ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಬಾಳೇಹೊಸೂರ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭಾರತೀಯ ಜನತಾ ಪಕ್ಷ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರಿಗೆ ಸರಣಿ ಸವಾಲುಗಳನ್ನು ಮುಂದೊಡ್ಡಿದ್ದಾರೆ.
ಕುರುಬ, ರೆಡ್ಡಿ, ಜಂಗಮ, ಅಂಬಿಗ ಹೀಗೆ ಬಹಳಷ್ಟು ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಸಮುದಾಯಕ್ಕೆ ಮೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿರುವುದು ಬಹುಜನರ ನೋವಿಗೆ ಕಾರಣವಾಗಿದೆ ಎಂದಿರುವ ಅವರು ಎಲ್ಲಿಗೆ ಸಾಮಾಜಿಕ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಎತ್ತಿರುವ ಕೆಲವು ಪ್ರಮುಖ ಪ್ರಶ್ನೆಗಳು ಈ ಕೆಳಕಂಡಂತಿವೆ.:
• ಒಂಭತ್ತು ಮಂದಿ ವೀರಶೈವ-ಲಿಂಗಾಯಿತರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಹೋದರೂ ಒಬ್ಬರಿಗೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಯಾಕೆ ನೀಡಲಿಲ್ಲ? ಹಿಂದಿನಿಂದಲೂ ಕೇವಲ ರಾಜ್ಯ ಸಚಿವ ಸ್ಥಾನವನ್ನು ಮಾತ್ರ ಯಾಕೆ ಕೊಟ್ಟುಕೊಂಡು ಬರಲಾಗುತ್ತಿದೆ?
• ಬೆಂಗಳೂರು ದಕ್ಷಿಣದಲ್ಲಿ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಬಹುದಿತ್ತಲ್ಲ? ಯಾಕೆ ಕೊಡಲಿಲ್ಲ? ವೀರಶೈವ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಟಿಕೆಟ್ ಕೊಟ್ಟ ಹಾಗೆ, ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತರಿಗೆ ಯಾಕೆ ಟಿಕೆಟ್ ಕೊಡೋದಿಲ್ಲ?
• ವೀರಶೈವ ಲಿಂಗಾಯಿತರ ಹಾಗು ಇತರ ಸಮುದಾಯಗಳ ಮತಗಳು ಮಾತ್ರ ಬೇಕು, ಅಧಿಕಾರ ಇವರಲ್ಲೇ ಇರಬೇಕು. ಇತರ ಸಮುದಾಯದವರಿಗೆ ಎರಡು ಅಥವಾ ಮೂರು ಅವಧಿಗೆ ಮಾತ್ರ ಅವಕಾಶ. ಆದರೆ ಇವರು ಐದನೇ ಅವಧಿಗೂ ಮುಂದುವರೆಯಬೇಕು. ಇದು ಯಾವ ಸಾಮಾಜಿಕ ನ್ಯಾಯ?
ಎರಡೂ ರಾಜಕೀಯ ಪಕ್ಷಗಳು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಇದು ಮತದಾರರಿಗೆ ಮಾಡುವ ಮೋಸ. ಎರಡೂ ರಾಜಕೀಯ ಪಕ್ಷಗಳ ವಿರುದ್ಧ, ಸ್ವಾರ್ಥ ರಾಜಕಾರಣಿಗಳ ದುರಾಡಳಿತದ ವಿರುದ್ಧ ಸ್ವಾಭಿಮಾನಿಗಳು ಸಾರಿದ ಧರ್ಮಯುದ್ಧವಿದು ಎಂದು ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿದ್ದಾರೆ.
ವೀರಶೈವ ಲಿಂಗಾಯಿತ ಸಮುದಾಯದ ನಾಯಕರನ್ನು ತುಳಿದಾಳುವಲ್ಲಿ ಪ್ರಹ್ಲಾದ ಜೋಷಿಯವರ ಪಾತ್ರ ಎದ್ದು ಕಾಣುತ್ತದೆ. ಹಾವೇರಿಯಲ್ಲಿ ಕೆ.ಎಸ್.ಈಶ್ವರಪ್ಪ ಪುತ್ರನಿಗೇ ಟಿಕೆಟ್ ತಪ್ಪಿಸಿದ್ದೂ ಇದೇ ಜೋಷಿ. 20 ವರ್ಷಗಳ ತಮ್ಮ ಅವಧಿಯಲ್ಲಿ ಜೋಷಿ ಸಾಧನೆ ಜೀರೋ. ಸಮಾಜಗಳನ್ನು, ನಾಯಕರನ್ನು ತುಳಿಯುವುದರಲ್ಲಿ ಮಾತ್ರ ಅವರು ಹೀರೋ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಸುಳ್ಳು ಮಾಹಿತಿ ನೀಡಿ, ಬಿಜೆಪಿ ಕಾರ್ಯಾಲಯ ಉದ್ಘಾಟನೆಗೆ 120 ಮಠಾಧೀಶರನ್ನು ಕರೆಯಿಸಿ ಅವರ ತೇಜೋವಧೆ ನಡೆಸಲಾಯಿತು. ಸ್ವಾರ್ಥಕ್ಕಾಗಿ ಇವರು ಮಠಗಳನ್ನು ರಾಜಕೀಯ ಕೇಂದ್ರಗಳನ್ನಾಗಿ ಮಾಡುತ್ತಿದ್ದಾರೆ. ಲಿಂಗಾಯಿತರು ಮತ್ತು ವೀರಶೈವರ ನಡುವೆ ಒಡಕು ಮೂಡಿಸಲು, ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೋಷಿ ಶಿಷ್ಯರು ಹರಿಬಿಡುತ್ತಿದ್ದಾರೆ. ಆದರೆ ಲಿಂಗಾಯಿತ ವೀರಶೈವರು ಜಾಗೃತರಾಗಿದ್ದಾರೆ ಎಂಬುದು ಈ ಚುನಾವಣೆ ಫಲಿತಾಂಶದ ನಂತರ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಲಿಂಗಾಯಿತರು ಮತ್ತು ಇತರ ಸಮಾಜದವರು ಸತ್ತೂ ಇರಬಾರದು, ಬದುಕಿಯೂ ಇರಬಾರದು ಎಂಬಂತೆ ಮಾಡಲಾಗಿದೆ. ಅದಕ್ಕಾಗಿ ತಾವು ಸ್ವಾಭಿಮಾನದ ಹೋರಾಟ ನಡೆಸುತ್ತಿರುವುದಾಗಿ ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿದ್ದಾರೆ.