ರಾಜಕೀಯೋದ್ಯಮ ಎನ್ನುವುದು ಇರೋದೇ ಕೋಟಿಗಳ ಲೂಟಿ ಮಾಡೋದಕ್ಕೆ’ ಎನ್ನುವ ಸತ್ಯ ಸ್ವಜಾತಿಯ ಮೋಹಿ ಅಂಧಾನುಕರಣ ಪೀಡಿತರಿಗೆಲ್ಲಾ ಅರ್ಥವಾಗುವವರೆಗೆ, ಮೊಸಳೆ ಕಣ್ಣೀರು, ಅಗತ್ಯವಿಲ್ಲದ ಅನುಕಂಪಗಳ ಹಿಂದಿರುವ ಭಾವನಾತ್ಮಕ ತಂತ್ರಗಾರಿಕೆ ಮತದಾರರಿಗೆ ಅರಿವಾಗುವವರೆಗೆ ಕೋಟಿಗಳಿಗೆ ಕೋಟಿಗಳು ಗುಣಾಕಾರಕ್ಕೆ ಒಳಗಾಗುತ್ತಲೇ ಇರುತ್ತವೆ. ಆಸ್ತಿಗಳ ವಿಸ್ತಾರ, ಚಿನ್ನ ಬೆಳ್ಳಿಗಳ ತೂಕ ಹೆಚ್ಚುತ್ತಲೇ ಇರುತ್ತದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಶಹಬ್ಬಾಷ್ ನಿಖಿಲ್. ಎನಿದು ಎಂತಹ ಕಮಾಲ್!!
ಕಷ್ಟಪಡದೇ, ಬೆವರು ಹರಿಸದೇ ಕೋಟಿಗಳ ಮಾಡುವ ವಿದ್ಯೆಯನ್ನು ಇವರು ಎಲ್ಲಿಂದಾ ಕಲಿತರೋ?. ಯಾರಿಂದ ಟ್ರೈನಿಂಗ್ ಪಡೆದರೋ? ಯಾರಿಗೂ ಗೊತ್ತಿಲ್ಲ.
ತಾತ ದೊಡ್ಡಗೌಡ್ರು ಮಣ್ಣಿನ ಮಗ. ಕಡುಕಷ್ಟದಲ್ಲಿ ಬದುಕು ಕಟ್ಟಿಕೊಂಡವರು. ಅಪ್ಪ ಸಿನೆಮಾ ಹಂಚಿಕೆದಾರರು. ಹಾಗೂ ಹೀಗೂ ವ್ಯವಹಾರ ಮಾಡ್ಕೊಂಡಿದ್ರು. ಏನೇ ಆದ್ರೂ ಇಬ್ಬರೂ ಕಷ್ಟ ಪಟ್ಟು ರಾಜಕೀಯೋದ್ಯಮಕ್ಕೆ ಬಂದು ಹಣ, ಆಸ್ತಿ, ಅಂತಸ್ತು, ಹೆಸರು ಮಾಡಿದರು. ಅಧಿಕಾರವನ್ನೂ ಅನುಭವಿಸಿದರು. ಆದರೆ ಏನೂ ಟೆನ್ಶನ್ ಇಲ್ಲದೇ, ಬೆವರು ಹರಿಸದೇ, ಯಾವುದೇ ಉದ್ಯೋಗ ಉದ್ದಿಮೆ ಮಾಡದೇ ನೂರಾ ಹದಿಮೂರು ಕೋಟಿಗಳಿಗೆ ನಿಖಿಲ್ ಕುಮಾರಸ್ವಾಮಿ ಒಡೆಯನಾಗಿದ್ದು ಮಾತ್ರ ಅದ್ಭುತ ಸಾಧನೆ.
ಓದಿದ್ದು ಬಿಬಿಎ ಡಿಗ್ರಿ ಅಷ್ಟೇ. ಇವರ ತಂದೆ ತಾತ ಇಷ್ಟೂ ಓದಿಲ್ಲಾ ಬಿಡಿ. ಆಯ್ತು ಓದಿದ್ದಕ್ಕೆ ತಕ್ಕುದಾದ ಕೆಲಸವನ್ನೂ ಎಂದೂ ಎಲ್ಲೂ ನಿಖಿಲ್ ಮಾಡಿಲ್ಲ. ಕೊಪ್ಪರಿಗೆ ಹಣ ಮನೆಯಲ್ಲಿ ಕೂಡಿಟ್ಟಿರುವಾಗ ಕೆಲಸ ಮಾಡುವ ಅಗತ್ಯವೂ ಇರಲಿಲ್ಲ. ಹೋಗಲಿ ಏನಾದರೂ ಬಿಜಿನೆಸ್ಸು, ರಿಯಲ್ ಎಸ್ಟೇಟು, ಗಣಿಗಾರಿಕೆಯನ್ನಾದರೂ ಮಾಡಿದ್ದಾರಾ ಅಂದ್ರೆ ಅದೂ ಇಲ್ಲ. ಅಪ್ಪ ಹೂಡಿದ ಬಂಡವಾಳದಲ್ಲಿ ಒಂದೆರಡ್ಮೂರು ಕನ್ನಡ ಸಿನೆಮಾಗಳಲ್ಲಿ ನಾಯಕನಾಗಿ ಅಭಿನಯಿಸಿದ್ದು ನಿಜವಾದರೂ ಯಾವೊಂದು ಸಿನೆಮಾ ಕೂಡಾ ಲಾಭ ಮಾಡಲಿಲ್ಲ, ಥಿಯೇಟರಲ್ಲಿ ಓಡಲಿಲ್ಲ, ಜನರೂ ನಾಯಕನಟ ಎಂದು ಗುರುತಿಸಲೂ ಇಲ್ಲ. ಆದರೂ ಅದು ಹೇಗೆ ಕೋಟಿ ಕೋಟಿಗಳು ಬಂದು ಸೇರಿದವೋ ಯಾರಿಗೂ ಗೊತ್ತಿಲ್ಲ.
ಏನಾದರೂ ಹಣ ಮಾಡುವ ಜಾದು ವಿದ್ಯೆಯಲ್ಲಿ ನಿಖಿಲ್ ಪಾರಂಗತರಾಗಿರಬಹುದಾ? ಇಲ್ಲವಾದರೆ ತಾತ, ತಂದೆಯ ನೆರಳಲ್ಲಿ ಬಳ್ಳಿಯಂತೆ ಬೆಳೆದ ಯುವನಾಯಕನಿಗೆ ಅದೆಲ್ಲಿಂದ ಇಷ್ಟೊಂದು ಜಣಜಣ ಹಣದ ರಾಶಿ ಹರಿದು ಬಂತು?. ಶ್ಶ್! ಹಣದ ಮೂಲ ಕೇಳಬಾರದು ಹಾಗೂ ಹೇಳಬಾರದು ಎಂಬುದು ರಾಜಕೀಯದವರ ನಿಗೂಢ ಬ್ರಹ್ಮ ರಹಸ್ಯ.
ಆದರೂ ಕುತೂಹಲ ಅಂತಾ ಒಂದು ಇರುತ್ತಲ್ವಾ. ಕಳೆದ ಒಂದೇ ವರ್ಷದಲ್ಲಿ ನಿಖಿಲ್ 47 ಕೋಟಿಯಷ್ಟು ಹೆಚ್ಚುವರಿ ಆಸ್ತಿ ಸಂಪಾದಿಸಿದ್ದಾರೆ ಅಂದ್ರೆ ಅಲ್ಲೇನೋ ಹ್ರಾಂ ಹ್ರೀಂ ಬ್ರೂಂ ಶಟ್ ಮಂತ್ರ ಇರಲೇ ಬೇಕು. ಜೆಡಿಎಸ್ ಎಂಬೋ ಪಕ್ಷದ ಯುವ ಘಟಕದ ಅಧ್ಯಕ್ಷರೂ ಆಗಿರುವ ನಿಖಿಲ್ ರವರು ತಾವು ಕಲಿತ ಈ ಛೂಮಂತ್ರ ವಿದ್ಯೆಯನ್ನು ತಮ್ಮದೇ ಪಕ್ಷದ ಯುವಕರಿಗೆ ಕಲಿಸಿ ಕೊಟ್ಟಿದ್ದೇ ಆದರೆ ಜೆಡಿಎಸ್ ತುಂಬಾ ಕೋಟಿವೀರರೇ ವಿರಾಜಮಾನರಾಗುತ್ತಿದ್ದರಲ್ವೇ. ಬಹುಷಃ ಯಾರಿಗೂ ಹೇಳಬಾರದ, ಹೇಳಲಾಗದ ರಹಸ್ಯ ಮಂತ್ರವೇ ಇರಬಹುದು. ಯಾರಿಗಾದರೂ ಹೇಳಿದರೆ ತಲೆ ಸಹಸ್ರ ಹೋಳಾಗುತ್ತದೆ ಎಂಬ ನಿಯಮವೂ ಇರಬಹುದು. ಅದಕ್ಕೆ ಬೇರೆಯವರಿಗೆ ಕಲಿಸಿ ಕೊಡಬೇಕೆಂದರೂ ಹೇಳಿಕೊಡಲು ಆಗುತ್ತಿಲ್ಲ. ಆದ್ದರಿಂದಲೇ ಕೋಟಿಗಳ ಸೃಷ್ಟಿ ರಹಸ್ಯ ಕುಟುಂಬದ ಕರುಳು ಬಳ್ಳಿಗಳಿಗೆ ಸೀಮಿತವಾಗಿದೆ. ಕೋಟಿಗಳ ಉತ್ಪಾದನೆ ಅವ್ಯಾಹತವಾಗಿ ಸಾಗಿದೆ.
ಬಹುಷಃ ಇದು ಕೌಟುಂಬಿಕ ಮಹಾ ರಹಸ್ಯವೇ ಇರಬೇಕು ಎನ್ನುವುದರಲ್ಲಿ ಸಂದೇಹವೇ ಇಲ್ಲಾ. ಯಾಕೆಂದರೆ ಮಣ್ಣಿನ ಮಗ ದೊಡ್ಡಗೌಡರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಕೋಟಿ ಕುಳಗಳೇ. ಎಲ್ಲರ ಬಳಿಯಲ್ಲೂ ಕೋಟಿ ಕಾರುಗಳೇ. ಎಲ್ಲರ ಮನೆಯಲ್ಲೂ ಕೇಜಿ ತೂಕದ ಚಿನ್ನ ಬೆಳ್ಳಿಗಳೇ. ಫಾರಂ ಹೌಸು, ನೂರಾರು ಎಕರೆ ಜಮೀನು, ಅನೇಕಾನೇಕ ಕಟ್ಟಡಗಳು ಒಂದಾ ಎರಡಾ.. ಇಷ್ಟೆಲ್ಲಾ ಕೇವಲ ಜನಸೇವೆಯಿಂದ ಬರಲು ಸಾಧ್ಯವೇ ಇಲ್ಲ. ಆದರೂ ಬಂದಿದೆ ಎಂದರೆ ಅದರ ಹಿಂದಿರುವ ಮರ್ಮ ಏನು? ಅದಕ್ಕಾಗಿ ಮಾಡಿದ ಕರ್ಮಗಳು ಯಾವುವು? ಶ್!! ಅದನ್ನು ಯಾರೂ ಕೇಳಬಾರದು ಹಾಗೂ ಅವರು ಹೇಳಬಾರದು.
ಇಂತಹ ಸಿರಿಗರ ಹೊಡೆದವರ ವಂಶದ ಕುಡಿಯಾದ ರಾಜಕುಮಾರ ನಿಖಿಲ್ ಹತ್ತಿರ ಕೋಟಿ ಕೋಟಿ ಬೆಲೆಯ ನಾಲ್ಕೈದು ಕಾರುಗಳಿವೆಯಂತೆ! ಒಂದೂವರೆ ಕೆ.ಜಿಯಷ್ಟು ಬಂಗಾರ, 16 ಕೆ.ಜಿ ಬೆಳ್ಳಿ ಇದೆಯಂತೆ!. 78.15 ಕೋಟಿಯಷ್ಟು ಚರಾಸ್ತಿ, 29.34 ಕೋಟಿಯಷ್ಟು ಸ್ಥಿರಾಸ್ತಿ ಗಳಿವೆಯಂತೆ!. ಇವೆಲ್ಲಾ ಬರೀ ಅಂತೆ ಕಂತೆಗಳಲ್ಲಾ, ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಲೆಕ್ಕಾಚಾರಗಳು.
ಕಳೆದ ವರ್ಷ ಕೇವಲ 76.8 ಕೋಟಿ ಆಸ್ತಿ ಹೊಂದಿದ್ದ ನಿಖಿಲ್ ಒಂದೇ ವರ್ಷದಲ್ಲಿ 47 ಕೋಟಿ ಹೆಚ್ಚುವರಿ ಆಸ್ತಿ ಸೇರಿಸಿ 113 ಕೋಟಿಗೆ ವಾರಸುದಾರರಾಗಿದ್ದು ಕಡಿಮೆ ಸಾಧನೆ ಏನಲ್ಲ. ಯಾವ ಉದ್ಯೋಗ ಉದ್ದಿಮೆ ಮಾಡದೇ ತಿಂಗಳಿಗೆ ನಾಲ್ಕು ಕೋಟಿ ಸಂಪಾದಿಸುತ್ತಿರುವ ನಿಖಿಲ್ ಹತ್ತಿರ ಅಲ್ಲಾದ್ದೀನನ ದೀಪ ಇದ್ದಿರಬಹುದಾ? ಹಣ ಬೇಕೆಂದಾಗಲೆಲ್ಲಾ ದೀಪ ಉಜ್ಜಿ ಕೇಳಿದರೆ ಅಲ್ಲಾದ್ದೀನ ತಂದು ಕೊಡಬಹುದಾ? ಯಾವೋನಿಗೆ ಗೊತ್ತು?
ಅನುಮಾನ ಬಂದರೆ ಯಾರ್‍ಯಾರದೋ ಮನೆಯ ಮೇಲೆ ಐಟಿ ಈಡಿ ಯವರು ದಾಳಿ ಮಾಡುತ್ತಾರೆ ಎಂಬುದು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಅವುಗಳ ಆಟ ಇಲ್ಲಿ ನಡೆಯೋದಿಲ್ಲ. ನಡೆಯಬಾರದು ಎಂದಲ್ಲವೇ ಕೇಸರಿ ಪಕ್ಷದ ಜೊತೆಗೆ ಕೂಡಿಕೆ ಮಾಡಿಕೊಂಡಿರೋದು. ಜ್ಯಾತ್ಯತೀತ ಅಂತಾ ಹೇಳುತ್ತಲೇ ಕೋಮುವಾದಿಗಳ ಜೊತೆ ಸಂಬಂಧ ಬೆಳೆಸಿರುವುದು. ದೊಡ್ಡಗೌಡರ ಕುಟುಂಬದ ಕುಡಿಗಳಿಗೆ ಆಸ್ತಿ ಮಾಡುವುದೂ ಗೊತ್ತು ಹಾಗೂ ಅವುಗಳನ್ನು ರಕ್ಷಣೆ ಮಾಡಿಕೊಳ್ಳಲು ಏನೆಲ್ಲಾ ಆಟ ಆಡಬೇಕು ಎಂಬುದೂ ಗೊತ್ತು. ಆದ್ದರಿಂದ ನಿಖಿಲ್ ನಿರಾಳ.
ಏನೇ ಆದರೂ ಆ ಒಂದು ಅನುಮಾನ ಮಾತ್ರ ಕಾಡ್ತಾನೇ ಇದೆ. ಹಿಂದಿನ ಎರಡು ಚುನಾವಣೆಗಳಲ್ಲಿ ಸೋತು ಕೋಟಿ ಕೋಟಿಗಳನ್ನು ಖರ್ಚು ಮಾಡಿ ಕಳೆದುಕೊಂಡರೂ ಅದು ಹೇಗೆ ಮತ್ತೆ ಕೋಟಿಗಳು ಬಂದು ಸೇರುತ್ತವೆ ಎಂಬುದು ಯಾರಿಗೂ ಅರ್ಥವಾಗುವ ಮಾತಲ್ಲ ಬಿಡಿ. ಇವರ ಸಂಪಾದನೆ ಮೂಲದ ನಿಗೂಢತೆ ಬೇಧಿಸುವುದು ಮೋದಿ ಸಖ್ಯದಲ್ಲಿರುವಾಗಂತೂ ಅಸಾಧ್ಯ. ‘ಈ ಸಿದ್ಧಾಂತ ಮಣ್ಣು ಮಸಿ ವೇದಾಂತಗಳೆಲ್ಲಾ ಇರೋದು ಬರೀ ಹೇಳೋದಕ್ಕೆ. ರಾಜಕೀಯೋದ್ಯಮ ಎನ್ನುವುದು ಇರೋದೇ ಕೋಟಿಗಳ ಲೂಟಿ ಮಾಡೋದಕ್ಕೆ’ ಎನ್ನುವ ಸತ್ಯ ಸ್ವಜಾತಿಯ ಮೋಹಿ ಅಂಧಾನುಕರಣ ಪೀಡಿತರಿಗೆಲ್ಲಾ ಅರ್ಥವಾಗುವವರೆಗೆ, ಮೊಸಳೆ ಕಣ್ಣೀರು, ಅಗತ್ಯವಿಲ್ಲದ ಅನುಕಂಪಗಳ ಹಿಂದಿರುವ ಭಾವನಾತ್ಮಕ ತಂತ್ರಗಾರಿಕೆ ಮತದಾರರಿಗೆ ಅರಿವಾಗುವವರೆಗೆ ಕೋಟಿಗಳಿಗೆ ಕೋಟಿಗಳು ಗುಣಾಕಾರಕ್ಕೆ ಒಳಗಾಗುತ್ತಲೇ ಇರುತ್ತವೆ. ಆಸ್ತಿಗಳ ವಿಸ್ತಾರ, ಚಿನ್ನ ಬೆಳ್ಳಿಗಳ ತೂಕ ಹೆಚ್ಚುತ್ತಲೇ ಇರುತ್ತದೆ. ಸಿಕ್ಕಷ್ಟನ್ನೆಲ್ಲಾ ಗಳಿಸಲು, ಗಳಿಸಿದ್ದನ್ನು ಉಳಿಸಿಕೊಳ್ಳಲು ವಂಶಾಡಳಿತದ ರಾಜಕಾರಣ ಮಾಡಲೇ ಬೇಕಾಗುತ್ತದೆ.
ಏನೇ ಆದರೂ ನಿಖಿಲ್ ಗೆ ಆಲ್ ದಿ ಬೆಸ್ಟ್ ಹೇಳಲೇಬೇಕಿದೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸೋತರೂ ಮುಂದಿನ ವರ್ಷಕ್ಕೆ ಮತ್ತೆ ಇನ್ನೂ ನೂರು ಕೋಟಿಯಷ್ಟಾದರೂ ಅದು ಹೇಗೋ ಅಸ್ತಿ ನಿಗೂಢವಾಗಿ ಹೆಚ್ಚಾಗುತ್ತದೆ. ಗೆದ್ದರಂತೂ ಮುಟ್ಟಿದ್ದೆಲ್ಲಾ ಬಂಗಾರ, ನೋಡಿದ್ದೆಲ್ಲಾ ಸ್ವಾಹಾಕಾರ. ಅವಕಾಶವಾದಿ ರಾಜಕಾರಣಿಗಳ ಲೂಟಿಗಾಗಿ ತೆರೆದೇ ಇದೇ ಕೋಟಿಗಳ ಬಂಡಾರ.
ಯಾಕೋ ಏನೋ ಈ ಹಾಡು ನೆನಪಾಗುತ್ತಲೇ ಇದೆ.
ಏನು ಮಾಯವೋ, ಏನು ಮರ್ಮವೋ
ಹಳ್ಳದ ಕಡೆಗೆ ನೀರು ಹರಿವುದು
ಸಿರಿವಂತರಿಗೆ ಹಣ ದೊರೆಯುವುದು..
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ.
ಇದನ್ನೂ ಓದಿ- ಕುಟುಂಬ ರಾಜಕಾರಣಕೆ ಹಲವು ಕಾರಣ