ವೈವಿಧ್ಯತೆಯೇ ನಮ್ಮ ದೇಶದ ಆತ್ಮ. ಆ ಪದರಗಳನ್ನು ಕಳಚುವುದು ನಮ್ಮ ಆತ್ಮವನ್ನೇ ಕಳೆದು ಕೊಂಡಂತೆ. ಕವಿ ರಾಜು ಹೆಗಡೆಯವರ ‘ಇಂಡಿಯಾ ಮತ್ತು ಈರುಳ್ಳಿ’ ಎಂಬ ಪುಟ್ಟ ಕವಿತೆಯಲ್ಲಿ ಎರಡು ಪಾತ್ರಗಳು – ದ್ವೇಷವನ್ನು ಹರಡುವ ಗೆಳೆಯ ಮತ್ತು ಅದರ ಪರಿಣಾಮವನ್ನು ಮೌನವಾಗಿ ತೋರಿಸುವ ಕಥಾನಾಯಕ. ಇಂದಿನ ಸಮಾಜದಲ್ಲಿ ನಮ್ಮ ಪಾತ್ರ ಯಾವುದು? ನಾವು ದ್ವೇಷದ ಮಾತುಗಳಿಗೆ ದನಿಗೂಡಿಸುತ್ತೇವೆಯೇ ಅಥವಾ ವೈವಿಧ್ಯತೆಯ ಮಹತ್ವವನ್ನು ತಿಳಿದು ಅದನ್ನು ಉಳಿಸಲು ಪ್ರಯತ್ನಿಸುತ್ತೇವೆಯೇ? – ಡಾ. ರವಿ ಎಂ ಸಿದ್ಲಿಪುರ.
ಈರುಳ್ಳಿ ಬೆಲೆ ಏರಿದಾಗ ಕೊಳ್ಳುವವರ ಮತ್ತು ಬೆಲೆ ಇಳಿದಾಗ ರೈತರ ಕಣ್ಣುಗಳಲ್ಲಿ ನೀರು ಬರುತ್ತದೆ. ಆದರೂ ನಮ್ಮ ಅಡುಗೆ ಮನೆಯಲ್ಲಿ ಈರುಳ್ಳಿ ಹೆಚ್ಚದ ದಿನಗಳೇ ವಿರಳ ತಾನೆ? ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುವುದು ನಮಗೆಲ್ಲರಿಗೂ ಅನುಭವಕ್ಕೆ ಬಂದಿರುವ ಸತ್ಯ. ಆದರೆ, ಈ ತೀರಾ ಸಹಜವಾದ, ದೈನಂದಿನ ಕ್ರಿಯೆಯೊಂದು ನಮ್ಮ ದೇಶದ ಇವತ್ತಿನ ಸ್ಥಿತಿಗೆ ಕನ್ನಡಿ ಹಿಡಿಯಬಲ್ಲದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆಯ ಧ್ವನಿಯಾಗಿ ಮೆಲ್ಲಗೆ ಹೊರಹೊಮ್ಮುತ್ತಿರುವ ಕವಿ ರಾಜು ಹೆಗಡೆಯವರ ‘ಇಂಡಿಯಾ ಮತ್ತು ಈರುಳ್ಳಿ’ ಎಂಬ ಪುಟ್ಟ ಕವಿತೆ, ಇಂತಹದ್ದೊಂದು ಅಸಾಧಾರಣ ಸತ್ಯವನ್ನು ನಮ್ಮ ಮುಂದಿಡುತ್ತದೆ. ಮೇಲ್ನೋಟಕ್ಕೆ ಸರಳವಾಗಿ ಕಾಣುವ ಈ ಕವಿತೆ ಅದರ ಪ್ರತಿಯೊಂದು ಸಾಲಿನಲ್ಲಿ ಆಳವಾದ ಸಾಮಾಜಿಕ ವ್ಯಾಖ್ಯಾನವನ್ನು ಹೊಂದಿದೆ. ಈ ಕವಿತೆಯ ಒಂದೊಂದು ಪದರವೂ ನಮಗೆ ಏನು ಹೇಳುತ್ತದೆಂದು ತಿಳಿಯೋಣ.
ಕವಿತೆ : ಇಂಡಿಯಾ ಮತ್ತು ಈರುಳ್ಳಿ
ಈರುಳ್ಳಿ ಸುಲಿಯುತ್ತಿದ್ದೆ
ಗೆಳೆಯ ಹೇಳುತ್ತಿದ್ದ;
ಮುಸ್ಲಿಮರನ್ನು ಮುಗಿಸಬೇಕು
ಒಂದು ಸಿಪ್ಪೆಯ ತೆಗೆದೆ
ಕ್ರೈಸ್ತರನು ಕಳಿಸಬೇಕು
ಇನ್ನೊಂದು ತೆರೆದೆ
ಹಿಂದುಳಿದವರನ್ನೂ ಹಿಮ್ಮೆಟ್ಟಿಸಬೇಕು
ಮತ್ತೊಂದು ತೆರೆದೆ
ದಲಿತರನ್ನು ದಮನಿಸಬೇಕು
ಮತ್ತೂ ತೆರೆದೆ
ಹೆಂಗಸರ ಹೆಡೆಮುರಿ ಕಟ್ಟಬೇಕು
ಇನ್ನೊಂದು ಸುಲಿದೆ
ಹೀಗೇ ನಾ ತೆರೆಯುತ್ತ ಹೋದೆ
ಕೊನೆಗೆ ಉಳಿದಿದ್ದು
ನನ್ನ ಅವನ ಕಣ್ಣುಗಳಲ್ಲಿ
ನೀರು ಮಾತ್ರ.
ರಾಜು ಹೆಗಡೆ
ಈ ಕವಿತೆಯಲ್ಲಿ ಎರಡು ಪಾತ್ರಗಳಿವೆ. ಅವು ಕಥನಕಾರ (Narrator)/ಕಥಾನಾಯಕ ಮತ್ತು ಆತನ ಗೆಳೆಯ. ಇವರಿಬ್ಬರ ನಡುವಿನ ಒಂದು ಸಂಭಾಷಣೆಯ ರೂಪವೇ ಕವಿತೆ. ಈ ಕವಿತೆಯ ಶಕ್ತಿಯಿರುವುದೇ ಅದರ ಕೇಂದ್ರ ರೂಪಕದಲ್ಲಿ. ಇಲ್ಲಿ ‘ಈರುಳ್ಳಿ’ ಎನ್ನುವುದು ‘ಇಂಡಿಯಾ’ದ ಪ್ರತಿರೂಪ. ಈರುಳ್ಳಿಗೆ ಹೇಗೆ ಒಂದರ ಮೇಲೊಂದು ಪದರಗಳಿವೆಯೋ, ಹಾಗೆಯೇ ನಮ್ಮ ಭಾರತ ದೇಶವೂ ವಿವಿಧ ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಮತ್ತು ಲಿಂಗಗಳೆಂಬ ಪದರಗಳಿಂದಾದ ಒಂದು ಬಹುತ್ವದ ರಚನೆ. ಒಂದು ಸಂಕೀರ್ಣ ರಾಷ್ಟ್ರ. ಈ ಪದರಗಳೆಲ್ಲವೂ ಸೇರಿದಾಗ ಮಾತ್ರವೇ ಅದು ‘ಪೂರ್ಣ’.
ಕವಿತೆಯಲ್ಲಿ ಕಥನಕಾರ(Narrator) ನ ಗೆಳೆಯ ದ್ವೇಷಕಾರಲು ಶುರುಮಾಡುತ್ತಾನೆ. ಅವನ ದ್ವೇಷದ ಪಟ್ಟಿ ದೊಡ್ಡದು. ಅವನ ಪ್ರಕಾರ, ಈ ದೇಶದಿಂದ- ಮುಸ್ಲಿಮರನ್ನು ಮುಗಿಸಬೇಕು, ಕ್ರೈಸ್ತರನು ಕಳಿಸಬೇಕು, ಹಿಂದುಳಿದವರನ್ನೂ ಹಿಮ್ಮೆಟ್ಟಿಸಬೇಕು, ದಲಿತರನ್ನು ದಮನಿಸಬೇಕು, ಹೆಂಗಸರ ಹೆಡೆಮುರಿ ಕಟ್ಟಬೇಕು. ಗೆಳೆಯನ ಈ ಪ್ರತಿಯೊಂದು ದ್ವೇಷದ ನುಡಿಗೂ, ಕಥಾನಾಯಕ ಮರುಮಾತನಾಡದೆ ಈರುಳ್ಳಿಯ ಒಂದೊಂದು ಪದರವನ್ನು(ಸಿಪ್ಪೆ) ಸುಲಿಯುತ್ತಾ ಹೋಗುತ್ತಾನೆ. ಇದು ಕವಿತೆಯ ಅತ್ಯಂತ ಚಾಣಾಕ್ಷ ನಡೆ. ಇಲ್ಲಿ ‘ಸುಲಿಯುವುದು’ ಎನ್ನುವ ಕ್ರಿಯೆ, ಸಮಾಜದಿಂದ ಒಂದು ಸಮುದಾಯವನ್ನು ಹೊರಹಾಕುವ, ಅಳಿಸಿಹಾಕುವ ವಿನಾಶಕಾರಿ ಕ್ರಿಯೆಯ ಸಂಕೇತವಾಗುತ್ತದೆ. ಈ ಸಂಕೇತದ ಧ್ವನಿಗಳು ಭಾರತದಲ್ಲಿ ಎಷ್ಟು ಸಾಮಾನ್ಯವಾಗಿ ಬಿಟ್ಟಿವೆ ಅಲ್ಲವೆ?
ಕವಿತೆಯಲ್ಲಿನ ಗೆಳೆಯನ ಮಾತುಗಳನ್ನು ಗಮನಿಸಿ. ಅವುಗಳು ಆಕಾಶದಿಂದ ಬಿದ್ದವಲ್ಲ. ಅದರ ಬೇರುಗಳು ಭಾರತದ ಇತಿಹಾಸದಲ್ಲಿವೆ. ದೇಶ ವಿಭಜನೆಯ ಗಾಯಗಳು, ಸಾವಿರಾರು ವರ್ಷಗಳ ಜಾತಿ ವ್ಯವಸ್ಥೆಯ ದೌರ್ಜನ್ಯಗಳು ಇಂದಿಗೂ ಸಮಾಜದಲ್ಲಿ ಹೇಗೆ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿವೆ. ಹೀಗಾಗಿ ದ್ವೇಷವು ಕೇವಲ ಒಂದು ಸಮುದಾಯಕ್ಕೆ ನಿಲ್ಲುವುದಿಲ್ಲ. ಅದು ಸಾಂಕ್ರಾಮಿಕ. ‘ಅವರು’ ಎಂದು ಶುರುವಾಗುವ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ಗುಂಪಿನ ಮೇಲೆ ದ್ವೇಷ ಸಾಧಿಸಿದ ನಂತರ, ಅದು ಮತ್ತೊಂದು ಗುಂಪಿನತ್ತ ಹೊರಳುತ್ತದೆ. ಇದು ಅಂತ್ಯವಿಲ್ಲದ ದುಷ್ಚಕ್ರ. ಒಂದೊಂದು ಸಮುದಾಯವನ್ನು ತೆಗೆದುಹಾಕುವುದು ಎಂದರೆ, ದೇಶದ ಮಾನವ ಸಂಪನ್ಮೂಲ, ಕೌಶಲ್ಯ ಮತ್ತು ಮಾರುಕಟ್ಟೆಯನ್ನು ನಾಶಮಾಡಿದಂತೆ. ಅಂತಿಮವಾಗಿ ದೇಶ ಆರ್ಥಿಕವಾಗಿಯೂ ಬರಿದಾಗುತ್ತದೆ.
ಗೆಳೆಯನ ದ್ವೇಷದ ಪಟ್ಟಿಯಲ್ಲಿ ಕೊನೆಯಲ್ಲಿ ‘ಹೆಂಗಸರು’ ಬರುತ್ತಾರೆ. ಧಾರ್ಮಿಕ, ಜಾತೀಯ ದ್ವೇಷದ ಜೊತೆಗೇ ಪಿತೃಪ್ರಧಾನ ವ್ಯವಸ್ಥೆಯ ದ್ವೇಷವೂ ಸೇರಿಕೊಂಡಿದೆ. ಯಾವುದೇ ಬಗೆಯ ಸರ್ವಾಧಿಕಾರಿ ಮನಸ್ಥಿತಿಯು ಮೊದಲು ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕಲು ನೋಡುತ್ತದೆ. ದ್ವೇಷದ ರಾಜಕಾರಣವು ಅಂತಿಮವಾಗಿ ಹೇಗೆ ಸ್ತ್ರೀವಿರೋಧಿಯೂ ಆಗಿರುತ್ತದೆ ಎಂಬುದನ್ನು ಕಾಣಬಹುದು. ಇದು ಕೇವಲ ರಾಜಕೀಯವಲ್ಲ, ಒಂದು ಸಾಮಾಜಿಕ ಮನಃಸ್ಥಿತಿ. ಈ ಗೆಳೆಯ ಬೇರೆ ಯಾರೂ ಅಲ್ಲ, ನಮ್ಮ ಸಮಾಜದಲ್ಲೇ, ಕೆಲವೊಮ್ಮೆ ನಮ್ಮ ಮನಸ್ಸಿನಲ್ಲೇ ಹುಟ್ಟುವ ದ್ವೇಷದ ಧ್ವನಿ. ಅದನ್ನು ಗುರುತಿಸಿ, ಪ್ರಶ್ನಿಸುವ ಅಗತ್ಯವಿದೆ. ಹೀಗೆ ದ್ವೇಷದಿಂದ ಸಮಾಜದ ಒಂದೊಂದೇ ಅಂಗವನ್ನು ಕತ್ತರಿಸುತ್ತಾ ಹೋದರೆ ಏನಾಗುತ್ತದೆ?
ಬಹುತ್ವದ ಪದರುಗಳನ್ನು ಬಲವಂತವಾಗಿ ಬೇರ್ಪಡಿಸುವ ಮೇಲಿನ ಪ್ರಶ್ನೆಗೆ, ಕಥಾನಾಯಕ ಉತ್ತರವನ್ನು ಕೃತಿಯ ಮೂಲಕವೇ ಕೊಡುತ್ತಾನೆ. ತನ್ನ ಗೆಳೆಯನ ಮಾತುಗಳಿಗೆ ವಾದ ಮಾಡುವುದಿಲ್ಲ. ಬದಲಾಗಿ ಅವನ ವಿನಾಶಕಾರಿ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತಂದರೆ ಏನಾಗುತ್ತದೆ ಎಂಬುದನ್ನು ಈರುಳ್ಳಿಯ ಎಲ್ಲಾ ಪದರಗಳನ್ನು ಸುಲಿದು ಮುಗಿಸುತ್ತಾನೆ. ಆಗ ಏನಾಯಿತು? ‘ಇಂಡಿಯಾ’ ಎಂಬ ಈರುಳ್ಳಿ ಸಂಪೂರ್ಣ ಖಾಲಿಯಾಯಿತು. ಅಲ್ಲಿ ಏನೂ ಉಳಿಯಲಿಲ್ಲ. ‘ನಾನು’ ಅಥವಾ ‘ನಮ್ಮ ದೇಶ’ ಎಂದರೇನು? ಅದು ಇತರರನ್ನು ಹೊರತುಪಡಿಸಿ ನಿರ್ಮಾಣವಾಗುವುದೇ? ಅಥವಾ ಎಲ್ಲರನ್ನೂ ಒಳಗೊಂಡಾಗ ಮಾತ್ರ ಅದಕ್ಕೆ ಅಸ್ತಿತ್ವವೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತದೆ. ‘ಹೀಗೇ ನಾ ತೆರೆಯುತ್ತ ಹೋದ / ಕೊನೆಗೆ ಉಳಿದಿದ್ದು / ನನ್ನ ಅವನ ಕಣ್ಣುಗಳಲ್ಲಿ / ನೀರು ಮಾತ್ರ’- ಈ ಅಂತಿಮ ಸಾಲುಗಳು ಎದೆಯೊಳಗೆ ಚುಚ್ಚುತ್ತವೆ. ಎಲ್ಲ ಪದರಗಳನ್ನು ಕಿತ್ತೆಸೆದ ಮೇಲೆ ಉಳಿದಿದ್ದು ಬರೀ ಶೂನ್ಯ. ಆ ಶೂನ್ಯತೆಯ ಜೊತೆಗೆ, ಉಳಿದದ್ದು ಕಣ್ಣೀರು ಮಾತ್ರ.
ಇಲ್ಲಿ ಬರುವ ಕಣ್ಣೀರು ಕೇವಲ ಈರುಳ್ಳಿ ಹೆಚ್ಚಿದ್ದರಿಂದ ಬಂದ ಭೌತಿಕ ನೀರಲ್ಲ. ಅದು ನಮ್ಮ ಸುಂದರವಾದ ದೇಶವನ್ನು ನಾವೇ ಸೇರಿ ನಾಶ ಮಾಡುತ್ತಿರುವ ದುರಂತವನ್ನು ನೋಡಿ ಬರುವ ದುಃಖದ, ಅಸಹಾಯಕತೆಯ, ಪಶ್ಚಾತ್ತಾಪದ ಕಣ್ಣೀರು. ಇದು ಸಾಂಕೇತಿಕ ದುಃಖ. ಇಲ್ಲಿನ ಅತ್ಯಂತ ಮುಖ್ಯವಾದ ತಿರುವೆಂದರೆ, ಕಣ್ಣೀರು ಬಂದಿದ್ದು ಈರುಳ್ಳಿ ಸುಲಿಯುತ್ತಿದ್ದ ಕಥಾನಾಯಕನಿಗೆ ಮಾತ್ರವಲ್ಲ, ದ್ವೇಷ ಕಾರುತ್ತಿದ್ದ ಅವನ ಗೆಳೆಯನಿಗೂ ಕೂಡ. ಇದರರ್ಥ, ದ್ವೇಷದ ಆಟದಲ್ಲಿ ಗೆಲ್ಲುವವರು ಯಾರೂ ಇಲ್ಲ. ದ್ವೇಷವನ್ನು ಬಿತ್ತುವವನೂ ಕೊನೆಗೆ ಅಳಬೇಕಾಗುತ್ತದೆ. ಎಲ್ಲರನ್ನೂ ಹೊರಹಾಕಿದ ಮೇಲೆ, ತಾನು ಮಾತ್ರ ಉಳಿಯುತ್ತೇನೆ ಎಂಬ ಭ್ರಮೆ ಸುಳ್ಳಾದಾಗ, ತನ್ನನ್ನು ಸುತ್ತುವರಿದಿದ್ದ ಸಮಾಜವೇ ಇಲ್ಲವಾದಾಗ, ಅವನಿಗೆ ಉಳಿಯುವುದೂ ಅದೇ ನೋವು ಮತ್ತು ಒಂಟಿತನ.
ಕನ್ನಡ ಸಾಹಿತ್ಯದ ಪ್ರತಿಭಟನಾ ಕಾವ್ಯ ಸಂಪ್ರದಾಯದ ಮುಂದುವರಿಕೆಯಾದ ಈ ಕವಿತೆ, ಇವತ್ತಿನ ದಿನಮಾನಗಳಿಗೆ ಹೆಚ್ಚು ಪ್ರಸ್ತುತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ದ್ವೇಷದ ಸಂದೇಶಗಳ, ದ್ವೇಷವನ್ನೇ ಬಂಡವಾಳವಾಗಿಸಿಕೊಂಡ ರಾಜಕೀಯ ಸಿದ್ಧಾಂತಗಳ ವಿರುದ್ಧದ ಒಂದು ತೀಕ್ಷ್ಣವಾದ ಎಚ್ಚರಿಕೆಯಾಗಿದೆ. ನಮ್ಮ ಸಮಾಜದಲ್ಲಿ ‘ಶುದ್ಧೀಕರಣ’ದ ಹೆಸರಿನಲ್ಲಿ, ‘ರಾಷ್ಟ್ರೀಯತೆ’ಯ ಹೆಸರಿನಲ್ಲಿ ಒಂದು ಸಮುದಾಯವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುವ ಪ್ರಯತ್ನದಲ್ಲಿ, ‘ನಾವು’ (ಉಳಿಯಬೇಕಾದವರು) ಮತ್ತು ‘ಅವರು'(ಹೋಗಬೇಕಾದವರು) ಎಂದು ವಿಭಜಿಸುವ ಅಪಾಯಕಾರಿ ರಾಜಕಾರಣವನ್ನು ಕವಿತೆ ಬಯಲು ಮಾಡುತ್ತಿದೆ. ಈ ವಿಭಜನೆಯು ದೇಶದ ಮೂಲ ಅಡಿಪಾಯವನ್ನೇ ಹೇಗೆ ಅಲ್ಲಾಡಿಸುತ್ತದೆ ಎಂಬುದಕ್ಕೆ ಎಚ್ಚರಿಕೆಯ ಗಂಟೆಯಂತೆ ಮೊಳಗುತ್ತದೆ. ಹೀಗೆ ಕೇವಲ ಒಂದು ಕವಿತೆಯಾಗಿ ಅಲ್ಲ; ನಮ್ಮ ಕಾಲದ ಒಂದು ದಾಖಲೆಯಾಗಿ ಉಳಿಯುತ್ತದೆ. ನಮ್ಮ ಭವಿಷ್ಯದ ಪೀಳಿಗೆಗೆ ಇಂತಹ ದಾಖಲೆಯನ್ನು ಉಡುಗೊರೆಯಾಗಿ ಕೊಡುವುದಾದರೂ ಹೇಗೆ?
ನಾವು ಯಾರನ್ನಾದರೂ ‘ಹೊರಗಿನವರು’ ಎಂದು ಪರಿಗಣಿಸಿ ಅವರನ್ನು ತೆಗೆದುಹಾಕಲು ಹೊರಟಾಗ, ನಾವು ಈರುಳ್ಳಿಯ ಒಂದು ಪದರವನ್ನು ಸುಲಿಯುತ್ತಿದ್ದೇವೆ ಎಂದೇ ಅರ್ಥ. ಹೀಗೆ ಒಂದೊಂದೇ ಪದರವನ್ನು ಸುಲಿಯುತ್ತಾ ಹೋದರೆ, ಕೊನೆಗೆ ‘ಭಾರತ’ ಎಂಬ ಪರಿಕಲ್ಪನೆಯೇ ಖಾಲಿಯಾಗಿ, ನಮ್ಮೆಲ್ಲರ ಕಣ್ಣಲ್ಲೂ ನೀರು ತುಂಬಿಕೊಳ್ಳುತ್ತದೆ. ವೈವಿಧ್ಯತೆಯೇ ನಮ್ಮ ದೇಶದ ಆತ್ಮ. ಆ ಪದರಗಳನ್ನು ಕಳಚುವುದು ನಮ್ಮ ಆತ್ಮವನ್ನೇ ಕಳೆದು ಕೊಂಡಂತೆ. ಕವಿತೆಯಲ್ಲಿ ದ್ವೇಷವನ್ನು ಹರಡುವ ಗೆಳೆಯ ಮತ್ತು ಅದರ ಪರಿಣಾಮವನ್ನು ಮೌನವಾಗಿ ತೋರಿಸುವ ಕಥಾನಾಯಕ ಇಂದಿನ ಸಮಾಜದಲ್ಲಿ ನಮ್ಮ ಪಾತ್ರ ಯಾವುದು? ನಾವು ದ್ವೇಷದ ಮಾತುಗಳಿಗೆ ದನಿಗೂಡಿಸುತ್ತೇವೆಯೇ ಅಥವಾ ವೈವಿಧ್ಯತೆಯ ಮಹತ್ವವನ್ನು ತಿಳಿದು ಅದನ್ನು ಉಳಿಸಲು ಪ್ರಯತ್ನಿಸುತ್ತೇವೆಯೇ? ಈ ಆತ್ಮಾವಲೋಕನದ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದವರು ಯಾರು?
ಡಾ. ರವಿ ಎಂ ಸಿದ್ಲಿಪುರ
ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ –‘ಹಿಂಗೊಂದು ಕಥೆ’: ಸೌಹಾರ್ದದ ಕಥನ vs. ರಾಜಕೀಯ ವಿಭಜನೆ