ಬೆಂಗಳೂರು: ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಂಧನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಸಿಐಡಿ ಪೊಲೀಸರು ಬಂಧಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಗೆ ತನ್ನಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಬಂದು ಸಲ್ಲಿಸಿದ ದೂರಿನ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರ ಮೇಲೆ ಪೋಕ್ಸೋ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು.
ತನ್ನಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ನೆರವು ಕೇಳಿಕೊಂಡು ಯಡಿಯೂರಪ್ಪ ನಿವಾಸಕ್ಕೆ ಹೋಗಿದ್ದಾಗ ತನ್ನ ಮಗಳ ಜೊತೆ ಯಡಿಯೂರಪ್ಪ ಅನುಚಿತವಾಗಿ ನಡೆದುಕೊಂಡು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ಸಲ್ಲಿಸಿದ್ದರು.
ಪೋಕ್ಸೋ ಕಾಯ್ದೆ ( Protection of Children against Sexual Offences Act (POCSO) ) 2012ರಲ್ಲಿ ದೇಶದಲ್ಲಿ ಜಾರಿಯಾದಾಗಿನಿಂದ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಷಯದಲ್ಲಿ ಪೊಲೀಸರು ಲಘುವಾಗಿ ನಡೆದುಕೊಳ್ಳುವ ಹಾಗಿಲ್ಲ. ಪೋಕ್ಸೋ ಪ್ರಕರಣ ದಾಖಲಾದರೆ ಪೊಲೀಸರ ಕಾರ್ಯನಿರ್ವಹಣೆಗೆ ರೂಪಿಸಲಾದ ನೀತಿಗಳನ್ನು (standard operating procedure) ಪಾಲಿಸಲೇಬೇಕಾದ ಅನಿವಾರ್ಯತೆ ಇರುತ್ತದೆ.
ಸಾಧಾರಣವಾಗಿ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾದರೆ ಆರೋಪಿಯನ್ನು ಕೂಡಲೇ ಬಂಧಿಸಲಾಗುತ್ತದೆ. ಆದರೆ ಪೊಲೀಸರು ಇದುವರೆಗೆ ಬಂಧಿಸುವ ಕ್ರಮ ಕೈಗೊಂಡಿಲ್ಲ. ಇದಕ್ಕೆ ರಾಜಕೀಯ ಕಾರಣಗಳೂ ಇರಬಹುದು. ದೂರು ದಾಖಲಾಗಿದ್ದು ಮಾರ್ಚ್ 14ರಂದು. ಲೋಕಸಭಾ ಚುನಾವಣೆಯ ಮುನ್ನಾ ದಿನಗಳಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಯಾಗಿರುವ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಿದರೆ ಅದಕ್ಕೆ ರಾಜಕೀಯ ತಿರುವು ದೊರೆಯುವ ಸಾಧ್ಯತೆ ಇತ್ತು. ಹೀಗಾಗಿ ಯಡಿಯೂರಪ್ಪ ಬಂಧನ ಸಾಧ್ಯವಾಗಿರಲಿಲ್ಲ. ಸರ್ಕಾರವೇ ಯಡಿಯೂರಪ್ಪ ಕುರಿತು ಮೃದುಧೋರಣೆ ತಳೆದಂತೆ ಕಂಡುಬರುತ್ತಿತ್ತು.
ಆದರೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದರೆ 90 ದಿನಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಲೇಬೇಕೆಂಬ ನಿಯಮವಿದೆ. ಅಂದರೆ ಜೂ.15ರೊಳಗೆ ಸಿಐಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕಿದೆ. ಯಡಿಯೂರಪ್ಪ ಅವರನ್ನು ಸಿಐಡಿ ಪೊಲೀಸರು ಒಮ್ಮೆ ವಿಚಾರಣೆ ನಡೆಸಿದ್ದಾರಾದರೂ ಚಾರ್ಜ್ ಶೀಟ್ ಸಲ್ಲಿಸುವ ಸಂದರ್ಭದಲ್ಲಿ ಆರೋಪಿಯನ್ನು ಯಾಕೆ ಬಂಧಿಸಲಿಲ್ಲ ಎಂಬ ಪ್ರಶ್ನೆಯನ್ನು ಪೊಲೀಸರು ಎದುರಿಸಬೇಕಾಗುತ್ತದೆ. ಈಗಾಗಲೇ ಸಂತ್ರಸ್ತೆಯಿಂದ ಸಿಆರ್ ಪಿಸಿ ಸೆಕ್ಷನ್ 161ರ ಅನ್ವಯ ಪೊಲೀಸರ ಮುಂದೆ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ, ಅಲ್ಲದೆ ಸಿಆರ್ ಪಿಸಿ ಸೆಕ್ಷನ್ 164 ಅನ್ವಯ ನ್ಯಾಯಾಧೀಶರ ಮುಂದೆಯೂ ಹೇಳಿಕೆ ನೀಡಿದ್ದಾರೆ. ಪೋಕ್ಸೋ ಸೇರಿದಂತೆ ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ 164ನೇ ಸೆಕ್ಷನ್ ಅನ್ವಯ ನೀಡುವ ಹೇಳಿಕೆ ಪ್ರಮುಖ ಸಾಕ್ಷಿಯಾಗುತ್ತದೆ.
ಪ್ರಕರಣ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ತಡವಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹುರುಳಿಲ್ಲ, ಹೀಗಾಗಿ ಎಫ್ ಐ ಆರ್ ರದ್ದು ಮಾಡಬೇಕು ಎಂದು ಅವರು ಕೋರಿದ್ದಾರೆ. ಹೈಕೋರ್ಟ್ ಈ ಕುರಿತು ಏನು ತೀರ್ಪು ನೀಡುತ್ತದೋ ಕಾದುನೋಡಬೇಕಾಗುತ್ತದೆ. ಒಂದು ವೇಳೆ ಹೈಕೋರ್ಟ್ ರಕ್ಷಣೆ ದೊರೆತರೆ ಯಡಿಯೂರಪ್ಪ ಬಂಧನ ಭೀತಿಯಿಂದ ಪಾರಾಗಬಹುದು.
ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಮತ್ತೊಂದು ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಸಂತ್ರಸ್ಥೆಯ ಅಣ್ಣ ಹೈಕೋರ್ಟ್ ಹಿರಿಯ ವಕೀಲ ಬಾಲನ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ಪೊಲೀಸರು ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ದೂರಲಾಗಿದೆ. ಪ್ರಕರಣದಲ್ಲಿ ಇದುವರೆಗೆ ಯಾವುದೇ ಪ್ರಗತಿ ಆಗಿಲ್ಲ. ಮಾರ್ಚ್ 14ರಂದು ದೂರು ನೀಡಲಾಗಿದೆ. ದೂರು ಕುರಿತು ಪಂಚನಾಮೆ, ಸಾಕ್ಷ್ಯ ಸಂಗ್ರಹ ಮಾಡಿಲ್ಲ. ಬಿಎಸ್ ವೈ ಜೊತೆ ಮಾತನಾಡಿದ ವಿಡಿಯೋ ರೆಕಾರ್ಡಿಂಗ್ ಇದೆ. ಸಿಆರ್ ಪಿಸಿ 164 ಅಡಿ ಹೇಳಿಕೆ ದಾಖಲಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೆಲ್ಲ ಕಾರಣಗಳಿಂದ ನಿಯಮಾವಳಿಗಳನ್ನು ಪಾಲಿಸಲೇಬೇಕಾಗಿರುವ ಪೊಲೀಸರು ಜೂ.15ರೊಳಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ಅವರ ಬಂಧನವಾಗಬೇಕಿದೆ. ಬಂಧನದ ನಂತರ ಪಂಚನಾಮೆ ಮಾಡಬೇಕಿದೆ.
ಪೋಕ್ಸೋ ಪ್ರಕರಣದಲ್ಲಿ ಬಂಧಿತರಿಗೆ ಜಾಮೀನು ಸಿಗುವುದು ಕಷ್ಟ. ಆದರೆ ಒಮ್ಮೆ ಚಾರ್ಜ್ ಶೀಟ್ ಸಲ್ಲಿಕೆಯಾದರೆ ಜಾಮೀನು ಪಡೆಯುವ ಸಾಧ್ಯತೆಗಳು ಹೆಚ್ಚುತ್ತವೆ. ಈ ಹಿನ್ನೆಲೆಯಲ್ಲಿ ಒಂದೊಮ್ಮೆ ಯಡಿಯೂರಪ್ಪ ಬಂಧನವಾದರೂ ಅವರು ಜೂ. 15ರ ನಂತರ ಜಾಮೀನು ಪಡೆಯುವ ಸಾಧ್ಯತೆ ಇರುತ್ತದೆ. ಸದ್ಯಕ್ಕಂತೂ ಯಡಿಯೂರಪ್ಪ ಅವರು ಬಂಧನಕ್ಕೊಳಗಾಗುವುದು ಖಚಿತವಾಗಿದ್ದು ಯಾವುದೇ ಕ್ಷಣದಲ್ಲಾದರೂ ಅವರನ್ನು ಸಿಐಡಿ ಪೊಲೀಸರು ಬಂಧಿಸಲಿದ್ದಾರೆ.