನ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೋಗಬೇಕಾದ ತೆರಿಗೆ ಬಗ್ಗೆ ನಿರ್ಧಾರವಾಗುತ್ತದೆ. 15 ನೇ ಹಣಕಾಸು ಆಯೋಗ ಕೆಲವು ಶಿಫಾರಸ್ಸು ಮಾಡಿದ್ದಾರೆ. 5495 ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನ ನೀಡಬೇಕೆಂದು ಹೇಳಿದರು. ಪೇರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ 3000 ಕೋಟಿ ರೂಪಾಯಿ ನೀಡಲು ಶಿಫಾರಸು ಮಾಡಿದ್ದರು. ಒಟ್ಟು 11495 ಕೋಟಿಗಳನ್ನು ಕೊಟ್ಟರೆ. ಇದನ್ನು ನಾವು ಕೇಳಬೇಕು.
ಪ್ರಹ್ಲಾದ ಜೋಶಿಯವರು ಇದನ್ನು ಕೇಂದ್ರದಿಂದ ಕೇಳಬೇಕಲ್ಲವೇ ಎಂದು ಪ್ರಶ್ನಿಸಿದರು.

11495 ಕೋಟಿ ರೂಪಾಯಿಗಳನ್ನ ಕೊಟ್ಟಿದ್ದರೆಯೇ? ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟುಬಿಡುವೆ ಎಂದರು. ಪ್ರಹ್ಲಾದ ಜೋಶಿ ಬಿಡುತ್ತಾರೆಯೇ ಕೇಳಿ ಎಂದು ಪ್ರಶ್ನಿಸಿದರು. ಸುಳ್ಳು ಹೇಳಿದ್ದನ್ನು ಕೇಳಿ ಅದನ್ನು ಬರೆಯುತ್ತೀರಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಗ್ಯಾರಂಟಿಗೆ ಬಿಜೆಪಿ ವಿರೋಧ:
ಬಿಜೆಪಿಯವರು ಗ್ಯಾರಂಟಿಗೆ ವಿರುದ್ದವಾಗಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ಜಾತಿ ಧರ್ಮದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುತ್ತಿದ್ದೇವೆ. ಅವರು ಮುಖ್ಯವಾಹಿನಿಗೆ ಬರಬೇಕೆಂದು ಈ ಕಾರ್ಯ ಮಾಡುತ್ತಿದ್ದೇವೆ. ಬಿಜೆಪಿಯವರಿಗೆ ಸಮಾನತೆ ಬರಬಾರದು. ಬಡವರು ಇರಬೇಕು. ಅದಕ್ಕೆ ಅವರನ್ನು ಬಡತನ ವಿರೋಧಿಗಳು ಎಂದು ಕರೆಯುವುದು. ಶಕ್ತಿ ಇಲ್ಲದಿದ್ದರೆ ತಾನೇ ದುರುಪಯೋಗ ಮಾಡಿಕೊಳ್ಳಲು ಸಾಧ್ಯವಾಗುವುದು. ಆರ್ಥಿಕ, ಸಾಮಾಜಿಕ ಶಕ್ತಿ ಬಡವರಿಗೆ ಬರಬಾರದೆಂಬ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಬಿಜೆಪಿ ಪಕ್ಷ 600 ಭರವಸೆ ಗಳನ್ನು 2018 ರಲ್ಲಿ ನೀಡಿತ್ತು. ಅವುಗಳಲ್ಲಿ ಎಷ್ಟು ಈಡೇರಿಸಿದ್ದಾರೆ. ನಾವು 165 ಭರವಸೆ ಕೊಟ್ಟು 158 ಈಡೇರಿಸಿದ್ದಾಗಿ ಲೆಕ್ಕ ಕೊಡುತ್ತಿದ್ದೇವೆ. ಅವರು ಎಷ್ಟು ಭರವಸೆ ನೀಡಿ ಎಷ್ಟನ್ನು ಈಡೇರಿಸಿದ್ದಾರೆ ಎನ್ನುವ‌ ಲೆಕ್ಕ ಕೊಡುತ್ತಾರೆಯೇ ? ಎಂದು ಸವಾಲು ಹಾಕಿದರು.

ವಕ್ಫ್ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ ಮೇಲೂ ಬಿಜೆಪಿ ಹೋರಾಟ ಮಾಡುತ್ತಿದೆ ಎಂದರೆ ರಾಜಕೀಯ ಅಲ್ಲವೇ ಎಂದರು.

ವಕ್ಫ್ ವಿಚಾರವಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಬಿಜೆಪಿಯವರು ಯಾವಾಗಲೂ ನೈಜ ವಿಷಯಗಳನ್ನು ಬಿಟ್ಟು ಸುಳ್ಳು ಆರೋಪಗಳನ್ನು ಮಾಡುವುದು, ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಾರೆ ಎಂದರು.

ಪ್ರತಾಪ್ ಸಿಂಹ ಕೋಮುವಾದಿ:
ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳು ಸಂಪೂರ್ಣ ಮುಸ್ಲಿಂ ಆಗಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರೊಬ್ಬ ಮಹಾನ್ ಕೋಮುವಾದಿ. ಪ್ರತಾಪ್ ಸಿಂಹ ಇನ್ನೇನು ನಿರೀಕ್ಷೆ ಮಾಡಲಾಗುತ್ತದೆ ಎಂದರು. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ
ಕೋಮುವಾದ ಮಾಡುವುದೇ ಅವರ ಕಸುಬು. ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವುದೇ ಅವರ ರಾಜಕಾರಣ. ಕೋಮುವಾದದಲ್ಲಿ ತೊಡಗಿ ರಾಜಕೀಯದಲ್ಲಿ ಬದುಕಲು ಹಾಗು ಮತ ಪಡೆಯಲು ಪ್ರಯತ್ನ ಮಾಡುತ್ತಾರೆ ಎಂದರು.

ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯಲ್ಲವೇ?:
ಅಭಿವೃದ್ಧಿ ಬಗ್ಗೆ ಚರ್ಚೆ ಯಾರೊಬ್ಬರೂ ಮಾಡುತ್ತಿಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯಲ್ಲವೇ? ಹಿಂದೆ ಸಿಎಂ ಆಗಿದ್ದಾಗ 165 ಭರವಸೆ ಕೊಟ್ಟು 158 ಭರವಸೆಗಳನ್ನು ಈಡೇರಿಸಿದೆವು. ಅವು ಅಭಿವೃದ್ಧಿಯಲ್ಲವೆ ಎಂದು ಪ್ರಶ್ನಿಸಿದರು 3 ಲಕ್ಷದ 71 ಸಾವಿರ ಕೋಟಿ ರೂಪಾಯಿಗಳಲ್ಲಿ 52 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡುತ್ತಿದ್ದೇವೆ. ಸುಮಾರು 60 ಸಾವಿರ ಕೋಟಿ ಅಭಿವೃದ್ಧಿಗೆ ವೆಚ್ಚ ಮಾಡುತ್ತಿದ್ದೇವೆ. ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ರಸ್ತೆ, ಸೇತುವೆ, ನಿರ್ಮಾಣಕ್ಕಾಗಿ ವೆಚ್ಚವಾಗುತ್ತಿದೆ ಇವೆಲ್ಲ ಅಭಿವೃದ್ದಿಯಲ್ಲವೇ ಎಂದರು.

ಶಿಗ್ಗಾಂವಿ ಗೆಲ್ಲಲಿದ್ದೇವೆ, ಸಿಎಂ ವಿಶ್ವಾಸ:
ಇಂದು ಮತ್ತು ನಾಳೆ ಎರಡು ದಿನ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಾಗುವುದು. ಶಿಗ್ಗಾಂವಿ ಕ್ಷೇತ್ರದಲ್ಲಿ ಹಿಂದೆಯೂ ಪ್ರಚಾರ ಮಾಡಿದ್ದೇನೆ. ಕೊನೆಯಲ್ಲಿ ಅಭ್ಯರ್ಥಿಯನ್ನು ನಿಗದಿ ಮಾಡಿದ್ದರಿಂದ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲಾಗಲಿಲ್ಲ. ಈ ಬಾರಿ ಮೂರು ದಿನ ಶಿಗ್ಗಾಂವಿ ಭೇಟಿ ನೀಡುತ್ತಿದ್ದು, ಶಿಗ್ಗಾಂವಿ ಯಲ್ಲಿ ನೂರಕ್ಕೇ ನೂರು ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಲೀಡ್ ಬಂದಿತ್ತು. ಈ ಬಾರಿಯೂ ಕೂಡ ನಮಗೆ ಮುನ್ನಡೆ ದೊರೆಯುವ ಪರಿಸ್ಥಿತಿ ಇದ್ದು ನಾವು ಗೆಲ್ಲುತ್ತೇವೆ ಎಂದು ತಿಳಿಸಿದರು.

More articles

Latest article