ರಾಜಕಾರಣಿಗಳ ಹಿಪೋಕ್ರಸಿಯನ್ನು ಜನರು ಅರ್ಥ ಮಾಡಿಕೊಳ್ಳಲೇ ಬೇಕಾದ ತುರ್ತು ಸ್ಥಿತಿಯಲ್ಲಿ ನಾವಿದ್ದೇವೆ. ಮಂಗನ ಕೈಲಿ ಮಾಣಿಕ್ಯ ಎಂಬಂತೆ ಕೆಲವು ಮಂಗಗಳ ಕೈಲಿ ರಾಜಕಾರಣವನ್ನು ಕೊಟ್ಟು ನಾವು ಪರಿತಪಿಸುವಂತಾಗಿದೆ. ಈಗ ನಿರುದ್ಯೋಗಕ್ಕೂ ಕೊನೆ ಇಲ್ಲ, ಅಸಮಾನತೆಗೂ ಕೊನೆಯಿಲ್ಲ, ಬಹುತ್ವಕ್ಕೂ ಸಹ ರಕ್ಷಣೆ ಇಲ್ಲದಂತಾಗಿದೆ – ರೇಶ್ಮಾ ಗುಳೇದಗುಡ್ಡಾಕರ್, ಕವಯಿತ್ರಿ.
ಹಿರಿಯ ಲೇಖಕಿ ಹಾಗೂ ಹೋರಾಟಗಾರ್ತಿ ಬಾನು ಮುಷ್ತಾಕ್ ಅವರಿಗೆ ನೀಡಿದ ದಸರಾ ಉದ್ಘಾಟನೆಯ ಆಹ್ವಾನ ಕುರಿತು ಬಂದಿರುವ ವಿರೋಧಗಳನ್ನು ನೋಡಿದರೆ ರಾಜಕೀಯ ನಾಯಕರಲ್ಲಿ ಎಂತಹ ಕೊಳಕು ಮನಸ್ಥಿತಿಗಳು ಇವೆ ಎಂಬುದು ಅಸಹ್ಯ ತರಿಸುವಂತಿದೆ.
ಚುನಾವಣೆ ಬಂದಾಗ ಜನಗಳನ್ನು ದನಗಳಂತೆ ಲೆಕ್ಕ ಹಾಕಿ ಎಲ್ಲ ವರ್ಗದವರಿಂದಲೂ ವೋಟನ್ನು ಹಾಕಿಸಿಕೊಳ್ಳುವ ರಾಜಕಾರಣಿಗಳಿಗೆ ದಸರಾ ಉದ್ಘಾಟನೆ ಆಗುವಾಗ ಮಾತ್ರ ಬಾನು ಮುಷ್ತಾಕ್ ಅವರು ಅಲ್ಪಸಂಖ್ಯಾತರು, ಮುಸ್ಲಿಮರು ಎಂದು ಕಾಣಿಸಿದರೆ?. ಸಮುದಾಯಗಳಲ್ಲಿ ಭೇದವನ್ನು ಹುಡುಕುತ್ತಾ ಆ ಸಮುದಾಯದ ಒಗ್ಗಟ್ಟನ್ನು ಛಿದ್ರ ಮಾಡುತ್ತಾ ಭಾರತದ ಅಸ್ಮಿತೆ ಹಾಗೂ ಬಹುತ್ವಕ್ಕೆ ಕಳಂಕ ತರುವ ಈ ಜನಪ್ರತಿನಿಧಿಗಳಿಂದ ನಿಜಕ್ಕೂ ನಮ್ಮ ನಾಡಾಗಲಿ ದೇಶವಾಗಲಿ ಉನ್ನತ ವರ್ಗಕ್ಕೆ ಏರುವುದಿಲ್ಲ. ವಿರೋಧದ ನಿಟ್ಟಿನಲ್ಲಿ ನೋಡುವುದಾದರೆ ವಿರೋಧಪಕ್ಷಗಳಿಗೆ ಹಾಗೂ ಜನ ಪ್ರತಿನಿಧಿಗಳು ಎನಿಸಿಕೊಂಡವರಿಗೆ ರಾಜ್ಯದಲ್ಲಿ ವಿರೋಧಿಸಲು ಹಲವಾರು ವಿಚಾರಗಳಿವೆ.
ಕ್ರಿಮಿನಲ್ ಆಪಾದನೆ ಉಳ್ಳವರು, ಬೆಟ್ಟಿಂಗ್ ದಂಧೆ , ಅತ್ಯಾಚಾರಿಗಳು, ನಾಡಿನ ನೆಲವನ್ನು ಕಾಡನ್ನು ಜಲವನ್ನು ಬೇಕೆಂದಾಗ ಮಾರಿಕೊಂಡು ಹಣ ಮಾಡಿಕೊಳ್ಳುವ ಖದೀಮ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ಯಾಕೆ ವಿರೋಧವಿಲ್ಲ?
ಹಾಗೆ ಖಾಸಗಿ ಕ್ರೀಡೆಯ ವಿಜಯ ಒಂದನ್ನು ಅಸಾಮಾನ್ಯ ವಿಶ್ವಮಾನ್ಯ ವಿಜಯವನ್ನಾಗಿ ಮಾಡಲು ಹೋಗಿ ಜನರ ಸಾವಿಗೆ ಕಾರಣರಾದವರ ಬಗ್ಗೆ ಯಾಕೆ ಇಂದಿನವರೆಗೂ ವಿರೋಧವನ್ನಾಗಲಿ ಚರ್ಚೆಯನ್ನಾಗಲೀ ಮಾಡುತ್ತಿಲ್ಲ?
ಕುಂಭಮೇಳವನ್ನು ಮಹಾ ಕುಂಭಮೇಳವನ್ನಾಗಿ ಮಾಡಿ ಅದನ್ನು ವಾಣಿಜ್ಯ ಚಟುವಟಿಕೆಗಳನ್ನಾಗಿ ಮಾಡಿಕೊಂಡು ದೇವರ ಹೆಸರಿನಲ್ಲಿ ಮುಗ್ಧ ಜನರು ಕಾಲ್ತುಳಿತ ಎಂಬ ಕಾರಣಕ್ಕೆ ಪ್ರಾಣವನ್ನು ಕಳೆದುಕೊಂಡಾಗ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಹಾಗೂ ಅಲ್ಲಿದ್ದ ಆರೋಗ್ಯಕರವಾದ ವ್ಯವಸ್ಥೆಯ ಬಗ್ಗೆ ಯಾಕೆ ವಿರೋಧ ಮಾಡಲಿಲ್ಲ ? ಮತ್ತು ಅಲ್ಲಿನ ಸೌಲಭ್ಯಗಳಿಗೆ ಜನರು ಹತ್ತು ಪಟ್ಟು ಹೆಚ್ಚು ಹಣವನ್ನು ತೆತ್ತು ಬಂದಾಗ ಅಲ್ಲಿಯ ವ್ಯಾಪಾರೀಕರಣದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ?.
ಹಾಗೂ ಇಂದಿಗೂ ಪುಟ್ಟ ಮಕ್ಕಳು, ಹೆಣ್ಣು ಮಕ್ಕಳು, ವಿಧವೆಯರು, ನಿರ್ಗತಿಕರು, ವೃದ್ಧರು ಹೀಗೆ ಎಲ್ಲರ ಮೇಲೂ ಆಗುತ್ತಿರುವ ಅತ್ಯಾಚಾರ ಅನಾಚಾರಗಳ ಕುರಿತು ವಿರೋಧ ಪಕ್ಷ ಯಾಕೆ ಚಕಾರವನ್ನೂ ಎತ್ತುತ್ತಿಲ್ಲ? .
ಹಾಸನದಲ್ಲಿ ನಡೆದ ಅಮಾನುಷ ಘಟನೆಗಳಿಂದ ಪ್ರಜ್ವಲ್ ರೇವಣ್ಣನಿಗೆ ಕೇವಲ ಒಂದು ಕೇಸಿಗೆ ಸಂಬಂಧಪಟ್ಟಂತೆ ಮಾತ್ರ ಶಿಕ್ಷೆಯಾಗಿದೆ ಆದರೆ ಆತನ ಮೇಲೆ ಇರುವ ಕೇಸುಗಳು ಹಲವಾರು ಅಲ್ಲದೆ ಆ ಪೆನ್ ಡ್ರೈವ್ ಅನ್ನು ಹಂಚಿದವರು ಯಾರು ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ ಇದನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ? .
ಇದನ್ನೂ ಓದಿ- ಬಾನುವೂ – ಭುವನೇಶ್ವರಿಯೂ
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಮೂಲಸೌಕರ್ಯದ ಕೊರತೆ ದೇಶದ ತುಂಬಾ ಇದೆ. ವಿದ್ಯಾಭ್ಯಾಸ ಎನ್ನುವುದು ಸಹ ವಾಣಿಜ್ಯದ ರೂಪ ಪಡೆದು ಯುಗಗಳೇ ಕಳೆದಿದ್ದರೂ ಅದನ್ನು ಯಾರು ಪ್ರಶ್ನಿಸುತ್ತಿಲ್ಲ. ಹಲವು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಜನಪ್ರತಿನಿಧಿಗಳು ಹಾಗೂ ಮಂತ್ರಿಗಳ ಒಡೆತನ ದಲ್ಲಿರುತ್ತವೆ, ಅಲ್ಲಿ ಯಾವ ಜನಸಾಮಾನ್ಯರ ಮಕ್ಕಳು ಓದಲು ಸಾಧ್ಯವೇ ಆಗುವುದಿಲ್ಲ. ಇದನ್ನು ಯಾಕೆ ವಿರೋಧಿಸುತ್ತಿಲ್ಲ ಹಾಗೂ ಪ್ರಶ್ನೆ ಮಾಡುತ್ತಿಲ್ಲ?
ಇಂದು ಮಧ್ಯಮ ವರ್ಗದ ದೊಡ್ಡ ಬಡಿದಾಟವೇ ಮಕ್ಕಳ ವಿದ್ಯಾಭ್ಯಾಸ. ಈ ವಿದ್ಯಾಭ್ಯಾಸವೇ ದಿನ ದಿನಕ್ಕೂ ಗಗನ ಕುಸುಮವಾಗುತ್ತಿದೆ. ಖಾಸಗಿ ಒಡೆತನದಲ್ಲಿ ಸಿಲುಕಿರುವ ಶಿಕ್ಷಣವು ಸರ್ಕಾರಿ ಶಾಲೆಗಳನ್ನು ಅಧೋಗತಿಗೆ ತಂದಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಗತಿ ಗೋಳನ್ನು ಕೇಳುವವರಿಲ್ಲ. ಸರ್ಕಾರಿ ಹುದ್ದೆ ಎಲ್ಲರಿಗೂ ಬೇಕು ಆದರೆ ಸರ್ಕಾರಿ ಶಾಲೆಗಳಾಗಲಿ ಸರ್ಕಾರಿ ಆಸ್ಪತ್ರೆಗಳಾಗಲಿ ಇಲ್ಲ? ! .
ಇದನ್ನೂ ಓದಿ- ಬಾನು ಹೇಳಿದ್ದರಲ್ಲಿ ತಪ್ಪೇನಿದೆ?
ಕೂಲಿ ಕಾರ್ಮಿಕರು ಬಡ ವರ್ಗದ ಜನರಿಗೆ ಸರ್ಕಾರಿ ಆಸ್ಪತ್ರೆಯೇ ಆಧಾರ. ಆದರೆ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ನೋಡಿದಾಗ ಆಘಾತವಾಗುತ್ತದೆ. ಅಂದರೆ ಆರೋಗ್ಯವಂತ ಜನ ಸಮುದಾಯವನ್ನು ನಾವು ನೋಡಲು ಇಂತಿಗೂ ಸಾಧ್ಯವಾಗುತ್ತಿಲ್ಲ. ದಿನ ದಿನಕ್ಕೂ ಚಿತ್ರ ವಿಚಿತ್ರ ರೋಗಗಳಿಂದ ಯುವಜನತೆ ಬಳಲುತ್ತಿದೆ. ಈ ಬಗ್ಗೆ ಯಾಕೆ ಚರ್ಚೆಗಳಾಗಲೀ ಪ್ರಶ್ನೆಗಳಾಗಲೀ ಕಂಡುಬರುತ್ತಿಲ್ಲ? ವಿಪರ್ಯಾಸವೆಂದರೆ ಇವೆಲ್ಲ ಸಮಸ್ಯೆಗಳನ್ನು ಬದಿಗೆ ಸರಿಸಿ ಅನಗತ್ಯ ವಿಚಾರಗಳನ್ನು ಚರ್ಚಿಸಲು ಮಾತ್ರ ವಿರೋಧಪಕ್ಷಗಳು ಸಕ್ರಿಯವಾಗಿವೆ.
ವಿರೋಧಗಳು, ಚರ್ಚೆಗಳು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಹಾಯಕವಾಗಬೇಕು ಆದರೆ ಸಮಸ್ಯೆಗಳನ್ನು ಚರ್ಚಿಸದೆ ಪ್ರತಿಷ್ಠೆಗಾಗಿ ಜಾತಿಗಾಗಿ ಬಡಿದಾಡಿಕೊಂಡು ಕೋಮುವಾದವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಜನರನ್ನು ಆಳುತ್ತಿರುವ ರಾಜಕಾರಣಿಗಳ ಕೊಳಕು ಮನಸ್ಥಿತಿಗಳೇ ಕಾಣಸಿಗುತ್ತಿವೆ.
ಇದನ್ನೂ ಓದಿ– ಎದೆಯ ಹಣತೆಯನ್ನು ಆರಿಸುತ್ತಿರುವ ಕೋಮುವಾದಿ ರಾಜಕಾರಣ
ರಾಜಕಾರಣಿಗಳ ಈ ಹಿಪೋಕ್ರಸಿಯನ್ನು ಜನರು ಅರ್ಥ ಮಾಡಿಕೊಳ್ಳಲೇ ಬೇಕಾದ ತುರ್ತು ಸ್ಥಿತಿಗೆ ಇಂದು ಬಂದಿದ್ದೇವೆ. ಮಂಗನ ಕೈಲಿ ಮಾಣಿಕ್ಯ ಎಂಬಂತೆ ಕೆಲವು ಮಂಗಗಳ ಕೈಲಿ ರಾಜಕಾರಣವನ್ನು ಕೊಟ್ಟು ನಾವು ಪರಿತಪಿಸುವಂತಾಗಿದೆ. ಈಗ ನಿರುದ್ಯೋಗಕ್ಕೂ ಕೊನೆ ಇಲ್ಲ, ಅಸಮಾನತೆಗೂ ಕೊನೆಯಿಲ್ಲ, ಬಹುತ್ವಕ್ಕೂ ಸಹ ರಕ್ಷಣೆ ಇಲ್ಲದಂತಾಗಿದೆ.
ಆದರೆ ಬಾನು ಮೇಡಂ ಅವರು ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಗ ಇಡೀ ದೇಶವೇ ಅವರನ್ನು ಶ್ಲಾಘಿಸಿದಾಗ ಅವರು ದಸರಾ ಉದ್ಘಾಟನೆ ಮಾಡಬಾರದು, ಚಾಮುಂಡಿ ಬೆಟ್ಟಕ್ಕೆ ಹತ್ತಬಾರದು ಎಂಬ ಹೇಳಿಕೆಗಳು ವಿರೋಧ ಪಕ್ಷಗಳ, ಅವರ ಹಿಂಬಾಲಕರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಇಂಥಾ ವಿರೋಧ ಪಕ್ಷಗಳು ಯಾ ರಾಜಕಾರಣಿಗಳಿಂದ ನಿಜಕ್ಕೂ ಕರ್ನಾಟಕ ಪಡೆದುಕೊಳ್ಳುವುದಾದರೂ ಏನಿದೆ ಎಂದು ನಾವು ಯೋಚಿಸಿ ನೋಡಬೇಕಿದೆ.
ರೇಶ್ಮಾ ಗುಳೇದಗುಡ್ಡಾಕರ್
ಯುವ ಲೇಖಕಿ
ಇದನ್ನೂ ಓದಿ- ಕನ್ನಡ ಭಾಷೆಯ ವಿವಾದದಲ್ಲಿ ಬಾನು ಮುಷ್ತಾಕ್