ಕಾಶ್ಮೀರಕ್ಕೆ ಭಯೋತ್ಪಾದಕರ ಆತಂಕ ಇದೆ ಎಂದು ಗೊತ್ತಿದ್ದರೂ ಸುಪ್ರಸಿದ್ದ ಪ್ರವಾಸಿ ತಾಣಕ್ಕೆ ಕನಿಷ್ಠ ರಕ್ಷಣೆಯನ್ನೂ ಕೊಡದ ಕೇಂದ್ರ ಸರಕಾರ ಈ ಉಗ್ರ ದಾಳಿಯ ಹೊಣೆಯನ್ನು ಹೊರಬೇಕಿದೆ. ಜಮ್ಮು ಕಾಶ್ಮೀರಕ್ಕೆ ಈಗಲೂ ಸ್ವತಂತ್ರ ರಾಜ್ಯ ಸರಕಾರದ ಮಾನ್ಯತೆ ಕೊಡದೆ ಕೇಂದ್ರಾಡಳಿತವೇ ಜಾರಿಯಲ್ಲಿರುವುದರಿಂದ ಈ ರಾಜ್ಯದ ರಕ್ಷಣೆ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಭಯೋತ್ಪಾದನೆಗೆ ಕುಲ ಮತ ಧರ್ಮದ ಬೇಧವೆಂಬುದಿಲ್ಲ ಎನ್ನುವುದಕ್ಕೆ ಜಗತ್ತಿನ ಇತಿಹಾಸವೇ ಸಾಕ್ಷಿ. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ, ಜೂಹಿ ಅಷ್ಟೇ ಯಾಕೆ ಜಗತ್ತಿಗೆ ಶಾಂತಿ ಅಹಿಂಸೆ ಸಾರಿದ ಬುದ್ಧನ ಬೌದ್ಧ ಧರ್ಮೀಯರೂ ಸಹ ಧರ್ಮ ರಕ್ಷಣೆಯ ಹೆಸರಲ್ಲಿ ಹಿಂಸೋತ್ಪಾದನೆಯನ್ನು ಮಾಡಿದ್ದಾರೆ, ಮಾಡುತ್ತಲೇ ಇರುತ್ತಾರೆ. ಇದಕ್ಕೆ ಮುಸ್ಲಿಂ ಧರ್ಮೀಯರೂ ಹೊರತಲ್ಲ.
ಅಸಲಿಗೆ ಹೀಗೆ ಧರ್ಮ ಕರ್ಮದ ಹೆಸರಲ್ಲಿ ಹಿಂಸೋತ್ಪಾದನೆ ಮಾಡುವವರಿಗೆ ಯಾವುದೇ ಧರ್ಮ ಎನ್ನುವುದು ಇರುವುದಿಲ್ಲ. ಅಂತಹ ಮತಾಂಧರು ಯಾವುದೇ ಧರ್ಮದವರಾಗಿದ್ದರೂ ಅವರನ್ನು ಅವರ ಧರ್ಮದ ಹೆಸರಲ್ಲಿ ಗುರುತಿಸುವ ಬದಲು ಭಯೋತ್ಪಾದಕರು, ಆತಂಕವಾದಿಗಳು, ಹಿಂಸೋತ್ಪಾದಕರು, ಮನುಕುಲದ ವಿರೋಧಿಗಳು ಎಂದು ಗುರುತಿಸುವುದೇ ಸೂಕ್ತ.
ಎಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಪಕ್ಕದ ಪ್ರೇಕ್ಷಣೀಯ ಸ್ಥಳವಾದ ಬೈಸರನ್ ಕಣಿವೆಯಲ್ಲಿ ಉಗ್ರರು 26 ಪ್ರವಾಸಿಗರ ನರಮೇಧವನ್ನು ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯ್ಬಾದ ಜೊತೆ ನಂಟಿರುವ “ದಿ ರೆಸಿಸ್ಟನ್ಸ್ ಫ್ರಂಟ್” ಎನ್ನುವ ಉಗ್ರ ಸಂಘಟನೆ ಈ ಅಮಾನವೀಯ ಹತ್ಯೆಗಳ ಹೊಣೆ ಹೊತ್ತುಕೊಂಡಿದೆ. ಈ ನರಹತ್ಯೆ ಅತ್ಯಂತ ಖಂಡನೀಯ ಹಾಗೂ ಮನುಕುಲಕೆ ಮಾಡಿದ ಆಳವಾದ ಗಾಯ.
ಇಲ್ಲಿ ಹತ್ಯೆಯಾದವರು ಪ್ರವಾಸಿಗರು ಹಾಗೂ ಹತ್ಯೆ ಮಾಡಿದವರು ಮುಸ್ಲಿಂ ಮತಾಂಧರು ಎಂಬುದು ಸತ್ಯ. ಆದರೆ ಈ ಕ್ರೂರ ಘಟನೆಗೆ ಕೋಮು ಬಣ್ಣ ಬಳಿದು ಮುಸಲ್ಮಾನರಿಂದ ಹಿಂದೂಗಳ ಹತ್ಯೆ, ಹೆಸರು ಕೇಳಿ, ಕಲ್ಮಾ ಓದಿಸಿ, ಪ್ಯಾಂಟ್ ಬಿಚ್ಚಿಸಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಸಾಯಿಸಲಾಗಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡುತ್ತಿರುವ ಸಂಘ ಪರಿವಾರ ಹಾಗೂ ಗೋದಿ ಮಾಧ್ಯಮಗಳು ಸಮಾಜವನ್ನು ಧರ್ಮಾಧಾರಿತವಾಗಿ ಒಡೆಯುವ, ಸಮುದಾಯಗಳಲ್ಲಿ ವೈಷಮ್ಯವನ್ನು ಬಿತ್ತುವ ಕೆಟ್ಟ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಿವೆ. ಈ ದೇಶದಲ್ಲಿ ಯಾವುದೇ ಅಹಿತಕರ ಘಟನೆಯಾದಾಗಲೂ ಅದರಲ್ಲಿ ಮುಸ್ಲಿಂ ವ್ಯಕ್ತಿಗಳು ಭಾಗಿಯಾಗಿದ್ದರೆ ಆ ಘಟನೆಗೆ ಕೋಮು ಬಣ್ಣ ಬಳಿದು ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹುಯಿಲೆಬ್ಬಿಸಿ, ಮುಸ್ಲಿಂ ದ್ವೇಷವನ್ನು ಹೆಚ್ಚಿಸಿ ಕೋಮು ದೃಢೀಕರಣದ ಮೂಲಕ ರಾಜಕೀಯ ಲಾಭವನ್ನು ಪಡೆಯುವತ್ತಲೇ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷದ ಚಿತ್ತ ಇರುವುದಕ್ಕೆ ಅಸಂಖ್ಯಾತ ಉದಾಹರಣೆಗಳಿವೆ. ಈ ದೇಶದಲ್ಲಿ ಚುನಾವಣೆಗಳಿಗೆ ಮುನ್ನ ನಡೆಯುವ ಭಯೋತ್ಪಾದಕ ದಾಳಿಗಳು ಹಾಗೂ ಅವುಗಳನ್ನು ತನ್ನ ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳುವ ಬಿಜೆಪಿಗೂ ಅವಿನಾಭಾವ ಸಂಬಂಧಗಳಿವೆ.
ಉರಿ, ಕಾರ್ಗಿಲ್, ಪುಲ್ವಾಮಾ, ಅಮರನಾಥ, ಪಠಾನಕೋಟ್, ಅಕ್ಷರಧಾಮ, ಪಾರ್ಲಿಮೆಂಟ್ ದಾಳಿಗಳು ಹಾಗೂ ಕಂದಹಾರ ವಿಮಾನ ಹೈಜಾಕ್ ನಡೆದಿರುವುದು ಬಿಜೆಪಿ ನೇತೃತ್ವದ ಸರಕಾರ ಇದ್ದಾಗಲೇ. ಈಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗಲೇ ಪಹಲ್ಗಾಮ್ ನರಹತ್ಯೆ ನಡೆದಿದೆ.
ಈ ದೇಶವಾಸಿಗಳು, ಮಾಧ್ಯಮಗಳು ಯಾರು ಯಾಕೆ ಇಂತಹ ಅಮಾನವೀಯತೆಯನ್ನು ಮೆರೆದರು ಎಂದು ಪ್ರಶ್ನಿಸುವ ಮೊದಲು ಯಾರು ಇಂತಹುದಕ್ಕೆಲ್ಲಾ ಅವಕಾಶ ಮಾಡಿಕೊಟ್ಟರು ಎಂಬುದನ್ನು ಕೇಳಬೇಕಾಗಿದೆ. ಆತಂಕವಾದಿಗಳ ಕೆಲಸವೇ ಆತಂಕ ಸೃಷ್ಟಿಸುವುದು. ಭಯೋತ್ಪಾದಕರ ಕೃತ್ಯಗಳೇ ಭಯ ಹುಟ್ಟಿಸುವ ದುಷ್ಕೃತ್ಯಗಳನ್ನು ಮಾಡುವುದು. ಆದರೆ ಅಂತಹ ಅತಿರೇಕಗಳನ್ನು ನಿಯಂತ್ರಿಸುವ ಕೆಲಸವನ್ನು ಕೇಂದ್ರ ಗೃಹ ಸಚಿವಾಲಯ ಹಾಗೂ ಅದರ ನೇತೃತ್ವದಲ್ಲಿರುವ ಮಿಲಿಟರಿ ಫೋರ್ಸ್ ಗಳು ಮಾಡಬೇಕಿದೆ. ಇಂತಹ ಆತಂಕಕಾರಿ ಘಟನೆಗಳ ಕುರಿತು ಮೊದಲೇ ಮಾಹಿತಿ ನೀಡಲೆಂದೇ ಬೇಹುಗಾರಿಕಾ ಜಾಲವೂ ಗೃಹ ಇಲಾಖೆಯಲ್ಲಿದೆ. ಆದರೆ ಯಾವಾಗ ಈ ಸಂಸ್ಥೆಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗುತ್ತವೋ ಆಗ ಆ ವೈಫಲ್ಯವನ್ನು ಮರೆಮಾಚಲು ಸರಕಾರವು ಜನರ ಆಕ್ರೋಶವನ್ನು ಕಡಿಮೆ ಮಾಡಲು ಭಯೋತ್ಪಾದಕರ ಧರ್ಮದ ಮೇಲೆ ವ್ಯಾಪಕ ಅಪಪ್ರಚಾರ ಶುರುಮಾಡುತ್ತವೆ. ನೆರೆಯ ದೇಶದ ಮೇಲೆ ಬೆಂಕಿ ಉಗುಳಲಾಗುತ್ತದೆ. ಸರಕಾರದ ಅಸಮರ್ಥತೆಯನ್ನು ಒಪ್ಪಿಕೊಂಡು, ನೈತಿಕ ಹೊಣೆಯನ್ನು ಹೊತ್ತು ಸಂಬಂಧಿಸಿದ ಸಚಿವರು ರಾಜೀನಾಮೆ ಕೊಡುವುದರ ಬದಲಾಗಿ ಕೋಮುದ್ವೇಷವನ್ನೇ ಅಸ್ತ್ರವಾಗಿಸಿಕೊಂಡು ದೇಶವಾಸಿಗಳ ಸಿಟ್ಟನ್ನು ಆತಂಕವಾದಿಗಳ ಧರ್ಮದತ್ತ ತಿರುಗಿಸುವ ಕೋಮು ಧರ್ಮರಾಜಕಾರಣ ಅಸ್ತಿತ್ವದಲ್ಲಿದೆ. ಇದನ್ನೇ ಗೋದಿ ಮಾಧ್ಯಮಗಳು ನಿರಂತರವಾಗಿ ಪ್ರಚಾರ ಮಾಡುತ್ತಾ ಕೋಮುವ್ಯಾಧಿ ಪ್ರಭುತ್ವವನ್ನು ಪ್ರಜೆಗಳ ಆಕ್ರೋಶದಿಂದ ಕಾಪಾಡುತ್ತಿವೆ.
ಈಗ ‘ಪಹಲ್ಗಾಮ್ ನರಹತ್ಯೆಗೆ ಪಾಕಿಸ್ತಾನಿ ಕೃಪಾಪೋಷಿತ ಮುಸ್ಲಿಂ ಉಗ್ರರೇ ಕಾರಣವಾಗಿದ್ದು ಹಿಂದೂಗಳ ಮೇಲೆ ನಡೆಸಲಾದ ವ್ಯವಸ್ಥಿತ ದಾಳಿ’ ಎಂದು ಸಂಘಿಗಳು ಹಾಗೂ ಅದರ ಸಾಕು ಮಾಧ್ಯಮಗಳು ದಿನದ 24 ಗಂಟೆಯೂ ಗಂಟಲು ಹರಿದುಕೊಳ್ಳುತ್ತಿವೆ. ಆದರೆ ಈ ಯಾವ ಮಾಧ್ಯಮಗಳೂ ಸಹ ಜಮ್ಮು ಕಾಶ್ಮೀರದ ಕುರಿತು ಕೇಂದ್ರ ಸರಕಾರದ ನೀತಿ, ಗೃಹ ಸಚಿವಾಲಯ ಹಾಗೂ ಬೇಹುಗಾರಿಕೆಯ ವೈಫಲ್ಯದ ಬಗ್ಗೆ ಪ್ರಶ್ನಿಸುತ್ತಿಲ್ಲ. ಕಾಶ್ಮೀರ ಹಾಗೂ ಕಾಶ್ಮೀರಿಗರ ಕುರಿತು ಕೇಂದ್ರ ಸರಕಾರ ತೆಗೆದುಕೊಂಡ ದಮನಕಾರಿ ನೀತಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಆದರೆ ಹಿಂದೂಗಳ ಮೇಲೆ ದಾಳಿ ಎಂಬುದನ್ನೇ ಕೇಂದ್ರ ಸರಕಾರದ ಮುಖವಾಣಿಯಂತೆ ಬಿತ್ತರಿಸುತ್ತಿವೆ. ಆದರೆ ಅಲ್ಲಿ ಆ ನರಮೇಧದ ಸಮಯದ ಕೆಲವು ಸತ್ಯಗಳು ಇವರ ಸುಳ್ಳುಗಳಿಗೆ ಉತ್ತರಿಸುತ್ತಿವೆ.
ಆ ಹತ್ಯಾ ಘಟನೆಯ ಪ್ರತ್ಯಕ್ಷ ಸಾಕ್ಷಿಗಳಲ್ಲಿ ಒಂದಿಬ್ಬರನ್ನು ಬಿಟ್ಟರೆ ಬಾಕಿಯವರು “ಹೆಸರು ಧರ್ಮ ಕೇಳಿ ಗುಂಡು ಹಾರಿಸಲಾಯ್ತು” ಎಂದು ಹೇಳಿಲ್ಲ. ಆದರೂ ಆ ರೀತಿ ಪ್ರಚಾರಾಂದೋಲನ ಮಾಡಿಸಲಾಯ್ತು. ಹಂತಕರಿಗೆ ಹಿಂದೂ ದ್ವೇಷವೇ ಪ್ರಧಾನವಾಗಿದ್ದರೆ ಮುಸ್ಲಿಂ ವ್ಯಕ್ತಿಗಳನ್ನು ಸಾಯಿಸುತ್ತಿರಲಿಲ್ಲ. ಆದರೂ ಸಾಯಿಸಲಾಯ್ತು. ಮುಸ್ಲಿಂ ಭಯೋತ್ಪಾದಕರ ಈ ದುಷ್ಕೃತ್ಯಕ್ಕೆ ಮುಸ್ಲಿಂ ಕುದುರೆ ಪರಿಚಾರಕ ಸೈಯದ್ ಅದಿಲ್ ಹುಸೇನ್ ಶಾ ಪ್ರತಿರೋಧ ಒಡ್ಡಿ ತನ್ನ ಜೀವ ಲೆಕ್ಕಿಸದೆ ಹಿಂದೂಗಳ ಪ್ರಾಣ ಉಳಿಸಿ ಭಯೋತ್ಪಾದಕನಿಂದ ಸಾವಿಗೀಡಾದ. ಇನ್ನೊಬ್ಬ ನಝರತ್ ಅಲಿ ಎನ್ನವ ಮುಸ್ಲಿಂ ಯುವಕ ತನ್ನ ಕಣ್ಣ ಮುಂದೆಯೇ ತನ್ನ ಚಿಕ್ಕಪ್ಪ ಅದಿಲ್ ಹುಸೇನ್ ನನ್ನು ಉಗ್ರರು ಕೊಂದು ಹಾಕಿದರೂ ಧೃತಿಗೆಟ್ಟು ಭಯದಿಂದ ಓಡಿ ಹೋಗದೆ ನಾಲ್ಕು ಹಿಂದೂ ಕುಟುಂಬಗಳ ಹನ್ನೊಂದು ಜನರನ್ನು ಕಾಪಾಡಿದ.
ಪತಿಯನ್ನು ಕಳೆದುಕೊಂಡ ಸಂಗೀತಾರವರು “ಅಮಾಯಕ ಜನರನ್ನು ಯಾಕೆ ಕೊಲ್ಲುತ್ತೀರಿ ಎಂದು ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬ ಉಗ್ರರನ್ನು ಪ್ರಶ್ನಿಸಿದ್ದಕ್ಕೆ ಆತನನ್ನು ವಿವಸ್ತ್ರಗೊಳಿಸಿ ಗುಂಡಿಕ್ಕಿ ಕೊಲ್ಲಲಾಯಿತು” ಎಂದು ಹೇಳಿದ್ದಾರೆ. ಕೆಲವು ಮುಸ್ಲಿಂ ಯುವಕರು ಮಕ್ಕಳು ಹಾಗೂ ಮಹಿಳೆಯರನ್ನು ತಮ್ಮ ಬೆನ್ನ ಮೇಲೆ ಹೊತ್ತು ದೂರಕ್ಕೆ ಸಾಗಿಸಿ ಹಲವರ ಪ್ರಾಣವನ್ನು ರಕ್ಷಿಸಿದರು. ಇದಲ್ಲವೇ ಸಂಕಷ್ಟದಲ್ಲಿ ಸಹಾಯಕ್ಕೆ ಬರವ ಕೋಮು ಸೌಹಾರ್ದತೆ. ಹಿಂದೂಗಳು ಸತ್ತರೆ ಸಾಯಲಿ ಬಿಡಿ ಎಂದು ಆ ಮುಸ್ಲಿಂ ಸಮುದಾಯದವರು ಅಂದುಕೊಂಡು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ಧರ್ಮವನ್ನು ಪರಿಗಣಿಸದೇ ಪ್ರಾಣವನ್ನೇ ಪಣಕ್ಕಿಟ್ಟ ಅಂತವರ ತ್ಯಾಗ ಬಲಿದಾನ ಸ್ಮರಣೀಯ.
ಆದರೆ.. ಅಮಾನವೀಯ ಕ್ರೌರ್ಯದ ಸಂದರ್ಭದಲ್ಲೂ ಮಾನವೀಯತೆಯನ್ನು ಮೆರೆದ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಉದ್ದೇಶ ಪೂರ್ವಕವಾಗಿ ಅಲಕ್ಷಿಸಿ ಹಿಂದೂಗಳ ಮೇಲೆ ಮುಸ್ಲಿಂ ಮತಾಂಧರ ಅಟ್ಟಹಾಸ ಎಂಬುದನ್ನೇ ಪ್ರಧಾನವಾಗಿ ಪ್ರಚಾರ ಮಾಡಿ ಧರ್ಮದ್ವೇಷಕ್ಕೆ ಪ್ರೇರೇಪಿಸುತ್ತಿರುವ ಕೇಂದ್ರ ಸರಕಾರ, ಸಂಘ ಪರಿವಾರ ಹಾಗೂ ಮಡಿಲ ಮಾಧ್ಯಮಗಳ ಹುನ್ನಾರ ಉಗ್ರರು ಮೆರೆದ ಕ್ರೌರ್ಯದಷ್ಟೇ ಖಂಡನೀಯ.
ಕಾಶ್ಮೀರಕ್ಕೆ ಭಯೋತ್ಪಾದಕರ ಆತಂಕ ಇದೆ ಎಂದು ಗೊತ್ತಿದ್ದರೂ ಸುಪ್ರಸಿದ್ದ ಪ್ರವಾಸಿ ತಾಣಕ್ಕೆ ಕನಿಷ್ಠ ರಕ್ಷಣೆಯನ್ನೂ ಕೊಡದ ಕೇಂದ್ರ ಸರಕಾರ ಈ ಉಗ್ರ ದಾಳಿಯ ಹೊಣೆಯನ್ನು ಹೊರಬೇಕಿದೆ. ಜಮ್ಮು ಕಾಶ್ಮೀರಕ್ಕೆ ಈಗಲೂ ಸ್ವತಂತ್ರ ರಾಜ್ಯ ಸರಕಾರದ ಮಾನ್ಯತೆ ಕೊಡದೆ ಕೇಂದ್ರಾಡಳಿತವೇ ಜಾರಿಯಲ್ಲಿರುವುದರಿಂದ ಈ ರಾಜ್ಯದ ರಕ್ಷಣೆ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ‘ಈಗ ಮೋದಿ ಆಡಳಿತದಲ್ಲಿ ಕಾಶ್ಮೀರ ಭಯೋತ್ಪಾದಕರಿಂದ ಮುಕ್ತವಾಗಿದೆ, ಮತ್ತೆ ಪ್ರವಾಸಿಗರ ಸ್ವರ್ಗವಾಗಿದೆ’ ಎಂದು ದೇಶವಾಸಿಗಳನ್ನು ನಂಬಿಸಿ, ಆತಂಕಪೀಡಿತ ಪ್ರದೇಶದಲ್ಲಿ ಯಾವುದೇ ರಕ್ಷಣಾತ್ಮಕ ಕ್ರಮ ಕೈಗೊಳ್ಳದೆ ಪ್ರವಾಸೋದ್ಯಮವನ್ನು ಉತ್ತೇಜಿಸಿದ ಕೇಂದ್ರ ಸರಕಾರವೇ ಅಮಾಯಕರ ಹತ್ಯೆಗೆ ಕಾರಣವೆಂದು ಹೇಳಬೇಕಾಗಿದೆ. ಆತಂಕವಾದಿಗಳ ದಾಳಿಯ ಆತಂಕದಿಂದ ಪ್ರಧಾನಿ ಮೋದಿಯವರ ಕಾಶ್ಮೀರ ಭೇಟಿಯನ್ನು ತಪ್ಪಿಸಿದ ಬೇಹುಗಾರಿಕೆ ಪಡೆಗೆ ಉಗ್ರರ ದಾಳಿಯ ಮಾಹಿತಿ ಇದ್ದರೂ ಈ ನರಹತ್ಯೆ ತಡೆಯಲು ಪ್ರಯತ್ನಿಸದೇ ಇರುವುದಕ್ಕೆ ಬೇಹುಗಾರಿಕೆ ವೈಫಲ್ಯವೇ ಪ್ರಮುಖ ಕಾರಣವಾಗಿದೆ.
ಇಂತಹ ವೈಫಲ್ಯವನ್ನು ಮುಚ್ಚಿಕೊಳ್ಳಲು ಮೋದಿ ಸರಕಾರ ‘ಹಿಂದೂಗಳ ಮೇಲೆ ದಾಳಿ” ಎನ್ನುವ ಸಂಕಥನವನ್ನು ಬಿತ್ತರಿಸುತ್ತಿದೆ. ಪಾಕಿಸ್ತಾನದ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಪ್ರತೀಕಾರದ ಮಾತಾಡುತ್ತಿದೆ. ಕೆಲವೇ ದಿನಗಳಲ್ಲಿ ನಡೆಯಬಹುದಾದ ಬಿಹಾರ ಹಾಗೂ ಮತ್ತಿತರೇ ರಾಜ್ಯಗಳ ಚುನಾವಣೆಗಳಲ್ಲಿ ಈ ಹತ್ಯಾಕಾಂಡವನ್ನೇ ನೆಪವಾಗಿಟ್ಟುಕೊಂಡು ಮುಸ್ಲಿಂ ದ್ವೇಷ ಪ್ರಚೋದಿಸುವ ಮೂಲಕ ಹಿಂದೂ ಮತಗಳನ್ನು ಕ್ರೋಢಿಕರಿಸಿ ಅಧಿಕಾರವನ್ನು ಪಡೆಯಲು ಬಿಜೆಪಿ ಹವಣಿಸುತ್ತಿದೆ.
ಆದರೆ ಮೋದಿ ಸರಕಾರ ಹಾಗೂ ಅದರ ಸಾಕು ಮಾಧ್ಯಮಗಳ ಹುನ್ನಾರವನ್ನು ಸಾಮಾಜಿಕ ಮಾಧ್ಯಮಗಳು ಬಟಾಬಯಲು ಮಾಡಿವೆ. ಪಹಲ್ಗಾಮ್ ಹತ್ಯಾಕಾಂಡದ ಘಟನೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿವೆ. ಮುಸ್ಲಿಂ ಯುವಕರ ತ್ಯಾಗ ಬಲಿದಾನವನ್ನೂ ತೋರಿಸಿವೆ. ಕೇಂದ್ರ ಸರಕಾರದ ವೈಫಲ್ಯಗಳಿಗೆ ಕನ್ನಡಿ ಹಿಡಿದಿವೆ. ಮಡಿಲ ಮಾಧ್ಯಮಗಳ ಏಕಪಕ್ಷೀಯ ಪ್ರಚಾರದ ಮುಖವಾಡಗಳನ್ನು ಬಿಚ್ಚಿಟ್ಟಿವೆ.
ಉಗ್ರರ ಹತ್ಯಾಕಾಂಡವನ್ನು ಜಮ್ಮು ಕಾಶ್ಮೀರದ ಮುಸ್ಲಿಂ ಸಮುದಾಯದವರೇ ಖಂಡಿಸಿದ್ದಾರೆ. ತೀವ್ರವಾಗಿ ಪ್ರತಿಭಟಿಸಿದ್ದಾರೆ. ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ಆಚರಿಸಿದ್ದಾರೆ. ಹಣತೆ ಬೆಳಗಿ ಸತ್ತವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅದೇ ರೀತಿ ದೇಶಾದ್ಯಂತ ಮುಸ್ಲಿಂ ಸಮುದಾಯ ಮತಾಂಧ ಭಯೋತ್ಪಾದಕರ ನರಹತ್ಯೆಯನ್ನು ಖಂಡಿಸಿ ಪ್ರತಿಭಟಿಸಿ ಕೋಮು ಸೌಹಾರ್ದತೆಯನ್ನು ಬೆಂಬಲಿಸಿದ್ದಾರೆ.
ಆದರೆ ಈ ರಾಜಕಾರಣಕ್ಕಾಗಿ ಈ ಬಿಜೆಪಿಗರು, ಧರ್ಮಕಾರಣಕ್ಕಾಗಿ ಈ ಸಂಘಿಗಳು ಈಗಲೂ ಹಿಂದೂಗಳ ಮೇಲೆ ಮುಸ್ಲಿಂ ದಾಳಿ ಎನ್ನುವುದನ್ನೇ ಪ್ರಚಾರ ಮಾಡುತ್ತಿದ್ದಾರೆ. ಪ್ರಜೆಗಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾದ ಕೇಂದ್ರ ಸರಕಾರ ಉಗ್ರರನ್ನು ಒಳಗೆ ಬಿಟ್ಟುಕೊಂಡು ಈಗ ಪ್ರತೀಕಾರದ ಮಾತಾಡುತ್ತಿದೆ. ಹಿಂದೂಗಳ ಭಾವನೆಗಳನ್ನು ಕೆರಳಿಸಿ ಮುಸ್ಲಿಂ ಸಮುದಾಯದ ಮೇಲೆ ದ್ವೇಷವನ್ನು ಹೆಚ್ಚಿಸಿ ಹಿಂದುತ್ವವಾದಿ ಸಿದ್ಧಾಂತದ ಹಿಂದೂ ರಾಷ್ಟ್ರ ಸ್ಥಾಪನೆಯತ್ತ ಆರೆಸ್ಸೆಸ್ ಮತ್ತು ಬಿಜೆಪಿ ದಾಪುಗಾಲಿಡುತ್ತಿದೆ. ಮತಾಂಧತೆಯನ್ನೇ ಧರ್ಮವಾಗಿಸಿಕೊಂಡ ಭಯೋತ್ಪಾದಕರು ಹಿಂದುತ್ವವಾದಿ ಶಕ್ತಿಗಳು ತಮ್ಮ ಗುರಿ ಮುಟ್ಟಲು ಮೆಟ್ಟಿಲಾಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮತೀಯವಾದಿ ಹಾಗೂ ಹಿಂದುತ್ವವಾದಿಗಳ ಹುನ್ನಾರವನ್ನು ಬಯಲುಗೊಳಿಸುವ ಸ್ತುತ್ಯರ್ಹ ಕೆಲಸವನ್ನು ಸಂವಿಧಾನವಾದಿಗಳು ಮಾಡುತ್ತಿದ್ದಾರೆ. ಮನುವಾದಿ ಮಡಿಲ ಮಾಧ್ಯಮಗಳ ಅಪಪ್ರಚಾರವನ್ನು ಸಾಮಾಜಿಕ ಮಾಧ್ಯಮಗಳು ಪ್ರಶ್ನಿಸುತ್ತಲೇ ಸತ್ಯವನ್ನು ಜನರ ಮುಂದೆ ಇಡುತ್ತಿವೆ. ಸಂವಿಧಾನದ ರಕ್ಷಣೆಗೆ, ಈ ದೇಶದ ಬಹುತ್ವದ ಸಂರಕ್ಷಣೆಗೆ ಹಾಗೂ ಕೋಮು ಸೌಹಾರ್ದತೆಗೆ ಈ ರೀತಿಯ ಪ್ರತಿರೋಧವೇ ಆಶಾ ಕಿರಣವಾಗಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಪಹಲ್ಗಾಮ್ ಪ್ರಕರಣ: ಪ್ರತೀಕಾರಾತ್ಮಕ ಕ್ರಮಗಳಿಂದ ಯಾರಿಗೆ ಎಷ್ಟು ನಷ್ಟ?