ಬಿಜೆಪಿ-ಜೆಡಿಎಸ್‌ ಗಳ ಹೊಸ ʻಪ್ರಜ್ವಲʼ ಗ್ಯಾರೆಂಟಿಯಲ್ಲಿ ಏನೇನಿದೆ?

Most read

By ದಿನೇಶ್‌ ಕುಮಾರ್‌ ಎಸ್.ಸಿ.


ಬಿಜೆಪಿ-ಜೆಡಿಎಸ್‌ ಮೈತ್ರಿಪಕ್ಷಗಳು, ಈಗ ಪ್ರಜ್ವಲ ಗ್ಯಾರೆಂಟಿ ಕೊಡುತ್ತಿದೆ. ಪ್ರಜ್ವಲ ಗ್ಯಾರೆಂಟಿಯೆಂದರೆ ಅತ್ಯಾಚಾರಿಗಳಿಗೆ ರಕ್ಷಣೆ, ಕಾಮುಕರಿಗೆ ಹೂವಿನ ಹಾರ, ಸನ್ಮಾನ. ಪ್ರಜ್ವಲ ಗ್ಯಾರೆಂಟಿಯೆಂದರೆ ರಾಜಕೀಯ ಲಾಭಕ್ಕಾಗಿ ನಾವು ನೂರಾರು ಹೆಣ್ಣುಮಕ್ಕಳ ಮಾನ ಕಳೆದವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ, ರಾಜಕೀಯ ಲಾಭ ಪಡೆದುಕೊಳ್ಳುತ್ತೇವೆ ಜೊತೆಗೆ ನಮ್ಮ ಈ ಕಾಮುಕ ಮಿತ್ರರನ್ನು ರಕ್ಷಿಸುತ್ತೇವೆ. ಪ್ರಜ್ವಲ ಗ್ಯಾರೆಂಟಿಯೆಂದರೆ ಈ ದೇಶದ ಹೆಣ್ಣುಮಕ್ಕಳನ್ನು ಮನುಧರ್ಮಶಾಸ್ತ್ರದಂತೆ ಶತಶತಮಾನಗಳ ಹಿಂದಕ್ಕೆ ಕರೆದುಕೊಂಡುಹೋಗುತ್ತೇವೆ. ಅವರನ್ನು ದೌರ್ಜನ್ಯಗಳಿಗೆ, ಅತ್ಯಾಚಾರಗಳಿಗೆ ಈಡು ಮಾಡುತ್ತೇವೆ. ಪ್ರಜ್ವಲ ಗ್ಯಾರೆಂಟಿಯೆಂದರೆ, ಈ ದೇಶದ ಮಹಿಳೆಯರನ್ನು ಅವರ ಹಕ್ಕುಗಳಿಂದ ವಂಚಿಸುತ್ತೇವೆ, ಅವರ ಬೆಳವಣಿಗೆಗೆ ಅಡ್ಡಿಯಾಗುತ್ತೇವೆ. ಪ್ರಜ್ವಲ ಗ್ಯಾರೆಂಟಿಯೆಂದರೆ, ಈ ಹೆಣ್ಣುಮಕ್ಕಳನ್ನು ನಾವು ದಾಸಿಯರನ್ನಾಗಿ ಮಾಡುತ್ತೇವೆ. ಅವರನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತೇವೆ.

ಹಾಸನದಲ್ಲಿ ನೂರಾರು ಮಹಿಳೆಯರ ಮಾನ ಹರಾಜಾಗಿ ಹೋಗಿದೆ. ಹಲವಾರು ಸಂಸಾರಗಳು ಒಡೆದುಹೋಗಿವೆ. ಹಲವು ಹೆಣ್ಣುಮಕ್ಕಳು ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾರೆ. ಹೆಣ್ಣುಮಕ್ಕಳು ಮಾತ್ರವಲ್ಲ ಅವರ ಗಂಡಂದಿರೂ ತಲೆ ಎತ್ತಿ ತಿರುಗಲಾಗದೆ ಮನೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲಿ ಇಂಥದ್ದೊಂದು ಹೊಲಸು ಕಾಮಕಾಂಡ ಎಲ್ಲೂ ನಡೆದಿರಲಿಲ್ಲ. ಆರೋಪಿ ಪ್ರಜ್ವಲ್‌ ರೇವಣ್ಣ ದೇಶ ಬಿಟ್ಟು ಓಡಿಹೋಗಿದ್ದಾನೆ. SIT  ರಚಿಸಲಾಗಿದೆ, ಅದು ತನಿಖೆಯನ್ನೂ ನಡೆಸುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಪ್ರಜ್ವಲ್‌ ಕಾಮಕಾಂಡ ಪ್ರಕರಣ ಕೇವಲ ಜೆಡಿಎಸ್‌ ಗೆ ಸಂಬಂಧಿಸಿದ ವಿಷಯ ಆಗಿ ಉಳಿದಿಲ್ಲ. ಹೊಳೆನರಸೀಪುರದ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಕಳೆದ ವರ್ಷವೇ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದು, ʻಜೆಡಿಎಸ್‌ ಜೊತೆ ಮೈತ್ರಿ ಬೇಡ, ನನ್ನ ಬಳಿ ಪ್ರಜ್ವಲ್‌ ರೇವಣ್ಣನ ಕಾಮಕಾಂಡದ 2976 ವಿಡಿಯೋಗಳು ಇವೆ. ಬೇಕಿದ್ದರೆ ನಿಮಗೆ ತೋರಿಸುತ್ತೇನೆʼ ಎಂದು ಹೇಳಿದ್ದರು. ಸಾಲದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಪತ್ರ ಬರೆದು, ʻʻಪ್ರಜ್ವಲ್‌ ರೇವಣ್ಣ ಒಬ್ಬ ಹೆಣ್ಣುಬಾಕ ಮಾತ್ರವಲ್ಲ, ಸೈಕೋಪಾತ್.‌ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅದನ್ನು ತಾನೇ ರೆಕಾರ್ಡ್‌ ಮಾಡಿಟ್ಟುಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ನನ್ನ ಬಳಿ ಇವೆ. ದಯವಿಟ್ಟು ಸಮಾಜ ಮತ್ತು ಮನುಕುಲದ ರಕ್ಷಣೆಯ ದೃಷ್ಟಿಯಿಂದ ತಕ್ಷಣ ಸೂಕ್ತ ಕೈಗೊಳ್ಳಿʼʼ ಎಂದು ವಿನಂತಿಸಿಕೊಂಡಿದ್ದರು.

ಆದರೆ ಬಿಜೆಪಿ ನಾಯಕರೇನು ಮಾಡಿದರು? ಇಡೀ ದೇಶದ ಭದ್ರತೆಯ ಉಸ್ತುವಾರಿ ಅಮಿತ್‌ ಶಾ ಕೈಯಲ್ಲಿದೆ. ಸಾವಿರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ, ನನ್ನ ಬಳಿ ಸಾಕ್ಷ್ಯಗಳಿವೆ ಎಂದು ಹೇಳಿದ ಮೇಲೂ ಅಮಿತ್‌ ಶಾ ಯಾಕೆ ಸುಮ್ಮನಿದ್ದರು? ಪ್ರಜ್ವಲ್‌ ಎಂಬ ಕಾಮುಕನನ್ನು ರಕ್ಷಿಸುವುದರಿಂದ ಅವರಿಗೇನು ಲಾಭವಿತ್ತು? ಎಲ್ಲ ವಿಷಯ ಗೊತ್ತಿದ್ದ ಮೇಲೂ ಭಾರತೀಯ ಜನತಾ ಪಕ್ಷವು ಯಾಕೆ ಜೆಡಿಎಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು? ಸಾವಿರಾರು ಹೆಣ್ಣುಮಕ್ಕಳು ಮತ್ತು ಅವರ ಕುಟುಂಬದವರ ಮಾನ ಹರಾಜಾದರೂ ಸರಿ ತಮಗೆ ರಾಜಕೀಯ ಲಾಭವೇ ಮುಖ್ಯ ಎಂದು ಬಿಜೆಪಿ ನಿರ್ಧರಿಸಿತಲ್ಲ, ಪ್ರಜ್ವಲ್‌ ಮಾಡಿದ ಅಮಾನುಷ ಕ್ರೌರ್ಯಕ್ಕೂ ಇದಕ್ಕೂ ಏನು ವ್ಯತ್ಯಾಸ?

ಪ್ರಜ್ವಲ್‌ ವಿರುದ್ಧ ಪ್ರತಿಭಟನೆ

ಇದಿಷ್ಟೇ ಅಲ್ಲ, ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಅಮಿತ್‌ ಶಾ ಅವರಿಗೆ ಪ್ರಜ್ವಲ್‌ ಕಾಮಕಾಂಡದ ಕುರಿತು ಖುದ್ದಾಗಿ ಹೇಳಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ಕಾರಣಕ್ಕೂ ಪ್ರಜ್ವಲ್‌ ಹಾಸನದ ಅಭ್ಯರ್ಥಿ ಆಗೋದು ಬೇಡ ಎಂದು ಪ್ರೀತಂ ಗೌಡ ಮನವಿ ಮಾಡಿದ್ದರು. ಬಿಜೆಪಿ ಮುಖಂಡ ದೇವರಾಜೇಗೌಡ ಬಿಜೆಪಿ ನಾಯಕರುಗಳಿಗೆ ಪತ್ರ ಬರೆದಿದ್ದಷ್ಟೇ ಅಲ್ಲ, ಈ ಎಲ್ಲ ವಿಷಯಗಳನ್ನು ಹಲವು ಪತ್ರಿಕಾಗೋಷ್ಠಿ ಮಾಡಿ ಹೇಳಿದ್ದರು. ಹಲವಾರು ಮಾಧ್ಯಮಗಳಿಗೆ ಸಂದರ್ಶನ ನೀಡಿ ಎಲ್ಲ ವಿಷಯಗಳನ್ನು ಹೇಳಿಕೊಂಡಿದ್ದರು. ಭಾರತೀಯ ಜನತಾ ಪಕ್ಷದ ಎಲ್ಲ ನಾಯಕರಿಗೂ ಈ ವಿಷಯಗಳೆಲ್ಲ ಗೊತ್ತಿದ್ದವು. ಇಷ್ಟೆಲ್ಲ ಆದ ಮೇಲೆ ಈಗ ಆಗಿರುವ ಅನಾಹುತಗಳ ಹೊಣೆಯನ್ನು ಕೇವಲ ಜೆಡಿಎಸ್‌ ಪಕ್ಷ ಮಾತ್ರವಲ್ಲ, ಬಿಜೆಪಿಯೂ ಹೊರಬೇಕು.

ಭಾರತೀಯ ಜನತಾ ಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಅದು ಬೆಳೆದುಬಂದಿರುವುದೇ ಹಾಗೆ. ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗುತ್ತಿರುವ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಮೇಲೆ ಕ್ರಮ ಕೈಗೊಳ್ಳಿ, ಅವನನ್ನು ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಎಂದು ಬೇಡಿಕೊಂಡರೂ ಬಿಜೆಪಿ ಸರ್ಕಾರ ಮಿಸುಕಾಡಲಿಲ್ಲ. ಕುಸ್ತಿಪಟುಗಳಿಗೆ ನ್ಯಾಯ ದೊರೆಯಲೇ ಇಲ್ಲ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶಕ್ಕೆ ಮೆಡಲ್‌ ಗಳನ್ನು ಗೆದ್ದ ನಮ್ಮ ಹೆಮ್ಮೆಯ ಕುಸ್ತಿಪಟುಗಳು ಹಲವಾರು ದಿನಗಳ ಕಾಲ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಅಮಿತ್‌ ಶಾ ನಿಯಂತ್ರಣದಲ್ಲಿರುವ ದಿಲ್ಲಿ ಪೊಲೀಸರು ಕೆಟ್ಟದಾಗಿ ನಡೆಸಿಕೊಂಡು ಅಪಮಾನಿಸಿ ಗಾಯದ ಮೇಲೆ ಬರೆ ಎಳೆದರು.

ಕುಸ್ತಿಪಟುಗಳ ಮೇಲೆ ಪೊಲೀಸ್‌ ದೌರ್ಜನ್ಯ

National Crime Records Bureau (NCRB)  ನೀಡಿರುವ ಅಂಕಿಅಂಶಗಳನ್ನು ಗಮನಿಸಿದರೆ, 2014ರಿಂದ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಏರುತ್ತಲೇ ಇದೆ. 2014 ರಲ್ಲಿ ಪ್ರತಿ ಗಂಟೆಗೆ ಮಹಿಳೆಯರ ವಿರುದ್ಧ ಸುಮಾರು 37 ಅಪರಾಧಗಳು ನಡೆದಿದ್ದರೆ, 2021 ರ ವೇಳೆಗೆ ಈ ಸಂಖ್ಯೆ 49 ಕ್ಕೆ ಏರಿದೆ, ಅಂದರೆ ಈ ಪ್ರಮಾಣವು ಶೇ. 30 ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಆದರೆ ಶಿಕ್ಷೆಯ ಪ್ರಮಾಣವು ಕೇವಲ ಶೇ. 23-25ರಷ್ಟು ಮಾತ್ರ. ​

2021 ರ ಹೊತ್ತಿಗೆ ಪ್ರತಿನಿತ್ಯ ದೇಶದ ಹೆಣ್ಣುಮಕ್ಕಳ ಮೇಲೆ ನಡೆಯುವ  ಅತ್ಯಾಚಾರಗಳ ಸಂಖ್ಯೆ ದಿನಕ್ಕೆ ಸರಾಸರಿ 90! ಈ ಅತ್ಯಾಚಾರಗಳು ದುರ್ಬಲವರ್ಗದ ಮಹಿಳೆಯರ ಮೇಲೆ ನಡೆಯುವುದೇ ಹೆಚ್ಚು. 2014ರಲ್ಲಿ ದಿನಕ್ಕೆ 2.5ರಷ್ಟಿದ್ದ ಪರಿಶಿಷ್ಟ ವರ್ಗದ (ST) ಹೆಣ್ಣುಮಕ್ಕಳ ಅತ್ಯಾಚಾರಗಳ ಸಂಖ್ಯೆ 2021ರಲ್ಲಿ ದಿನಕ್ಕೆ 4ಕ್ಕೆ ಮತ್ತು ಅದೇ ಅವಧಿಯಲ್ಲಿ ಪರಿಶಿಷ್ಟ ಜಾತಿಯ ( SC) ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳು 6 ರಿಂದ 11ಕ್ಕೆ ಏರಿಕೆಯಾಗಿದೆ.  ಇದೆಲ್ಲ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ವಿಷಯ ಎಂದು ಬಿಜೆಪಿ ಜಾರಿಕೊಳ್ಳಲು ಯತ್ನಿಸುತ್ತದೆ. ಆದರೆ 2017 ರಿಂದ 2022 ರವರೆಗೆ (2022ರ ನಂತರದ ದಾಖಲೆಗಳನ್ನು NCRB ಇನ್ನೂ ನೀಡಿಲ್ಲ) ಸತತ ಆರು ವರ್ಷಗಳ ಕಾಲ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಬಿಜೆಪಿ ಆಡಳಿತದ, ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದೆ. ಉತ್ತರ ಪ್ರದೇಶದ ಹತ್ರಾಸ್, ಉನ್ನಾವ್ ಮತ್ತು ಇತರ ಸ್ಥಳಗಳಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆಗಳನ್ನು ದೇಶ ಮರೆಯಲು ಸಾಧ್ಯವೇ?

NCRB ಮಾಹಿತಿ ಪ್ರಕಾರ 2017 ರಿಂದ ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳಲ್ಲಿ ಶೇ. 94.47 ರಷ್ಟು ಹೆಚ್ಚಳವಾಗಿದೆ. ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದೇಶದಲ್ಲೇ ಅತಿಹೆಚ್ಚು. 2022 ರಲ್ಲಿ ದಾಖಲಾದ ಒಟ್ಟು 63,414 ಪ್ರಕರಣಗಳಲ್ಲಿ ಉತ್ತರ ಪ್ರದೇಶದ ಪಾಲು 8,136.

ಆರ್‌ ಎಸ್‌ ಎಸ್‌ ಸರಸಂಚಾಲಕ ಮೋಹನ್‌ ಭಾಗವತ್‌ ಹೇಳಿಕೆ

ಇದೆಲ್ಲವೂ ಆಕಸ್ಮಿಕವಾಗಿಯೋ , ಕಾಕತಾಳೀಯವಾಗಿಯೋ ನಡೆಯುತ್ತಿರುವುದಲ್ಲ. ಭಾರತೀಯ ಜನತಾ ಪಕ್ಷ ಮತ್ತು ಸಂಘಪರಿವಾರದ ಮನುವಾದಿ ನೀತಿಯ ಅನುಸಾರವಾಗಿಯೇ ಇದೆಲ್ಲ ನಡೆಯುತ್ತಿದೆ. ಹೆಣ್ಣುಮಕ್ಕಳು ಮನೆಯಲ್ಲಿ ಇರಬೇಕು, ಇದ್ದು ಗಂಡನ ಸೇವೆ ಮಾಡಬೇಕು ಎಂದು ಆರ್‌ ಎಸ್‌ ಎಸ್‌ ಸರಸಂಚಾಲಕ ಮೋಹನ್‌ ಭಾಗವತ್‌ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅಫಘಾನಿಸ್ತಾನದ ತಾಲಿಬಾನ್‌ ಕೂಡ ಇದನ್ನೇ ಹೇಳುತ್ತದೆ. ಎರಡೂ ಪರಿವಾರಗಳಲ್ಲಿ ಅಂಥ ಭಿನ್ನತೇಯೇನೂ ಇಲ್ಲ.

ಮತ್ತೊಂದು ಮಹತ್ವದ ವಿಷಯವೇನೆಂದರೆ, ಸಂಘಪರಿವಾರ, ಬಿಜೆಪಿಯ ನಾಯಕರು, ಕಾರ್ಯಕರ್ತರೇ ನೇರವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಇದಕ್ಕೆ ನೂರಾರು ಉದಾಹರಣೆಗಳನ್ನು ನೀಡಬಹುದು. ಗುಜರಾತ್‌ ನ ಬಿಲ್ಕಿಸ್‌ ಬಾನು ಕುಟುಂಬದ ಮೇಲಿನ ಅತ್ಯಾಚಾರಗಳು ಮತ್ತು ಸಾಮೂಹಿಕ ಕೊಲೆಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳನ್ನು ಅಲ್ಲಿನ ಬಿಜೆಪಿ ಸರ್ಕಾರ ಅವಧಿಗೆ ಮುನ್ನ ಬಿಡುಗಡೆ ಮಾಡಿತು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದಿಂದ ಅವರು ಈಗ ಮತ್ತೆ ಜೈಲು ಸೇರಿದರು. ಆದರೆ ಇದೇ ಆರೋಪಿಗಳು ಬಿಡುಗಡೆಯಾದಾಗ ಅವರಿಗೆ ಹಾರಗಳನ್ನು ಹಾಕಿ, ಬ್ಯಾಂಡ್‌ ಬಾರಿಸುತ್ತ ಮೆರವಣಿಗೆ ಮಾಡಿದ್ದು ಇದೇ ಸಂಘಪರಿವಾರ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವವರು, ಸನ್ಮಾನ ಮಾಡುವವರ ಮನಸ್ಥಿತಿ ಹೇಗಿರಲು ಸಾಧ್ಯ? ಇಂಥವರು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ರಕ್ಷಣೆ ಸಿಗಲು ಸಾಧ್ಯವೇ?

ಬಿಲ್ಕಿಸ್‌ ಬಾನೋ ಪ್ರಕರಣದ ಅತ್ಯಾಚಾರಿಗಳಿಗೆ ಸನ್ಮಾನ

ದೇಶವನ್ನು ಬಿಜೆಪಿ ಮತ್ತು ಅದರ ಪರಿವಾರ ಶತಮಾನಗಳಷ್ಟು ಹಿಂದಕ್ಕೆ ಕರೆದುಕೊಂಡುಹೋಗಿದೆ. ಅಂತರ್ಜಾತಿ ಮತ್ತು ಅಂತರ್‌ ಧರ್ಮೀಯ ಮದುವೆಗಳನ್ನು ಮಾಡಿಕೊಂಡವರ ಮೇಲೆ ದಾಳಿ ಹೆಚ್ಚಾಗುತ್ತಲೇ ಇದೆ. ಅನೈತಿಕ ಪೊಲೀಸ್‌ ಗಿರಿಗೆ ಎಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಮರ್ಯಾದಾ ಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಷ್ಟಾದರೂ ಮರ್ಯಾದಾ ಹತ್ಯೆಗಳನ್ನು ತಡೆಯುವ ಕಾನೂನನ್ನು ಜಾರಿಗೆ ತರಲು ಬಿಜೆಪಿ ಒಪ್ಪುತ್ತಲೇ ಇಲ್ಲ.

ಭಾರತೀಯ ಜನತಾ ಪಕ್ಷದ ಹತ್ತು ವರ್ಷಗಳ ಆಡಳಿತದಲ್ಲಿ ಅತಿಹೆಚ್ಚು ಏಟು ತಿಂದವರು ಈ ದೇಶದ ಮಹಿಳೆಯರು. ಮೋದಿ ಸರ್ಕಾರ ಜಾರಿಗೆ ತಂದ ಡಿನೋಟಿಫಿಕೇಷನ್‌ ನಿಂದ ಸುಮಾರು ಒಂದು ಕೋಟಿ ಉದ್ಯೋಗಗಳು ಮಾಯವಾದವು. ಇವುಗಳಲ್ಲಿ 88 ಲಕ್ಷ ಉದ್ಯೋಗಗಳನ್ನು ಮಹಿಳೆಯರು ನಿರ್ವಹಿಸುತ್ತಿದ್ದರು ಎಂದು ಸಮೀಕ್ಷೆಯೊಂದು ಹೇಳುತ್ತದೆ. 2022ರ ಹೊತ್ತಿಗೆ ದೇಶದ 8.8 ಕೋಟಿ ಮಹಿಳೆಯರು ಉದ್ಯೋಗ ಪಡೆಯಲು ಯತ್ನಿಸಿದರು. ಆದರೆ, ಅವರಿಗೆ ಉದ್ಯೋಗ ಸಿಗಲಿಲ್ಲ. ದೇಶದ ಕಾರ್ಮಿಕರು, ಶ್ರಮಿಕ ವರ್ಗದ ಜನರಲ್ಲಿ ಆತ್ಮಹತ್ಯೆಗಳು ಹೆಚ್ಚಿದವು. ಅದರಲ್ಲೂ ಕೂಡ ಮಹಿಳೆಯರ ಪಾಲು ಹೆಚ್ಚೇ ಇತ್ತು. ಮೋದಿ ಸರ್ಕಾರ ಇವರುಗಳ ರಕ್ಷಣೆಗೆ ಏನೂ ಮಾಡಲಿಲ್ಲ. 
ಹೆಣ್ಣುಮಕ್ಕಳ ಉದ್ಧಾರಕ್ಕಾಗಿ ಉಜ್ವಲ ಯೋಜನೆ ಜಾರಿಗೆ ತಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಆದರೆ ಉಜ್ವಲದಂಥ ಮೋಸದ ಯೋಜನೆ ಇನ್ನೊಂದಿರಲು ಸಾಧ್ಯವಿಲ್ಲ. ಇದೊಂದು ಮಹಾವಂಚನೆ. ಈ ಯೋಜನೆಯಡಿ ಒಂದು ಉಚಿತ ಎಪ್‌ ಪಿಜಿ ಸಂಪರ್ಕವನ್ನು ಮಾತ್ರ ನೀಡಲಾಯಿತು. ನಂತರ ಗ್ಯಾಸ್ ಸಿಲಿಂಡರ್‌ ತುಂಬಿಸಿಕೊಳ್ಳುವುದು ಫಲಾನುಭವಿಗಳ ಕರ್ಮ. ಇದೇ ಸಂದರ್ಭದಲ್ಲಿ ಅಡುಗೆ ಅನಿಲಕ್ಕೆ ಕೊಡಮಾಡುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣ ನಿಲ್ಲಿಸಲಾಗಿತ್ತು. ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2014 ರಲ್ಲಿ ರೂ 414 ಇತ್ತು. ಅದು ಈಗ 1200 ದಾಟಿ ಮುನ್ನಡೆದಿದೆ. ಅಂದರೆ ಹೆಚ್ಚುಕಡಿಮೆ ಮೂರು ಪಟ್ಟು ಬೆಲೆ ಹೆಚ್ಚಳವಾಗಿದೆ. ಮಾರ್ಕೆಂಟಿಂಗ್‌ ಕಂಪೆನಿಗಳ ಅಗ್ಗದ ತಂತ್ರವನ್ನೇ ಮೋದಿ ಸರ್ಕಾರ ಉಜ್ವಲದ ಮೂಲಕ ಮಾಡಿ ಈ ದೇಶದ ಹೆಣ್ಣುಮಕ್ಕಳನ್ನು ವಂಚಿಸಿತ್ತು. ಪುಗಸಟ್ಟೆ ಸಿಲಿಂಡರ್‌ ಏನೋ ಕೊಟ್ಟರು, ಅದಕ್ಕೆ ತುಂಬಬೇಕಾದ ಎಲ್‌ ಪಿಜಿ ಬೆಲೆಯನ್ನು ಮೂರು ಪಟ್ಟು ಹೆಚ್ಚಿಸಿದರು. ಇಂಥ ದಟ್ಟದರಿದ್ರ, ಮಹಾವಂಚನೆಯ ಯೋಜನೆಯನ್ನು ಸ್ವತಂತ್ರ ಭಾರತದಲ್ಲಿ ಯಾರೂ ಜಾರಿಗೆ ತಂದಿರಲಿಲ್ಲ.
ಇದೆಲ್ಲವನ್ನು ಗಮನಿಸಿದರೆ, ಭಾರತೀಯ ಜನತಾ ಪಕ್ಷ ಕೊಡುತ್ತಿರುವುದು ಉಜ್ವಲ ಯೋಜನೆಯನ್ನಲ್ಲ, ಪ್ರಜ್ವಲ ಯೋಜನೆಯನ್ನು. ಬಿಜೆಪಿ-ಜೆಡಿಎಸ್‌ ಮೈತ್ರಿಪಕ್ಷಗಳು, ಒಟ್ಟಾರೆಯಾಗಿ ಎನ್‌ ಡಿಎ ಮೈತ್ರಿಕೂಟ ಈಗ ಪ್ರಜ್ವಲ ಗ್ಯಾರೆಂಟಿ ಕೊಡುತ್ತಿದೆ. ಪ್ರಜ್ವಲ ಗ್ಯಾರೆಂಟಿಯೆಂದರೆ ಅತ್ಯಾಚಾರಿಗಳಿಗೆ ರಕ್ಷಣೆ, ಕಾಮುಕರಿಗೆ ಹೂವಿನ ಹಾರ, ಸನ್ಮಾನ. ಪ್ರಜ್ವಲ ಗ್ಯಾರೆಂಟಿಯೆಂದರೆ ರಾಜಕೀಯ ಲಾಭಕ್ಕಾಗಿ ನಾವು ನೂರಾರು ಹೆಣ್ಣುಮಕ್ಕಳ ಮಾನ ಕಳೆದವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ, ರಾಜಕೀಯ ಲಾಭ ಪಡೆದುಕೊಳ್ಳುತ್ತೇವೆ ಜೊತೆಗೆ ನಮ್ಮ ಈ ಕಾಮುಕ ಮಿತ್ರರನ್ನು ರಕ್ಷಿಸುತ್ತೇವೆ. ಪ್ರಜ್ವಲ ಗ್ಯಾರೆಂಟಿಯೆಂದರೆ ಈ ದೇಶದ ಹೆಣ್ಣುಮಕ್ಕಳನ್ನು ಮನುಧರ್ಮಶಾಸ್ತ್ರದಂತೆ ಶತಶತಮಾನಗಳ ಹಿಂದಕ್ಕೆ ಕರೆದುಕೊಂಡುಹೋಗುತ್ತೇವೆ. ಅವರನ್ನು ದೌರ್ಜನ್ಯಗಳಿಗೆ, ಅತ್ಯಾಚಾರಗಳಿಗೆ ಈಡು ಮಾಡುತ್ತೇವೆ. ಪ್ರಜ್ವಲ ಗ್ಯಾರೆಂಟಿಯೆಂದರೆ, ಈ ದೇಶದ ಮಹಿಳೆಯರನ್ನು ಅವರ ಹಕ್ಕುಗಳಿಂದ ವಂಚಿಸುತ್ತೇವೆ, ಅವರ ಬೆಳವಣಿಗೆಗೆ ಅಡ್ಡಿಯಾಗುತ್ತೇವೆ.
ಪ್ರಜ್ವಲ ಗ್ಯಾರೆಂಟಿಯೆಂದರೆ, ಈ ಹೆಣ್ಣುಮಕ್ಕಳನ್ನು ನಾವು ದಾಸಿಯರನ್ನಾಗಿ ಮಾಡುತ್ತೇವೆ. ಅವರನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತೇವೆ. ಇದು ಭಾರತೀಯ ಜನತಾ ಪಕ್ಷದ ಮನಸ್ಥಿತಿ ಮತ್ತು ಧೋರಣೆ. 

More articles

Latest article