ಮುನ್ನೂರಕ್ಕೂ ಅಧಿಕ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿ ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಪೆನ್ ಡ್ರೈವ್ ನಲ್ಲಿ ಬಂಧಿಸಿದ ವಿಕೃತಕಾಮಿ ಪ್ರಜ್ವಲ್ ರೇವಣ್ಣ. ಇಂಥವನಿಗೆ ಸ್ತ್ರೀಯ ತಾಕತ್ತು ಏನೆಂಬುದನ್ನು ತೋರಿಸಬೇಕಾಗಿತ್ತು. ನೀನು ಹೆಣ್ಣನ್ನು ನೋಡುವುದಕ್ಕೂ ನಾವು ನೋಡುವುದಕ್ಕೂ ಇರುವ ವ್ಯತ್ಯಾಸ ಇದು ಎಂಬುದನ್ನು ತೋರಿಸಬೇಕಾಗಿತ್ತು. ಅದನ್ನು ಎಸ್ ಐ ಟಿ ಮಾಡಿದೆ – ಉಷಾ ಕಟ್ಟೆಮನೆ, ಹವ್ಯಾಸಿ ಪತ್ರಕರ್ತೆ
ಗಮನಿಸಿ: ಮಹಿಳೆಯರನ್ನು ಕೇವಲ ಕಾಮದ ಗೊಂಬೆಗಳನ್ನಾಗಿ ಕಂಡ ಪ್ರಜ್ವಲ ರೇವಣ್ಣನನ್ನು ಏರ್‌ಪೋರ್ಟಿನಿಂದಲೇ ಬಂಧಿಸಿ ಸಿಐಡಿ ಆಫೀಸಿಗೆ ಕರೆತಂದಿದ್ದು ಎಸ್ ಐ ಟಿಯ ಮಹಿಳಾ ಪೊಲೀಸ್ ಅಧಿಕಾರಿಗಳು.
ಅವನನ್ನು ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದದ್ದು ಅದೇ ಮಹಿಳಾ ಪೋಲಿಸ್ ಅಧಿಕಾರಿಗಳು.
ಅವನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು ಅದೇ ಮಹಿಳಾ ಅಧಿಕಾರಿಗಳು.
ಈಗ ಪೋಲೀಸ್ ಕಸ್ಟಡಿಯಲ್ಲಿರುವ ಆತನನ್ನು ವಿಚಾರಣೆ ಮಾಡುತ್ತಿರುವವರು ಅದೇ ಮಹಿಳಾ ಪೋಲೀಸ್ ಅಧಿಕಾರಿಗಳು.
ಯಾಕೆ ಹೀಗೆ?
ಇದು ಬಿ.ಕೆ.ಸಿಂಗ್ ಸಿಂಗ್ ನೇತೃತ್ವದ ವಿಶೇಷ ತನಿಖಾ ದಳ ತೆಗೆದುಕೊಂಡ ಪ್ರಜ್ಞಾಪೂರ್ವಕವಾದ ನಿರ್ಧಾರ. ‘ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಸಂತ್ರಸ್ತರ ಗೋಳು ನೋಡಿದ್ದೇವೆ. ಅವರು ಪಟ್ಟ ಕಷ್ಟಕ್ಕೆ ಮರುಗಿದ್ದೇವೆ, ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿ ಕೊಂಡಿದ್ದ ಪ್ರಜ್ವಲ್ ಗೆ ಮಹಿಳೆಯರ ಶಕ್ತಿ ತೋರಿಸ ಬೇಕಾಗಿತ್ತು. ಹೀಗಾಗಿ ಮಹಿಳಾ ಅಧಿಕಾರಿಗಳ ತಂಡದಿಂದಲೇ ಬಂಧಿಸಿ ಜೀಪಿನಲ್ಲಿ ಕರೆತಂದಿದ್ದೇವೆ ‘ ಎಂದು ಎಸ್ ಐ ಟಿ ಮೂಲಗಳು ತಿಳಿಸಿವೆಯೆಂದು ನಾಡಿನ ಪ್ರಮುಖ ಪತ್ರಿಕೆಗಳು ವರದಿ ಮಾಡಿವೆ.
ಪ್ರಜ್ವಲ್ ಮೇಲೆ ದಾಖಲಾಗಿರುವುದು ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಸಂತ್ರಸ್ತೆಯ ಅಪಹರಣ ಆರೋಪದ ಕೇಸ್. ಮೂರು ಪ್ರಕರಣಗಳಿಗೂ ಮಹಿಳೆಯರನ್ನೇ ತನಿಖಾಧಿಕಾರಿಗಳನ್ನಾಗಿ ಬಿ.ಕೆ.ಸಿಂಗ್ ನೇಮಕ ಮಾಡಿದ್ದಾರೆ. ಸುಮನ್ ಡಿ ಪನ್ನೇಕರ್, ಸೀಮಾ ಲಾಟ್ಕರ್, ಸುಮಾರಾಣಿ, ಜಿ. ಶೋಭಾ, ಸೇರಿದಂತೆ ತಂಡದಲ್ಲಿ ಇಬ್ಬರು ಮಹಿಳಾ ಎಸ್ಪಿ, ಇಬ್ಬರು ಮಹಿಳಾ ಎಸ್ಸೈಗಳು, ಐದು ಮಹಿಳಾ ಎಸಿಪಿಗಳು ಸೇರಿದಂತೆ ಇಪ್ಪತ್ತು ಮಹಿಳಾ ಸಿಬ್ಬಂದಿಗಳಿದ್ದಾರೆ.
ಮುನ್ನೂರಕ್ಕೂ ಅಧಿಕ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿ ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಪೆನ್ ಡ್ರೈವ್ ನಲ್ಲಿ ಬಂಧಿಸಿದ ವಿಕೃತಕಾಮಿ ಪ್ರಜ್ವಲ್ ರೇವಣ್ಣ. ಇಂಥವನಿಗೆ ಸ್ತ್ರೀಯ ತಾಕತ್ತು ಏನೆಂಬುದನ್ನು ತೋರಿಸಬೇಕಾಗಿತ್ತು. ನೀನು ಹೆಣ್ಣನ್ನು ನೋಡುವುದಕ್ಕೂ ನಾವು ನೋಡುವುದಕ್ಕೂ ಇರುವ ವ್ಯತ್ಯಾಸ ಇದು ಎಂಬುದನ್ನು ತೋರಿಸಬೇಕಾಗಿತ್ತು. ಅದನ್ನು ಎಸ್ ಐ ಟಿ ಮಾಡಿದೆ.
ಮಹಿಳಾ ಪೊಲೀಸ್ ಅಧಿಕಾರಿಗಳು ಸಂಸದನೊಬ್ಬನನ್ನು ಸಾಮಾನ್ಯ ಆರೋಪಿಯಂತೆ ಬಂಧಿಸಿ ವಿಚಾರಣೆ ನಡೆಸಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಧೈರ್ಯ ತುಂಬುವುದೂ ಅವರ ಉದ್ದೇಶಗಳಲ್ಲಿ ಒಂದಾಗಿರಬಹುದು.
ಇದನ್ನೂ ಓದಿ- ಪ್ರಜ್ವಲ್ ಈಗ ಶಿಶ್ನ ಗೊಂಚಲಿನ ಬೇತಾಳ !
ಪ್ರಜ್ವಲ ರೇವಣ್ಣ ಮೇ 30ರ ನಟ್ಟ ನಡು ಇರುಳಿನಲ್ಲಿ ಬಂಧನವಾದರೆ ಅದೇ ದಿನ ನಡುಹಗಲಿನಲ್ಲಿ ಹಾಸನದಲ್ಲಿ ನಾಡಿನ ಪ್ರಗತಿಪರ ಮನಸುಗಳೆಲ್ಲಾ ಒಟ್ಟಾಗಿ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯನ್ನು ಮಾಡಿದ್ದವು. ಪ್ರಜ್ವಲನ ಪೈಶಾಚಿಕ ನಡೆಯಿಂದ ನಲುಗಿ ಕುಗ್ಗಿ ಹೋಗಿರುವ ಮಹಿಳೆಯರಲ್ಲಿ ಸ್ಥೈರ್ಯ ತುಂಬುವುದಕ್ಕಾಗಿ ಇದನ್ನು ಆಯೋಜಿಸಲಾಗಿತ್ತು. ‘ನಾವಿದ್ದೇವೆ, ನಾವಿದ್ದೇವೆ, ನಿಮ್ಮ ಜೊತೆ’ ಎಂಬ ಘೋಷಣೆಯೊಂದಿಗೆ ನಾಡಿನ ವಿವಿಧ ಭಾಗಗಳಿಂದ ಸಾಗರೋಪಾಧಿಯಲ್ಲಿ ಜನರು ಬಂದಿದ್ದರು. ಹಾಸನದ ಇತಿಹಾಸದಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ತಾವಾಗಿಯೇ ಬಂದು ಒಟ್ಟು ಸೇರಿದ ಉದಾಹರಣೆ ಇಲ್ಲವೆಂದು ಸ್ಥಳಿಯರು ಹೇಳುತ್ತಿದ್ದಾರೆ. ಮಹಿಳಾ ಪ್ರಜ್ಞೆಯೊಂದು ಸಮೂಹ ಪ್ರಜ್ಞೆಯಾಗಿ ರೂಪುಗೊಂಡಾಗ ಇದೆಲ್ಲಾ ಸಾಧ್ಯವಾಗುತ್ತದೆ. ಇನ್ನು ಉಳಿದಿರೋದು ಕಾನೂನು ಹೋರಾಟ ಮತ್ತು ಕಾನೂನಿನ ಪ್ರಕ್ರಿಯೆಗಳು. ಅದಕ್ಕಾಗಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವ ಕೆಲಸ ಆಗಬೇಕಾಗಿದೆ.
ಅತಿಯಾದ ಆತ್ಮವಿಶ್ವಾಸ ಹುಂಬತನಕ್ಕೂ ಕಾರಣವಾಗುತ್ತದೆ. ಲೈಂಗಿಕ ದೃಶ್ಯಗಳುಳ್ಳ ಪೆನ್ ಡ್ರೈವ್ ಹೊರ ಬಿದ್ದ ತಕ್ಷಣ ಆತ ತನ್ನಿಷ್ಟದಂತೆ ವಿದೇಶಕ್ಕೆ ಹಾರಿದ್ದಾನೆ. ಮತ್ತು ತನ್ನಿಷ್ಟದಂತೆ ಹಿಂತಿರುಗಿದ್ದಾನೆ. ಇದವನ ದಾರ್ಷ್ಟ್ಯವನ್ನು ತೋರಿಸುತ್ತದೆ. ಅಧಿಕಾರ ಮತ್ತು ಅಂತಸ್ತಿನ ಮದ. ಅದನ್ನು ಆತ ಪ್ರದರ್ಶಿಸಿದ್ದು ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡುವ ಮುಖಾಂತರ. ಅದರಲ್ಲಿ ಆತ ಹೇಳಿದ್ದು ತಾನು ಪೂರ್ವ ನಿಗದಿಯಂತೆ ವಿದೇಶಕ್ಕೆ ಹೋಗಿದ್ದೆ. ಹೋಗುವಾಗ ಯಾವುದೇ ಆರೋಪ ನನ್ನ ಮೇಲಿರಲಿಲ್ಲ. ಯೂಟ್ಯೂಬ್ ನಲ್ಲಿ ವಾರ್ತೆ ನೋಡುತ್ತಿರುವಾಗ ತನ್ನ ಮೇಲೆ ಹೊರಿಸಲ್ಪಟ್ಟ ಆರೋಪ ನೋಡಿ ಖಿನ್ನತೆಗೆ ಒಳಗಾಗಿದ್ದೆ. ಅದೆಲ್ಲಾ ರಾಜಕೀಯ ಷಡ್ಯಂತರ. ನಾನೇ ಶುಕ್ರವಾರ ಖುದ್ದಾಗಿ ಎಸ್.ಐ.ಟಿ ಎದುರಿಗೆ ಹಾಜರಾಗಿ ವಿಚಾರಣೆಯನ್ನು ಎದುರಿಸುತ್ತೇನೆ ಎಂದು ಹೇಳಿದ್ದಲ್ಲದೆ ತಾನಿದರಿಂದ ಸುಲಭದಲ್ಲಿ ಬಚಾವಾಗುತ್ತೇನೆ ಎಂಬ ಆತ್ಮವಿಶ್ವಾಸದಿಂದಲೇ ಜರ್ಮನಿಯಿಂದ ಹೊರಟು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಾಲೂರಿದ್ದಾನೆ.
ಆದರೆ ಇಲ್ಲಿ ಅವನ ರಕ್ಷಣಾವಲಯ ಶಿಥಿಲವಾಗಿದೆ. ಅಪ್ಪ ಪೋಲಿಸರ ಕಣ್ಗಾವಲಿನಲ್ಲಿದ್ದರು, ನ್ಯಾಯಾಲಯದ ಮುಂದೆ ಆರೋಪಿಯಾಗಿ ನಿಂತಿದ್ದರು. ಅಮ್ಮ ಬಂಧನದ ಭೀತಿಯಲ್ಲಿ ತಲೆಮರೆಸಿ ಕೊಂಡಿದ್ದರು. ಚಿಕ್ಕಪ್ಪ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಕುಟುಂಬದೊಂದಿಗೆ ರೆಸಾರ್ಟ್ ಸೇರಿದ್ದರು. ಇಳಿವಯಸ್ಸಿನ ಅಜ್ಜ ಜರ್ಜರಿತಗೊಂಡು ದೃತರಾಷ್ಟ್ರನಂತೆ ಅಸಹಾಯಕರಾಗಿದ್ದರು. ಜೆಡಿಎಸ್ ಪಕ್ಷದ ಒಂದಷ್ಟು ಯುವಕಾರ್ಯಕರ್ತರನ್ನು ಬಿಟ್ಟರೆ ಉಳಿದವರು ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೌನಕ್ಕೆ ಜಾರಿದ್ದಾರೆ.
ಈಗ ಪ್ರಜ್ವಲ್ ರೇವಣ್ಣ ಒಂಟಿ. ಆದರೂ ಆತನ ದರ್ಪ ಅಡಗಿಲ್ಲ. ತಾನು ಪೊಲೀಸ್ ಕಸ್ಟಡಿಯಲ್ಲಿದ್ದರೂ ಹೊರಗೆ ಬಂದ ಮೇಲೆ ನಿಮ್ಮನ್ನೆಲ್ಲಾ ನೋಡಿಕೊಳ್ಳುತ್ತೇನೆ ಎಂದು ತನಿಖೆ ಮಾಡುತ್ತಿರುವವರನ್ನೇ ಬೆದರಿಸುತ್ತಿರುವುದಾಗಿ ವರದಿಯಾಗುತ್ತಿದೆ. ಏನು ಕೇಳಿದರೂ ತನಗೇನೂ ಗೊತ್ತಿಲ್ಲ, ತನ್ನ ಮೇಲೆ ಹೊರಿಸುತ್ತಿರುವ ಆರೋಪವೆಲ್ಲವೂ ರಾಜಕೀಯ ಕುತಂತ್ರ, ದೂರು ನೀಡಿದ ಮಹಿಳೆಯನ್ನು ನಾನು ನೋಡಿಯೇ ಇಲ್ಲ ಎಂದು ಹೇಳುತ್ತಿದ್ದಾನೆ.
ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಒಂದು ವೇಳೆ ಆರೋಪಿ ಸ್ಥಾನದಲ್ಲಿ ನಿಂತಿರುವ ಪ್ರಜ್ವಲ ರೇವಣ್ಣ ಸಂಸದನಾಗಿ ಆಯ್ಕೆಯಾದರೆ ಆತ ಮೀಸೆ ತಿರುವಿ ನಗುತ್ತಾನೆ. ಹಾಗಾಗಬಾರದು.
ಅದಕ್ಕಾಗಿ ಒಂದು ವೇಳೆ ಆತ ಸಂಸದನಾಗಿ ಆಯ್ಕೆಯಾದರೆ ಹಾಸನದ ಜನತೆ ಅದನ್ನು ಪ್ರಶ್ನಿಸಬೇಕು. ನಾವೆಲ್ಲಾ ದೂರದ ಊರುಗಳಿಂದ ಹಾಸನಕ್ಕೆ ಬಂದು ‘ನಾವಿದ್ದೇವೆ, ನಾವಿದ್ದೇವೆ, ನಿಮ್ಮಜೊತೆ’ ಎಂದು ಬೃಹತ್ ಮೆರವಣಿಗೆಯನ್ನು ಮಾಡಿದ್ದೆವು. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮಾನಸಿಕ ಸ್ಥೈರ್ಯವನ್ನು ತುಂಬಲು ಪ್ರಯತ್ನಿಸಿದ್ದೆವು. ವಿಶೇಷ ತನಿಖಾ ದಳ ಕೂಡ ಅವನ ತನಿಖೆಗಾಗಿ ಮಹಿಳಾ ತಂಡವನ್ನು ರಚಿಸಿ ‘ ನಾವೂ ಇದ್ದೇವೆ’ ಎಂದು ತೋರಿಸಿಕೊಟ್ಟಿದೆ.
ಈಗ ಹಾಸನದ ಜನತೆಯ ಸರದಿ. ಅವರು ತಮ್ಮ ಮಹಿಳೆಯರ ಪರವಾಗಿ ನಿಲ್ಲಬೇಕಾಗಿದೆ. ತಮ್ಮ ಜಿಲ್ಲೆಯ ಮಾನವನ್ನು ತಾವೇ ಕಾಪಾಡಿ ಕೊಳ್ಳಬೇಕಾಗಿದೆ.
ಉಷಾ ಕಟ್ಟೆಮನೆ, ಬಂಡಿಹೊಳೆ
ಪತ್ರಕರ್ತರಾಗಿ, ಬರಹಗಾರರಾಗಿ ಗುರುತಿಸಿಕೊಂಡು ಈಗ ಪೂರ್ಣ ಪ್ರಮಾಣದ ಕೃಷಿಕರಾಗಿದ್ದಾರೆ.