ವಿಕಾಸದ ಹಾದಿಯಲ್ಲಿ ಗಂಡು, ಹೆಣ್ಣು ಪರಸ್ಪರರು ನೆರವಾಗಿ ನಿಂತು ಸಾಗಬೇಕು ಎಂಬ ಭಾಗೀದಾರಿಕೆ ಮಾತ್ರವೇ ದೀರ್ಘಕಾಲೀನ ಬಾಳಿನ ಸಾರ್ಥಕತೆ ತಂದುಕೊಡುತ್ತದೆ. ಈ ನೆಲೆಯ ಶಿಕ್ಷಣ ಹೆಣ್ಣು ಮತ್ತು ಗಂಡಿಗೆ ದೊರೆತು ಇನ್ನಾದರೂ ವಿವಾಹ ಸಂಸ್ಥೆ ಸಮಾನ ತಳಹದಿಯ ಮೇಲೆ ತನ್ನನ್ನು ಪುನಾರಚಿಸಿಕೊಳ್ಳುವ ಮೂಲಕ ಅರ್ಥಪೂರ್ಣಗೊಳ್ಳಬೇಕಿದೆ. ಪುರುಷ ಚಿಂತನೆಗಳು ಬದಲಾಗಿ ಹೆಣ್ಣು ಬದುಕು ಸಹ್ಯಗೊಳ್ಳಬೇಕಿದೆ – ಡಾ. ಆಶಾ ಬಗ್ಗನಡು, ಲೇಖಕಿ. ತುಮಕೂರು.
ಪುರುಷ ಪ್ರಧಾನ ಸಮಾಜದೊಳಗೆ ಹೆಣ್ಣು ಒಂದೋ ದೇವಿಯಾಗಲೇಬೇಕು ಇಲ್ಲ ರಾಕ್ಷಸಿಯಾಗಬೇಕು. ಉಳಿದ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಈ ಹೊತ್ತಿಗೂ ಅವಳು ಅರ್ಥವಾಗುವುದಕ್ಕಿಂತ ಹೆಚ್ಚು ಅಪಾರ್ಥವಾಗುತ್ತಿದ್ದಾಳೆ. ಇತ್ತೀಚಿನ ಕೆಲವು ಪ್ರಕರಣಗಳನ್ನು ಅವಕ್ಕೆ ನಾಗರೀಕ ಸಮಾಜ ತೋರಿದ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಪೋಷಕರು ನಿಶ್ಚಯಿಸಿದ ಸಾಂಪ್ರದಾಯಿಕ ವಿವಾಹಗಳನ್ನು ಮುರಿದುಕೊಳ್ಳುತ್ತಾ, ತಾಳಿ ಕಟ್ಟುವ ಹೊತ್ತಲ್ಲಿ ಮದುವೆಯನ್ನು ನಿರಾಕರಿಸಿ ಪ್ರೀತಿಸಿದವನ ಜೊತೆ ಹೊರ ನಡೆದ, ಮದುವೆಯಾಗಿ ಮಧುಚಂದ್ರದಲ್ಲೇ ಪ್ರೇಮಿಯ ಜೊತೆ ಸೇರಿ ಪತಿಯನ್ನು ಕೊಲ್ಲಿಸಿದ, ಮದುವೆ ಇಲ್ಲದೆ ಮಗುವನ್ನು ಹೆರಲು ನಿರ್ಧರಿಸಿದ ಹೆಣ್ಣು ಮಕ್ಕಳು ಅವಳೇಕೆ ಹೀಗೆ ಎಂದು ಅಸಂಖ್ಯರೊಳಗನ್ನು ಕಾಡಿ ಕಡು ಟೀಕೆಗಳಿಗೊಳಗಾದರು. ಈ ಪ್ರಕರಣಗಳಲ್ಲಿನ ಕೆಲವು ಹೆಣ್ಣುಮಕ್ಕಳ ವರ್ತನೆಯಂತೂ ತೀರಾ ಅಕ್ಷಮ್ಯವೆನಿಸಿದರೂ, ಪುರುಷ ಚಿಂತನೆಗಳೊಳಗೆ ಕೆಡುಕಿನ ಕೂಪವಾಗಿ ಕಂಗೆಡೆಸಿದ ಈ ಹೆಣ್ಣುಮಕ್ಕಳ ಆಂತರ್ಯವನ್ನು ಪಿತೃ ಚಿಂತನೆಗಳ ಹೊರತಾಗಿ ಇಣುಕುವುದು ಅವಶ್ಯಕವೆನಿಸುತ್ತದೆ.
ಭಾರತೀಯ ಸಂದರ್ಭದಲ್ಲಿ ವಿವಾಹ ವ್ಯವಸ್ಥೆ ಕೂಡಾ ಜಾತಿ, ವರ್ಗ, ಅಂತಸ್ತು, ಪ್ರತಿಷ್ಠೆಗಳನ್ನು ಅವಲಂಬಿಸಿರುವುದರಿಂದ ಅಲ್ಲಿ ಹೆಣ್ಣಿಗೆ ಅಯ್ಕೆ ಸಾಧ್ಯತೆಗಳಿರುವುದಿಲ್ಲ. ಇಂದಿಗೂ ತಮ್ಮ ಮಕ್ಕಳಿಗೆ ಎಂತಹಾ ಹುಡುಗಬೇಕು ಎಂದು ನಿರ್ಧರಿಸುವವರು ತಂದೆ ತಾಯಿಗಳೇ ಆಗಿರುತ್ತಾರೆ. ಇಂದಿಗೂ ವಿವಾಹಗಳು ಪೋಷಕರ ಪ್ರತಿಷ್ಠೆಗೆ ಅನುಗುಣವಾಗಿ ನಡೆಯುತ್ತವೆ. ಹೆಣ್ಣುಮಕ್ಕಳ ವಿಷಯದಲ್ಲಿ ವ್ಯವಸ್ಥೆ ಅದೆಷ್ಟು ಕ್ರೂರವಾಗಿರುತ್ತದೆಯೆಂದರೆ ಅದಕ್ಕೆ ಕಣ್ಣು, ಕಿವಿ, ಬೆನ್ನು ಹೊಟ್ಟೆ ಯಾವುದು ಇರುವುದಿಲ್ಲ. ಇಂತಹ ವ್ಯವಸ್ಥೆಯ ನಡುವೆ ನಿಂತು ಅವಳು ಮಾತನಾಡುವುದಾದರೂ ಹೇಗೆ, ಮಾತನಾಡಿದರೂ ಅದು ಯಾರಿಗೆ ಕೇಳಿಸುತ್ತದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ.
ಸಾಂಪ್ರದಾಯಿಕ ವಿವಾಹವನ್ನು ತಾಳಿ ಕಟ್ಟುವ ಸಮಯದಲ್ಲಿ ನಿರಾಕರಿಸಿದ, ಮಧುಚಂದ್ರದಲ್ಲಿ ಪತಿಯನ್ನು ಹತ್ಯೆಮಾಡಿಸಿದ ಹೆಣ್ಣುಮಕ್ಕಳ ನಡೆಗಳನ್ನು ಸಾಮಾಜಿಕ ನಿರೀಕ್ಷೆ, ಪೋಷಕರ ಒತ್ತಡದ ಆಚೆಗೆ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣಗಳಲ್ಲಿ ಆ ಹುಡುಗರಿಬ್ಬರು ಬಲಿಪಶುಗಳಾಗಿ ಕಾಡುತ್ತರಾದರೂ, ಇದು ವ್ಯವಸ್ಥೆಗೆ ಆ ಹೆಣ್ಣು ಮಕ್ಕಳು ತೋರಿದ ಪ್ರತಿಭಟನೆ ಮಾತ್ರವಾಗಿಯೇ ನೋಡಬೇಕಾಗುತ್ತದೆ.
ಪ್ರೀತಿ ಪ್ರೇಮವೆಂದು ಎಲ್ಲವನ್ನು ಮರೆತಂತೆ ವರ್ತಿಸುವುದನ್ನು ಕಂಡಾಗ ಈ ಹೆಣ್ಣುಮಕ್ಕಳೇ ಹೀಗೇಕೆ ಅನಿಸುತ್ತದೆ. ಆದರೆ ಬಾಲ್ಯದಿಂದಲೂ ನೀನು ಒಬ್ಬನ ಸ್ವತ್ತು ಎಂಬ ಭಾವವನ್ನು ಅವರಲ್ಲಿ ಬಲಿಸುತ್ತಾ, ಎಷ್ಟೋ ಹಾದಿಗಳಲ್ಲಿ ಅವಳ ಬದುಕಿನ ದಾರಿಯೆಂದರೆ ವಿವಾಹ ಮಾತ್ರ ಎಂದು ಸ್ಪಷ್ಟಪಡಿಸಲಾಗುತ್ತದೆ. ಅವಳು ಕೂಡಾ ಯಾವ ಪ್ರತಿರೋಧವಿಲ್ಲದೆ ಇದನ್ನು ಒಪ್ಪಿಬಿಡುತ್ತಾಳೆ. ಹದಿಹರೆಯಕ್ಕೆ ಕಾಲಿಟ್ಟು ಸಹಜ ದೈಹಿಕ ಆಕರ್ಷಣೆಯೊಳಗೆ ಕನಸು ಮನಸಿನಲ್ಲಿಯೂ ಗಂಡನನ್ನು ತುಂಬಿಕೊಂಡ ಅವಳ ಬದುಕು ಕೊನೆಗೂ ಅವಳದ್ದಾಗಿ ಉಳಿಯುವುದಿಲ್ಲ. ಇಂತಹ ವಾತಾವರಣದಲ್ಲಿ ಬೆಳೆಯುವ ಹೆಣ್ಣುಮಕ್ಕಳು ಸ್ವಂತದ ಸಾಮರ್ಥ್ಯ ರೂಢಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿ. ಹದಿಹರೆಯದ ವಯಸಿನಲ್ಲಿ ಪ್ರೀತಿ, ಪ್ರೇಮ ಅಂತಲೂ ಸಂಪ್ರದಾಯ ಚೌಕಟ್ಟನ್ನು ಅದು ತನಗೆ ಬೇಕೋ, ಬೇಡವೋ ಎಂಬ ಪ್ರಶ್ನೆಗೆ ಅವಕಾಶ ಕೊಡದೆ ಒಪ್ಪಿ ನಡೆಯುವ ಹೆಣ್ಣುಮಕ್ಕಳ ತಳಮಳ ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ.
ವಿವಾಹ ಸಂಸ್ಥೆಯ ಆಳುವ ಪುರುಷ ಚಿಂತನೆಗಳೊಳಗೆ ದಮನಗೊಳ್ಳುವ ಹೆಣ್ಣಿನ ಒಳಗನ್ನು ಊಹಿಸಲು ಅಸಾಧ್ಯ. ಉಸಿರುಗಟ್ಟಿ ಹೊರ ದಾರಿಯಿಲ್ಲದೇ ಒಳಗೆ ರಣಾಂಗಣ ಸೃಷ್ಟಿಯಾಗಿ ಕೊನೆಗೆ ಅದುಮಿಟ್ಟ ಭಾವನೆಗಳು ಅಭಿವ್ಯಕ್ತಿ ಪಡೆಯುವಾಗ ಸಹಜವಾಗಿ ಅವು ಸ್ಫೋಟಗುಣ ಪಡೆಯುತ್ತವೆ. ಅಲ್ಲಿ ಆವೇಶ ಆಕ್ರೋಶಗಳಿರುತ್ತವೆ. ಕೌಟುಂಬಿಕವಾಗಿ ಗಂಡನನ್ನೋ. ಮಕ್ಕಳನ್ನೋ, ಹತ್ಯೆ ಮಾಡುವ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ವರ್ತನೆಯಂತೂ ತೀರಾ ಅಕ್ಷಮ್ಯವೆನಿಸಿದರೂ, ತೀರಾ ಅಸಹಜ ರೀತಿಯಲ್ಲಿ ಭಿನ್ನವಾಗಿ ಕಾಣುವಂತಹ ಇಂತಹ ವರ್ತನೆಗಳು ವ್ಯಕ್ತವಾಗುವ ಹಂತ ಸಾಧಾರಣವಾದುದಲ್ಲ. ಕೈ ಮೀರಿದ ಅಪಾಯಕಾರಿ ಹಂತ ಇದು. ಇಂತಹ ಹೆಣ್ಣುಮಕ್ಕಳಲ್ಲಿ ಉಂಟಾಗಿರುವ ಏರುಪೇರು ವೈಯಕ್ತಿಕ ನ್ಯೂನತೆಗಳ ಕಾರಣಗಳಲ್ಲಿ ಹುಟ್ಟುವುದಿಲ್ಲ. ಬದಲಿಗೆ ತಮಗೆ ಲಭ್ಯವಾದ ಸಾಮಾಜಿಕ ವಾತಾವರಣದಲ್ಲಿ ತಾವು ಸಿಲುಕಿಕೊಂಡ ಸಂಕಷ್ಟಗಳಿಗೆ ಅವರು ತೋರಿದ ಪ್ರತಿಭಟನೆಯ ಸಂಕೇತಗಳಾಗಿರುತ್ತವೆ. ಪುರುಷ ಚಿಂತನೆಗಳಡಿಯಲ್ಲಿ ದಮನಕ್ಕೊಳಗಾದ ಹೆಣ್ಣಿನ ಅಸ್ವಸ್ಥತೆಯನ್ನು ವ್ಯವಸ್ಥೆಯ ವಿಕೃತಿಯ ಅಡಿಯಲ್ಲಿ ಗ್ರಹಿಸಿಕೊಳ್ಳಬೇಕಾಗುತ್ತದೆ.
ಮದುವೆಯಾಗುವುದೇ ಮಕ್ಕಳಾಗುವುದಕ್ಕೆ ಆ ಮೂಲಕ ವಂಶಾಭಿವೃದ್ಧಿಗೆ ಎಂಬ ಕಲ್ಪನೆಯ ಸಾಮಾಜಿಕ ವ್ಯವಸ್ಥೆಯಲ್ಲಿ ಐ.ವಿ.ಎಫ್ ತಂತ್ರಜ್ಞಾನದ ಮೂಲಕ ತಾಯಿಯಾಗುವ ನಿರ್ಧಾರ ತಳೆದ ಚಿತ್ರನಟಿ ಭಾವನಾ ಇನ್ನಿಲ್ಲದ ಟೀಕೆಗಳಿಗೆ ಒಳಗಾದರು. ತನ್ನ ಆಸೆ, ಆಸಕ್ತಿ, ವೃತ್ತಿಯನ್ನು ಅರ್ಥೈಸಿಕೊಂಡು ಬದುಕು ಹಂಚಿಕೊಳ್ಳುವ ಬಾಳ ಸಂಗಾತಿಯ ಹುಡುಕಾಟದಲ್ಲಿ ತನ್ನ ತಾಯ್ತನದ ಆಸೆಯನ್ನು ಕಳೆದುಕೊಳ್ಳಬಾರದೆಂಬ ಆಕೆಯ ನಡೆ ವ್ಯವಸ್ಥೆಯನ್ನಾಗಲಿ, ಪುರುಷರನ್ನಾಗಲೀ ಪ್ರಜ್ಞಾಪೂರ್ವಕವಾಗಿ ಧಿಕ್ಕರಿಸುವ ಆವೇಶದಲ್ಲ. ಬದುಕಿನುದ್ದಕ್ಕೂ ತಂದೆಯ ಅದಮ್ಯ ಪ್ರೀತಿಯನ್ನು ಅನುಭವಿಸಿರುವ ಆಕೆ ಗಂಡಸರೆಂದರೆ ನನಗೆ ವಿಶೇಷ ಗೌರವ ಎನ್ನುತ್ತಾರೆ. ತಾಯ್ತನವನ್ನು ತನ್ನ ದೇಹ ಮನಸ್ಸುಗಳ ಸತ್ಯವಾಗಿ ಕಂಡು ಅದು ತನ್ನ ಬದುಕು ವ್ಯಕ್ತಿತ್ವಕ್ಕೆ ಶಕ್ತಿ, ಚೈತನ್ಯವನ್ನು ತಂದುಕೊಡುತ್ತದೆಯೆಂದು ನಂಬಿರುವ ಭಾವನಾ ತನ್ನದೇ ಆದ ಜೈವಿಕ ತಾಯ್ತನದ ಹಕ್ಕನ್ನು ಉಳಿಸಿಕೊಳ್ಳಲೇಬೇಕೆಂಬ ಉತ್ಕಟ ಹಂಬಲದಲ್ಲಿದ್ದಾರೆ. ವಿವಾಹ ಚೌಕಟ್ಟಿನಲ್ಲಿ ಮೌಲ್ಯಗಳಿಂದ ಆವರಿಸಲ್ಪಟ್ಟು ಅಸಹಜವಾಗಿ ಕಾಣುವ ತಾಯ್ತನವನ್ನು ಆಕೆ ಸಹಜ ಸಾಧ್ಯತೆಯಾಗಿ ಕಾಣಿಸುತ್ತಿದ್ದಾರೆ. ವೈವಾಹಿಕ ಬದುಕಿನ ಕಾರಣದಿಂದಲೇ ಆಕೆಯ ತಾಯ್ತನವನ್ನು ಅವಮಾನಿಸುವ, ಪ್ರಶ್ನಿಸುವ ನಡೆಗಳು ನಿಜಕ್ಕೂ ಅಮಾನವೀಯ.
ವಿವಾಹವೇ ಬದುಕಿನ ಪರಮ ಗುರಿಯೆಂದು. ಹಿರಿಯರು ಆಯ್ಕೆ ಮಾಡಿದರೆಂದೋ, ತಮಗೆ ಇಷ್ಟವಾದರೆಂದೋ ಅವಸರದ ತೀರ್ಮಾನ ತೆಗೆದುಕೊಂಡು ಮದುವೆಯಾದ ನಂತರ ಹೊಂದಾಣಿಕೆ ಆಗದಷ್ಟು ಭಿನ್ನಾಭಿಪ್ರಾಯಗಳುಮೂಡಿ ಅವು ವಿಕೃತ ಹಂತವನ್ನು ಹಿಡಿಯುತ್ತಿರುವ ಸಂದರ್ಭದಲ್ಲಿ ಭಾವನಾರ ನಡೆ ಬಹಳ ಮುಖ್ಯವೆನಿಸುತ್ತದೆ. ವೃತ್ತಿ ಬದುಕಿನಲ್ಲಿ ಸಾಧಿಸಿ, ಆರ್ಥಿಕವಾಗಿ ಸಧೃಡವಾಗಿ ಸಂಬಂಧಗಳನ್ನು ತೂಗಿಸಿಕೊಂಡು ಹೋಗಬಲ್ಲೆ ಎಂದು ದೃಢವಾಗಿ ಅನಿಸಿದಾಗ, ಸರಿಯಾದ ಸಂಗಾತಿ ಸಿಕ್ಕಾಗ ಮಾತ್ರವೇ ಮದುವೆ ಬಗ್ಗೆ ಯೋಚಿಸುವ ಭಾವನಾರಂತ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹಾಗೆಂದು ಇವರ್ಯಾರು ಪುರುಷ ದ್ವೇಷಿಗಳಲ್ಲ. ವಿವಾಹ ಸಂಸ್ಥೆಯೊಳಗಿನ ಅಸಮಾನತೆಯ ಪಿತೃ ಚಿಂತನೆಗಳ ಕಾರಣದಿಂದಲೇ ವಿವಾಹವನ್ನು ಮುಂದೂಡುತ್ತಿದ್ದಾರೆ. ಎಂದ ಮಾತ್ರಕ್ಕೆ ಯಶಸ್ವಿ ದಾಂಪತ್ಯಗಳು ನಮ್ಮ ನಡುವೆ ಇಲ್ಲ ಎಂದಲ್ಲ. ಪರಸ್ಪರ ಕಾಳಜಿ, ಬದ್ಧತೆ, ಗೌರವಗಳನ್ನೆ ಉಸಿರಾಡುತ್ತಿರುವ ಅಸಂಖ್ಯರು ನಮ್ಮ ನಡುವೆ ಇದ್ದಾರೆ. ಅವರಷ್ಟೆ ಇಂದಿನ ಭರವಸೆ.
ಅಸಮಾನತೆಯ ಕಾರಣದಿಂದಲೇ ವಿವಾಹ ಸಂಸ್ಥೆ ಆರೋಗ್ಯಪೂರ್ಣವಾಗಿ ಉಳಿಯಬೇಕಾದರೆ ಇದಕ್ಕೆ ಇರುವುದು ಒಂದೇ ದಾರಿ. ಸಮಾನತೆ, ನಂಬಿಕೆ, ಗೌರವಗಳೇ ಅದರ ಆಧಾರಗಳಾಗಬೇಕು. ನೀನು ಹೊಳೆದರೆ ನಾನು ಹೊಳೆವೆನು, ನೀನು ಬೆಳೆದರೆ ನಾನು ಬೆಳೆವೆನು ಎಂದು ವಿಕಾಸದ ಹಾದಿಯಲ್ಲಿ ಗಂಡು, ಹೆಣ್ಣು ಪರಸ್ಪರರು ನೆರವಾಗಿ ನಿಂತು ಸಾಗಬೇಕು ಅಂತ ಭಾಗೀದಾರಿಕೆ ಮಾತ್ರವೇ ದೀರ್ಘಕಾಲೀನ ಬಾಳಿನ ಸಾರ್ಥಕತೆ ತಂದುಕೊಡುತ್ತದೆ. ಈ ನೆಲೆಯ ಶಿಕ್ಷಣ ಹೆಣ್ಣು ಮತ್ತು ಗಂಡಿಗೆ ದೊರೆತು ಇನ್ನಾದರೂ ವಿವಾಹ ಸಂಸ್ಥೆ ಸಮಾನ ತಳಹದಿಯ ಮೇಲೆ ತನ್ನನ್ನು ಪುನಾರಚಿಸಿಕೊಳ್ಳುವ ಮೂಲಕ ಅರ್ಥಪೂರ್ಣಗೊಳ್ಳಬೇಕಿದೆ. ಪುರುಷ ಚಿಂತನೆಗಳು ಬದಲಾಗಿ ಹೆಣ್ಣು ಬದಕು ಸಹ್ಯಗೊಳ್ಳಬೇಕಿದೆ.
ಡಾ. ಆಶಾ ಬಗ್ಗನಡು
ಲೇಖಕಿ. ತುಮಕೂರು
ಇದನ್ನೂ ಓದಿ- ಕುದಿಯುವರು ಒಳಗೊಳಗೆ ಸ್ವಾತಂತ್ರ್ಯವಿಲ್ಲೆನುತ