Saturday, May 18, 2024

ಉಪನಿಷತ್ತುಗಳ ಧ್ಯಾನ ಎಂತಹುದು?

Most read

1

ಬಸವಣ್ಣನವರು ಜ್ಞಾನದ ಬಲದಿಂದ ಅಜ್ಞಾನದ ಕೇಡು ಅಂದಾಗ ಜ್ಞಾನವೆಂಬುದು ಬಿಡುಗಡೆಯ ಪ್ರತೀಕ. ಅಜ್ಞಾನವು ಕತ್ತಲು ಎಂಬುದು ಸಮಾಜಗಳ ಬಹಳ ಹಿಂದಿನ ತಿಳುವಳಿಕೆ. ಭಾರತದ ಜಾತಿ ವ್ಯವಸ್ಥೆಯಲ್ಲಿ ಅಜ್ಞಾನವೂ ಜ್ಞಾನವಾಗಿ ಪರಿಗಣಿತವಾಗುತ್ತಿದೆಯಲ್ಲ ಎಂಬುದೇ ದೊಡ್ಡ ಸಮಸ್ಯೆ. ರೂಲಿಂಗ್ ಇಂಟೆಲೆಕ್ಚುವಲ್ಸ್ ಬಿತ್ತನೆ ಮಾಡಿದ್ದೂ ಇದನ್ನೆ. ಅಜ್ಞಾನವನ್ನೂ ಜ್ಞಾನವೆಂಬಂತೆ ಬಿಂಬಿಸಿ ನಾಡಿನೊಳಗೆ ವಿಪರೀತ ಪ್ರತ್ಯೇಕತಾ ಭಾವನೆಗಳನ್ನು ಇವರು ಸೃಷ್ಟಿಸಿದರು. ಜಾತಿ, ವರ್ಣ, ಕರ್ಮ, ಹಣೆ ಬರಹ, ಪುನರ್ಜನ್ಮ, ಶ್ರೇಷ್ಠ, ಕನಿಷ್ಠ ಮುಂತಾದ ಮನುಷ್ಯ ದ್ವೇಷಿ ವ್ಯವಸ್ಥೆಗಳನ್ನು‌ ಜ್ಞಾನವೆನ್ನಬಹುದೇ?  ರೂಲಿಂಗ್ ಇಂಟೆಲೆಕ್ಚ್ಯುವಲ್ ಗಳು ಜ್ಞಾನವೆನ್ನುತ್ತಾರೆ. ಆರ್ಗ್ಯಾನಿಕ್ ಇಂಟೆಲೆಕ್ಚ್ಯುವಲ್ ಗಳು ಅಜ್ಞಾನದ ಸೃಷ್ಟಿ ಎನ್ನುತ್ತಾರೆ. ಅಜ್ಞಾನವನ್ನು ಸಮಾಜ ಅನುಕರಣೆ ಮಾಡುವಂತೆ ಪ್ರಭುತ್ವ ನಿಯಮ ಮಾಡಿತ್ತು. ಇಂಥ ಹಲವು‌ ಕೇಡುಗಳ ವಿರುದ್ಧದ ಪ್ರತಿಭಟನೆಯೇ ವಚನ ಚಳುವಳಿ. ಜ್ಞಾನ ವಚನ ಚಳುವಳಿಯ ಪ್ರಧಾನ ಹುಡುಕಾಟ. ಅದಕ್ಕೂ ಮೊದಲು ಉಪನಿಷತ್ತುಗಳಲ್ಲೂ ಜ್ಞಾನದ ಸೆಲಬ್ರೇಷನ್‌ ನಡೆದ ಹಾಗೆ ಕಾಣುತ್ತದೆ. ಬಸವಣ್ಣನವರ ಅನೇಕ ತತ್ವಶಾಸ್ತ್ರೀಯ ವಚನಗಳ ಹಿಂದೆ ಈ ಉಪನಿಷತ್ತುಗಳ ಪ್ರಭಾವ ಕಾಣಿಸುತ್ತದೆ. ಉಪನಿಷತ್ತುಗಳು ಋಷಿವಾಣಿಗಳು. ಪುರೋಹಿತ ವಾಣಿಗಳಲ್ಲ. ಪುರೋಹಿತ ವಾಣಿ ಯಾವತ್ತೂ ಇನ್ ಕ್ಲೂಸಿವ್ ಅಲ್ಲ. ಋಷಿವಾಣಿಯಲ್ಲಿ ಎಕ್ಸ್ ಕ್ಲೂಸಿವ್ ಪ್ರಮೇಯಗಳು ಕಡಿಮೆ. ಪ್ರಭುತ್ವದ ಜೊತೆಗೂ ಋಷಿಗಳೆನ್ನಿಸಿಕೊಂಡ ಅನೇಕರಿದ್ದರು. ಅವರನ್ನು ರೂಲಿಂಗ್ ಇಂಟೆಲೆಕ್ಚುವಲ್ಸ್ ಎಂದೇ ಕರೆಯಬೇಕು. ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನಿಸದೆ ಮೌನವಾಗಿದ್ದ ಸೂಫಿಗಳ ಹಾಗೆ. ಜನರ ಬಂಧನದ ಸರಪಣಿಯನ್ನು ಕಡಿದು ಹಾಕುವ ಕೆಲಸವನ್ನು ರೂಲಿಂಗ್ ಇಂಟೆಲೆಕ್ಚುವಲ್ಸ್  ಎಂದೂ ಮಾಡಲಿಲ್ಲ. ಇಂಥವರು ಉಪನಿಷತ್ತುಗಳಲ್ಲಿ ಕಡಿಮೆ ಇದ್ದ ಹಾಗೆ ಕಾಣುತ್ತದೆ.

ಉಪನಿಷತ್ತುಗಳ ಪ್ರಧಾನ ಧ್ಯಾನ ಇರುವುದು ಅನ್ನ, ಪ್ರಾಣ, ಮನಸ್ಸು ಮತ್ತು  ಜ್ಞಾನ -ವಿಜ್ಞಾನಗಳ ಪ್ರಖರ ಹುಡುಕಾಟದಲ್ಲಿ ಹಾಗೂ ತತ್ವ ಜಿಜ್ಞಾಸೆಯಲ್ಲಿ. ವಿವೇಕಾನಂದರು, ಪರಮಹಂಸರು, ಕುವೆಂಪು ಮುಂತಾದವರು ವೇದಾಂತಗಳನ್ನು ಯಾಕೆ  ಸಂಭ್ರಮಿಸಿದರು ಎಂದು ಬಹಳ ಕಾಲ ಅರ್ಥವಾಗಿರಲಿಲ್ಲ. ವೇದಾಂತಗಳು ಹೊಸ ಅಧ್ಯಾಯಗಳೇ ನನಗೆ.

ರೂಲಿಂಗ್ ಇಂಟೆಲೆಕ್ಚುವಲ್ಸ್ ಕುರಿತು ಈಶಾವಾಸ್ಯೋಪನಿಷತ್ತಿನಲ್ಲಿ ಒಂದು ಮಾತು ಬರುತ್ತದೆ;

” ಅಂಧಂ ತಮಃ ಪ್ರವಿಶಂತಿ

ಯೇsವಿದ್ಯಾಮುಪಾಸತೇ

ತತೋ ಭೂಯ ಇವ ತೇ ತಮೋ

ಯ ಉ ವಿದ್ಯಾಯ ರತಾಃ”.

ಅಂದರೆ, ಯಾರು ಅವಿದ್ಯೆಯನ್ನು ಉಪಾಸನೆ ಮಾಡುತ್ತಾರೋ ಅವರು ಕುರುಡುಗತ್ತಲೆಯನ್ನು ಪ್ರವೇಶಿಸುತ್ತಾರೆ. ಆದರೆ ಕಾರ್ಯ ಕಾರಣಗಳನ್ನು‌ ಅರಿಯದೆ ಪ್ರಯೋಗಿಸದೆ  ವಿದ್ಯೆಯ ಉಪಾಸನೆ ಮಾಡುವವರು ಅವಿದ್ಯೆಯನ್ನು ಉಪಾಸನೆ ಮಾಡುವವರಿಗಿಂತ ಹೆಚ್ಚಿನ ಕತ್ತಲೆಗೆ, ಅಂಧಕಾರಕ್ಕೆ ಸೇರಿದವರಾಗುತ್ತಾರೆ. 

ಬರೀ ಸೇರಿದವರಾಗುವುದಿಲ್ಲ. ಅದಕ್ಕೆ ಕಾರಣಕರ್ತರೂ ಆಗುತ್ತಾರೆ. ಸೆಗಣಿ ಗಂಜಳಗಳ ಶಕ್ತಿ ಏನು ಎಂದು‌ ನಮ್ಮ ರೈತರಿಗೆ ಗೊತ್ತು.  ಆದರೆ ಪ್ರಯೋಗ ಮಾಡಿ ಸರ್ವ ಸಮ್ಮತವಾದ ಫಲಿತಾಂಶ ನೀಡದೆ ಗಳಪುವವರೂ   ಇಂಥ‌ ಅಂಧಕಾರವನ್ನು  ಪ್ರವೇಶಿಸುವವರೆ. ಅರಿಯದವರು ಕುರುಡುಗತ್ತಲೆಯಲ್ಲಿದ್ದರೆ, ಅರಿವಿನ ವೇಷ ತೊಟ್ಟು ಜನರನ್ನು ದಾರಿ ತಪ್ಪಿಸುವ ರೂಲಿಂಗ್ ಇಂಟೆಲೆಕ್ಚುವಲ್ಸ್  ಗಾಢ ಅಂಧಕಾರದಲ್ಲಿರುತ್ತಾರೆ. ಇಷ್ಟೆ ವ್ಯತ್ಯಾಸ.

“ವಿದ್ಯಾಂ ಚಾವಿದ್ಯಾಂ ಚ

ಯಸ್ತದ್ವೇದೋಭಯಂ ಸಹ

ಅವಿದ್ಯಯಾ ಮೃತ್ಯುಂ ತೀರ್ತ್ವಾ

ವಿದ್ಯಯಾಮೃತಮಶ್ನುತೇ”.

ಜ್ಞಾನಿಯಾದವನು, ವಿದ್ಯೆ ಯಾವುದು ಅವಿದ್ಯೆ ಯಾವುದು  ಎಂದು ಪೂರ್ಣವಾಗಿ ಅರಿತು ಅವಿದ್ಯೆಯೆಂಬ ಮೃತ್ಯುವನ್ನು ದಾಟಿ ವಿದ್ಯೆಯ ಅಮೃತವನ್ನು ಪಡೆಯುತ್ತಾನೆ.

ಬೇಂದ್ರೆ, ರಸವೆ ಜನನ ವಿರಸ ಮರಣ ಎಂದು ಹೇಳಿದರಲ್ಲ ಹಾಗೆಯೇ ಉಪನಿಷತ್ತುಗಳಲ್ಲಿ  ವಿದ್ಯೆಯೇ ಅಮೃತ ತತ್ವ. ಅವಿದ್ಯೆಯೇ ಮರಣ ತತ್ವ.‌  ಕಠೋಪನಿಷತ್ತಿನಲ್ಲಿ ನಚಿಕೇತ ವಿದ್ಯೆಯ ದರ್ಶನದ ಮೂಲಕ‌ ಯಮನನ್ನು ಗೆದ್ದು ಮರಳಿ‌ ಜೀವ ಪಡೆಯುತ್ತಾನೆ. 

ಎಲ್ಲ ಸಂಗತಿಗಳೂ ಪೂರ್ಣವಾಗವಾಗಬೇಕೆಂಬುದು‌ ಉಪನಿಷತ್ತುಗಳ ಧ್ಯೇಯವಾಕ್ಯ. “ಪೂರ್ಣ ಮೇವಾವ ಶಿಷ್ಯತೇ”( ಉಳಿಯುವುದು ಪೂರ್ಣವೇ)   ಎಂಬುದು ಇದರ ಅರ್ಥ. 

ನಮ್ಮ ಪಂಪ ಮುಂತಾದ ಕವಿಗಳು ಸರಸ್ವತಿ ಸ್ಮರಣೆಯೊಂದಿಗೆ ಕಾವ್ಯ ರಚನೆಯನ್ನು ಪ್ರಾರಂಭಿಸುತ್ತಾರೆ. ವಚನಕಾರರು ಆ ರೀತಿಯ ನಿಯತಿಯನ್ನು ಮುರಿದು ಹೊರಡುತ್ತಾರೆ. ಉಪನಿಷತ್ಕಾರರು ಜ್ಞಾನದ ಕುರಿತಾದ ಶ್ಲೋಕ ( ಇವುಗಳನ್ನು ಮಂತ್ರ  ಕೂಡ ಅನ್ನುತ್ತಾರೆ) ಗಳ ಮೂಲಕವೇ ಬಹುಪಾಲು ಸಾರಿ‌ ಜಿಜ್ಞಾಸೆ ಪ್ರಾರಂಭಿಸುತ್ತಾರೆ.

” ಜ್ಞಾನೇನಾಕಾಶಕಲ್ಪೇನ ಧರ್ಮಾನ್ಯೋ ಗಗನೋಪಮಾನ್ 

ಜ್ಞೇಯಾಭಿನ್ನೇನ ಸಂಬುದ್ಧ ಸ್ತಂ ವಂದೇ ದ್ವಿಪದಾಂ ವರಮ್”- ಮಾಂಡೂಕ್ಯೋಪನಿಷತ್.

ಆಕಾಶಸಮಾನ, ಜ್ಞೇಯ( ಬೆಂಕಿಯ ಉಷ್ಣ, ಸೂರ್ಯನ ಪ್ರಕಾಶದಂತೆ ರಿಲೆಟಿವ್ ಆದ ಅದ್ವೈತ) ಕ್ಕಿಂತ ಭಿನ್ನವಲ್ಲದ

ಜ್ಞಾನದಿಂದ ಅಪಾರವಾದುದನ್ನು ಅರಿತಿರುತ್ತಾನೊ ಅಂಥವನನ್ನು ವಂದಿಸಲಾಗುತ್ತದೆ.

ವ್ಯಾಕರಣಕಾರರು ಛಂದಸ್ಸಿಗೆ ಇ‌ನ್ನಿಲ್ಲದ ಪ್ರಾಮುಖ್ಯ ನೀಡುತ್ತಾರೆ. ಉಪನಿಷತ್ಕಾರರು ಅಕ್ಷರಕ್ಕೆ ಆದ್ಯತೆ ನೀಡುತ್ತಾರೆ. “ಅಕ್ಷರಾತ್ ಸಂಭವತೀಹ ವಿಶ್ವಂ”( ಅಕ್ಷರದಿಂದಲೇ ಈ ವಿಶ್ವ ಹುಟ್ಟಿದೆ) ಎನ್ನುತ್ತದೆ ಮುಂಡಕ ಉಪನಿಷತ್. ಛಂದಸ್ಸಿನಲ್ಲಿ ದೇವತೆಗಳು ರಕ್ಷಣೆ ಪಡೆದರು ಎಂಬ ಉತ್ಪ್ರೇಕ್ಷೆ ಇದೆ. ಆದರೆ ಉಪನಿಷತ್ತು ಈ ಥರದ ತತ್ವಗಳಿಗೆ ಅಷ್ಟೊಂದು ಮಹತ್ವ ಇಲ್ಲ.  ಉಪನಿಷತ್ತು ಅಕ್ಷರಕ್ಕೆ, ಅನ್ನಕ್ಕೆ,  ಜ್ಞಾನಕ್ಕೆ, ವಿದ್ಯೆಗೆ, ವಿಜ್ಞಾನಕ್ಕೆ  ಒತ್ತು ಕೊಡುತ್ತದೆ. ತೈತ್ತಿರೀಯವು ವಿಜ್ಞಾನವನ್ನು‌ ತಾರಕಕ್ಕೇರಿಸಿ ನೋಡುತ್ತದೆ.

“ವಿಜ್ಞಾನಂ ಬ್ರಹ್ಮೇತಿ ವ್ಯಜನಾತ್

ವಿಜ್ಞಾನಾದ್ದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ

ವಿಜ್ಞಾನೇನ ಜಾತಾನಿ ಜೀವಂತಿ..”

ವಿಜ್ಞಾನವೇ ಬ್ರಹ್ಮ. ಏಕೆಂದರೆ ವಿಜ್ಞಾನದಿಂದಲೇ ಪ್ರಾಣಿಗಳು ಹುಟ್ಟುತ್ತವೆ, ಹುಟ್ಟಿದವುಗಳು ವಿಜ್ಞಾನದಿಂದ ಜೀವಿಸುತ್ತವೆ.  ಹೀಗೆ ಅನೇಕ ಸಾರಿ ಬೆಚ್ಚಿ ಬೀಳುವಷ್ಟು ವಾಸ್ತವವಾದಿಯಾಗಿ ಯೋಚಿಸಿದ್ದಾರೆ.

” ಜಾತ್ಯಾಭಾಸಂ ಚಲಾಭಾಸಂ ವಸ್ತ್ವಾಭಾಸಂ ತಥೈವ ಚ

ಅಜಾಚಲಮವಸ್ತು ತ್ವಂ ವಿಜ್ಞಾನಂ ಶಾಂತಮದ್ವಯಮ್”.

– ಮಾಂಡೂಕ್ಯ.

ವಿಜ್ಞಾನವು ಹುಟ್ಟಿದಂತೆ, ಚಲಿಸಿದಂತೆ, ವಸ್ತುವಿನಂತೆ ಕಾಣುತ್ತದೆ. ಆದರೆ ಅದು ಅಜವೂ, ಅವಸ್ತುವೂ, ಶಾಂತವೂ ಅದ್ವೈತವೂ ಆಗಿದೆ.

ಇದೇ ಉಪನಿಷತ್ತಿನಲ್ಲಿ ಇನ್ನೊಂದು ಕಡೆ ವಿಜ್ಞಾನವನ್ನು “ಋಜುವಕ್ರಾದಿಕಾಭಾಸಮಲಾತಸ್ಪಂದಿತಂ ಯಥಾ” ಎನ್ನುತ್ತಾರೆ.

ಉರಿಯುವ ಕೊಳ್ಳಿಯನ್ನು ತಿರುಗಿಸಿದರೆ  ಅದು ವಕ್ರವಾಗಿ, ಉದ್ದವಾಗಿ ತೋರಿದಂತೆ  ನೋಡುವವನಿಗೆ ವಿಜ್ಞಾನ  ಕಾಣುತ್ತದೆ. ವಾಸ್ತವ ಹಾಗಿರುವುದಿಲ್ಲ. ದೃಷ್ಟಿಕೋನದ ಸಮಸ್ಯೆ ಅದು. 

ವಿಜ್ಞಾನವೆಂದರೆ ತರ್ಕ ಮತ್ತು ಪ್ರಯೋಗ. ಇದನ್ನು ಉಪನಿಷತ್ತುಗಳು ಪದೇ ಪದೇ ಹೇಳುತ್ತವೆ. ಹಾಗಾಗಿ ತಮಂಧ ಯಾವುದು ಎಂದರೆ ತರ್ಕ ಬುದ್ಧಿ, ಪ್ರಯೋಗ ಬುದ್ಧಿ  ಇಲ್ಲದೆ ಮಾರಿಕೊಂಡ ರೂಲಿಂಗ್ ಇಂಟೆಲೆಕ್ಚುವಲ್ ಗಳು‌ ಹೇಳಿದ್ದನ್ನು‌ ಕೇಳಿ ಸಂಭ್ರಮಿಸುವ

ಸ್ಥಿತಿ. ಜ್ಞಾನ ವಿಜ್ಞಾನಗಳನ್ನು, ಅದ್ವೈತವನ್ನು‌ ಕುರಿತು ಯೋಚಿಸುವವರನ್ನು ದುರುಳೀಕರಿಸುತ್ತಿದ್ದರೂ ಸಮಾಜ ಮೌನವಾಗುತ್ತದೆ ಎಂದರೆ ಅದೊಂದು ಭೀಕರ ಕೇಡಿನ ಕಾಲ ಎಂದರ್ಥ. ಕೇಡು  ವಿಶ್ವಾಕಾಶದ ಕಪ್ಪು ಕುಳಿಯ ಹಾಗೆ ಬೆಳಕನ್ನು ಸಂಪೂರ್ಣ ಸ್ವಾಹ ಮಾಡುತ್ತದೆ. ಕಪ್ಪುಕುಳಿಗಳ ಸಾಂದ್ರತೆ ಹೆಚ್ಚಿದಷ್ಟೂ ಬೆಳಕು‌ ಕ್ಷೀಣವಾಗುತ್ತದೆ.  ಕಡೆಗೊಂದು‌ ದಿನ ಜೀವಗಳ ಅಸ್ತಿತ್ವಕ್ಕೆ ಅಪಾಯ ಬರುತ್ತದೆ.

ಅನ್ನದ ಕುರಿತು ತೈತ್ತಿರೀಯ ಹೇಳುತ್ತದೆ, 

” ಅನ್ನಂ ನ ನಿಂದ್ಯಾತ್

ತದ್ ವ್ರತಮ್! ಪ್ರಾಣೋ ವಾ ಅನ್ನಮ್!

ಶರೀರಮನ್ನಾದಮ್! ಪ್ರಾಣೇ ಶರೀರಂ ಪ್ರತಿಷ್ಠಿತಮ್! ಶರೀರೇ ಪ್ರಾಣಃ ಪ್ರತಿಷ್ಠಿತ:…. ಏತದನ್ನಮನ್ನೇ ಪ್ರತಿಷ್ಠಿತಂ ವೇದ” ಎಂದು ಬಿಡುತ್ತಾರೆ.

ಅನ್ನವನ್ನು ನಿಂದಿಸಕೂಡದು. ಅದು ವ್ರತ. ಪ್ರಾಣವೆ ಅನ್ನ. ಶರೀರ ಅನ್ನಾದ. ಪ್ರಾಣದಲ್ಲಿ ಶರೀರ ಪ್ರತಿಷ್ಠಿತವಾಗಿದೆ….ಅನ್ನವೇ ಪರಮ ವೇದ. 

ಕುವೆಂಪು ಅವರ ಪೂರ್ಣದೃಷ್ಟಿ , ಸಮನ್ವಯ, ಅನಿಕೇತನ, ಗುರು, ನಿರಂಕುಶ ಮತಿತ್ವದಂತಹ  ಜ್ಞಾನತತ್ವಗಳ ಹಿಂದೆ ಉಪನಿಷತ್ತುಗಳ ಪ್ರಭಾವವಿದೆ. ಅಥವಾ ಸ್ಫೂರ್ತಿ ಇದೆ.‌ ಈ ತತ್ವಗಳನ್ನು‌ ಹೊಸಕಾಲಕ್ಕೆ ಬೇಕಾದ ಆಕಾರವನ್ನು ನೀಡಿ ಹೊಸ ಒಡವೆ ಮಾಡಿದ್ದಾರೆ. ಅವರ ಸರ್ವೋದಯ  ತತ್ವ   ಸಮಾಜವಾದದಿಂದ ಸ್ಫೂರ್ತಿ ಪಡೆದದ್ದು. 

ವೇದ

ಉಪನಿಷತ್ತುಗಳ ಶಾಂತಿ ಪಾಠವೆಂಬಂತೆ ಬರುವ ಸಹನಾವವತು ಶ್ಲೋಕ ಅಥವಾ ಮಂತ್ರದಲ್ಲಿ ಸಹ ಎಂಬ ಪ್ರಮೇಯವೇ ಸಮನ್ವಯ ತತ್ವಕ್ಕೆ ಪ್ರೇರಣೆ ನೀಡಿರಬಹುದು. ಅದರಲ್ಲಿ ಪದೇ ಪದೆ “ಸಹ” ಎಂಬ ಮಾತು ಪುನರಾವರ್ತನೆಯಾಗುತ್ತದೆ. ಕಡೆಗೆ 

“ಮಾ ವಿದ್ವಿಷಾವಹೈ”  ಅಂದರೆ ದ್ವೇಷಗಳಿಲ್ಲದೆ ಕೂಡಿ ಕಲಿಯುವ ಅಪೇಕ್ಷೆ ಇದು. ಸಹ ಎಂಬ ತತ್ವವೇ inclusive ಆದದ್ದು. ಜಗತ್ತಿನ ಮನುಷ್ಯ ಪರ ತತ್ವಗಳೆಲ್ಲ ಧ್ಯಾನಿಸುವುದು ಇದನ್ನೆ. 

2

ನನಗನ್ನಿಸಿದ ಮಟ್ಟಿಗೆ ಆರು ಪ್ರಧಾನ ಚಿಂತನ ಧಾರೆಗಳಲ್ಲಿ ವಿಶ್ವ ಮಾನವತೆ ಅಥವಾ ವಿಶ್ವಾತ್ಮಕತೆಯ ಪ್ರತಿಪಾದನೆ ಇದೆ.

“ವಸುದೈವ ಕುಟುಂಬಕಂ” ಎಂದ ವೇದ ತತ್ವದಲ್ಲಿ,

“ಸಹ”  ತತ್ವವನ್ನು ಪದೇ ಪದೇ ಹೇಳಿದ ಉಪನಿಷತ್ತುಗಳಲ್ಲಿ.

“ದಯೆ, ಅಹಿಂಸೆಯನ್ನು ಪರಮಧರ್ಮ”  ಎಂದ ಬೌದ್ಧ ಮತ್ತು  ವೀರಶೈವ ತತ್ವಗಳಲ್ಲಿ.

ಭಿನ್ನ ಭೇದವ ಮಾಡಬೇಡಿರಿ ಎಂದ ಅವಧೂತ, ಆರೂಢ, ಸೂಫಿ ಪರಂಪರೆಗಳಲ್ಲಿ.

ಅಂತರರಾಷ್ಟ್ರೀಯವಾದವನ್ನು ಪ್ರತಿಪಾದಿಸಿದ ಮಾರ್ಕ್ಸ್ ವಾದಿ ಪ್ರಮೇಯಗಳಲ್ಲಿ ಮತ್ತು  ಉದಾರವಾದಿ( ಸಮಾಜವಾದಿ) ಚಿಂತನೆಗಳಲ್ಲಿ.

ಇವೆಲ್ಲವನ್ನೂ ಮೀರಿ ಕಳೆದ ಇಪ್ಪತ್ತು ವರ್ಷಗಳಿಂದ‌ ಪ್ರಖರಗೊಂಡಿರುವ ತಳಿವಿಜ್ಞಾನದ ತತ್ವಗಳಲ್ಲಿ ವಿಶ್ವಾತ್ಮಕತೆಯ ಆಶಯವಿದೆ.

ವೇದಗಳು ಬಹಳ ಸಂಕುಚಿತ ಅರ್ಥದಲ್ಲಿ ಬಹುಶಃ ರಾಜಕೀಯ ಸ್ಟ್ರಾಟಜಿಗೋಸ್ಕರ ಈ‌ ಮಾತನ್ನು‌ ಹೇಳಿದ ಹಾಗೆ ಕಾಣಿಸುತ್ತದೆ. ಯಾಕೆಂದರೆ ಹೈರಾರ್ಕಿಯನ್ನು ಸಹ ವೇದಗಳು ಪ್ರಬಲವಾಗಿ ಪ್ರತಿಪಾದಿಸುತ್ತವೆ. ವಸುದೈವ ತತ್ವವನ್ನು ಆ ಕಾಲದ‌ ಯುಗಧರ್ಮದ  ಭಾಗವಾಗಿಯೇ  ಗಮನಿಸಬೇಕು. ಆರ್ಯ- ದಸ್ಯು, ಸುರ- ಅಸುರ ಸಂಘರ್ಷವನ್ನು‌ ಸಮನ್ವಯ ಮಾಡುವ ಅನಿವಾರ್ಯತೆಯೂ‌ ಅವರಿಗಿದ್ದಿರಬಹುದು. ಇದನ್ನು ಬಿಟ್ಟು ಉಳಿದೆಲ್ಲ  ಪ್ರಸ್ಥಾನಗಳಲ್ಲಿ ಮನುಷ್ಯರ ಕಲ್ಯಾಣದ ಆಶಯವಿದೆ.

ಡಾ. ವೆಂಕಟೇಶಯ್ಯ ನೆಲ್ಲುಕುಂಟೆ

ಸಂಸ್ಕೃತಿ ಚಿಂತಕರು

More articles

Latest article