ಕಲ್ಯಾಣ ಕರ್ನಾಟಕ ತಲಾ ಆದಾಯದಲ್ಲಿ ಹಿಂದುಳಿಯಲು ಕಾರಣವೇನು?

Most read

ಕರ್ನಾಟಕ  ರಾಜ್ಯದ ಇತರೆ ಭಾಗಗಳಿಗಿಂತ ಕಲ್ಯಾಣ ಕರ್ನಾಟಕವು ತಲಾ ಆದಾಯದಲ್ಲಿ ಹಿಂದುಳಿದಿರುವುದು ಕೇವಲ ಭೌಗೋಳಿಕ ಅಥವಾ ಸಂಪನ್ಮೂಲಗಳ ಕೊರತೆಯಿಂದ ಮಾತ್ರವಲ್ಲ. ಆಡಳಿತದ ನಿರ್ಲಕ್ಷ್ಯ, ಯೋಜನೆಗಳ ತಪ್ಪು ಆದ್ಯತೆ ಮತ್ತು ಸ್ಥಳೀಯ ರಾಜಕಾರಣಿಗಳಲ್ಲಿ ಅಭಿವೃದ್ಧಿ ಇಚ್ಛಾಶಕ್ತಿ ಇಲ್ಲದಿರುವುದು ಪ್ರಮುಖ ಕಾರಣಗಳು ರವಿ ಗೌರ್.

ಕರ್ನಾಟಕ ರಾಜ್ಯದ ವಾರ್ಷಿಕ ತಲಾ ಆದಾಯ 2024 – 25ರ ಸಾಲಿನ ವರದಿ ಹೊರಬಿದ್ದಿದೆ. ಕರ್ನಾಟಕ ರಾಜ್ಯದ ತಲಾ ಆದಾಯ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚಿದೆ. ಆದರೆ ಆತಂಕಕಾರಿ ವಿಷಯವೆಂದರೆ ಪ್ರತಿ ವರ್ಷ ತಲಾ ಆದಾಯದಲ್ಲಿ ಹಿಂದುಳಿಯುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಮತ್ತೆ ಹಿಂದುಳಿದಿವೆ.

ಕಲ್ಯಾಣ ಕರ್ನಾಟಕ ಪ್ರದೇಶವು ಹಿಂದುಳಿದ ಜಿಲ್ಲೆಗಳ ಸಮೂಹ ಎಂದೇ ಖ್ಯಾತಿ ಪಡೆದಿದೆ. ಕರ್ನಾಟಕ  ರಾಜ್ಯದ ಇತರೆ ಭಾಗಗಳಿಗಿಂತ ಕಲ್ಯಾಣ ಕರ್ನಾಟಕವು ತಲಾ ಆದಾಯದಲ್ಲಿ ಹಿಂದುಳಿದಿರುವುದು ಕೇವಲ ಭೌಗೋಳಿಕ ಅಥವಾ ಸಂಪನ್ಮೂಲಗಳ ಕೊರತೆಯಿಂದ ಮಾತ್ರವಲ್ಲ. ಆಡಳಿತದ ನಿರ್ಲಕ್ಷ್ಯ, ಯೋಜನೆಗಳ ತಪ್ಪು ಆದ್ಯತೆ ಮತ್ತು ಸ್ಥಳೀಯ ರಾಜಕಾರಣಿಗಳಲ್ಲಿ ಅಭಿವೃದ್ಧಿ ಇಚ್ಛಾಶಕ್ತಿ ಇಲ್ಲದಿರುವುದು ಪ್ರಮುಖ ಕಾರಣಗಳು. ಇಲ್ಲಿನ ರಾಜಕಾರಣಿಗಳ ಸ್ವಾರ್ಥಪರ ನಡವಳಿಕೆ ಇದಕ್ಕೆ ಮೂಲ ಕಾರಣಗಳಾಗಿವೆ.

ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯು ಅಭಿವೃದ್ಧಿಯ ಹಾದಿಗೆ ದಿಕ್ಕು ತೋರಿಸಬೇಕಾದ ಪ್ರಮುಖ ಸಂಸ್ಥೆಯಾಗಿದ್ದರೂ, ಇತ್ತೀಚಿನ ಕಾಲದಲ್ಲಿ ಅದು ಕಾರ್ಯಕ್ಷಮತೆಯಲ್ಲಿ ವಿಫಲವಾಗಿರುವುದು ಗಮನಾರ್ಹವಾಗಿದೆ.

ಕಲ್ಯಾಣ ಕರ್ನಾಟಕ

ಅನುದಾನಗಳ ಸಮರ್ಪಕ ವಿತರಣೆಯಲ್ಲಿ ತೊಂದರೆ, ಯೋಜನೆಗಳ ನಿರ್ವಹಣೆಯಲ್ಲಿ ಅಸಮರ್ಪಕತೆ, ಪ್ರಗತಿ ವರದಿ ಹಂಚಿಕೆಯ ಕೊರತೆಗಳು ಇತ್ಯಾದಿಗಳು ಸ್ಥಳೀಯ ಅಭಿವೃದ್ಧಿ ಗುರಿಗಳ ಕಳಪೆ ಸಾಧನೆಗೆ ಬಹು ಮುಖ್ಯ  ಕಾರಣಗಳು.

ಮಂಡಳಿಯ ಅನುದಾನವನ್ನು ಸಮರ್ಪಕವಾಗಿ ಬಳಸುವ ಕುರಿತು ಅಧಿಕಾರಿಗಳು, ರಾಜಕಾರಣಿಗಳು ಮತ್ತು ನಾಗರಿಕರಲ್ಲಿ ಅಗತ್ಯ ಅರಿವು ಇಲ್ಲ. ಇದರಿಂದಾಗಿ ಸರ್ಕಾರಕ್ಕೆ ಬಜೆಟ್‌ನಲ್ಲಿ ಮೀಸಲಿಡುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲಾಗುವುದಿಲ್ಲ ಎಂಬ ಆರೋಪವಿದೆ. ಮತ್ತೊಂದೆಡೆ ಬಿಡುಗಡೆಯಾದ ಅನುದಾನವೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ; ಬಹುತೇಕ ಅನುದಾನ ರಸ್ತೆ, ಸೇತುವೆ, ಕಟ್ಟಡ ಮತ್ತು ಕಾಂಪೌಂಡ್ ಕಾಮಗಾರಿಗಳಿಗೆ ಮೀಸಲಾಗುತ್ತಿದ್ದು, ಇದರಿಂದಾಗಿ ಜನಜೀವನ ಸುಧಾರಣೆಗೆ ಬೇಕಾಗಿರುವ ಅಗತ್ಯವಾದ ಕ್ಷೇತ್ರಗಳು ಕಡೆಗಣಿಸಲ್ಪಡುತ್ತಿವೆ.

ಸ್ಥಳೀಯ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ನಾಗರಿಕ ಸ್ನೇಹಿ ಹಾಗೂ ಸುಸ್ಥಿರ ಅಭಿವೃದ್ಧಿಯ ದೂರದೃಷ್ಟಿ ಇಲ್ಲದಿರುವುದರಿಂದ, ಮಂಡಳಿಯ ಅನುದಾನವನ್ನು ಬಹುತೇಕ ರಸ್ತೆ, ಸೇತುವೆ ಮತ್ತು ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ವಿನಿಯೋಗಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು ಆಡಳಿತದಲ್ಲಿರುವ ರಾಜಕಾರಣಿಗಳು, ಚುನಾವಣೆಯಲ್ಲಿ ಸೋತ ನಾಯಕರು, ಪಕ್ಷದ ಕಾರ್ಯಕರ್ತರು ಮತ್ತು ಇಂಜಿನಿಯರ್‌ಗಳಿಗೆ ಕೊಳ್ಳೆ ಹೊಡೆಯಲು ಪ್ರಶಸ್ತವಾದ ಸ್ಥಳವಾಗಿ ಮಾರ್ಪಟ್ಟಿದೆ. ಇಂಥ ಸ್ವಾರ್ಥಿಗಳ ಒಕ್ಕೂಟವು ಈ ಮಂಡಳಿಯನ್ನು ಸ್ವಾರ್ಥಕೇಂದ್ರಿತವಾಗಿಯೇ ಬಳಸುತ್ತಿದ್ದು, ಕೆಕೆಆರ್‌ಡಿಬಿ ಜನಹಿತದ ಬದಲು ವೈಯಕ್ತಿಕ ಲಾಭದ ವೇದಿಕೆಯಾಗುತ್ತಿರುವುದು ಈ ಪ್ರದೇಶವು ಹಿಂದುಳಿಯಲು ಮುಖ್ಯ ಕಾರಣ ಎಂದು ಹೇಳಬಹುದು.

ಗ್ರಾಮೀಣ ಭಾಗದ ಬಡ ನಾಗರಿಕರ ಬದುಕಿಗೆ ಈ ಮಂಡಳಿಯ ಪ್ರಯೋಜನ ತಲುಪಿಲ್ಲ. ಹಳ್ಳಿಯ ಕೊನೆಯ ಮನೆಗೂ ಅಭಿವೃದ್ಧಿಯ ಸ್ಪರ್ಶ ಆಗಬೇಕಾದರೆ, ಆಡಳಿತದ ಪಾರದರ್ಶಕತೆ ಮತ್ತು ಜನರ ಪಾಲ್ಗೊಳ್ಳುವಿಕೆ ಅನಿವಾರ್ಯವಾಗಿದೆ.

ಶಿಕ್ಷಣ ಕ್ಷೇತ್ರದ ವಿಷಯದಲ್ಲಿ ಮಂಡಳಿಯ ದೃಷ್ಟಿಕೋನ ಅತ್ಯಂತ ಸೀಮಿತವಾಗಿದೆ. ಶಿಕ್ಷಣದ ಅಭಿವೃದ್ಧಿ ಎಂದರೆ ಶಾಲಾ ಕೋಣೆಗಳ ನಿರ್ಮಾಣವೆಂದು ಭಾವಿಸಿರುವ ಅಧಿಕಾರಿಗಳು, ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಅಗತ್ಯವನ್ನೇ ಮರೆತಿದ್ದಾರೆ. ಕಳಪೆ ವರ್ಗದ ಕೋಣೆಗಳನ್ನು ಕಟ್ಟುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದಿಲ್ಲ ಎಂಬ ಅಂಶವನ್ನು ಅರಿಯದೇ ಮಂಡಳಿಯ ಯೋಜನೆಗಳು ಸಮಗ್ರ ಶೈಕ್ಷಣಿಕ ಅಭಿವೃದ್ಧಿಯನ್ನು ಪೋಷಿಸುವಲ್ಲಿ ವಿಫಲವಾಗುತ್ತಿವೆ.

ಕಲ್ಯಾಣ ಕರ್ನಾಟಕದ ಆರ್ಥಿಕ ಹಿಂದುಳಿಯುವಿಕೆಯ ಮತ್ತೊಂದು ಪ್ರಮುಖ ಕಾರಣವೆಂದರೆ ಉತ್ಪಾದನೆ ಮತ್ತು ಕೈಗಾರಿಕಾ ಘಟಕಗಳ ಕೊರತೆ. ಬೆಂಗಳೂರಿನಂತಹ ಕೈಗಾರಿಕಾ ವಲಯಗಳು ಈ ಪ್ರದೇಶದಲ್ಲಿ ಇನ್ನೂ ನಿರ್ಮಾಣವಾಗಿಲ್ಲ. ಇಲ್ಲಿ ಬಹುತೇಕ ಜನರು ಕೃಷಿಯಿಂದ ಜೀವನೋಪಾಯ ನಡೆಸುತ್ತಿರುವುದರಿಂದ ಆದಾಯ ಮೂಲಗಳ ಕೊರತೆಯು ದೊಡ್ಡ ಸಮಸ್ಯೆ ಆಗಿದೆ. ಅಲ್ಲದೆ, ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ವಾಣಿಜ್ಯ ಮಾರುಕಟ್ಟೆ ಅಥವಾ ಸಂಸ್ಕರಣಾ ಘಟಕಗಳಿಲ್ಲದಿರುವುದು ರೈತರು ನಷ್ಟ ಅನುಭವಿಸಲು ಕಾರಣವಾಗುತ್ತಿದೆ. ರೈತರು ಹೆಚ್ಚಿನ ಶ್ರಮ ಮತ್ತು ಪ್ರಯತ್ನದಿಂದ ಉತ್ಪಾದನೆ ಮಾಡಿದರೂ, ಮಾರಾಟ ವ್ಯವಸ್ಥೆಯ ಕೊರತೆ ಅವರ ಆದಾಯವನ್ನು ಮಿತವಾಗಿ ಮಾಡುತ್ತಿದೆ.

ಕೃಷ್ಣ ಕೊಳ್ಳದ ಯೋಜನೆಯ ಅಡಿ ಭೂಸ್ವಾಧೀನವಾಗಿರುವ ರೈತರಿಗೆ ನೀಡಲಾಗುವ ಪರಿಹಾರ ಮೊತ್ತದ ತಾರತಮ್ಯವು ಕಲ್ಯಾಣ ಕರ್ನಾಟಕದ ತಲಾ ಆದಾಯ ಇತರೆ ಭಾಗಗಳಿಗಿಂತ ಹಿಂದುಳಿಯಲು ಒಂದು ಕಾರಣವಾಗಿದೆ.

ಪರಿಹಾರ ಕ್ರಮಗಳು:

ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಯ ನಿವಾರಣೆಗೆ ಆಡಳಿತದ ಪಾರದರ್ಶಕತೆ, ಜನರ ಪಾಲ್ಗೊಳ್ಳುವಿಕೆ ಮತ್ತು ನೈತಿಕ ರಾಜಕೀಯ ಅಗತ್ಯ.

ಪ್ರತಿ ಯೋಜನೆಗೆ ಸಾರ್ವಜನಿಕ ಲೆಕ್ಕಪತ್ರ ಮತ್ತು ಆನ್‌ಲೈನ್ ಮಾಹಿತಿಯ ಬಹಿರಂಗ ಪ್ರಕಟಣೆ ಕಡ್ಡಾಯಗೊಳಿಸಬೇಕು.

ಸ್ಥಳೀಯ ಕೈಗಾರಿಕೆಗಳಿಗೆ ತೆರಿಗೆ ರಿಯಾಯಿತಿಯೊಂದಿಗೆ ಹೂಡಿಕೆ ಆಕರ್ಷಿಸುವ ಕ್ರಮ ತೆಗೆದುಕೊಳ್ಳಬೇಕು.

ಶಿಕ್ಷಣದಲ್ಲಿ ಗುಣಮಟ್ಟದ ಸುಧಾರಣೆಗಾಗಿ ಶಿಕ್ಷಕರ ನೇಮಕಾತಿ ಮತ್ತು ತರಬೇತಿ ಬಲಪಡಿಸಬೇಕು.

ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು, ಮಾರುಕಟ್ಟೆ ವ್ಯವಸ್ಥೆ ಹಾಗೂ ರೈತರ ಸಹಕಾರಿ ಮಾದರಿಗಳಿಗೆ ಪ್ರೋತ್ಸಾಹ ನೀಡಬೇಕು.

ಮೊದಲಿನಂತೆ ಕಲ್ಯಾಣ ಕರ್ನಾಟಕದಲ್ಲಿ ನಿಸ್ವಾರ್ಥ, ಜನಪರ, ಜನಕೇಂದ್ರಿತ ಅಭಿವೃದ್ಧಿಪರ ರಾಜಕಾರಣಿಗಳ ಸಂಖ್ಯೆ ಕ್ಷೀಣಿಸುತ್ತ ಬರುತ್ತಿರುವುದು ಕೂಡ ಈ ಭಾಗದ ಹಿಂದುಳಿಯುವಿಕೆಗೆ  ಒಂದು ಕಾರಣವಾಗಿರುವುದರಿಂದ ಸ್ಥಳೀಯ ರಾಜಕಾರಣಿಗಳಲ್ಲಿ ನೈತಿಕ ಬದ್ಧತೆ ಹೆಚ್ಚಬೇಕು.

ಇದೆಲ್ಲವನ್ನು ನಿವಾರಿಸಿದಾಗ ಮಾತ್ರ ಕಲ್ಯಾಣ ಕರ್ನಾಟಕ ಇತರೆ ಭಾಗಗಳೊಂದಿಗೆ ಸ್ಪರ್ಧಿಸಲು ಸಾಧ್ಯ.

ರವಿ ಗೌರ್

ಇದನ್ನೂ ಓದಿ-ನುಡಿ ನಮನ | ಅಸ್ಮಿತೆಯ  ಅರಿವಿನ  ಲೇಖಕಿ ಲಲಿತಾ ರೈ

More articles

Latest article