ಚನ್ನಪಟ್ಟಣ ಚಕ್ರವ್ಯೂಹ ಭೇದಿಸುವವರು ಸೈನಿಕನೋ? ಅಭಿಮನ್ಯುವೋ?

Most read

ಉಪಚುನಾವಣೆ ನಡೆಯುತ್ತಿರುವ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರ ಚನ್ನಪಟ್ಟಣ. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಎನ್ ಡಿಎ ಮೈತ್ರಿ ಕೂಟದ ಹುರಿಯಾಳಾಗಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ.
ಬೊಂಬೆಗಳ ನಾಡಿನ ಅಧಿಪತಿ ಸೈನಿಕನೋ ಅಥವಾ ಅಭಿಮನ್ಯುವೋ ಎಂದು ಕಾದು ನೋಡಬೇಕಿದೆ. ಆದರೂ ಇಲ್ಲಿ ಚುನಾವಣೆ ನಡೆಯುತ್ತಿರುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿಯವರ ನಡುವೆಯೇ ಎನ್ನುವುದು ಬಹಿರಂಗ ಸತ್ಯ. ಇಬ್ಬರಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿಕೆ ಸುರೇಶ್ ಸೋಲಿನ ಸೇಡನ್ನು ತೀರಿಸಿಕೊಳ್ಳುವುದು ಶಿವಕುಮಾರ್ ಅವರಿಗೆ ಮುಖ್ಯವಾಗಿದೆ. ಹಾಗೆಯೇ ಸತತ ಎರಡು ಸೋಲು ಕಂಡಿರುವ ಪುತ್ರ ನಿಖಿಲ್ ಅವರನ್ನು ದಡ ಮುಟ್ಟಿಸುವುದು ಕುಮಾರಸ್ವಾಮಿ ಅವರಿಗೆ ಅಷ್ಟೇ ಮುಖ್ಯವಾಗಿದೆ.

ನಟರ ನಡುವಿನ ಚುನಾವಣೆ ಎನ್ನಬಹುದೇ ?
ಇಬ್ಬರೂ ಸ್ಯಾಂಡಲ್ ವುಡ್ ನ ಹಿನ್ನೆಲೆ ಹೊಂದಿರುವ
ನಟರು. ರಾಜಕಾರಣ ಪ್ರವೇಶಕ್ಕೂ ಮುನ್ನ ನಟರಾಗಿ ಪರಿಚಟವಾಗಿದ್ದರು.

ಯೋಗೇಶ್ವರ್ ಎಂಬತ್ತರ ದಶಕದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ರವಿಚಂದ್ರನ್ ಅಭಿನಯದ ರಣಧೀರ ಚಿತ್ರದಲ್ಲಿ ಜಗ್ಗೇಶ್ ಜತೆ ಅಭಿನಯಿಸಿದ್ದರು. 2000 ದಲ್ಲಿ ತೆರೆಕಂಡ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಮತ್ತು 2002 ರಲ್ಲಿ ತೆರೆಕಂಡ ಸೈನಿಕ ಇವರಿಗೆ ಹೆಸರು ತಂದುಕೊಟ್ಟ ಚಿತ್ರಗಳು.

ಸಿನಿಮಾದಲ್ಲಿ ತಿರುವುಗಳು ಸಹಜ. ಹಾಗಿದ್ದರೆ ಮಾತ್ರ ಸಿನಿಮಾ ಓದುತ್ತದೆ. ಯೋಗೇಶ್ವರ್ ರಾಜಕೀಯ ಜೀವನವೂ ತಿರುವುಗಳಿಂದ ಕೂಡಿದೆ. ಒಂದೊಂದು ಚುನಾವಣೆಯಲ್ಲೂ, ಒಂದೊಂದು ಪಕ್ಷ, ಒಂದೊಂದು ಚಿಹ್ನೆಯ ಅಡಿಯಲ್ಲಿ ಗೆದ್ದಿದ್ದಾರೆ.

ಕುಮಾರಸ್ವಾಮಿ ಕುಟುಂಬದ ಮೂವರ ವಿರುದ್ಧವೂ ಸೆಣಸಿರುವುದು ಯೋಗೇಶ್ವರ್ ವಿಶೇಷ. ಅನಿತಾ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರೆ ಕುಮಾರಸ್ವಾಮಿ ವಿರುದ್ಧ ಎರಡು ಬಾರಿ ಸೋತಿದ್ದಾರೆ. ಇದೀಗ ಅವರ ಪುತ್ರನ ವಿರುದ್ಧ ಸೆಣಸಾಟ.

ಅಪ್ಪ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದರೂ ನಿಖಿಲ್ ಹೆಸರು ಕೇಳಿದವರು ಕಡಿಮೆ. 2006 ರಲ್ಲಿ ಚರ್ಚ್ ಸ್ಟ್ರೀಟ್ ನ ಹೋಟೆಲ್ ವೊಂದರಲ್ಲಿ ಗದ್ದಲ ಎಬ್ಬಿಸಿದಾಗ ಮೊದಲ ಬಾರಿ ಇವರ ಪರಿಚಯವಾಗಿತ್ತು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.

2016 ರಲ್ಲಿ ಜಾಗ್ವಾರ್ ಸಿನಿಮಾ ತೆರೆ ಕಾಣುವವರೆಗೂ ಅವರು ತೆರೆಮರೆಯಲ್ಲೇ ಉಳಿದಿದ್ದರು. ಅಷ್ಟಾಗಿ ಪರಿಚಯ ಇರಲಿಲ್ಲ. ನಂತರ ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ನಿರ್ವಹಿಸಿದ್ದರು.
ನಂತರ ನಡೆದ ಮಂಡ್ಯ ಲೋಕಸಭೆ ಮತ್ತು ಕಳೆದ ವರ್ಷ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಎರಡು ಸರಣಿ ಸೋಲುಗಳಿಂದ ಕಂಗೆಟ್ಟಿದ್ದರು. ಯುವ ಜೆಡಿಎಸ್ ಅಧ್ಯಕ್ಷರಾಗಿದ್ದರೂ ಪಕ್ಷ ಕಟ್ಟುವ ಕೆಲಸ ಮಾಡಲಿಲ್ಲ ಎಂಬ ಟೀಕೆಗಳಿವೆ

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಬೆಳಕಿಗೆ ಬಂದ ನಂತರ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಜತೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಮೂರನೇ ಚುನಾವಣೆ ಕೈ ಹಿಡಿಯುವುದೇ ? ಇಷ್ಟು ಬೇಗ ನಿರ್ಧಾರಕ್ಕೆ ಬರಲು ಅಸಾಧ್ಯ.

More articles

Latest article