ನ್ಯಾಯಮೂರ್ತಿಯೊಳಗಿನ ಕೋಮುವಾದಿ ಬಯಲಿಗೆ ಬಿದ್ದಾಗ!

Most read

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಮಾಡಿದ ಒಕ್ಕೂಟ ಸರಕಾರವನ್ನು ಬೆಂಬಲಿಸಿ ತೀರ್ಪು ನೀಡಿದಾಗ, ಮಹಾರಾಷ್ಟ್ರದ ಶಿಂಧೆಯ ಕಾನೂನು ಬಾಹಿರ ಸರಕಾರ ತನ್ನ ಪೂರ್ಣಾವಧಿ ಮುಗಿಸಲು ಅವಕಾಶ ಮಾಡಿಕೊಟ್ಟಾಗ, ಚುನಾವಣಾ ಬಾಂಡ್‌ ನಲ್ಲಿ ಅಕ್ರಮವಾಗಿ ಹಣತೊಡಗಿಸಿದ ಕಂಪೆನಿಗಳ ವಿರುದ್ಧ ಎಸ್‌ ಐ ಟಿ ತನಿಖೆಯ ಬೇಡಿಕೆ ತಿರಸ್ಕರಿಸಿದಾಗ, ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟಾಗ, ದೇಶದಾದ್ಯಂತ ಬುಲ್‌ ಡೋಜರ್‌ ಜಸ್ಟಿಸ್‌ ಕಾರ್ಯಾಚರಣೆ ನೋಡಿಯೂ ಕೈಕಟ್ಟಿ ಕುಳಿತಾಗ… ಹೀಗೆ ಅನೇಕ ಬಾರಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನಮ್ಮನ್ನು ನಿರಾಶೆ ಗೊಳಿಸಿದರು– – ಶ್ರೀನಿವಾಸ ಕಾರ್ಕಳ, ರಾಜಕೀಯ ವಿಶ್ಲೇಷಕರು.

“Every word gets reported in the news, and sitting judges might get attracted (to speak), And worse is post retirement, judges think that ‘time has come when I have to talk now’, as if it is a full time talk. I think that’s not the way the system should work. Measured speech, measured talk- think before you say”.

– Justice Narasimha, Supreme Court Justice

ಮಾತು ಮಾನವನ ಒಂದು ಅಮೂಲ್ಯ ಆಸ್ತಿ. ಆದರೆ ಆ ಅಮೂಲ್ಯ ಆಸ್ತಿಯನ್ನು ಹಿತಮಿತವಾಗಿ ಬಳಸಿಕೊಳ್ಳಬೇಕು. ಈ ಗಡಿರೇಖೆಯನ್ನು ಮೀರಿದಾಗ ಅದು ಅನೇಕ ಅವಾಂತರಗಳನ್ನು ಸೃಷ್ಟಿಸಿಬಿಡುತ್ತದೆ. ಆದ್ದರಿಂದಲೇ ʼಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತುʼ, ʼಮಾತು ಬೆಳ್ಳಿ, ಮೌನ ಬಂಗಾರʼ ಎಂಬೆಲ್ಲ ಅನೇಕ ಗಾದೆಗಳು ಹುಟ್ಟಿಕೊಂಡಿವೆ.

ಮೌನವಾಗಿರುವವನ್ನು ಅನೇಕ ಬಾರಿ ಮಹಾ ಜ್ಞಾನಿ ಎಂದೆಲ್ಲ ಅಂದುಕೊಳ್ಳುವುದಿದೆ. ಆದರೆ ಆತ ಮಾತನಾಡತೊಡಗುತ್ತಿದ್ದಂತೆ ಆತನ ಸಿದ್ಧಾಂತ, ಆತನ ಜ್ಞಾನದ ಮಿತಿ ಎಲ್ಲವೂ ಬಹಿರಂಗಗೊಂಡು ಆತ ಬೆತ್ತಲಾಗಿ ಬಿಡುವುದಿದೆ. ಹೀಗೆ ಪ್ರಚಾರ ಬಯಕೆಯಿಂದ ಅತಿಯಾದ ವಾಚಾಳಿಗಳಾಗಿರುವವರು ತಾವು ಪ್ರಜ್ಞಾಪೂರ್ವಕವಾಗಿ ಬಚ್ಚಿಟ್ಟುಕೊಂಡ ಜೀವ ವಿರೋಧಿ, ಪ್ರತಿಗಾಮಿ ಆಲೋಚನೆಗಳು ಬಹಿರಂಗಗೊಂಡು ಅಂತಹ ವ್ಯಕ್ತಿಯ ಬಗ್ಗೆ ಇರಿಸಿಕೊಂಡಿದ್ದ ಭ್ರಮೆಗಳೆಲ್ಲ ನಿರಸನಗೊಂಡು, ಛೆ! ಎಂತಹ ಜೀವವಿರೋಧಿ ಆಲೋಚನೆಯ ವ್ಯಕ್ತಿಯನ್ನು ನಾವು ಇಲ್ಲಿಯ ತನಕ ಸಂಭಾವಿತ ಅಂದುಕೊಂಡು ಆರಾಧಿಸಿಕೊಂಡು ಬಂದೆವು ಎಂದು ನಮಗೇ ಅನಿಸಿಬಿಡುವುದಿದೆ. ಇದಕ್ಕೆ ಅತ್ಯುತ್ತಮ ಒಂದು ಉದಾಹರಣೆಯೆಂದರೆ ಸುಪ್ರೀಂ ಕೋರ್ಟ್‌ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್.‌

ಸಂಘಿ ಮನಸ್ಥಿತಿಯ ನ್ಯಾಯಮೂರ್ತಿ

ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ಮೂರು ವರ್ಷದ ಹಿಂದೆ ಚಂದ್ರಚೂಡ ಅವರು ಸುಪ್ರೀಂ ಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಯಾದಾಗ ಈ ದೇಶದ ಅನೇಕ ಪ್ರಗತಿಪರರು ಸಂಭ್ರಮಿಸಿದ್ದರು.  ಈ ಹಿಂದಿನ ಅನೇಕ ಸಿಜೆಐಗಳು ಮಾಡಿದ ತಪ್ಪುಗಳನ್ನು ಸರಿಪಡಿಸಿ ನ್ಯಾಯಾಂಗದ ಘನತೆಯನ್ನು ಅವರು ಮರಳಿ ಸ್ಥಾಪಿಸುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಕ್ರಮೇಣ ಚಂದ್ರಚೂಡ ಅವರ ಕಾರ್ಯವೈಖರಿಯ ಪರಿಚಯವಾಗುತ್ತಲೇ ಈ ಮನುಷ್ಯ ನ್ಯಾಯಾಂಗದ ಸ್ವಾಯತ್ತತೆಯನ್ನು ಎತ್ತಿಹಿಡಿಯುವವರಲ್ಲ, ಸಂಘಿ ಮನಸ್ಥಿತಿಯವರು, ಅಲ್ಲದೆ ಸರಕಾರದ ಪರ ನಿಲ್ಲುವವರು ಎಂದು ಅನಿಸಲಾರಂಭಿಸಿತು. ಮುಖ್ಯವಾಗಿ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಮಾಡಿದ ಒಕ್ಕೂಟ ಸರಕಾರವನ್ನು ಬೆಂಬಲಿಸಿ ತೀರ್ಪು ನೀಡಿದಾಗ, ಮಹಾರಾಷ್ಟ್ರದ ಶಿಂಧೆಯ ಕಾನೂನು ಬಾಹಿರ ಸರಕಾರ ತನ್ನ ಪೂರ್ಣಾವಧಿ ಮುಗಿಸಲು ಅವಕಾಶ ಮಾಡಿಕೊಟ್ಟಾಗ, ಚುನಾವಣಾ ಬಾಂಡ್‌ ನಲ್ಲಿ ಅಕ್ರಮವಾಗಿ ಹಣತೊಡಗಿಸಿದ ಕಂಪೆನಿಗಳ ವಿರುದ್ಧ ಎಸ್‌ ಐ ಟಿ ತನಿಖೆಯ ಬೇಡಿಕೆ ತಿರಸ್ಕರಿಸಿದಾಗ, ಚಂಡೀಗಢದ ಮುನಿಸಿಪಲ್‌ ಕಾರ್ಪೋರೇಶನ್‌ ಚುನಾವಣೆಯಲ್ಲಿ ಅಕ್ರಮ ಎಸಗಿದ ಅನಿಲ್‌ ಮೆಸಯಿಯ ವಿರುದ್ಧ ಕಾನೂನು ಕ್ರಮ ಮುಂದುವರಿಸದಿದ್ದಾಗ, ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟಾಗ, ದೇಶದಾದ್ಯಂತ ಬುಲ್‌ ಡೋಜರ್‌ ಜಸ್ಟಿಸ್‌ ಕಾರ್ಯಾಚರಣೆ ನೋಡಿಯೂ ಕೈಕಟ್ಟಿ ಕುಳಿತಾಗ, ಹೀಗೆ ಅನೇಕ ಬಾರಿ ಅವರು ದೇಶವನ್ನು ನಿರಾಶೆಗೊಳಿಸಿದರು. ಇದಕ್ಕೆಲ್ಲ ಕಲಶ ಇಟ್ಟಂತೆ ಅವರು ತಮ್ಮ ಘನತೆ ಕಳೆದುಕೊಂಡುದು ಕಾರ್ಯಾಂಗ ಮತ್ತು ಶಾಸಕಾಂಗವನ್ನು ಪ್ರತ್ಯೇಕಿಸುವ ಗಡಿರೇಖೆಯನ್ನು ದಾಟಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜತೆಯಲ್ಲಿ ಗಣೇಶ ಪೂಜೆ ಮಾಡಿದಾಗ. ಇದು ಎಂತಹ ಒಂದು ಕೆಟ್ಟ ಸಂದೇಶವನ್ನು ದೇಶಕ್ಕೆ ನೀಡುತ್ತದೆ ಎಂಬ ಅರಿವೇ ಇಲ್ಲದಂತೆ ಅವರು ತಮ್ಮ ಘನತೆಯನ್ನು ಪಾತಾಳಕ್ಕೆ ತಳ್ಳುವ ಜತೆಗೆ ನ್ಯಾಯಾಂಗದ ಘನತೆಯನ್ನೂ ಪಾತಾಳಕ್ಕೆ ತಳ್ಳಿದರು.

ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಚಂದ್ರಚೂಡರಿಗೆ ಅಪಾರ ಪ್ರಚಾರದ ಬಯಕೆ. ಅಧಿಕಾರದಲ್ಲಿದ್ದಾಗಲೂ ನಿವೃತ್ತಿಯ ನಂತರವೂ. ನಿವೃತ್ತಿಯ ಆನಂತರ ಅವರು ಸುಮ್ಮನಿದ್ದರೆ ಅವರ ಅಳಿದುಳಿದ ಮರ್ಯಾದೆ ಉಳಿಯುತ್ತಿತ್ತೋ ಏನೋ. ಆದರೆ ಒಂದು ದಿನವೂ ಸುಮ್ಮನಿರದೆ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ ತಮ್ಮ ಬಂಡವಾಳ ಬಹಿರಂಗ ಮಾಡುತ್ತಾ ಹೋದರು. ಅವರದೊಂದು ಪುಸ್ತಕ ಸದ್ಯವೇ ಹೊರಬರಲಿದ್ದು ಅದಕ್ಕೆ ಪ್ರಚಾರವಾಗಿ ಅವರು ಹೀಗೆ ಸಂದರ್ಶನ ನೀಡುತ್ತಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸನ್‌ ಜೈನ್‌ ನಡೆಸಿದ ಸಂದರ್ಶನ

ಪ್ರಧಾನಿ ನರೇಂದ್ರ ಮೋದಿಯವರ ಜತೆಯಲ್ಲಿ ಗಣೇಶ ಪೂಜೆ

ಈವತ್ತು ನಮ್ಮ ಬಹುತೇಕ ಮಾಧ್ಯಮಗಳು ಮತ್ತು ಪತ್ರಕರ್ತರು ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ, ಎಷ್ಟು ದಿಟ್ಟತನ ತೋರುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಚಂದ್ರಚೂಡರು ಇಕ್ಕಟ್ಟುಗಳಿಂದ ಪಾರಾಗುತ್ತಾ ಹೋದರು. ಆದರೆ ಅವರು ಸಿಕ್ಕಿಹಾಕಿಕೊಂಡದ್ದು ಖ್ಯಾತ ಪತ್ರಕರ್ತ ಶ್ರೀನಿವಾಸನ್‌ ಜೈನ್‌ ಕೈಯಲ್ಲಿ.

ಹಿಂದೆ ಎನ್‌ ಡಿ ಟಿ ವಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸನ್‌ ಜೈನ್‌ ನಿಜವಾದ ಪತ್ರಕರ್ತ ಹೇಗಿರಬೇಕು ಎಂಬುದಕ್ಕೆ ಒಂದು ಮಾದರಿಯಂತೆ ಕೆಲಸ ಮಾಡಿದವರು. ತಮ್ಮ ತೀಕ್ಷ್ಣ ಸವಾಲುಗಳ ಮೂಲಕ ಎದುರಾಳಿಯ ಬಂಡವಾಳವನ್ನು ಬಹಿರಂಗ ಮಾಡುವಲ್ಲಿ ನಿಷ್ಣಾತರು. ಸಂದರ್ಶನಕ್ಕೆ ಮೊದಲು ಆಳ ಅಧ್ಯಯನ ಮಾಡಿಕೊಂಡು ಬಂದು ಕೂರುವವರು ಅವರು.

ಇತ್ತೀಚೆಗೆ ನ್ಯೂಸ್‌ ಲಾಂಡ್ರಿ ಗಾಗಿ ಅವರು ಚಂದ್ರಚೂಡರನ್ನು ಸಂದರ್ಶಿಸಿದರು. ಇದರಲ್ಲಿ ಅವರು ಮುಖ್ಯವಾಗಿ ಎರಡು ಪ್ರಶ್ನೆಗಳನ್ನು ಚಂದ್ರಚೂಡರಿಗೆ ಕೇಳುತ್ತಾರೆ. ಮೊದಲನೆಯದು ಬಾಬ್ರಿ ಮಸೀದಿ ಧ್ವಂಸದ ವಿಷಯದಲ್ಲಿ, ಎರಡನೆಯದು ಗ್ಯಾನ ವಾಪಿ ಮಸೀದಿ ಸಮೀಕ್ಷೆಯ ಬಗ್ಗೆ.

ಬಾಬರಿ ಮಸೀದಿ ಧ್ವಂಸ

ಬಾಬರಿ ಮಸೀದಿ ಧ್ವಂಸ ತೀರ್ಪು

ಮೊದಲನೆಯ ಪ್ರಶ್ನೆಯಾಗಿ ಬಾಬರಿ ಮಸೀದಿಯನ್ನು ಧ‍್ವಂಸಗೊಳಿಸಿದ್ದು ತಪ್ಪಲ್ಲವೇ? ಇದೇ ನೆಲೆಯಲ್ಲಿ ಮಂದಿರ ಹೋರಾಟಗಾರರ ಪರವಾಗಿ ತೀರ್ಪು ನೀಡಿದ್ದು ಎಷ್ಟು ಸರಿ? ಎಂದು ಕೇಳುತ್ತಾರೆ. ಇದಕ್ಕೆ ಸರಳವಾದ ಉತ್ತರವನ್ನು ಅವರು ನೀಡಿ ಪಾರಾಗಬಹುದಿತ್ತು. ಇದರ ಬದಲಿಗೆ ಹಿಂದೆ ಮಂದಿರವನ್ನು ಉರುಳಿಸಿ ಮಸೀದಿ ಕಟ್ಟಿದ್ದು ತಪ್ಪಲ್ಲವೇ, ಇದಕ್ಕೆ ಆರ್ಕಿಯಾಲಜಿಕಲ್‌ ಸರ್ವೇ ಆಫ್‌ ಇಂಡಿಯಾದವರು ಪುರಾವೆ ಕೂಡಾ ಕೊಟ್ಟಿದ್ದಾರಲ್ಲ? ಎಂದು ಅವರು ಜೈನ್‌ ಗೆ ಮರು ಪ್ರಶ್ನೆ ಹಾಕುತ್ತಾರೆ. ಅವರ ಧ್ವನಿ ಹೇಗಿತ್ತು ಎಂದರೆ, ಅಂದು ಮಾಡಿದ ತಪ್ಪಿಗೆ ಇಂದಿನ ಪ್ರತೀಕಾರ ಸರಿ ಎಂಬಂತಿತ್ತು. ಆದರೆ ʼನೀವೂ ಸೇರಿಕೊಂಡು ಬರೆದ ಅಯೋಧ್ಯಾ ತೀರ್ಪಿನಲ್ಲಿ ಅಲ್ಲಿ ಮಂದಿರವನ್ನು ಒಡೆದು ಮಸೀದಿ ಕಟ್ಟಿದ್ದಕ್ಕೆ ಪುರಾವೆ ಇಲ್ಲ ಎಂದು ಬರೆದಿದ್ದೀರಲ್ಲ?ʼ ಎಂದು ಜೈನ್‌ ಪ್ರಶ್ನಿಸುತ್ತಾರೆ. ನೀವು ಒಂದು ಹೊಂಡದಲ್ಲಿ ಸಿಕ್ಕಿಕೊಂಡಿದ್ದಾಗ ಅದನ್ನು ಇನ್ನಷ್ಟು ಅಗೆಯುತ್ತ ಹೋಗಬೇಡಿ ಎಂಬ ಒಂದು ಇಂಗ್ಲಿಷ್‌ ಗಾದೆಯಿದೆ. ʼನೀವು ನಿಮಗೆ ಬೇಕಾದಂತೆ ಇತಿಹಾಸ ಉಲ್ಲೇಖಿಸುತ್ತೀರಿʼ ಎಂದೆಲ್ಲ ಮಾತನಾಡ ತೊಡಗಿದ ಚಂದ್ರಚೂಡ್‌ ಇನ್ನಷ್ಟು ಇಕ್ಕಟ್ಟಿನಲ್ಲಿ ಸಿಲುಕುತ್ತಾ ಹೋದರು. ಅಯೋಧ್ಯಾ ವಿಷಯದಲ್ಲಿ ಅವರು ಕಾನೂನು ಮತ್ತು ಸಂವಿಧಾನದ ನೆಲೆಯಲ್ಲಿ ವಾಸ್ತವಾಂಶ ಆಧರಿಸಿ ತೀರ್ಪು ನೀಡಿಲ್ಲ ಬದಲಿಗೆ ಭಾವನೆಗಳಿಗೆ ಬಲಿಯಾಗಿ, ಬಹುಸಂಖ್ಯಾತ ಹಿಂದೂಗಳನ್ನು ಖುಷಿಪಡಿಸಲು ಇಂತಹ ತೀರ್ಪು ನೀಡಿದ್ದರು ಎಂಬುದು ಸ್ಪಷ್ಟವಾಗುತ್ತಾ ಹೋಯಿತು.

ಜ್ಞಾನ ವಾಪಿ ಮಸೀದಿ ಸಮೀಕ್ಷೆ

ಎರಡನೆಯ ಪ್ರಶ್ನೆ ಗ್ಯಾನವಾಪಿ ಮಸೀದಿ ಸಮೀಕ್ಷೆ. ಬಹು ಧರ್ಮದ ಮತ್ತು ಸಂಕೀರ್ಣ ಇತಿಹಾಸ ಇರುವ ಒಂದು ದೇಶದಲ್ಲಿ ಆರಾಧನಾ ಸ್ಥಳಗಳ ವಿಷಯ ಯಾವತ್ತೂ ಒಂದು ವಿವಾದವೇ ಆಗಿದೆ. ಈ ಹಿನ್ನೆಲೆಯಲ್ಲಿಯೇ ದೇಶ ಸ್ವತಂತ್ರಗೊಂಡ 1947 ರಲ್ಲಿ ಆರಾಧನಾ ಸ್ಥಳಗಳು ಹೇಗಿವೆಯೋ ಹಾಗೆಯೇ ಇರಬೇಕು, ಹಕ್ಕು ಸ್ಥಾಪನೆಗಳ ವಿಷಯದಲ್ಲಿ ವಿವಾದಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಇಲ್ಲೂ ಬಾಬ್ರಿ ಮಸೀದಿ ರಾಮಮಂದಿರಕ್ಕೆ ಒಂದು ರಿಯಾಯಿತಿ ನೀಡಲಾಗಿತ್ತು. 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ನಡೆಸಿದ ಹಿನ್ನೆಲೆಯಲ್ಲಿ Places of worship Act (ಆರಾಧನಾ ಸ್ಥಳಗಳ ಕಾಯಿದೆ) ಜಾರಿಗೆ ಬಂತು. ಆ ಪ್ರಕಾರ ಯಾವುದೇ ಆರಾಧನಾ ಸ್ಥಳಗಳ ಮೇಲೆ ಬೇರೆಯವರು ಹೊಸದಾಗಿ ಹಕ್ಕು ಸ್ಥಾಪನೆ ಮಾಡುವಂತಿಲ್ಲ. ಇದು ಮತೀಯ ಸಾಮರಸ್ಯದ ವಿಷಯದಿಂದ ಅತ್ಯುತ್ತಮ ಒಂದು ನಿರ್ಧಾರ ಕೂಡಾ.‌

ಗ್ಯಾನವಾಪಿ ಮಸೀದಿ ಸಮೀಕ್ಷೆ

ಈ ಕಾಯಿದೆಯನ್ನು ಮೀರಿ ಮಸೀದಿ ಸಮೀಕ್ಷೆ ಇತ್ಯಾದಿಗಳನ್ನು ಮಾಡಿದರೆ ಅದು ಮುಂದೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಕಾಶಿಯ ಗ್ಯಾನವಾಪಿ ಮಸೀದಿಯಲ್ಲಿ ಹಿಂದೆ ದೇವಾಲಯ ಇತ್ತೋ ಎಂಬ ಬಗ್ಗೆ ಸಮೀಕ್ಷೆ ನಡೆಸಕೂಡದು ಎಂದು ಅನೇಕರು ವಾದಿಸಿದ್ದರು. ಸ್ಥಳೀಯ ನ್ಯಾಯಾಲಯಗಳು ಹಿಂದೂಗಳ ಪಕ್ಷವಹಿಸಿದಾಗ ವಿಷಯ ಸುಪ್ರೀಂ ಕೋರ್ಟ್ ಗೆ ಬಂತು. ಆಗ ಸಿಜೆಐ ಚಂದ್ರಚೂಡ್‌ ಅವರು ಕಾಯಿದೆ ಮತ್ತು ಸಂವಿಧಾನದ ಆಶಯ ಎತ್ತಿ ಹಿಡಿದು ಈ ಬೇಡಿಕೆಯನ್ನು ತಿರಸ್ಕರಿಸುತ್ತಿದ್ದರೆ ವಿವಾದ ಅಲ್ಲಿಗೇ ಮುಗಿಯುತ್ತಿತ್ತು. ದೇಶದಾದ್ಯಂತ ಮಸೀದಿ ಸಮೀಕ್ಷೆಯ ಕೂಗು ಏಳುತ್ತಿರಲಿಲ್ಲ. ಆದರೆ ಚಂದ್ರಚೂಡ್‌ ಅವರು ಸಮೀಕ್ಷೆಗೆ ಅವಕಾಶ ನೀಡಿ ಬಹಳ ದೊಡ್ಡ ಸಮಸ್ಯಾ ಸರಣಿಯೊಂದಕ್ಕೆ ನಾಂದಿ ಹಾಡಿದರು.

ಶ್ರೀನಿವಾಸನ್‌ ಜೈನ್‌ ಅವರು ಈ ಬಗ್ಗೆ ಚಂದ್ರಚೂಡ್‌ ರಿಗೆ ಪ್ರಶ್ನೆಯ ಬಾಣ ಎಸೆದರು. ವಿಚಲಿತರಾದಂತೆ ಕಂಡ ಚಂದ್ರಚೂಡ್‌ ಅವರು, ʼಅಲ್ಲಿ ಮಸೀದಿಯ ತಳಭಾಗದಲ್ಲಿ ಕಾಲಾಂತರಗಳಿಂದಲೂ ಹಿಂದೂಗಳಿಗೆ ಪೂಜೆಯ ಅವಕಾಶ ನೀಡಲಾಗಿತ್ತುʼ ಎಂಬ ಬಹುದೊಡ್ಡ ಸುಳ್ಳೊಂದನ್ನು ಹೇಳಿದರು. ಮಾತ್ರವಲ್ಲ ಈ ಮೂಲಕ ಅವರ ಆಲೋಚನೆಗಳು ಸಂಘಪರಿವಾರದ ಅಪಪ್ರಚಾರಗಳಿಗೆ ಬಲಿಯಾದಂತೆ ಕಂಡಿತು.

ಈಗ ಮತ್ತೆ ಜಸ್ಟಿಸ್‌ ನರಸಿಂಹ ಅವರ ಮಾತುಗಳಿಗೆ ಬರುವುದಾದರೆ, ನ್ಯಾಯಾಧೀಶರ ತೀರ್ಪುಗಳೇ ಮಾತನಾಡಬೇಕೇ ಹೊರತು ಅವರು ಮಾತನಾಡಬಾರದು. ಇದಂತೂ ಸಾಮಾಜಿಕ ಮಾಧ್ಯಮಗಳ ಕಾಲ. ಮಾತನಾಡುವ ತೆವಲುಗಳು ಮತ್ತು ಪ್ರಚಾರದ ಬಯಕೆಗಳು ಅಂತಿಮವಾಗಿ ಆ ನ್ಯಾಯಮೂರ್ತಿಯ ಆಲೋಚನೆಯ ದಿಕ್ಕನ್ನು ಬಹಿರಂಗಗೊಳಿಸುವ ಮೂಲಕ ಅವರ ಬಗ್ಗೆ ಅನುಮಾನ ಮೂಡುವಂತೆ ಮಾಡುವುದು ಮಾತ್ರವಲ್ಲ, ಅವರು ಕೊಟ್ಟ ತೀರ್ಪುಗಳ ಬಗ್ಗೆಯೂ ಅನುಮಾನ ಮೂಡುವಂತೆ ಮಾಡುತ್ತದೆ. ನ್ಯಾಯಾಂಗದ ಬಗ್ಗೆಯೂ ಜನ ಭರವಸೆ ಕಳೆದುಕೊಳ್ಳುವಂತೆ ಮಾಡುತ್ತದೆ.

ಆದರೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂಬಂತೆ ಚಂದ್ರಚೂಡ್‌ ಅವರ ಮಾತಿನ ಮತ್ತು ಪ್ರಚಾರದ ತೆವಲು ಕೂಡಾ ಒಳ್ಳೆಯ ಬೆಳವಣಿಗೆ. ಇದರಿಂದ ಅವರ ಆಲೋಚನೆಗಳು ಮತ್ತು ಅಧಿಕಾರದಲ್ಲಿದ್ದಾಗ ಅವರ ನಡೆವಳಿಕೆಗಳ ಬಗ್ಗೆ ಒಂದು ಸ್ಪಷ್ಟತೆ ಜನರಿಗೆ ದೊರೆತಂತಾಯಿತು.

ಅತಿದೊಡ್ಡ ನಿರಾಸೆಯೆಂದರೆ ನ್ಯಾಯಾಂಗ

ಪದೇ ಪದೇ ಹೇಳಲು ಬೇಸರವಾಗುತ್ತದೆ. ಆದರೆ ಮತ್ತೆ ಹೇಳುತ್ತೇನೆ. ಕಾರ್ಯಾಂಗ ಮತ್ತು ಶಾಸಕಾಂಗ ಜನ ವಿರೋಧಿಯಾಗಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಾಗ ಪ್ರಜೆಗಳಾದ ನಮಗೆ ಉಳಿಯವ ಕೊನೆಯ ಆಸರೆಯೆಂದರೆ ನ್ಯಾಯಾಂಗ. ಆದರೆ ʼಧರೆ ಹೊತ್ತಿಉರಿದಂತೆ..ʼ ಅದೇ ಪ್ರಜೆಗಳ ಹಿತಾಸಕ್ತಿ ಕಾಪಾಡುವಲ್ಲಿ ಜವಾಬ್ದಾರಿ ಮರೆತರೆ? ಸಂವಿಧಾನ ವಿರೋಧಿಯಾಗಿ ನಡೆದುಕೊಂಡರೆ?

ಈಗ ಆಗಿರುವುದೂ ಆದೇ. ಈ ಕಾಲದಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಕ್ಕಿಂತಲೂ ಅತಿದೊಡ್ಡ ನಿರಾಶೆ ಎಂದರೆ ನ್ಯಾಯಾಂಗ. ಇದಕ್ಕೆ ಉಮರ್‌ ಖಾಲಿದ್‌ ಮತ್ತು ಅವರ ಒಡನಾಡಿಗಳ ಜೈಲುವಾಸ, ಪ್ರಜಾತಂತ್ರ ನಾಶದ ದಿಶೆಯಲ್ಲಿ ಚುನಾವಣಾ ಆಯೋಗದ ಹೆಜ್ಜೆ, ಜಡ್ಜ್ ಗಳ ನೇಮಕಾತಿ, ವಕ್ಫ್‌ ವಿವಾದ, ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಸಿಜೆಐ ಹೊರಕ್ಕೆ,  ಇಂಥ ವಿಷಯಗಳಲ್ಲಿ ಸುಪ್ರೀಂ ಕೋರ್ಟ್‌ ನ ವಿಳಂಬ ಮತ್ತು ಆಕ್ಷೇಪಾರ್ಹ ನಡೆಗಳ ನೂರಾರು ಉದಾಹರಣೆ ಕೊಡಬಹುದು.

ಶ್ರೀನಿವಾಸ ಕಾರ್ಕಳ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-6 ಕಪಿಲೆಯ ಸಾಹಸಗಳು

More articles

Latest article