ಯಾವುದೇ ಒಂದು ಧರ್ಮವನ್ನು ಇಲ್ಲವೇ ಸಮುದಾಯವನ್ನು ಸಾರಾಸಗಟಾಗಿ ದ್ವೇಷಿಸುವ, ದ್ರೋಹಿಗಳೆಂದು ನಿಂದಿಸುವ, ಭಯೋತ್ಪಾದಕರು ಎಂದು ಕರೆಯುವ ಕ್ರಮವೇ ಕೋಮುವಾದ ಎನ್ನುವ ಮನೋವ್ಯಾಧಿ ಹೆಚ್ಚಿಸುವ ವೈರಸ್ ಆಗಿದೆ. ಹಿಂದುತ್ವವಾದಿಗಳು ಹುಟ್ಟು ಹಾಕಿದ ಈ ರೋಗಲಕ್ಷಣಗಳು ಹಿಂದುತ್ವವಾದಿ ಅಲ್ಲದ ಹಿಂದೂಗಳಿಗೂ ಅಂಟಿಕೊಂಡಿರುವುದು ಹಾಗೂ ಕೆಲವು ಪ್ರಗತಿಪರರನ್ನೂ ಬಾಧಿಸಿರುವುದು ನಿಜವಾದ ಆತಂಕಕ್ಕೆ ಕಾರಣವಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ಇಸ್ಲಾಮೋಫೋಬಿಯಾ ಎನ್ನುವ ಜನಾಂಗ ದ್ವೇಷ ಪೀಡಿತ ರೋಗವೊಂದು ಕಳೆದ ಹತ್ತು ವರ್ಷಗಳಿಂದ ದೇಶಾದ್ಯಂತ ಅತಿಯಾಗಿ ಪಸರಿಸಿ ಸರ್ವ ಜನಾಂಗದ ಶಾಂತಿಯ ತೋಟವನ್ನೇ ಹಾಳು ಮಾಡುತ್ತಿದೆ. ಹಿಂದುತ್ವವಾದಿ ಸಂಘ ಆರಂಭಿಸಿ ತನ್ನ ಪರಿವಾರಕ್ಕೆಲ್ಲಾ ಅಂಟಿಸಿದ ಈ ಕಾಯಿಲೆ ಈಗ ವ್ಯಾಪಕವಾಗಿ ದೇಶಾದ್ಯಂತ ಹಬ್ಬುತ್ತಿದೆ. ಎಲ್ಲರನ್ನೂ ಸಮಾನವಾಗಿ ಕಾಣಬೇಕಾದ ಪೊಲೀಸ್ ವ್ಯವಸ್ಥೆ ಕೂಡ ಈ ಮಹಾಮಾರಿ ವ್ಯಾಧಿಯಿಂದ ಹೊರತಾಗಿಲ್ಲ ಎನ್ನುವುದಕ್ಕೆ ಮಾರ್ಚ್ 8 ರಂದು ದೆಹಲಿಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಆಗಿದ್ದಾದರೂ ಏನೆಂದರೆ.. ದೆಹಲಿಯ ಇಂದರ್ ಲೋಕ್ ಪ್ರದೇಶದ ಮಸೀದಿ ಬಳಿಯ ರಸ್ತೆಯ ಬದಿಯಲ್ಲಿ ನಮಾಜ್ ಮಾಡುತ್ತಿದ್ದ ಕೆಲವರನ್ನು ಡ್ಯೂಟಿ ಮೇಲಿದ್ದ ಮನೋಜ್ ಕುಮಾರ್ ತೋಮರ್ ಎನ್ನುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬ ಎಳೆದಾಡಿ ಕಾಲಿನಿಂದ ಒದ್ದು ದರ್ಪ ತೋರಿಸಿದ್ದು ದೇಶಾದ್ಯಂತ ಸುದ್ದಿಯಾಯಿತು. ನೂರಾರು ಜನ ಸ್ಥಳೀಯರು ಪೊಲೀಸ್ ದೌರ್ಜನ್ಯದ ವಿರುದ್ದ ಪ್ರತಿಭಟಿಸಿದರು. ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಾತೀತವಾಗಿ ಆಕ್ರೋಶ ವ್ಯಕ್ತವಾಯಿತು. ಚುನಾವಣಾ ಸಮಯವಾಗಿದ್ದರಿಂದ ಜನಾಕ್ರೋಶಕ್ಕೆ ಹೆದರಿದ ಕೇಂದ್ರ ಸರಕಾರ ಆ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಜನರ ಕೋಪ ಶಮನ ಮಾಡಲು ಕ್ರಮ ಕೈಗೊಂಡಿತು.
ಅದರೆ.. ಮತಾಂಧ ಸಂಘ ಪರಿವಾರದವರಿಗೆ ಉರಿ ಆರಂಭವಾಯ್ತು. “ಈ ಸಾಬರು ಮಸೀದಿ ಬಿಟ್ಟು ಸಾರ್ವಜನಿಕ ರಸ್ತೆಯಲ್ಲಿ ಯಾಕೆ ನಮಾಜ್ ಮಾಡಬೇಕಿತ್ತು? ಅವರಿಗೆ ಒದ್ದು ಬುದ್ಧಿ ಕಲಿಸಿದ್ದು ಸರಿಯಾಗಿದೆ” ಎಂದು ಬಲಪಂಥೀಯರು ದಮನಕಾರಿ ಪೊಲೀಸ್ ಪರವಾಗಿ ಜಾಲತಾಣಗಳ ಮೂಲಕ ತಮ್ಮ ಕೋಮುವಿಷ ಕಕ್ಕತೊಡಗಿದರು.
ದೆಹಲಿಯಲ್ಲಿರುವ ಹಿಂದೂ ರಕ್ಷಣಾ ದಳ ಎನ್ನುವ ಮತಾಂಧರ ಪಡೆಯು ಸಬ್ ಸಬ್ ಇನ್ಸ್ಪೆಕ್ಟರ್ ಅಮಾನತನ್ನು ಖಂಡಿಸಿ ದೆಹಲಿಯ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ಹಮ್ಮಿಕೊಂಡಿತು. ಕೆಲವರು ಜೈ ಶ್ರೀರಾಂ ಘೋಷಣೆ ಕೂಗಿದರು. ಇನ್ನು ಕೆಲವರು ಹನುಮಾನ್ ಚಾಲೀಸಾ ಪಠಿಸಿದರು. ಘಟನೆಯನ್ನು ಕೋಮುಕಲಹ ಹುಟ್ಟಿ ಹಾಕಲು ಬಳಸಿ ಕೊಳ್ಳಲು ಪ್ರಯತ್ನಿಸಿ ವಿಫಲರಾದರು.
” ರಸ್ತೆಗಳಲ್ಲಿ ನಮಾಜ್ ಮಾಡುವ ಹಕ್ಕು ಮುಸಲ್ಮಾನರಿಗೆ ಇದ್ದರೆ ನಮಗೂ ರಸ್ತೆಗಳಲ್ಲಿ ಹನುಮಾನ್ ಚಾಲಿಸಾ ಪಠನ ಮಾಡಲು ಅನುಮತಿ ಕೊಡಿ ಹಾಗೂ ಪೊಲೀಸ್ ಅಮಾನತ್ತನ್ನು ವಾಪಸ್ ಪಡೆಯಿರಿ” ಎಂಬುದೇ ಈ ಮತಾಂಧ ಗುಂಪಿನ ಒತ್ತಾಯವಾಗಿತ್ತು. ರಸ್ತೆಯಲ್ಲಿ ನಮಾಜ್ ಮಾಡಿದವರನ್ನು ಹಿಡಿದು ಒದ್ದ ಹಾಗೆ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಬಂದು ಸಾರ್ವಜನಿಕರಿಗೆ ತೊಂದರೆ ಕೊಟ್ಟು ಹನುಮಾನ್ ಚಾಳಿಸಾ ಪಠಿಸಿದ ಈ ಮತಾಂಧರಿಗೆ ಯಾವ ಶಿಕ್ಷೆ ಕೊಡಬೇಕು? ಅವರೇನೋ ಭಕ್ತಿಯಿಂದ ಪ್ರಾರ್ಥನೆ ಮಾಡಲು ರಸ್ತೆಗಿಳಿದರು. ಆದರೆ ಇವರು ಧರ್ಮದ್ವೇಷಕ್ಕಾಗಿ ಬೀದಿಗಿಳಿದರು.
ಇಸ್ಲಾಮೋಫೋಬಿಯಾ ರೋಗದ ಲಕ್ಷಣವೇ ಅನ್ಯ ಧರ್ಮದ್ವೇಷ. ಈ ರೋಗಪೀಡಿತರನ್ನು ಪೊಲೀಸರು ಬಂಧಿಸಿ ಎಲ್ಲಿಯೋ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿ ಕಳುಹಿಸಿದರು. ಅಕಸ್ಮಾತ್ ನಮಾಜ್ ಮಾಡಿದ ಮುಸಲ್ಮಾನರಿಗೆ ಆ ಮತಾಂಧ ಪೊಲೀಸ್ ಮಾಡಿದ ಹಾಗೆ ಬೀದಿಯಲ್ಲಿ ಮಂತ್ರ ಪಠಿಸಿದ ಈ ಗುಂಪಿನ ಮೇಲೆ ಪೊಲೀಸರು ಹಲ್ಲೆ ಮಾಡಿ ಒದ್ದಿದ್ದೇ ಆಗಿದ್ದರೆ ಇಡೀ ದೇಶಾದ್ಯಂತ ಕೇಸರಿ ಪಡೆ ದಂಗೆ ಎದ್ದು ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿತ್ತು. ಮಾರಿಕೊಂಡ ಮಾಧ್ಯಮಗಳು ಮೂರು ದಿನ ಬ್ರೇಕಿಂಗ್ ನ್ಯೂಸ್ ಮಾಡಿ ಕೋಮು ಬೆಂಕಿಗೆ ಪೆಟ್ರೋಲ್ ಸುರಿಯುತ್ತಿದ್ದವು.
ಇಷ್ಟಕ್ಕೂ ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದೇ ಆಗಿದ್ದರೆ ಅಂತವರ ಮೇಲೆ ದೂರು ದಾಖಲಿಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದು ಪೊಲೀಸ್ ಆದವನ ಕರ್ತವ್ಯ. ಅದು ಬಿಟ್ಟು ತಾನೇ ಶಿಕ್ಷೆಯನ್ನು ಕೊಟ್ಟು ಅವಮಾನಿಸಿದ್ದು ಅಕ್ಷಮ್ಯ ಮತ್ತು ಕಾನೂನು ವಿರೋಧಿ ಕೃತ್ಯ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಅಧಿಕಾರಿಯನ್ನು ಅಮಾನತ್ತು ಮಾಡಿದ್ದು ಸರಿಯಾದ ಕ್ರಮ. ತಪ್ಪು ಮಾಡಿದ ಪೊಲೀಸ್ ಪರವಾಗಿ ಪ್ರತಿಭಟನೆ ಮಾಡುವ ಮತಾಂಧರಿಗೆ ತಪ್ಪೂ ಕೂಡ ಸರಿ ಎನ್ನಿಸಿದ್ದರೆ ಅದಕ್ಕೆ ಕಾರಣ ಫೋಬಿಯಾ ಅಲ್ಲದೇ ಬೇರೇನೂ ಅಲ್ಲ. ಅದೇ ಪೊಲೀಸು ಬೀದಿ ಬೀದಿಗಳಲ್ಲಿ ಭಜನೆ ಮಾಡಿಕೊಂಡು ದೇವರುಗಳ ಮೆರವಣಿಗೆ ಮಾಡುವ ಭಕ್ತರ ಮೇಲೆ ಹಲ್ಲೆ ಮಾಡಿದ್ದರೆ ಈ ಮತಾಂಧರು ಆ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದರಾ?
ಆದರೆ ಅಚ್ಚರಿ ಏನೆಂದರೆ, ಪ್ರಜ್ಞಾವಂತರು ಎಂದುಕೊಂಡ ನಮ್ಮದೇ ನಡುವಿನ ಕೆಲವರು ರಸ್ತೆಯಲ್ಲಿ ಮುಸ್ಲಿಂ ಧರ್ಮೀಯರು ನಮಾಜ್ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. ಒತ್ತಡಕ್ಕೊಳಗಾಗಿ ಪೊಲೀಸ್ ಹಾಗೆ ಅನುಚಿತವಾಗಿ ವರ್ತಿಸಿದ್ದಾನೆಂದೂ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಯಾಕೆ ಮುಸ್ಲಿಂ ಸಮುದಾಯದ ಮನೋಧರ್ಮ ಬದಲಾಗಬೇಕಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಪ್ಪತ್ತೊಂದನೇ ಶತಮಾನದಲ್ಲೂ ಕೂಡ ಮುಸ್ಲಿಂ ಸಮುದಾಯ ಇನ್ನೂ ಯಾಕೆ ಧಾರ್ಮಿಕ ಕೆಸರಿನಲ್ಲಿ ಹೂತು ಹೋಗಿದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ. ಇದರಿಂದಾಗಿಯೇ ಇಸ್ಲಾಂ ಧರ್ಮದ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಸಹನೆ ಬೆಳೆಯುತ್ತಿದೆ ಎಂದೂ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮ ಎಂದು ಏನು ಹೇಳುತ್ತಾರಲ್ಲಾ ಅದರಲ್ಲೇ ಮೌಢ್ಯಗಳು ಮಿತಿಮೀರಿರುವಾಗ, ಕಂದಾಚಾರದ ಕೊಚ್ಚೆಯಲ್ಲಿ ಬಹುತೇಕ ಹಿಂದೂಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಿದ್ದು ಮುಳುಗೇಳುತ್ತಿರುವಾಗ ಬೇರೆ ಧರ್ಮದವರ ಆಚರಣೆಗಳ ಬಗ್ಗೆ ಪ್ರತಿಕ್ರಿಯಿಸುವುದೇ ಆತ್ಮವಂಚನೆ. ನಮ್ಮ ತಟ್ಟೆಯಲ್ಲೇ ಹೆಣ ಬಿದ್ದಿರುವಾಗ ಅನ್ಯರ ತಟ್ಟೆಯಲ್ಲಿನ ಕ್ರಿಮಿಗಳ ಬಗ್ಗೆ ತಕರಾರೆತ್ತುವುದೇ ಬೂಟಾಟಿಕೆ. ಬಹುಷಃ ಈ ರೀತಿಯ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸುವವರಿಗೂ ಅವರಿಗೆ ಅರಿವಿಲ್ಲದಂತೆ ಇಸ್ಲಾಮೋಫೋಬಿಯಾ ಕಾಯಿಲೆಯ ವೈರಸ್ಸುಗಳು ಮೆದುಳಲ್ಲಿ ಸೇರಿಕೊಂಡಿವೆಯಾ ಎನ್ನುವ ಅನುಮಾನ ಕಾಡದಿರದು.
ಪ್ರತಿ ದಿನವೂ ಮುಸ್ಲಿಂ ಸಮುದಾಯದವರು ಹಾದಿ ಬೀದಿಗಳ ನಡುವೆ ಪ್ರಾರ್ಥನೆಗೆ ಕೂಡುವುದಿಲ್ಲ. ಎಲ್ಲೋ ಆದ ಬಿಡಿ ಘಟನೆಗಳು ಸಾರ್ವತ್ರಿಕ ಸಂಗತಿ ಆಗುವುದಿಲ್ಲ. ಹಾಗಂತ ಮುಸ್ಲಿಂ ಸಮುದಾಯದ ಮನೋಧರ್ಮವೇ ಬದಲಾಗಬೇಕಿದೆ ಎಂದು ಹೇಳುವುದು ಸಂಘ ಪರಿವಾರಿಗರ ಕೋಮುವಾದಿ ಗುಣಲಕ್ಷಣವಾಗಿದೆ. ಈ ಧಾರ್ಮಿಕ ಆಚರಣೆಗಳು ಇವೆಯಲ್ಲಾ ಅವು ವೈಯಕ್ತಿಕ ನೆಲೆಯಲ್ಲಿ ಇದ್ದಷ್ಟೂ ಯಾರಿಗೂ ತೊಂದರೆ ಇಲ್ಲ. ಯಾವಾಗ ಬೀದಿಗಿಳಿಯುತ್ತವೋ ಆಗ ಸಾರ್ವಜನಿಕರಿಗೆ ತೊಂದರೆ ತಪ್ಪಿದ್ದಲ್ಲ. ಇದಕ್ಕೆ ಯಾವ ಧರ್ಮೀಯರು ಹೊರತಲ್ಲ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಹೋದಲ್ಲಿ ಅಸಹನೆ ತಪ್ಪಿದ್ದಲ್ಲ.
ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದು ತಪ್ಪು ಎನ್ನುವುದನ್ನು ಖಂಡಿಸೋಣ ಸರಿ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ನಡೆಸುವ ಪೂಜೆ ಪ್ರಾರ್ಥನೆಗಳ ಬಗ್ಗೆ ಯಾಕೆ ಜಾಣ ಕುರುಡನ್ನು ತೋರಿಸಬೇಕು? ವಿರೋಧಿಸುವುದೇ ಆದರೆ ಎಲ್ಲಾ ಧರ್ಮೀಯರೂ ಸಾರ್ವಜನಿಕವಾಗಿ ನಡೆಸುವ ಎಲ್ಲಾ ರೀತಿಯ ಆಚರಣೆಗಳನ್ನು ನಿರಾಕರಿಸೋಣ. ಬಹುಸಂಖ್ಯಾತ ಧರ್ಮದವರು ಮಾಡಿದರೆ ಪರವಾಗಿಲ್ಲಾ, ಅಲ್ಪಸಂಖ್ಯಾತ ಧರ್ಮದವರು ಮಾಡಿದರೆ ಅಪರಾಧ ಎನ್ನುವ ಮನುವಾದಿ ಮನೋಧರ್ಮವನ್ನು ಮೊದಲು ಬದಲಾಯಿಸಿ ಕೊಳ್ಳಬೇಕಿದೆ.
ಮುಸ್ಲಿಂ ಧರ್ಮೀಯರನ್ನು ಮತೀಯವಾದಿಗಳು ಎಂದು ಕರೆಯಲಾಗುತ್ತದೆ. ಹೌದು ಬಹುತೇಕ ಮುಸ್ಲಿಂ ಸಮುದಾಯದವರು ಮತೀಯವಾದಿಗಳೇ. ತಮ್ಮ ಇಸ್ಲಾಂ ಮತದ ಆಚರಣೆಗಳನ್ನು ಶ್ರದ್ಧೆ ಭಕ್ತಿ ಆದರದಿಂದ ಆಚರಿಸುತ್ತಲೇ ಬಂದಿದ್ದಾರೆ. ಅದಕ್ಕೆ ಅಪಾಯ ಬಂದಾಗಲೆಲ್ಲಾ ಪ್ರತಿಭಟಿಸಿದ್ದಾರೆ. ಆದರೆ ಕೋಮುವಾದ ಎನ್ನುವುದು ಇದೆಯಲ್ಲಾ ಅದು ಮತೀಯವಾದಕ್ಕಿಂತಲೂ ಅಪಾಯಕಾರಿ. ಯಾಕೆಂದರೆ ಮತೀಯವಾದ ಮುಸ್ಲಿಂ ಧರ್ಮೀಯರ ಮೇಲೆ ಮಾತ್ರ ನಿಯಂತ್ರಣ ಸಾಧಿಸುವ ಮಾರ್ಗ. ಆದರೆ ಕೋಮುವಾದವೆಂಬುದು ಅನ್ಯ ಧರ್ಮದ್ವೇಷವನ್ನೇ ಉಸಿರಾಡಿಸಿ ಪ್ರತಿಪಾದಿಸುವ ಆತಂಕಕಾರಿ ದುರ್ಮಾರ್ಗ. ಮತೀಯವಾದ ಹುಟ್ಟುಹಾಕುವ ಕಂದಾಚಾರಗಳನ್ನು ವಿರೋಧಿಸುವ ಹಾಗೂ ಬದಲಾಯಿಸುವ ಕ್ರಮಗಳನ್ನು ಆ ಧರ್ಮದವರು ತೆಗೆದುಕೊಳ್ಳಲಿ. ಆದರೆ ಧರ್ಮದ್ವೇಷೋತ್ಪಾದನೆಯನ್ನೇ ತನ್ನ ಅಸ್ತಿತ್ವದ ಆಮ್ಲಜನಕವಾಗಿಸಿಕೊಂಡ ಕೋಮುವಾದಿ ಹಿಂದುತ್ವವನ್ನು ಶತಾಯ ಗತಾಯ ಹಿಂದೂಗಳು ವಿರೋಧಿಸಲೇಬೇಕಿದೆ.
ಕೆಡುಕಿಗೆ, ವಂಚನೆಗೆ, ಭಯೋತ್ಪಾದನೆಗೆ, ಆತಂಕವಾದಕ್ಕೆ ಇಂತಹುದೇ ಧರ್ಮ ಎನ್ನುವುದಿಲ್ಲ. ಎಲ್ಲಾ ಧರ್ಮಗಳಲ್ಲೂ ಇಂತಹುದು ಇದ್ದದ್ದೇ. ಅಹಿಂಸಾವಾದಿ ಬೌದ್ಧರು ಹೆಚ್ಚಾಗಿರುವ ಶ್ರೀಲಂಕಾ, ಮ್ಯಾನ್ಮಾರ್ ನಂತಹ ದೇಶಗಳಲ್ಲೂ ಬೌದ್ಧರು ಹಿಂಸಾಚಾರಕ್ಕೆ ಇಳಿದಿರುವುದು ವಾಸ್ತವ ಸತ್ಯ. ಹೀಗಾಗಿ ಯಾವುದೇ ಒಂದು ಧರ್ಮವನ್ನು ಇಲ್ಲವೇ ಸಮುದಾಯವನ್ನು ಸಾರಾಸಗಟಾಗಿ ದ್ವೇಷಿಸುವ, ದ್ರೋಹಿಗಳೆಂದು ನಿಂದಿಸುವ, ಭಯೋತ್ಪಾದಕರು ಎಂದು ಕರೆಯುವ ಕ್ರಮವೇ ಕೋಮುವಾದ ಎನ್ನುವ ಮನೋವ್ಯಾಧಿ ಹೆಚ್ಚಿಸುವ ವೈರಸ್ ಆಗಿದೆ. ಹಿಂದುತ್ವವಾದಿಗಳು ಹುಟ್ಟು ಹಾಕಿದ ಈ ರೋಗಲಕ್ಷಣಗಳು ಹಿಂದುತ್ವವಾದಿ ಅಲ್ಲದ ಹಿಂದೂಗಳಿಗೂ ಅಂಟಿಕೊಂಡಿರುವುದು ಹಾಗೂ ಕೆಲವು ಪ್ರಗತಿಪರರನ್ನೂ ಬಾಧಿಸಿರುವುದು ನಿಜವಾದ ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ “ನೂರು ದೇವರುಗಳ ನೂಕಾಚೆ ದೂರ, ಭಾರತ ಮಾತೆಯ ಪೂಜಿಸುವ ಬಾರಾ” ಎನ್ನುವ ಕುವೆಂಪುರವರ ಮಾತಿನಂತೆ ಅವರವರ ಧರ್ಮಾಚರಣೆಗಳನ್ನು ಅವರವರ ಮನೆ ಮನಗಳಿಗೆ ಸೀಮಿತಗೊಳಿಸಿ ಈ ದೇಶವಾಸಿಗಳೆಲ್ಲರೂ ಭಾರತೀಯರಾಗಿ ಸಂವಿಧಾನ ಹೇಳಿದ ರೀತಿಯಲ್ಲಿ ಸೌಹಾರ್ದತೆ, ಸಾಮರಸ್ಯದಿಂದ ಬಾಳುವಲ್ಲಿ ಈ ದೇಶದ ನೆಮ್ಮದಿ ಇದೆ. ಆಗ ಮಾತ್ರ ಈ ದೇಶ ಅನ್ಯಧರ್ಮ ದ್ವೇಷದ ಫೋಬಿಯಾ ರೋಗದಿಂದ ಮುಕ್ತವಾಗಲು ಸಾಧ್ಯ. ಸರ್ವ ಜನಾಂಗದ ಶಾಂತಿಯ ತೋಟ ನಳನಳಿಸಲು ಸಾಧ್ಯ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಚುನಾವಣಾ ಬಾಂಡ್ ; ಬಗೆದಷ್ಟೂ ಬಯಲಾಗುವ ಭಾರೀ ಹಗರಣ