ಬೆಂಗಳೂರು: “ಆರ್ಥಿಕ ಶಿಸ್ತಿನಿಂದ ಆಡಳಿತ ನಿರ್ವಹಿಸುತ್ತಿರುವ ರಾಜ್ಯದ ಮೇಲೆ ಆರ್ಥಿಕವಾಗಿ ಗದಾಪ್ರಹಾರ ಮಾಡುವ ಕೇಂದ್ರದ ನೀತಿ ಖಂಡನೀಯ. ಯಾವ ಕಾರಣಕ್ಕೆ ಕರ್ನಾಟಕಕ್ಕೆ ಇಷ್ಟು ಕಡಿಮೆ ಹಣ ನೀಡಿದ್ದೀರಿ? ರಾಜ್ಯದ 200 ತಾಲ್ಲೂಕುಗಳು ಬಡಪೀಡಿತ ಪರಿಸ್ಥಿತಿಯಲ್ಲಿರುವಾಗ ನಯಾಪೈಸೆ ಪರಿಹಾರ ಕೊಡದಿರುವುದು ಯಾವ ಧೋರಣೆ?” ಎಂದು ಕಾನೂನು ಮಂತ್ರಿ ಎಚ್ ಕೆ ಪಾಟೀಲ್ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಂಸದ ಡಿ.ಕೆ.ಸುರೇಶ್ ಅವರು ಪ್ರತ್ಯೇಕ ದಕ್ಷಿಣ ಭಾರತ ಕುರಿತು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಚಿವರು “ಒಕ್ಕೂಟದಲ್ಲಿ ಕೇಂದ್ರ ಸರ್ಕಾರದ ಕುರಿತು ವಿಶ್ವಾಸ ಕುದುರಬೇಕಿತ್ತು. ಆದರೆ ಅದರ ಬದಲಾಗಿ ವಿಶ್ವಾಸವನ್ನು ಕಳೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಯಾವ ರಾಜ್ಯದಲ್ಲಿ ಶ್ರಮವಿದೆ, ಕಷ್ಟಪಟ್ಟು ಹೆಚ್ಚಿನ ಗಳಿಕೆ ಸಾಧಿಸಲಾಗಿದೆ ಅಲ್ಲಿಗೆ ನ್ಯಾಯಯುತವಾದ ಪಾಲನ್ನು ಕೊಡಬೇಕಾದದ್ದು ಒಕ್ಕೂಟ ಸರ್ಕಾರದ ಕರ್ತವ್ಯ. ಅದನ್ನು ನೆರವೇರಿಸದೇ ಕೇವಲ ರಾಜಕೀಯ ಮಾಡುವುದೇ ಆದರೆ ಯಾವ ರೀತಿಯಲ್ಲಿ ರಾಜ್ಯದ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ?” ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.