ಕರ್ನಾಟಕದಲ್ಲಾಗಿದ್ದರೆ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಘೋಷಣೆ ಕೂಗಿದವರು ಮುಸ್ಲಿಂ ಆಗಿದ್ದರೆ ಪ್ರವೇಶಿಸಿದವರ ಮನೆಗೆ ಬೆಂಕಿ ಹಚ್ಚಲಾಗುತ್ತಿತ್ತು. ಸರಕಾರದ ಮೇಲೆ ತುಷ್ಟೀಕರಣದ ಆರೋಪ ಮಾಡಿ ಹಾದಿ ಬೀದಿಗಳಲ್ಲಿ ಕೇಸರಿ ಶಾಲುಗಳು ಪ್ರತಿಭಟಿಸುತ್ತಿದ್ದವು. ಇಂತಹುದೇ ಕೃತ್ಯ ಉತ್ತರ ಪ್ರದೇಶದಲ್ಲಿ ಆಗಿದ್ದರೆ ಮುಸ್ಲಿಂ ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಲಾಗುತ್ತಿತ್ತು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಮಸೀದಿಯ ಒಳಗೆ ಜೈಶ್ರೀರಾಂ ಘೋಷಣೆ ಕೂಗುವುದರಿಂದ ಯಾವುದೇ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ”ಎಂದು ರಾಜ್ಯದ ಉನ್ನತ ನ್ಯಾಯಾಲಯ ಅಕ್ಟೋಬರ್ 15 ರಂದು ಅಭಿಪ್ರಾಯ ಪಟ್ಟಿದ್ದು ನ್ಯಾಯಮೂರ್ತಿಗಳಾದ ಎಂ.ನಾಗಪ್ರಸನ್ನನವರು ರಾತ್ರಿಯ ಸಮಯದಲ್ಲಿ ಅಕ್ರಮವಾಗಿ ಮಸೀದಿ ಪ್ರವೇಶಿಸಿ ಜೈಶ್ರೀರಾಂ ಘೋಷಣೆ ಕೂಗಿದ ದಕ್ಷಿಣ ಕನ್ನಡ ಜಿಲ್ಲೆಯ ಕೀರ್ತನ್ ಹಾಗೂ ಸಚಿನ್ ಎನ್ನುವ ಯುವಕರ ಮೇಲಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸಿದ್ದಾರೆ.
ಹಲವಾರು ಉತ್ತಮವಾದ ಜನಪರ ತೀರ್ಪು ನೀಡಿರುವ ಈ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಯಾಕೆ ಹೀಗೆ ವ್ಯತಿರಿಕ್ತವಾದ ತೀರ್ಪನ್ನು ಕೊಟ್ಟರು ಎನ್ನುವುದು ಅಚ್ಚರಿದಾಯಕವಾಗಿದೆ. ಯಾಕೆಂದರೆ ಅವರವರ ಧರ್ಮವನ್ನು ಅವರವರು ಆಚರಿಸುವ ಹಕ್ಕನ್ನು ಸಂವಿಧಾನ ಎಲ್ಲರಿಗೂ ನೀಡಿದೆ. ಒಂದು ಧರ್ಮದ ಆಚರಣೆಗೆ ಭಂಗ ತರುವ ಹಕ್ಕನ್ನು ಯಾರಿಗೂ ಕಾನೂನು ನೀಡಿಲ್ಲ. ಧಾರ್ಮಿಕ ಹಕ್ಕು ಹಾಗೂ ಸಂವಿಧಾನವನ್ನು ಕಾಪಾಡಬೇಕಾದ ನ್ಯಾಯಮೂರ್ತಿಗಳು ಯಾಕೆ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ, ಹಾಗೂ ಇನ್ನೊಂದು ಬಹುಸಂಖ್ಯಾತ ಸಮುದಾಯವನ್ನು ಪ್ರೇರೇಪಿಸುವಂತಹ ತೀರ್ಪು ನೀಡಿದರು ಎನ್ನುವುದು ಪ್ರಶ್ನಾರ್ಹವಾಗಿದೆ.
ನ್ಯಾಯಾಲಯದ ಈ ರೀತಿಯ ತೀರ್ಪು ಈಗ ಕೆಲವಾರು ಪ್ರಶ್ನೆಗಳನ್ನು ಹುಟ್ಟಿಸಿದೆ.
* ಮಸೀದಿಯ ಒಳಗೆ ಜೈ ಶ್ರೀರಾಂ ಘೋಷಣೆ ಕೂಗುವುದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎನ್ನುವುದಾದರೆ ಮುಸ್ಲಿಂ ವ್ಯಕ್ತಿಗಳು ಹಿಂದೂ ದೇವಸ್ಥಾನ ಪ್ರವೇಶಿಸಿ ಅಲ್ಲಾ ಹೋ ಅಕ್ಬರ್ ಎಂದು ಕೂಗುವುದಕ್ಕೆ ನ್ಯಾಯಾಂಗದ ಅನುಮತಿ ಇದೆಯಾ?
* ಈ ತೀರ್ಪಿನ ಪ್ರೇರಣೆಯಿಂದಾಗಿ ಹಿಂದುತ್ವವಾದಿ ಸಂಘಿಗಳು ತಮಗೆ ಬೇಕಾದಾಗ ಮಸೀದಿ ಪ್ರವೇಶಿಸಿ ಜೈ ಶ್ರೀರಾಂ ಘೋಷಣೆ ಕೂಗಿ ಕೋಮು ಸೌಹಾರ್ದತೆ ಕದಡುವ ಕೆಲಸ ಮಾಡಬಹುದಲ್ಲವೇ?.
* ಈ ಹಿಂದುತ್ವವಾದಿಗಳು ಮಸೀದಿಯೊಳಗೆ ಘೋಷಣೆ ಕೂಗಿದ್ದನ್ನೇ ನೆಪವಾಗಿಟ್ಟುಕೊಂಡು ಮುಸ್ಲಿಂ ಮೂಲಭೂತವಾದಿ ಯುವಕರು ತಮ್ಮ ಏರಿಯಾದ ದೇವಸ್ಥಾನಗಳಿಗೆ ಹೋಗಿ ಅವರ ದೇವರ ಘೋಷಣೆ ಕೂಗಿದಾಗ ಕೋಮು ಸಂಘರ್ಷಕ್ಕೆ ದಾರಿಯಾಗಬಹುದಲ್ಲವೇ?
* ಈಗ ಜೈ ಶ್ರೀರಾಂ ಘೋಷಣೆ ಕೂಗಿದವರು ಮುಂದೆ ನ್ಯಾಯಾಲಯದ ಇದೇ ತೀರ್ಪಿನಿಂದ ಪ್ರಚೋದನೆಗೊಂಡು ಮಸೀದಿಯೊಳಗೆ ಹನುಮಾನ್ ಚಾಲೀಸ ಪಠಿಸಬಹುದು ಇಲ್ಲವೇ ಭಜನೆಯನ್ನೇ ಮಾಡಬಹುದು. ಆಗ ಉಂಟಾಗುವ ಧಾರ್ಮಿಕ ಗಲಭೆಗಳಿಗೆ ನ್ಯಾಯಾಲಯವೇ ಪ್ರಚೋದನೆ ಕೊಟ್ಟಂತೆ ಆಗುತ್ತದಲ್ಲವೇ?
* ಇವರು ಮಸೀದಿಗೆ ಬಂದು ಘೋಷಣೆ ಕೂಗಿದಂತೆ, ಭಜನೆ ಮಾಡಿದಂತೆ ಅವರೂ ದೇವಸ್ಥಾನಕ್ಕೆ ಗುಂಪಾಗಿ ಪ್ರವೇಶಿಸಿ ಆಜಾನ್ ಮೊಳಗಿಸಿ, ನಮಾಜ್ ಆರಂಭಿಸಿದರೆ ಮುಂದಾಗಬಹುದಾದ ಅನಾಹುತಗಳ ಹೊಣೆಯನ್ನು ನ್ಯಾಯಾಂಗ ವಹಿಸಿಕೊಳ್ಳಲು ಸಾಧ್ಯವೇ?
ಇಂತಹ ಹತ್ತು ಹಲವು ಸಂದೇಹಗಳು ಹಾಗೂ ಕೋಮುದ್ವೇಷ ಹೆಚ್ಚಾಗುವ ಆತಂಕಗಳನ್ನು ನ್ಯಾಯಾಲಯದ ಈ ತೀರ್ಪು ಹುಟ್ಟಿಸುವಂತಿದೆ.
ಇಲ್ಲಿ ಹಿಂದುತ್ವವಾದಿ ಆಗಂತುಕರು ರಾತ್ರಿ ಸಮಯದಲ್ಲಿ ಮಸೀದಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದು ತಪ್ಪಾದ ಕ್ರಮ ಅಲ್ಲವೇ?. ಘೋಷಣೆ ಮಾತು ಆಮೇಲಿರಲಿ. ಅಕ್ರಮವಾಗಿ ಪ್ರವೇಶಿಸಿದ ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಬೇಕಿತ್ತಲ್ಲವೇ? “ಮಸೀದಿ ಸಾರ್ವಜನಿಕ ಸ್ಥಳವಾಗಿದ್ದು, ಅಂತ ಕಡೆ ಕ್ರಿಮಿನಲ್ ಅತಿಕ್ರಮ ಪ್ರವೇಶದ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಅರ್ಜಿದಾರರ ಪರ ವಕೀಲರು ವಾದಿಸಿ ಗೆದ್ದರು.
ಆದರೆ ಮಸೀದಿ ಸಾರ್ವಜನಿಕ ಸ್ಥಳ ಎಂದು ಹೇಗೆ ಪರಿಗಣಿಸುವುದು? ಮಸೀದಿಗಳು ಸರಕಾರದ ಸುಪರ್ದಿಯಲ್ಲಿರುವ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವಂತಹುಗಳಲ್ಲ. ಸರಕಾರಿ ಶಾಲೆ ಕಚೇರಿಗಳಿದ್ದರೂ ಸಹ ಕೆಲಸದ ಅವಧಿ ಮುಗಿದ ಮೇಲೆ ಅತಿಕ್ರಮವಾಗಿ ಪ್ರವೇಶಿಸುವುದು ಶಿಕ್ಷಾರ್ಹ ಅಪರಾಧ. ಹೀಗಿರುವಾಗ ಒಂದು ಸಮುದಾಯದ ಧಾರ್ಮಿಕ ಪ್ರಾರ್ಥನಾ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು ಹಾಗೂ ಘೋಷಣೆ ಕೂಗಿದ್ದು ದುರುದ್ದೇಶಪೂರಿತ ಕ್ರಿಯೆಯೇ ಹೊರತು ಭಕ್ತಿ ಭಾವದ ಕೆಲಸವಂತೂ ಅಲ್ಲವೇ ಅಲ್ಲ. ಇದರಿಂದಾಗಿ ಸಮುದಾಯಗಳ ನಡುವೆ ವೈಮನಸ್ಸು ಹಾಗೂ ಧಾರ್ಮಿಕ ದ್ವೇಷ ಹೆಚ್ಚಾಗುತ್ತದೆಯೇ ಹೊರತು ಸೌಹಾರ್ದತೆ ಬೆಸೆಯುವುದಿಲ್ಲ.
ಹಲವಾರು ದರ್ಗಾಗಳಿಗೆ ಹಿಂದೂಗಳು ಭಕ್ತಿಯಿಂದ ಹೋಗುತ್ತಾರೆ, ಬೇಕಾದಷ್ಟು ದೇವಸ್ಥಾನಗಳಿಗೆ ಮುಸ್ಲಿಂ ಸಮುದಾಯದವರೂ ಹೋಗುತ್ತಾರೆ. ಇಲ್ಲಿ ಆರಾಧನಾ ಭಾವ ಇರುತ್ತದೆಯೇ ಹೊರತು ದ್ವೇಷವಲ್ಲ. ಹಾಗೂ ನಿಗದಿ ಪಡಿಸಿದ ಸಮಯದಲ್ಲಿ ಮಾತ್ರ ಪ್ರವೇಶ ಇರುತ್ತದೆ. ಆದರೆ ಈ ಹಿಂದುತ್ವವಾದಿ ಪ್ರೇರಿತ ಸಂಘಿಗಳು ಮಸೀದಿಗೆ ಪ್ರವೇಶಿಸಿದ್ದೇ ಅಕ್ರಮವಾಗಿ ಹಾಗೂ ಘೋಷಣೆ ಕೂಗಿದ್ದೇ ಧಾರ್ಮಿಕ ದ್ವೇಷದ ಭಾಗವಾಗಿ. ಹೀಗಿರುವಾಗ ಇದನ್ನು ಅಪರಾಧಿ ಕೃತ್ಯವೆಂದು ಪರಿಗಣಿಸಬೇಕಲ್ಲವೇ? ಇಂತಹುದೇ ಕೆಲಸವನ್ನು ಮುಸ್ಲಿಂ ಸಮುದಾಯದ ಮತಾಂಧರು ಮಾಡಿದ್ದೇ ಆಗಿದ್ದರೆ ಅದನ್ನು ಹಿಂದುತ್ವವಾದಿಗಳು ಆಕ್ಷೇಪಿಸದೇ ಸ್ವಾಗತಿಸುವ ಸಾಧ್ಯತೆಗಳಿವೆಯಾ? ಕರ್ನಾಟಕದಲ್ಲಾಗಿದ್ದರೆ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಘೋಷಣೆ ಕೂಗಿದವರು ಮುಸ್ಲಿಂ ಆಗಿದ್ದರೆ ಪ್ರವೇಶಿಸಿದವರ ಮನೆಗೆ ಬೆಂಕಿ ಹಚ್ಚಲಾಗುತ್ತಿತ್ತು. ಸರಕಾರದ ಮೇಲೆ ತುಷ್ಟೀಕರಣದ ಆರೋಪ ಮಾಡಿ ಹಾದಿ ಬೀದಿಗಳಲ್ಲಿ ಕೇಸರಿ ಶಾಲುಗಳು ಪ್ರತಿಭಟಿಸುತ್ತಿದ್ದವು. ಇಂತಹುದೇ ಕೃತ್ಯ ಉತ್ತರ ಪ್ರದೇಶದಲ್ಲಿ ಆಗಿದ್ದರೆ ಮುಸ್ಲಿಂ ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಲಾಗುತ್ತಿತ್ತು.
ಹಿಂದೂಗಳು ಬಹುಸಂಖ್ಯಾತರಾಗಿದ್ದು ಅಲ್ಪಸಂಖ್ಯಾತ ಧರ್ಮೀಯರ ಮೇಲೆ ದಬ್ಬಾಳಿಕೆ ಮಾಡಿದರೆ ತಪ್ಪೇನಿಲ್ಲ ಎಂಬ ಭಾವನೆ ಬೆಳೆದಿದ್ದೇ ಆದಲ್ಲಿ, ಹಿಂದೂ ಮತಾಂಧರು ಅನ್ಯಧರ್ಮೀಯರ ಮೇಲೆ ದಮನಕ್ಕೆ ಪ್ರಯತ್ನಿಸಿದ್ದೇ ಆದಲ್ಲಿ ಕೋಮುಸಂಘರ್ಷ ಹೆಚ್ಚಾಗುತ್ತದೆ. ಹೀಗೆ ನ್ಯಾಯಾಲಯಗಳೂ ಸಹ ಪ್ರಾರ್ಥನಾ ಮಂದಿರಗಳ ಅತಿಕ್ರಮ ಪ್ರವೇಶ ಹಾಗೂ ಘೋಷಣೆಗಳಿಗೆ ಪೂರಕವಾಗಿ ತೀರ್ಪು ಕೊಟ್ಟಿದ್ದೇ ಆದರೆ ಎರಡೂ ಸಮುದಾಯದಲ್ಲಿರುವ ಮೂಲಭೂತವಾದಿಗಳ ಮತೀಯ ಗಲಭೆ ಅತಿಯಾಗುವ ಸಾಧ್ಯತೆಗಳೂ ಹೆಚ್ಚಾಗಿವೆ.
“ಅವರವರ ಧರ್ಮ ಅವರವರು ಆಚರಿಸಲಿ. ಎಲ್ಲರಿಗೂ ಅವರವರದ್ದೇ ಆದ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಇರಲಿ. ಒಂದು ಧರ್ಮೀಯರ ಆಚಾರ ವಿಚಾರಗಳ ಮೇಲೆ ಇನ್ನೊಂದು ಧರ್ಮೀಯರು ಹೇರಿಕೆ, ಅಡೆತಡೆ ಮಾಡದೇ ಇರಲಿ” ಎನ್ನುವುದು ನ್ಯಾಯಾಂಗದ ಆಶಯವಾಗಬೇಕಿದೆ. ಸಂವಿಧಾನದತ್ತ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನ್ಯಾಯಾಧೀಶರುಗಳು ಎತ್ತಿ ಹಿಡಿಯಬೇಕಿದೆ. ಧಾರ್ಮಿಕ ಅತಿಕ್ರಮಣವನ್ನು, ಧಾರ್ಮಿಕ ಭಾವನೆಗಳಿಗೆ ಮಾಡುವ ಅಪಚಾರವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಪರಿಗಣಿಸಬೇಕಿದೆ. ಈ ಕೂಡಲೇ ಈ ಕೇಸಿಗೆ ಸಂಬಂಧಪಟ್ಟವರು ಹಾಗೂ ಮುಸ್ಲಿಂ ಸಮುದಾಯದವರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಸಾಂವಿಧಾನಿಕ ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ಮಾಡಬೇಕಿದೆ. ಇಲ್ಲದೇ ಹೋದರೆ “ಮಸೀದಿಯಲ್ಲಿ ಜೈ ಶ್ರೀರಾಂ ಘೋಷಣೆ ಕೂಗುವುದು ಅಪರಾಧವಲ್ಲ” ಎನ್ನುವಂತೆ ಈಗ ನ್ಯಾಯಾಲಯ ಕೊಟ್ಟ ತೀರ್ಪು ಉಗ್ರ ಹಿಂದುತ್ವವಾದಿಗಳಿಗೆ ಹೆಂಡ ಕುಡಿಸಿದಂತಾಗುತ್ತದೆ. ಪ್ರಾರ್ಥನಾ ಸ್ಥಳಗಳ ಅತಿಕ್ರಮಣ ಹಾಗೂ ಘೋಷಣೆ, ಭಜನೆಗಳೂ ಆರಂಭವಾಗುತ್ತವೆ. ಇದರಿಂದಾಗಿ ಸಮುದಾಯಗಳ ನಡುವೆ ದ್ವೇಷ ಸೇಡಿನ ಭಾವನೆಗಳು ಬೆಳೆದು ಸಂದರ್ಭ ಸಿಕ್ಕಾಗಲೆಲ್ಲಾ ಕೋಮುಗಲಭೆಗಳು ಶುರುವಾಗುತ್ತವೆ. ಇದರಿಂದಾಗಿ ಸಮಾಜದ ನೆಮ್ಮದಿಯೇ ಹಾಳಾಗುತ್ತದೆ. ಸಮಾಜದಲ್ಲಿ ಧಾರ್ಮಿಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವುದು ಹಾಗೂ ಈ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿಗಳು
ಇದನ್ನೂ ಓದಿ- ಮನುವಾದಿಗೆ ಮಣೆ ಹಾಕಿತೇ ಸರ್ಕಾರ?