ಮುಸ್ಲಿಮರಲ್ಲಿ ನಾಯಕರು ಎಲ್ಲಿದ್ದಾರೆ?

Most read

ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದಾದರೂ ರಾಜ್ಯದ ಜನರು ಧರ್ಮದ ವಿಚಾರದಲ್ಲಿ ಅತ್ಯಂತ ಹೆಚ್ಚು ಅಪಮಾನವನ್ನು ಎದುರಿಸುತ್ತಿದ್ದರೆ ಅದು ಕರ್ನಾಟಕದ ಮುಸ್ಲಿಂ ಸಮುದಾಯ ಮಾತ್ರ. ಮುಸ್ಲಿಮರಲ್ಲಿ ಸೂಕ್ತ ನಾಯಕತ್ವದ ಕೊರತೆ ಮತ್ತು ಕೋಮು ರಾಜಕಾರಣದ ಮೇಲೆ ನಿಯಂತ್ರಣ ಹೊಂದಬಲ್ಲ ಸಾಮರ್ಥ್ಯದ ಸಂಘ-ಸಂಸ್ಥೆಗಳ ಕೊರತೆಯೇ ಇಂತಹ ವಿಕೃತ ವಿಜೃಂಭಣೆಗಳಿಗೆ ಕಾರಣ -ಮುಷ್ತಾಕ್ ಹೆನ್ನಾಬೈಲ್

ನಾವಿಕನಿಲ್ಲದ ದೋಣಿ ದಿಕ್ಕು ದೆಸೆಯಿಲ್ಲದೆ ಸಾಗರದಲ್ಲಿ ಸಂಚರಿಸಿದಂತೆ, ನಾಯಕನಿಲ್ಲದ ಮುಸ್ಲಿಂ ಸಮುದಾಯ ಕರ್ನಾಟಕದ ರಾಜಕೀಯದಲ್ಲಿ ದಿಕ್ಕು ತೋಚದಂತಿದೆ. ಮುಸ್ಲಿಂ ವಿರೋಧದ ರಾಜಕಾರಣವೇ ರಾಜಕೀಯ ಇಂಧನವಾಗಿರುವ ಕಾಲದಲ್ಲಿ ಗಟ್ಟಿಯಾಗಿ ಇದರ ವಿರುದ್ಧ ಹೋರಾಟ ಸಂಘಟಿಸಬಲ್ಲ ಮತ್ತು ಶೋಷಣೆಯನ್ನು ಶೋಷಣೆ ಎಂದು ಉಳಿದ ಸಮುದಾಯಗಳಿಗೆ ಮನವರಿಕೆ ಮಾಡಬಲ್ಲ ನಾಯಕನ ಕೊರತೆಯೇ ಇಡೀ ಭಾರತದಲ್ಲಿ ಕರ್ನಾಟಕದ ಮುಸ್ಲಿಮರು ಅತಿಹೆಚ್ಚು ಶೋಷಿತರಾಗಿರಲು ಕಾರಣ. ತಮ್ಮ ಮೇಲಿನ ಶೋಷಣೆಯು ರಾಜಕೀಯ ಷಡ್ಯಂತ್ರ ಮತ್ತು ಕೋಮು ವಿಭಜಕ ಶಕ್ತಿಗಳ ಕೃತಕ ಸಂಕಥನಗಳ ಫಲಶ್ರುತಿ ಎಂದು ಇತರರಿಗೆ ಅರ್ಥೈಸುವಲ್ಲಿನ ಅಸಾಮರ್ಥ್ಯವೂ ಶೋಷಣೆಗೆ ಮತ್ತೊಂದು ಪ್ರಮುಖ ಕಾರಣ. ಮುಸ್ಲಿಂ ವಿರೋಧಿ ನರೆಟಿವ್ಸ್ ಗಳು ಮುಸ್ಲಿಮರ ಮೇಲಿನ ಹಲ್ಲೆ- ಅಪಮಾನ- ಶೋಷಣೆಗಳನ್ನು ಸೂಕ್ತ ಮತ್ತು ಸಮಂಜಸವಾಗಿಸುವ ಚಾಕಚಕ್ಯತೆಯನ್ನು ಹೊಂದಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ..

ಹೀಗಿರುವ ಕಾರಣಕ್ಕೆ ಕರ್ನಾಟಕದಲ್ಲಿ ಮುಸ್ಲಿಮರ ಮೇಲಿನ ಶೋಷಣೆಯನ್ನು ಇತರರು ಸಂತೋಷಿಸಲು ಕಾರಣವಾಗಿದೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದಾದರೂ ರಾಜ್ಯದ ಜನರು ಧರ್ಮದ ವಿಚಾರದಲ್ಲಿ ಅತ್ಯಂತ ಹೆಚ್ಚು ಅಪಮಾನವನ್ನು ಎದುರಿಸುತ್ತಿದ್ದರೆ ಅದು ಕರ್ನಾಟಕದ ಮುಸ್ಲಿಂ ಸಮುದಾಯ ಮಾತ್ರ. ಮುಸ್ಲಿಮರಲ್ಲಿ ಸೂಕ್ತ ನಾಯಕತ್ವದ ಕೊರತೆ ಮತ್ತು ಕೋಮು ರಾಜಕಾರಣದ ಮೇಲೆ ನಿಯಂತ್ರಣ ಹೊಂದಬಲ್ಲ ಸಾಮರ್ಥ್ಯದ ಸಂಘ-ಸಂಸ್ಥೆಗಳ ಕೊರತೆಯೇ ಇಂತಹ ವಿಕೃತ ವಿಜೃಂಭಣೆಗಳಿಗೆ ಕಾರಣ.

ಈಗಿಲ್ಲದ ನಾಯಕತ್ವ ಸದ್ಯೋಭವಿಷ್ಯದಲ್ಲಿ ಮುಸ್ಲಿಂ ಸಮುದಾಯದಲ್ಲಿ ಮೂಡಬಹುದೇ ಎಂದು ಆಲೋಚಿಸಿದರೆ ಆಗಲೂ ಕೂಡ ದೊಡ್ಡ ಶೂನ್ಯವೇ ಕಾಣುತ್ತದೆ. ಈಗಿರುವ ಕರ್ನಾಟಕದ ಮುಸ್ಲಿಮರ ಸಾಮಾಜಿಕ, ರಾಜಕೀಯ ಧಾರ್ಮಿಕ ನಾಯಕತ್ವವು ಇಡೀ ಮುಸ್ಲಿಂ ಸಮುದಾಯವನ್ನು ಆವರಿಸಿಕೊಳ್ಳುವಷ್ಟು ಶಕ್ತವಾಗಿಲ್ಲ. ಮುಸ್ಲಿಮರಲ್ಲಿನ ಸುನ್ನಿ, ಸಲಫಿ, ಬರೆಲ್ವಿ, ದೇವಬಂದಿ, ಅಹ್ಲ್ ಹದೀತ್ ಮುಂತಾದ ಹೆಸರಿನಲ್ಲಿರುವ ಪಂಗಡವಾದವು ಮುಸ್ಲಿಮರಿಗೆ ಒಬ್ಬ ಸರ್ವಸಮ್ಮತ ನಾಯಕ ರೂಪುಗೊಳ್ಳುವಲ್ಲಿ ಇರುವ ದೊಡ್ಡ ಮತ್ತು ಮೊದಲ ತಡೆ. ಇದು ಹಿಂದೂಗಳ ಜಾತಿ ಪದ್ಧತಿಯಷ್ಟು ಡೀಪ್ ಅಲ್ಲದಿದ್ದರೂ, ಮುಸ್ಲಿಂ ಸಮುದಾಯಕ್ಕೆ ಜಾತಿ ಪದ್ಧತಿಗಿಂತ ಹೆಚ್ಚು ಹಾನಿಯನ್ನು ಇದು ಮಾಡಿದೆ. ಹೀಗಿರುವುದರಿಂದ ಮುಸ್ಲಿಮರಿಗೆ ರಾಜ್ಯದಲ್ಲಿ ಬಿಡಿ, ಒಂದು ಸಾಮಾನ್ಯ ಮೊಹಲ್ಲಾದಲ್ಲಿಯೂ ನಾಯಕತ್ವ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಯಾರಾದರೊಬ್ಬ ಭಾರೀ ನಾಯಕತ್ವ ಗುಣಗಳಿಂದ ಕಂಗೊಳಿಸಿದರೂ, ಈ ಪಂಗಡವಾದ ಅವನನ್ನು ತನ್ನ ಸಂಗಡ ಎಳೆದುಕೊಳ್ಳುತ್ತದೆ..

ನಾಯಕತ್ವ ಬೆಳೆಯದಿರಲು ಇದೊಂದು ಕಾರಣವಾದರೂ, ಇದೊಂದೇ ಕಾರಣವಲ್ಲ. ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಸಮಗ್ರವಾಗಿ ಗ್ರಹಿಸಬಲ್ಲ ಮತ್ತು ಇತರ ಸಮುದಾಯಗಳೊಂದಿಗೆ ಸಮನ್ವಯ ಸಾಧಿಸಬಲ್ಲ ವಿಶಾಲ ವ್ಯಕ್ತಿತ್ವದ ನಾಯಕರೂ ಮುಸ್ಲಿಂ ಸಮುದಾಯದ ಎಲ್ಲ ರಂಗಗಳಲ್ಲೂ ಕಡಿಮೆ ಇದ್ದಾರೆ. ಕರ್ನಾಟಕದಲ್ಲಿ ಪ್ರಬಲವಾಗಿರುವ ಇತರ ಸಮುದಾಯಗಳಿಗೆ ಮಠಾಧಿಪತಿಗಳು ನಾಯಕತ್ವವನ್ನು ನೀಡುತ್ತಾರೆ. ಇದರ ಜೊತೆಗೇ, ಮಠಾಧಿಪತಿಗಳೇ ನಾಯಕತ್ವವನ್ನು ರೂಪಿಸುತ್ತಾರೆ. ಪ್ರಬಲ ನಾಯಕತ್ವ ಗುಣ ಹೊಂದಿದವರಿಗೆ ಒಂದೊಮ್ಮೆ ಸೂಕ್ತ ಸ್ಥಾನಮಾನಗಳು ದೊರೆಯದಿದ್ದಲ್ಲಿ ಮಠಾಧಿಪತಿಗಳೇ ಮಧ್ಯಪ್ರವೇಶಿಸಿ ಅದನ್ನು ಕೊಡಿಸುತ್ತಾರೆ.

ಆದರೆ ಮುಸ್ಲಿಂ ಸಮುದಾಯದಲ್ಲಿ ಇಂತಹ ಸಂಯೋಜನೆಯ ಲವಲೇಶವೂ ಕಾಣಲಾಗದು. ಮುಸ್ಲಿಂ ಸಮುದಾಯ ರಾಜಕೀಯ ಭಾಗೀದಾರಿಕೆಯ ಅಗತ್ಯ ಮತ್ತು ಬಾಧ್ಯತೆಯನ್ನು ಅರಿಯುವ ಹಾಗೂ ಆ ಕುರಿತಾದ ಪ್ರಜ್ಞೆಯನ್ನು ಬೆಳೆಸಿಕೊಳ್ಳುವವರೆಗೆ ರಾಜ್ಯದಲ್ಲಿ ಮುಸ್ಲಿಮರ ಪಾಲಿಗೆ “ಅಂಧೇರಾ ಖಾಯಂ ರಹೇಗಾ”. ಕತ್ತೆಯ ನೇತೃತ್ವದಲ್ಲಿರುವ ಸಿಂಹದ ಸೇನೆಗಿಂತ, ಸಿಂಹದ ನೇತೃತ್ವದಲ್ಲಿರುವ ಕತ್ತೆಯ ಸೇನೆಯೇ ಹೆಚ್ಚು ಪ್ರಬಲ ಎನ್ನುವ ವಾಸ್ತವ ಜ್ಞಾನ ಮುಸ್ಲಿಮರಿಗೆ ತುರ್ತಾಗಿ ಬರಬೇಕಾಗಿದೆ. ನಾಯಕತ್ವ ಬೆಳೆಸಿಕೊಳ್ಳದ ಸಮುದಾಯ ಸರಾಗವಾಗಿ ಉಸಿರಾಡಿದ ಇತಿಹಾಸ ಜಾಗತಿಕ ಚರಿತ್ರೆಯಲ್ಲಿ ಇಲ್ಲ.. ಚಿಂತಿಸಿ..

ಮುಷ್ತಾಕ್‌ ಹೆನ್ನಾಬೈಲ್‌

ಬರಹಗಾರರು

ಇದನ್ನೂ ಓದಿ-ಇಂದಿನಾಚೆಯ “ಇಂದಿರಾ ಗಾಂಧಿ”

More articles

Latest article