ಆಟೋ ಡ್ರೈವರ್ ಸ್ವಲ್ಪನೂ ಸೂಕ್ಷ್ಮತೆ ಇಲ್ಲದೆ ಕೇಳಿದ “ನಿಮ್ಮಲ್ಲಿ ಗಂಡಸುತನ ಕಡಿಮೆ ಇದೆಯಾ ಅಥವಾ ನೀವು ಗಂಡಸರೇ ಅಲ್ವ?, ಯಾಕೆ ಹೆಂಗಸು ತರ ಮಾತಾಡ್ತೀರಿ, ಹಂಗಿದ್ರೆ ನೀವು ಅದನ್ನ ಹೇಗೆ ಮಾಡ್ತೀರ? ನೀವು ನಿಜವಾಗ್ಲೂ ಗಂಡಸರಾ? ನಿಮಗೆ ಅದು ಇದೆಯಾ? ಅಂತ – ರೂಮಿ ಹರೀಶ್
ಒಂದ್ ಸರಿ ಏನಾಯ್ತು ಅಂದ್ರೆ…. ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗಷ್ಟೆ ಪುಸ್ತಕ ಬರೆದು ತುಂಬಾ ಹೆಸರು ಮಾಡಿದ ವ್ಯಕ್ತಿಯೊಬ್ಬರು ನನ್ನ ಮಾತಾಡಿಸಿದರು. ಪರಿಚಯವಿತ್ತು. ಅವರ ಚರ್ಚೆಗಳನ್ನು ನಾನು ತುಂಬಾ ಕೇಳಿಸಿ ಕೊಳ್ಳುತ್ತಿದ್ದೆ. ಆ ಮನುಷ್ಯ….. ಆವತ್ತು ಏನಾಗಿತ್ತೋ ಏನೋ, ನನ್ನ ನೋಡಿದ ತಕ್ಷಣ ಮೇಡಂ ಅಂದ. ಒಂದು ಸರಿ ಹೇಳಿದೆ, ಎರಡು ಸರಿ ಹೇಳಿದೆ, ಮತ್ತೆ ಮತ್ತೆ ಮೇಡಂ ಅಂದದಕ್ಕೆ ನನಗೆ ಸ್ವಲ್ಪ ತಾಳ್ಮೆ ತಪ್ಪಿ ಹೋಯ್ತು. ವಿವರಿಸಿ ಹೇಳಿದೆ.
45 ವರ್ಷ ನನಗೆ ಬೇಡದಿರುವ ದೇಹದಲ್ಲಿದ್ದೆ ಮೇಡಂ. ಅಕ್ಕ ಪಕ್ಕ ಅಂತ ಕರ್ಸ್ಕೊಂಡು ಸಾಕಾಗಿನೇ ನಾನು ಫೈನಲಿ ನನ್ನ 47ನೇ ವಯಸ್ಸಿನಲ್ಲಿ ಬೇರೆ ಬೇರೆ ರೋಗಗಳಿದ್ದೂ ರಿಸ್ಕ್ ತಗೊಂಡು ಸರ್ಜರಿ ಟೇಬಲ್ ಮೇಲೆ ಮಲಗಿದ್ದು. ಸತ್ರೂ ಸರಿ ಆದ್ರೇ ನನ್ನ ಆಸೆಯ, ಹೆಣ್ಣಲ್ಲದ ದೇಹದಲ್ಲಿ ಬದುಕಬೇಕು ಎಂದು ಮಾಡಿದ್ದು. ಹೌದು, ಇದು ತೀರ ನನ್ನ ವೈಯಕ್ತಿಕ ಆದರೆ ಅದನ್ನ ಗೌರವಿಸುವ ಮನಸ್ಸು ಬೇಕು.
ಎನಿವೇ, ಕಡೆಗೆ ಅವರು ಹೇಳಿದ್ದು ಮೇಡಂ ಮೇಡಂ ಎಂದು ಹೇಳಿ ಅಭ್ಯಾಸ ಆಗೋಗಿದೆ ಅಂತ. ನಾನು ಯಾವತ್ತೂ ರೆವೆಂಜ್ ತಗೋಳ್ಳೋನಲ್ಲ. ಆದ್ರೆ ಅಂದು ಯಾಕೋ ತಲೆ ಸಿಡೀತಿತ್ತು. ನಾನು ಮಾಡಿದ್ದು ಇಷ್ಟೆ. ಅವರನ್ನ ಹುಡುಕಿಕೊಂಡು ಹೋಗಿ “ಸಾರಿ ಮರ್ತೋದೆ, ನಿಮ್ ಹೆಸ್ರೇನೂಂದ್ರಿ?” ಅಂತ ಕೇಳಿದೆ ಅಷ್ಟೆ. ಆವತ್ತಿಂದ ನನ್ನ ಮಾತಾಡಿಸೋದು ನಿಲ್ಲಿಸಿದ್ರು. ನನಗೀಗ್ಲೂ ನಾನು ಮಾಡಿದ್ದು ಸರಿ ಇಲ್ಲ ಅಂತ ಗೊತ್ತು. ಆದ್ರೆ… ಸ್ವಲ್ಪ ಹೊತ್ತಿನ ಮುಂಚೆ ಅವರನ್ನ ನಾನು ಅಷ್ಟು ಸೀರಿಯಸ್ ಆಗಿ ಕೇಳಿದಾಗ ನನ್ನ ಜೆಂಡರ್ ನ ಅವ್ರಿಗೆ ಗೌರವಿಸಕ್ಕೆ ಆಗಿಲ್ಲ…. ಆದ್ರೆ ನಾನು ಕೇಳಿರೋದು ಅವರ ಹೆಸರಷ್ಟೆ…. ಹೆಸರಿಗೇ ಅಷ್ಟು ಕೋಪ ಬಂದ್ರೆ…. ನನಗೆ ಹೇಗಾಗಿರಬಹುದು?.
ಗಂಡಸುತನದ ಅಹಂ ಎಷ್ಟು ದುರ್ಬಲ ಎನಿಸುತ್ತೆ ಅಂದ್ರೆ ಗಂಡಸರಿಗೆ ನೀನು ಗಂಡಸಾ ಅಂತ ಕೇಳಿಬಿಟ್ರೆ ಸಾಕು…. ಹಿಂಸೆ ದೌರ್ಜನ್ಯ ಎಲ್ಲಾ ಉಕ್ಕಿ ಬಂದು ಬಿಡುತ್ತೆ. ಹುಟ್ಟಿನಿಂದ ಸಿಗುವ ಜೆಂಡರ್ ನಲ್ಲಿ ಬದುಕುವ ಗಂಡಸರು ಅವರ ಅಹಂ, ಗತ್ತು, ದೇಹದ ಬಳಕೆ ಎಲ್ಲಾ ತೋರಿಸುವಾಗ ಅದು ನಂಜಿನ ಗಂಡಸುತನ ಆಗುವುದಿಲ್ಲ. ಅದೇ ಹುಟ್ಟಿನಿಂದ ಅಲ್ಲದೆ, ತಮ್ಮ ಹೆಣ್ಣು ದೇಹವನ್ನು ತ್ಯಜಿಸಿ, ದೇಹ ಶಸ್ತ್ರಚಿಕಿತ್ಸೆಯಿಂದ ಗಂಡುತನ ಪಡೆಯುವವರ ಗಂಡಸುತನ ಜಗತ್ತಿಗೆ ನಂಜಿನ ಗಂಡಸುತನವಾಗಿ ದೊಡ್ಡದಾಗಿ ಕಾಣುತ್ತೆ.
ನಮ್ಮ ಶಸ್ತ್ರಚಿಕಿತ್ಸೆ ಆಗುವ ಮುಂಚೆ (ನಾವು ಗಂಡಸೆಂದೇ ಗುರುತಿಸಿಕೊಂಡು ಬೇಡದ ದೇಹದಲ್ಲಿ ಬದುಕುತ್ತಿರುತ್ತೇವೆ) ಹಳೇ ದೇಹದಲ್ಲೇ ಇದ್ದು ಪ್ಯಾಂಟ್ ಶರ್ಟ್ ಹಾಕ್ತಿದ್ವಿ. ಯಾಕಂದ್ರೆ ಹೆಣ್ಣು ತನದ ಯಾವುದೇ ಪುರಾವೆ ನೆನಪಿಸುವ ವಿಷಯ ಎದೆಗೆ ಇರಿದು ಸಾಯಿಸುವ ಅನುಭವ ಕೊಡುತ್ತದೆ. ಎಲ್ಲೋ ಒಂದು ಕಡೆ ಯಾರು ಕಂಡುಹಿಡಿದು ಬಿಡುತ್ತಾರೆ ಎಂಬ ಭಯ 24 ಗಂಟೆಗಳ ಪ್ರತೀ ಸೆಕೆಂಡೂ ಕಾಡುತ್ತಿರುತ್ತೆ. ಅಹಂ ಇರಲಿ ದನಿ ಎತ್ತಿ ಮಾತನಾಡಲೂ ಕೂಡ ಭಯ. ಏಕೆಂದರೆ ಸಮಾಜದ ಪ್ರಶ್ನೆಗಳಿಗೆ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ.
ಹೀಗೆ ಒಂದ್ಸಾರಿ ನಾನು ಸುನಿಲ್ ಆಟೋದಲ್ಲಿ ಹೋಗ್ತಿದ್ವಿ. ನಾವು ಮಾತಾಡೋದನ್ನ ಕೇಳಿಸಿಕೊಂಡು ಆಟೋ ಡ್ರೈವರ್ ಸ್ವಲ್ಪನೂ ಸೂಕ್ಷ್ಮತೆ ಇಲ್ಲದೆ ಕೇಳಿದ “ನಿಮ್ಮಲ್ಲಿ ಗಂಡಸುತನ ಕಡಿಮೆ ಇದೆಯಾ ಅಥವಾ ನೀವು ಗಂಡಸರೇ ಅಲ್ವ?, ಯಾಕೆ ಹೆಂಗಸು ತರ ಮಾತಾಡ್ತೀರಿ, ಹಂಗಿದ್ರೆ ನೀವು ಅದನ್ನ ಹೇಗೆ ಮಾಡ್ತೀರ? ನೀವು ನಿಜವಾಗ್ಲೂ ಗಂಡಸರಾ? ನಿಮಗೆ ಅದು ಇದೆಯಾ? ಅಂತ. ಸುನಿಲ್ ಸಮಾಧಾನದಿಂದ ಇಷ್ಟೇ ವಾಪಸ್ಸು ಕೇಳಿದ್ದು “ನೀವು ಗಂಡಸು ಅಂತ ನಿಮಗೆ ಗ್ಯಾರೆಂಟಿ ಇದ್ಯಾ?
ತಗೋ ಅಲ್ಲಿ ಮಹಾಭಾರತ ಯುದ್ಧ ನಡೆದು ಕಿವಿ ಸುಟ್ಟೋಗೋ ಬೈಗುಳಗಳನ್ನು ಬೈದು ಹೋದ. ನಾನು ಸುನಿಲ ಅವನ ಮಾತನ್ನು ಕೇಳ್ತಾ ಕೇಳ್ತಾ ಹೊರಳಾಡ್ಕೊಂಡು ಜೋರಾಗಿ ನಕ್ತಿದ್ವಿ. ಅದು ಅವನಿಗೆ ಇನ್ನೂ ಕೋಪ ಬರ್ಸಿತು. ಅವನು ಬೈದ ಕೆಲವು ಬೈಗಳು ತುಂಬ ಕಾಮಿಡಿಯಾಗಿದ್ವು…..
ಒಬ್ ತಂದೆಗ್ ಹುಟ್ಟಿರೋ ಮಕ್ಳಾ ನೀವು! ಅಂದ…. ನಾನಂದೆ… ಟೆಕ್ನಿಕಲ್ ಎರರ್ …. ತಾಂತ್ರಿಕ ದೋಷ…. ಗಂಡಸರು ಹೆರುವುದಿಲ್ಲ. ಮಕ್ಕಳು ಹುಟ್ಟೋದು ಹೆಣ್ಣು ದೇಹದಿಂದ. ಇದರ ಜೊತೆ ಬರೋ ವಿವರಗಳೆಲ್ಲಾ ನಿಮಗೆ ಗೊತ್ತು. ನಾನು ಹೇಳಬೇಕಿಲ್ಲ. ಬೇವರ್ಸಿ – ವಾರಿಸ್ ಇಲ್ಲದವರು ಅಂತ. ಹೌದು ನಮಗೆ ಮಕ್ಕಳು ಬೇಡ. ಹೀಗಾಗಿ ಅದು ಬೈಗುಳ ಅಲ್ಲ, ಗಾಂಡು ನನ್ ಮಕ್ಳಾ – ನಾವು ಅವನ ಮಕ್ಳಲ್ಲ. ಗಾಂಡು ಅದೊಂದು ಲೈಂಗಿಕ ಕ್ರಿಯೆ. ಜನರಿಗೆ ಹೇಳಲು ಅವಮಾನ ಮಾಡಲು ತೊಂದರೆ ಇಲ್ಲ ಅಂತ ಜೋರಾಗಿ ಕೂಗ್ತಾ ಇದ್ವಿ. ಅವನ ಕೋಪ ನೆತ್ತಿಗೇರಿ ಆಟೋ ಜೋರಾಗಿ ಓಡಿಸ್ಕೊಂಡು ಹೋದ.
ಅಂದ್ರೆ ನಮ್ಮ ಸಮಾಜ ಗಂಡಸು ಎನ್ನುವ ದೇಹಕ್ಕೆ ತುಂಬಿರುವ ಅಹಂ ಬಂದಿರೋದು ಆ ಒಂದು ಅಂಗದಿಂದಲೇ… ಅದರ ಸುತ್ತ ಬಾಕಿ ಗುಣಗಳನ್ನು ಲಗತ್ತಿಸಲಾಗಿದೆ. ಗಟ್ಟಿಮುಟ್ಟಾಗಿರುವುದು, ಅದು ಇದೂ ಅಂತ.
ಇದನ್ನೂ ಓದಿ- ಟ್ರಾನ್ಸ್ ಜೆಂಡರ್ ಸಮುದಾಯ ಮತ್ತು ಮತ ಚಲಾವಣೆ
ಯಾವುದೋ ಮೀಡಿಯದ ಮಹಾರಾಯಿತಿ ಮನೆಗೆ ಬಂದರು ಸಂದರ್ಶಿಸಲು. “ನನಗೆ ಇಂಥವರು ಹೇಳಿ ನಾನು ಬಂದೆ” ಎಂದರು. ಸರಿ ಎಂದೆ. ಮೊದಲ ಪ್ರಶ್ನೆ “ನಿಮಗೆ ಯಾವಾಗ ಅನ್ಸಿತು ನೀವು ಗಂಡಸು ಎಂದು, ನಿಮಗೆ ಅದು ಇದೆಯಾ?”, ಈ ಕಡೆಯಿಂದ ಸುನಿಲ “ನಿಮಗೆ ಯಾವಾಗ ಗೊತ್ತಾಗಿದ್ದು ನೀವು ಗಂಡಸು ಎಂದು” ಅಂದ…. ಶಾಕ್ ಆಗಿ ಅವರು ತಿರುಗಿ ಗತ್ತಿನಿಂದ ಸ್ವಲ್ಪ ಇರಿಟೇಶನ್ ನಲ್ಲಿ “ನಾನು ಹುಟ್ಟಿದಾಗಿನಿಂದ ಗೊತ್ತಿತ್ತು ನಾನೇನು ಅಂತ, ನಿಮ್ ತರ ಎಲ್ಲಾ ಮಿಕ್ಸಾಗಿ ಹುಟ್ಟಿ ಆಮೇಲೆ ತಿಳ್ಕೊಂಡಿದ್ದಲ್ಲ”. ಸುನಿಲ “ಓ ಹೌದಾ.. ಹುಟ್ಟಿದಾಗ ಅದನ್ನ ನೋಡಿ ನೀವು ಗಂಡಸು ಅಂತ ಕನ್ಫರ್ಮ್ ಆದ್ ಮೇಲೇ ಅತ್ತಿದ್ದಾ?? ಅರೆ ವಾಹ್ ಟೂ ಗುಡ್…. ಸರಿ ನಾವು ಹುಟ್ದಾಗ ಅದೆಲ್ಲ ಮಿಕ್ಸ್ ಆಗಿರುತ್ತೆ ಅನ್ನುವ ಮಹಾಜ್ಞಾನ ಯಾರು ಕೊಟ್ಟಿದ್ದು ನಿಮಗೆ?. ನೀವು ನೋಡಿದ್ದೀರಾ?…. ನಿಮಗೇ ಎಲ್ಲಾ ಗೊತ್ತಾದ ಮೇಲೆ ಬರ್ದ್ಬಿಡಿ” ಅಂತ ಹೇಳಿದ. ತಕ್ಷಣ ಕ್ಯಾಮರ ಮುಚ್ಚಿ ಏನೂ ಮಾತಾಡದೇ ಹೊರಟ.
ನಮ್ಮನ್ನು ಸಾಮಾನ್ಯವಾಗಿ ಮಾತನಾಡಿಸಲು, ನಮ್ಮ ಲಿಂಗತ್ವಕ್ಕೆ ಘನತೆ ಕೊಡುವುದು ಅಷ್ಟು ಕಷ್ಟಾನಾ?. ನಮ್ಮನ್ನ ದ್ವೇಷಿಸಿದರೂ ಸರಿ.. ಆದರೆ ಘನತೆಯಿಂದ ದ್ವೇಷಿಸಿ…. ಪ್ರೀತ್ಸಿ ಅಂತ ಹೇಳಕ್ಕೆ ನಿಮಗೆ ಸಾಧ್ಯವೇ ಎನ್ನೋದು ನಮಗೆ ಒಂದು ಪ್ರಶ್ನೆಯೇ ಅಲ್ಲ.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.