ವಯನಾಡು ದುರಂತಗಳಿಗೆ ಯಾರು ಹೊಣೆ ?

Most read

ನಿಸರ್ಗದೊಡನೆ ಬದುಕುವುದನ್ನು ಮರೆತ ಆಧುನಿಕ ಸಮಾಜ ಅದರೊಡನೆ ಗುದ್ದಾಡುತ್ತಿದೆ. ನಾವೀಗ ಪ್ರಶ್ನಿಸಿಕೊಳ್ಳಬೇಕಿರುವುದು ನಮ್ಮ ಅಭಿವೃದ್ಧಿ ಮಾದರಿಗಳನ್ನು, ಅವುಗಳನ್ನು ಅಪ್ಪಿಕೊಳ್ಳುವ ರಾಜಕೀಯವನ್ನು ಹಾಗೂ ನಿಸರ್ಗದ ಮೇಲೆ ಯಜಮಾನಿಕೆ ಸ್ಥಾಪಿಸುವ ಬಂಡವಾಳಶಾಹಿಯನ್ನು- ನಾ ದಿವಾಕರ, ಚಿಂತಕರು.

ಡಿಜಿಟಲ್‌ ಯುಗದ ಬಂಡವಾಳಶಾಹಿ-ಮಾರುಕಟ್ಟೆ ಆರ್ಥಿಕತೆಯನ್ನು ಅನುಸರಿಸುತ್ತಿರುವ ಭಾರತವೂ ಸಹ ನಿಸರ್ಗವನ್ನು ಶೋಷಣೆಗೊಳಪಡಿಸಿ ಅಭಿವೃದ್ಧಿ ಸಾಧಿಸುವ ಇದೇ ಮಾರ್ಗದಲ್ಲಿ ಸಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಸಮಾಜದ ಮುಂದೆ ಎರಡು ಆಯ್ಕೆಗಳಿವೆ. ಮೊದಲನೆಯದು, ಮನುಷ್ಯ ಸಮಾಜದ ಮತ್ತು ಸಕಲ ಜೀವಚರಗಳ ಉಳಿವಿಗೆ ಅತ್ಯವಶ್ಯವಾದ ಪ್ರಕೃತಿದತ್ತ ಸಂಪನ್ಮೂಲಗಳನ್ನು, ಅರಣ್ಯ ಸಂಪತ್ತನ್ನು, ಜಲಸಂಪನ್ಮೂಲಗಳನ್ನು ಹಾಗೂ  ವಿಪುಲವಾಗಿರುವ ಹಸಿರು-ಗುಡ್ಡಗಾಡುಗಳನ್ನು ಕೇವಲ ತನ್ನ ಹಿತಕ್ಕಾಗಿ, ಅನುಕೂಲಕ್ಕಾಗಿ ಬಳಸಿಕೊಳ್ಳುವ ಮೂಲಕ ನಿಸರ್ಗದೊಡಲನ್ನು ಬರಿದಾಗಿಸುವುದು. ಎರಡನೆಯದು, ಈ ಅಮೂಲ್ಯ ಸಂಪತ್ತನ್ನು ಭವಿಷ್ಯದ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿಯ ಹಾದಿಯನ್ನು ತುಳಿಯುವುದು. ಭಾರತದ ಆಳ್ವಿಕೆಯ-ಆರ್ಥಿಕ ನೀತಿಗಳನ್ನು ಗಮನಿಸಿದರೆ ನಮ್ಮ ಸಮಾಜ ಮೊದಲನೆಯ ಆಯ್ಕೆಯತ್ತ ಸಾಗಿರುವುದು ಸ್ಪಷ್ಟವಾಗುತ್ತದೆ.

ಭಾರತ ಅನುಸರಿಸುತ್ತಿರುವ ಬಂಡವಾಳಶಾಹಿ ಆರ್ಥಿಕ ಮಾದರಿಯಡಿ ನಿಸರ್ಗದ ಸಕಲ ಸಂಪನ್ಮೂಲಗಳನ್ನೂ ಮಾರುಕಟ್ಟೆಯ ಸರಕುಗಳಂತೆಯೇ ಭಾವಿಸಲಾಗುತ್ತದೆ. ಭೂತಳದಲ್ಲಿರುವ ಖನಿಜ ಸಂಪತ್ತಿನಿಂದ ಹಿಮಾಲಯದೆತ್ತರದ ಹಸಿರು ಪ್ರದೇಶಗಳವರೆಗೂ ಲಭ್ಯವಿರುವ ಪ್ರಕೃತಿದತ್ತ ಸಂಪತ್ತನ್ನು ತಕ್ಷಣದ ಉಪಯೋಗಕ್ಕಾಗಿ ಬಳಸಿಕೊಳ್ಳುವ ತವಕದಲ್ಲಿ, ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯು ನಿಸರ್ಗದೊಡಲನ್ನು ಬರಿದುಮಾಡುತ್ತಲೇ ಇದೆ. ಮಾರುಕಟ್ಟೆಯ ದೃಷ್ಟಿಯಲ್ಲಿ ಮಾನವ ಜೀವವೂ ಒಂದು ಸರಕಾಗಿಯೇ ಕಾಣುವುದರಿಂದ, ಪ್ರಕೃತಿ ವಿಕೋಪಗಳಿಗೆ ತುತ್ತಾಗುವ ಸಾವಿರಾರು ಅಮಾಯಕರ ಸಾವುಗಳು ಭವಿಷ್ಯಕ್ಕಾಗಿ ಮಾಡಿದ ತ್ಯಾಗ-ಬಲಿದಾನದಂತೆಯೇ ಕಾಣುತ್ತದೆ. ಅಭಿವೃದ್ಧಿ ಯಾರಿಗಾಗಿ, ಏತಕ್ಕಾಗಿ ಎಂಬ ಪ್ರಶ್ನೆಯಾಗಲೀ, ಅಭಿವೃದ್ಧಿ ಮಾದರಿಯ ಸಾಮಾಜಿಕ ಬಾಧ್ಯತೆಗಳಾಗಲೀ ಬಂಡವಾಳಶಾಹಿಯನ್ನು ಕಾಡುವುದೇ ಇಲ್ಲ. ಈ ಆರ್ಥಿಕ ನೀತಿ ನಿರೂಪಕರು ಅಭಿವೃದ್ಧಿಯ ಆರ್ಥಿಕ ವೆಚ್ಚವನ್ನು (Economic cost )ಪರಿಗಣಿಸುತ್ತಾರೆಯೇ ಹೊರತು ಸಾಮಾಜಿಕ ವೆಚ್ಚವನ್ನು (Social Cost) ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದರ ನೇರ ಪರಿಣಾಮವನ್ನು ಭೂಕುಸಿತ-ಪ್ರವಾಹಗಳ ಭೀಕರ ದುರಂತಗಳಲ್ಲಿ ಎದುರಿಸುತ್ತಿದ್ದೇವೆ.

ಮಾಧವ ಗಾಡ್ಗಿಲ್‌ ಸಮಿತಿಯ ವರದಿ ಎಂದೇ ದಾಖಲಾಗಿರುವ ಈ ಶಿಫಾರಸುಗಳಲ್ಲಿ ಗಾಡ್ಗಿಲ್‌ ಅವರು ಪಶ್ಚಿಮ ಘಟ್ಟಗಳು ಎದುರಿಸುತ್ತಿರುವ ಅಪಾಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಸರ್ಕಾರಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನೂ ಸೂಚಿಸಿದ್ದಾರೆ. ಈಗ ಸಂಭವಿಸಿರುವ ಭೀಕರ ಭೂಕುಸಿತದ ದುರಂತಕ್ಕೆ ಪಶ್ಚಿಮ ಘಟ್ಟಗಳಲ್ಲಿ ಬಡ ಜನತೆ ಮನೆ ಕಟ್ಟಿರುವುದು ಕಾರಣವಲ್ಲ, ಬದಲಾಗಿ ರಸ್ತೆ, ರೈಲು ಮಾರ್ಗ ಮತ್ತು ಸಿರಿವಂತರ ವಸತಿ ಬಡಾವಣೆಗಳ ಎಗ್ಗಿಲ್ಲದ ನಿರ್ಮಾಣ ಕಾರಣ ಎಂದು ಮಾಧವ್‌ ಗಾಡ್ಗಿಲ್‌ ವಿಷಾದ ವ್ಯಕ್ತಪಡಿಸುತ್ತಾರೆ. ಪುಣೆಯ ಭೂಗರ್ಭಶಾಸ್ತ್ರಜ್ಞರೊಬ್ಬರು ನಡೆಸಿರುವ ಅಧ್ಯಯನದ ಅನುಸಾರ  ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಕಳೆದ ಶತಮಾನದಲ್ಲಿ ಭೂಕುಸಿತ ಪ್ರಕರಣಗಳು ನೂರು ಪಟ್ಟು ಹೆಚ್ಚಾಗಿವೆ.

2011 ಮಾಧವ ಗಾಡ್ಗಿಲ್‌ ಸಮಿತಿಯ ವರದಿಯಲ್ಲಿ ಇಡೀ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಎಂದು ಪರಿಗಣಿಸಲು ಶಿಫಾರಸು ಮಾಡಿದ್ದು, ಎರಡು ಪರಿಸರ ಸೂಕ್ಷ್ಮ ವಲಯಗಳನ್ನು (ಇಎಸ್‌ಝಡ್)‌  ಗುರುತಿಸಲಾಗಿತ್ತು. ಇಎಸ್‌ಝಡ್‌-1ರಲ್ಲಿ ಕಲ್ಲುಗಣಿಗಾರಿಕೆ ಮತ್ತು ಅಪಾಯಕಾರಿ ಕೈಗಾರಿಕೆಗಳಿಗೆ ಅವಕಾಶವೀಯ ಕೂಡದು ಎಂದು ಹೇಳಲಾಗಿತ್ತು. ಕಲ್ಲು ಗಣಿಗಾರಿಕೆ ಇರುವ ಪ್ರದೇಶಗಳಲ್ಲಿ ಕ್ವಾರಿಗಳು ಮಾನವ ವಸತಿಗಳಿಂದ ಕನಿಷ್ಠ 100 ಮೀಟರ್‌ ದೂರದಲ್ಲಿರಬೇಕು ಎಂದು ಹೇಳಲಾಗಿತ್ತು. ಆದರೆ ಈ ವರದಿಯನ್ನು ನಿರ್ಲಕ್ಷಿಸಿ ಸರ್ಕಾರವು ಅಂತರವನ್ನು 50 ಮೀಟರ್‌ಗೆ ಇಳಿಸಿತ್ತು. ಮಾಧವ ಗಾಡ್ಗಿಲ್‌ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ 2013ರಲ್ಲಿ ಕಸ್ತೂರಿ ರಂಗನ್‌ ಸಮಿತಿಯನ್ನು ನೇಮಿಸಿ ಈ ಸಮಿತಿಯು ಇಎಸ್‌ಝಡ್‌ ವ್ಯಾಪ್ತಿಯನ್ನು ಶೇಕಡಾ 37ರಷ್ಟು ಪ್ರದೇಶಕ್ಕೆ ಸೀಮಿತಗೊಳಿಸಿತ್ತು.  ಕಸ್ತೂರಿ ರಂಗನ್‌ ವರದಿಯಲ್ಲೂ ಸಹ ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳ 120ಕ್ಕೂ ಹೆಚ್ಚು ಹಳ್ಳಿಗಳನ್ನು, ಅಂದರೆ 13,108 ಚದರ ಕಿಮೀ ವ್ಯಾಪ್ತಿಯ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಪರಿಗಣಿಸಲು ಶಿಫಾರಸು ಮಾಡಲಾಗಿತ್ತು. ಈ ಪ್ರದೇಶಗಳಲ್ಲಿ ಕೈಗಾರಿಕೆ, ಗಣಿಗಾರಿಕೆ, ಕ್ವಾರಿ, ಮರಗಳ ಹನನ, ಕಟ್ಟಡ ನಿರ್ಮಾಣ, ಜನವಸತಿ ನಿರ್ಮಾಣ ಮೊದಲಾದ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಹೇಳಲಾಗಿತ್ತು. ಈ ನಿಬಂಧನೆಗಳನ್ನು ಜಾರಿಗೊಳಿಸಲು 2013ರಲ್ಲಿ ಕೇಂದ್ರ ಯುಪಿಎ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿತ್ತು.  ಆದರೆ ಇದಕ್ಕೆ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 9,994 ಚದರ ಕಿಲೋಮೀಟರ್‌ಗೆ ಇಳಿಸಲಾಯಿತು .

ಕೇರಳದಲ್ಲಿ ಈವರೆಗೂ ಸಂಭವಿಸಿರುವ ಭೂಕುಸಿತ-ಪ್ರವಾಹದ ಪ್ರಕರಣಗಳ ಪೈಕಿ ಶೇಕಡಾ 59ರಷ್ಟು 2015-22ರ ಅವಧಿಯಲ್ಲಿ ಸಂಭವಿಸಿವೆ. 2013 ರಿಂದ 2023ರ ಅವಧಿಯಲ್ಲಿ 270 ಭೂಕುಸಿತದ ಪ್ರಕರಣಗಳು ಸಂಭವಿಸಿದ್ದು, 2018ರ ಘಟನೆಯಲ್ಲಿ 450ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಬಾರಿಯ ದುರಂತಕ್ಕೆ ಈಗಾಗಲೇ 300 ಸಾವುಗಳು ದಾಖಲಾಗಿದ್ದು, 400ಕ್ಕೂ ಹೆಚ್ಚು ಕುಟುಂಬಗಳಿದ್ದ ಮೂರು ಗ್ರಾಮಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಈ ಗ್ರಾಮಗಳ ಅವಶೇಷವೂ ಕಾಣದಂತೆ ಸಪಾಟಾಗಿರುವುದು ಪ್ರಕೃತಿ ವಿಕೋಪದ ಕರಾಳತೆಯನ್ನು ತೋರಿಸುತ್ತದೆ. ಜುಲೈ 30ರಂದು ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಮುಂಡಕ್ಕೈ, ಚೂರಲ್‌ಮಲೈ, ಅಟ್ಟಮಾಳ ಮತ್ತು ನೂಲ್ಪುಳ ಗ್ರಾಮಗಳನ್ನು ಸರ್ವನಾಶ ಮಾಡಿದೆ. ಇಲ್ಲಿ ಹರಿಯುವ ಚೆಲಿಯಾರ್‌ ನದಿ ಈಗ ಇಬ್ಭಾಗವಾಗಿ ಹರಿಯತೊಡಗಿದ್ದು ಇನ್ನೂ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆಗಳಿವೆ.

ಈ ರೀತಿಯ ಮಾನವ ನಿರ್ಮಿತ ದುರಂತಗಳಿಗೆ ಕರ್ನಾಟಕವೂ ಹೊರತಾಗಿಲ್ಲ ಎನ್ನುವುದು ಗಮನಿಸತಕ್ಕ ಅಂಶ. 2009-21ರ ಅವಧಿಯಲ್ಲಿ ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ 972 ಭೂಕುಸಿತ ಘಟನೆಗಳು ಸಂಭವಿಸಿವೆ. ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗುವ ಪಶ್ಚಿಮ ಘಟ್ಟಗಳ ಶೇಕಡಾ 15.3ರಷ್ಟು ಭೂಪ್ರದೇಶ ಕರ್ನಾಟಕದಲ್ಲಿದೆ. ಕೆಲವೇ ವರ್ಷಗಳ ಹಿಂದೆ ‍ಕೊಡಗು ಇದೇ ರೀತಿಯ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವುದು ನಮ್ಮ ಕಣ್ಣ ಮುಂದಿದೆ. ಈ ಭೀಕರ ದುರಂತದಲ್ಲಿ 20 ಮಂದಿ ಸಾವಿಗೀಡಾಗಿ, 900ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿದ್ದವು. ಭೂ ವಿಜ್ಞಾನಿಗಳ ಅಭಿಪ್ರಾಯದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಭೂಕುಸಿತಗಳು ಸಂಪೂರ್ಣ ಮಾನವ ನಿರ್ಮಿತ ದುರಂತಗಳೇ ಆಗಿವೆ.

ಅರಣ್ಯ ಒತ್ತುವರಿ, ಘಟ್ಟ ಪ್ರದೇಶಗಳಲ್ಲಿನ ಅಕ್ರಮ ಭೂ ಸ್ವಾಧೀನ ಪ್ರಕ್ರಿಯೆ, ಕಾಫಿ/ಚಹಾ ತೋಟಗಳನ್ನು ವಸತಿ ಬಡಾವಣೆಗಳನ್ನಾಗಿ ಪರಿವರ್ತಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ನಡೆಯುವ ನಿರ್ಮಾಣ ಕಾಮಗಾರಿಗಳು, ಬೆಳೆಯುತ್ತಿರುವ ಮಧ್ಯಮ ವರ್ಗಗಳನ್ನು ಸಂತೃಪ್ತಗೊಳಿಸಲು ಅತ್ಯಾಧುನಿಕ ರೆಸಾರ್ಟ್‌, ಹೋಮ್‌ಸ್ಟೇಗಳ ನಿರ್ಮಾಣ ಮತ್ತು ಇವೆಲ್ಲವನ್ನೂ ತಲುಪಲು ಬೇಕಾಗುವ ಉಕ್ಕು-ಸಿಮೆಂಟು-ಕಾಂಕ್ರೀಟ್‌ ರಸ್ತೆಗಳ ನಿರ್ಮಾಣ ಮತ್ತು ಗಣಿಗಾರಿಕೆ-ಕ್ವಾರಿಗಳು ಇವೆಲ್ಲವೂ ಇಂದು ಪಶ್ಚಿಮ ಘಟ್ಟಗಳನ್ನಷ್ಟೇ ಅಲ್ಲ ಭಾರತದ ನಿಸರ್ಗದ ಒಡಲನ್ನೇ ಬಗೆದು ಬರಿದು ಮಾಡುತ್ತಿವೆ. ಈ ದುರಂತಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ? ಕಾಲಕಾಲಕ್ಕೆ ಭಾರತದ ವಿಜ್ಞಾನಿಗಳು, ಪರಿಸರ ತಜ್ಞರು, ಇಕಾಲಜಿಸ್ಟ್‌ಗಳು, ಭೂಗರ್ಭಶಾಸ್ತ್ರಜ್ಞರು ವೈಜ್ಞಾನಿಕ ಮಾಹಿತಿಗಳನ್ನು ಒದಗಿಸುವ ಮೂಲಕ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುತ್ತಲೇ ಇದ್ದಾರೆ. ಹಿಮಾಲಯ ತಪ್ಪಲಿನ ಜೋಷಿ ಮಠ ಮತ್ತು ಚಾರ್‌ ಧಾಮ್‌ ಪ್ರದೇಶಗಳಿಂದ ದಕ್ಷಿಣದ ಕೇರಳದವರೆಗೂ ಇಂತಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ ಇದು ನಮ್ಮ ಸರ್ಕಾರಗಳ ಕಿವಿಗೆ ಬೀಳುತ್ತಿಲ್ಲ

ಇಲ್ಲಿ ಹೊಣೆ ಯಾರು ಎನ್ನುವುದಕ್ಕಿಂತಲೂ ಈ ದುರಂತಗಳು ಮತ್ತೆಮತ್ತೆ ಏಕೆ ಸಂಭವಿಸುತ್ತಿವೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ? ವಯನಾಡಿನ ಭೀಕರ ದುರಂತಕ್ಕೆ ಬಲಿಯಾಗಿರುವ ನೂರಾರು ಜನರು, ಸಾವಿರಾರು ಕುಟುಂಬಗಳು, ಹತ್ತಾರು ಗ್ರಾಮಗಳು ಈ ಆಡಳಿತ ನೀತಿಗಳಿಗೆ ಬಲಿಯಾಗಿರುವ ಅಮಾಯಕರು. ಸತ್ತವರಿಗೆ ಪರಿಹಾರ, ಒಂದೆರಡು ಕಂಬನಿ, ನಾಲ್ಕು ಸಾಲಿನ ಸಂತಾಪದ ಟ್ವೀಟು ಇವೆಲ್ಲವೂ ನಮ್ಮನ್ನು ನಾವು ಸಂತೈಸಿಕೊಳ್ಳುವ ಟೊಳ್ಳು ಭಾವನೆಗಳಷ್ಟೇ. ಕೊಚ್ಚಿ ಹೋಗಿರುವ ಕುಟುಂಬಗಳಿಗೆ ಇದಾವುದೂ ತಲುಪುವುದಿಲ್ಲ. ಹಾಗೂಹೀಗೂ ಬದುಕುಳಿದರೂ ಅವರ ಜೀವನಾಧಾರವನ್ನೇ ಕಳೆದುಕೊಂಡು ಬೀದಿ ಪಾಲಾಗುವ ಸಾವಿರಾರು ಜನತೆಗೆ ಇವೆಲ್ಲವೂ ವ್ಯರ್ಥಾಲಾಪವಷ್ಟೆ.  ಪ್ರಶ್ನಿಸಿಕೊಳ್ಳಬೇಕಿರುವುದು ನಮ್ಮ ಅಭಿವೃದ್ಧಿ ಮಾದರಿಗಳನ್ನು, ಅವುಗಳನ್ನು ಅಪ್ಪಿಕೊಳ್ಳುವ ರಾಜಕೀಯವನ್ನು ಹಾಗೂ ನಿಸರ್ಗದ ಮೇಲೆ ಯಜಮಾನಿಕೆ ಸ್ಥಾಪಿಸುವ ಬಂಡವಾಳಶಾಹಿಯನ್ನು. ರಾಜಕೀಯ ನೀನಾ-ನಾನಾ ಮೇಲಾಟದಲ್ಲಿ ಈ ಅಪರಾಧಗಳೆಲ್ಲವೂ ವಯನಾಡಿನಲ್ಲಿ ಕೊಚ್ಚಿಹೋಗಿರುವ ಕುಟುಂಬಗಳ ಜೊತೆಯಲ್ಲೇ ಸಮಾಧಿಯಾಗಿಬಿಡುತ್ತವೆ. ಮತ್ತೊಂದು ಸಮಿತಿ, ಆಯೋಗ, ವಿಚಾರಣೆಗೆ ಸೀಮಿತವಾಗುವ ಆಡಳಿತ ಕ್ರಮಗಳು ನಾಗರಿಕರಾದ ನಮಗೆ ಅಪ್ಯಾಯಮಾನವಾಗಿ ಕಾಣುತ್ತವೆ. ಆದರೆ ಪ್ರಕೃತಿಗೆ ಇದು ಗೋಚರಿಸದು ಅಲ್ಲವೇ ?

ನಿಸರ್ಗದ ಒಡಲು ಬಗೆದು ಉಂಡವರು ಯಾರೋ, ಪ್ರಕೃತಿಯ ಮುನಿಸಿಗೆ ಬಲಿಯಾಗಿ ಶಾಶ್ವತವಾಗಿ ಒಡಲಿಗೆ ಮರಳುವವರಾರೋ ? ಮತ್ತೊಂದು ವರ್ಷ, ಮತ್ತೊಂದು ಭೂಕುಸಿತ, ಮತ್ತಷ್ಟು ಸಾವುಗಳು, ಮತ್ತದೇ ರಾಗ-ಅದೇ ಹಾಡು. ನಮಗೂ ಅಭ್ಯಾಸವಾಗಿ ಹೋಗಿದೆ ಅಲ್ಲವೇ ?

ನಾ ದಿವಾಕರ

ಚಿಂತಕರು

ಇದನ್ನೂ ಓದಿ-ದೇಶವನ್ನೇ ಸುಡಬಲ್ಲ ದ್ವೇಷವನ್ನು ನಿಗ್ರಹಿಸಲು ಬೇಕಿದೆ ಕಠಿಣ ಕಾನೂನು !!!

More articles

Latest article