ಹಿಂಡನ್ ಬರ್ಗ್ ವರದಿಯ ಹಿಂದೇನಿದೆ?

Most read

ಹಿಂಡನ್ ಬರ್ಗ್ ಬಯಲುಗೊಳಿಸಿದ ವರದಿಯಲ್ಲಿ, ಸೆಬಿಯ ಮೂಲಕ ನಡೆಸಲಾದ ತನಿಖೆ, ಸತ್ಯಾಂಶಗಳನ್ನು ತಿಳಿಯುವ ಪ್ರಯತ್ನಗಳನ್ನು ಮಾಡಲಿಲ್ಲ ಮತ್ತು ಇದಕ್ಕೆ ಪ್ರಮುಖ ಕಾರಣ ಸೆಬಿಯ ಮುಖ್ಯಸ್ಥರಾಗಿರುವ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಸಮೂಹ ಸಂಬಂಧ ಕಂಪೆನಿಗಳಲ್ಲಿ ಮಾಡಿರುವ ಹೂಡಿಕೆಯೇ ಆಗಿದೆ ಎನ್ನುವ ಆರೋಪ ಮಾಡುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ತೋಳವೇ ಕುರಿಯನ್ನು ಕಾಯುತ್ತಿರುವ ಕತೆಯಾಗಲಿದೆ – ಡಾ. ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಹಿಂಡನ್ ಬರ್ಗ್ ಸಂಸ್ಥೆಯು ತಾನು ಈ ಹಿಂದೆ (2023 ಜನವರಿಯಲ್ಲಿ) ತನಿಖಾ ವರದಿಯಲ್ಲಿ ಮಾಡಲಾದ ಆರೋಪಗಳು ಭಾರತೀಯ ಬಂಡವಾಳ ಪತ್ರ ವಿನಿಮಯ ಸಂಸ್ಥೆ (ಸೆಬಿ) ಯಿಂದ ಸರಿಯಾದ ರೀತಿಯಲ್ಲಿ ತನಿಖೆಯಾಗದಿರಲು ಕಾರಣಗಳೇನು ಎನ್ನುವುದರ ಕುರಿತು ಕಳೆದ ಶನಿವಾರ ಬಿಡುಗಡೆ ಮಾಡಿದ ಎರಡನೆಯ ತನಿಖಾ ವರದಿಯಲ್ಲಿ ಸಂಸ್ಥೆಯ ಈಗಿನ ಅಧ್ಯಕ್ಷೆಯಾಗಿರುವ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರ ಮೇಲೆ ಸಂಶಯ ವ್ಯಕ್ತ ಪಡಿಸುತ್ತಾ ಕೆಲವು ಆರೋಪಗಳನ್ನು ಮಾಡಿದೆ. ಈ ಹಿಂದಿನ ಆರೋಪಗಳ ಕುರಿತು ತನಿಖೆ ನಡೆಯದೇ ಇರಲು ಸೆಬಿಯ ಅಧ್ಯಕ್ಷೆ ಮತ್ತು ಅವರ ಪತಿಯವರ ಆರ್ಥಿಕ ಹಿತಾಸಕ್ತಿಯೇ ಕಾರಣ ಎಂದು ಅದು ಬೊಟ್ಟು ಮಾಡುತ್ತಿದೆ. ವರದಿ ಬಹಿರಂಗವಾದ ಬೆನ್ನಲ್ಲಿ ವಿಪಕ್ಷಗಳು ಮತ್ತು ಪತ್ರಿಕೆಗಳು ಈ ಕುರಿತು ಸವಿವರವಾದ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎನ್ನುತ್ತಿದ್ದರೆ, ಸೆಬಿಯ ಮುಖ್ಯಸ್ಥೆ ಮತ್ತು ಸರಕಾರ ಭಾರತೀಯ ಬಂಡವಾಳ ಮಾರುಕಟ್ಟೆ ಮತ್ತು ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರವೆಂದು ಹೇಳಿಕೆ ನೀಡುತ್ತಿವೆ. ಈ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ವ್ಯಕ್ತವಾಗಿರುವ ಮತ್ತು ಅವ್ಯಕ್ತವಾಗಿರುವ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನದ ಉದ್ದೇಶವಾಗಿದೆ. 

ಮಾಧಬಿ ಬುಚ್ ಧವಲಾ ಬುಚ್ ಅವರ ಹಿತಾಸಕ್ತಿ ಏನಿದೆ?

ಗೌತಮ್ ಅದಾನಿ

ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ ಅವರು ಬರ್ಮುಡಾದ ಗ್ಲೋಬಲ್ ಡೈನಾಮಿಕ್ ಅಪರ್ಚುನಿಟೀಸ್ ಫಂಡ್ ಇದರಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ಅದು ಮಾರಿಷಸ್ ದೇಶದಲ್ಲಿ ನೋಂದಣಿಯಾಗಿರುವ ಐಪಿಇ ಪ್ಲಸ್ ಫಂಡ್‍ನಲ್ಲಿ ಹಣ ಹೂಡಿದೆ. ಈ ಐಪಿಇ ಪ್ಲಸ್ ಫಂಡ್ (ಬಂಡವಾಳ ನಿಧಿ) ನ್ನು ಇಂಡಿಯಾ ಇನ್‌ಫೋಲೈನ್ ಎನ್ನುವ ಭಾರತ ಮೂಲದ ಹಣಕಾಸು (ಸಂಪತ್ತು ವ್ಯವಹಾರಾಡಳಿತ) ಸಂಸ್ಥೆಯಿಂದ ಮಾರಿಷಸ್‍ನಲ್ಲಿ ಸ್ಥಾಪಿಸಲಾಗಿದೆ. ಭಾರತೀಯ ಮೂಲದ ಈ ಕಂಪೆನಿ 1995ರಲ್ಲಿ ಉದ್ಯಮಿ ನಿರ್ಮಲ್ ಜೈನ್ ಎನ್ನುವವರಿಂದ ಮುಂಬಯಿಯಲ್ಲಿ ಸ್ಥಾಪನೆಯಾಯಿತು. ಮೇಲಿನ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆಯಾಗಿರುವ ಹಣ ಅದಾನಿ ಕಂಪೆನಿಯ ಷೇರುಗಳ ಬೆಲೆಯನ್ನು ಕೃತಕವಾಗಿ ಏರಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಾಧಬಿ ಬುಚ್ ಮತ್ತು ಧವಲ್ ಅವರು ಸಂಸ್ಥೆಗಳೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ?

ಮಾಧಬಿ ಮತ್ತು ಧವಲ್ ಮೊದಲು ಸಿಂಗಾಪುರದಲ್ಲಿ ಐಪಿಇ ಪ್ಲಸ್‍ನಲ್ಲಿ 2015ರಲ್ಲಿ ತಮ್ಮ ‘ವೇತನ ಮೂಲದ’ ಹಣ ಎಂದು ಹೇಳಿ ಸುಮಾರು 84 ಕೋಟಿಯಷ್ಟು ಹಣ ಹೂಡಿದ್ದಾರೆ ಎಂದು ವರದಿಯಾಗಿದೆ. ಈ ಹಣ ಸಿಂಗಾಪುರ ಮಾರಿಷಸ್- ಬರ್ಮುಡಾ ಮೂಲಕ ಸುತ್ತಾಡಿ ಭಾರತೀಯ ಬಂಡವಾಳ ಮಾರುಕಟ್ಟೆಗೆ ವಿದೇಶೀ ಹೂಡಿಕೆಯಾಗಿ ಬಂದಿರುವುದಕ್ಕೆ ಸಾಕ್ಷಾಧಾರಗಳಿವೆ ಎಂದು ವರದಿ ಹೇಳುತ್ತದೆ. ಹೀಗೆ ವಿದೇಶಿ ಬಂಡವಾಳದ ರೂಪದಲ್ಲಿ ಭಾರತೀಯ ಬಂಡವಾಳ ಮಾರುಕಟ್ಟೆಗೆ ಬಂದ ಹೂಡಿಕೆ ವಿಶೇಷವಾಗಿ ಅದಾನಿ ಕಂಪೆನಿಯ ಷೇರುಗಳ ಬೆಲೆಯನ್ನು ಏರಿಸುವ ಉದ್ದೇಶದಿಂದ ಬಳಕೆಯಾಗುತ್ತಿದೆ ಎನ್ನುವುದರತ್ತ ವರದಿ ಬೊಟ್ಟು ಮಾಡಿದೆ.

ಷೇರುಗಳ ಬೆಲೆ ಏರಿಸುವುದು ಹೇಗೆ ಮತ್ತು ಇದರ ಪರಿಣಾಮ ಏನು?

ಸಾಮಾನ್ಯವಾಗಿ ಒಂದು ಷೇರಿನ ಬೆಲೆ ನಿಗದಿಯಾಗುವುದು ಅದರ ನಿಜವಾದ ಮೌಲ್ಯ ಆಧರಿಸಿ ಅಂದರೆ ಕಂಪೆನಿಯ ನಿವ್ವಳ ಆಸ್ತಿಯ ಮೌಲ್ಯವನ್ನು ಒಟ್ಟು ಸಂಖ್ಯೆಯ ಷೇರುಗಳಿಂದ ವಿಭಾಗಿಸಿದರೆ ಒಂದು ಷೇರಿನ ಮೌಲ್ಯ ತಿಳಿಯುತ್ತದೆ. ಇದನ್ನೊಂದು ಸರಳ ಉದಾಹರಣೆಯ ಮೂಲಕ ತಿಳಿಯೋಣ. ಒಬ್ಬ ವ್ಯಕ್ತಿಗೆ 50 ಕೋಟಿಯ ಆಸ್ತಿ ಮತ್ತು 10ಕೋಟಿ ಸಾಲ ಇದೆ ಎಂದು ತಿಳಿಯೋಣ. ಈಗ ಸದರಿ ವ್ಯಕ್ತಿಯ ಆಸ್ತಿಯ ನಿವ್ವಳ ಮೌಲ್ಯ (50-10) 40 ಕೋಟಿ ರೂಪಾಯಿಗಳು. ಸದರಿ ವ್ಯಕ್ತಿ ತನ್ನ ಆಸ್ತಿಯನ್ನು ಹಂಚಿಬಿಡಲು ನಿರ್ಧರಿಸುತ್ತಾನೆ ಎಂದಿಟ್ಟುಕೊಳ್ಳೋಣ. ಅವನಿಗೆ 04 ಜನ ಮಕ್ಕಳಿದ್ದರೆ ಆಗ ಪ್ರತಿಯೊಬ್ಬ ಮಗನಿಗೆ ಸಿಗುವ ಪಾಲು 10ಕೋಟಿ ರೂಪಾಯಿ. ಒಂದು ವೇಳೆ ಈ ವ್ಯಕ್ತಿ ತನ್ನ ಆಸ್ತಿಯನ್ನು ಮಕ್ಕಳಿಗೆ ಕೊಡದೆ ತಾನು ನಡೆಸುತ್ತಿದ್ದ ಒಂದು ಅನಾಥಾಶ್ರಮದ 100 ಮಕ್ಕಳಿಗೆ ಸಮನಾಗಿ ಹಂಚಲು ತೀರ್ಮಾನಿಸಿದ ಎಂದಿಟ್ಟುಕೊಳ್ಳೋಣ. ಆಗ ಆ ಪ್ರತೀ ಅನಾಥ ಮಗುವಿಗೆ (40 ಕೋಟಿಯನ್ನು ನೂರು ಪಾಲು ಮಾಡಿದರೆ) 40 ಲಕ್ಷ ಸಿಗುತ್ತದೆ. ಇದನ್ನು ಸಾಮಾನ್ಯವಾಗಿ ಆಸ್ತಿಯ ಪಾಲು ಎಂದರೆ ಕಂಪೆನಿಯಲ್ಲಿ ಪಾಲು ಬಂಡವಾಳ ಎನ್ನುತ್ತೇವೆ. ಒಂದೊಮ್ಮೆ ಒಬ್ಬ ಹುಡುಗ ತನ್ನ ಪಾಲನ್ನು ಮಾರಲು ಬಯಸಿದರೆ ಅದಕ್ಕೆ 40 ಲಕ್ಷ ನೀಡಿ ಯಾರಾದರೂ ಕೊಳ್ಳಬಹುದು. ವಾಸ್ತವ ಹೀಗಿರುವಾಗ ಒಂದುವೇಳೆ ಯಾರಾದರು ಒಬ್ಬರು 60 ಲಕ್ಷ ನೀಡಿ ಖರೀದಿಸ ಬಯಸಿದರೆ, ಹೆಚ್ಚುವರಿ 20 ಲಕ್ಷ ಉತ್ಪ್ರೇಕ್ಷಿತ ಮೊತ್ತವಾಗುತ್ತದೆ. ಈ ಉದಾಹರಣೆಯಲ್ಲಿ ಕೂಡಾ ಯಾರಾದರೂ ಹೀಗೆ ನಿಜವಾದ ಮೌಲ್ಯಕ್ಕಿಂತ ಹೆಚ್ಚು ನೀಡಿ ಖರೀದಿಸ ಬಯಸಿದರೆ ಅದರ ಪರಿಣಾಮವಾಗಿ ಉಳಿದವರ ಪಾಲಿನ ಆಸ್ತಿಯ ಬೆಲೆಯೂ ಹೆಚ್ಚಳವಾಗುತ್ತದೆ. ಆಸ್ತಿಯ ಬೆಲೆಯಲ್ಲಿ ಹೆಚ್ಚಳವಾಗುವುದನ್ನು ಗಮನಿಸಿ ಲಾಭ ಗಳಿಸುವ ಉದ್ದೇಶದಿಂದ ಹೆಚ್ಚು ಹೆಚ್ಚು ಜನ ಆಸ್ತಿಯಲ್ಲಿ ಹಣ ಹೂಡಲು ಮುಂದೆ ಬಂದರೆ ಆಗ ವಾಸ್ತವ ಮೌಲ್ಯ ಗೌಣವಾಗಿ ಕೃತಕ ಬೆಲೆ ಚಲಾವಣೆಗೆ ಬರುತ್ತದೆ. ಇದರ ಪರಿಣಾಮ ಕೊಳ್ಳುವವರ ಸಂಖ್ಯೆ ಮಾರುವವರಿಗಿಂತ ಹೆಚ್ಚಳವಾಗಿ ಬೇಡಿಕೆ ವಿಪರೀತ ಏರಿಕೆಯಾಗುತ್ತದೆ. ಒಂದು ಹಂತದಲ್ಲಿ ಕಡಿಮೆ ಬೆಲೆಗೆ ಆಸ್ತಿ ಖರೀದಿಸಿದವರು ಲಾಭವನ್ನು ನಗದಾಗಿ ಪರಿವರ್ತಿಸುವ ಕ್ರಮವಾಗಿ ಮಾರಾಟ ಮಾಡಬಹುದು. ಆಗ ಬೇಡಿಕೆ ವೇಗ ಕಳಕೊಂಡು ಬೆಲೆ ಹೆಚ್ಚಳ ನಿಧಾನವಾಗಬಹುದು. ಆಗ ಹೂಡಿಕೆ ಮಾಡಿದ ಜನ, ಬೆಲೆ ಇನ್ನಷ್ಟು ಇಳಿಯುವ ಮೊದಲು ಲಾಭಗಳಿಸುವ ಎಂದು ಮಾರಲು ಮುಂದಾದರೆ, ಮಾರುಕಟ್ಟೆಯಲ್ಲಿ ಮಾರಾಟಗಾರರು ಹೆಚ್ಚಾಗಿ ಕೊಳ್ಳುವವರು ಕಡಿಮೆಯಾಗುತ್ತಾರೆ. ಆಗ ಕೊಳ್ಳುವವರು ಇಲ್ಲದೇ ಹೋದರೆ ಬೆಲೆ ತಕ್ಷಣ ಇನ್ನಷ್ಟು ಇಳಿಮುಖವಾಗಿ ಚಲಿಸುತ್ತದೆ. 40 ಲಕ್ಷ ನಿಜವಾದ ಮೌಲ್ಯವಾದರೂ, ಅಷ್ಟನ್ನು ಕೊಟ್ಟು ಖರೀದಿಸುವ ಜನ ಇಲ್ಲದೇ ಹೋಗಿ ಕೆಲವು ಸಂದರ್ಭದಲ್ಲಿ ಮಾರಾಟ ಅನಿವಾರ್ಯವಾದರೆ ನಿಜವಾದ ಮೌಲ್ಯಕ್ಕಿಂತ ಕಡಿಮೆ 30 ಲಕ್ಷ, 20 ಲಕ್ಷ ಹೀಗೆ ಮಾರಾಟವಾದೀತು. ಇದರ ವಿರುದ್ಧ ದಿಕ್ಕಿನಲ್ಲಿಯೂ ಬೆಲೆಗಳು ಚಲಿಸಬಹುದು (ಮೊದಲಿಗೆ ಇಳಿಕೆಯಾಗಿ ಒಂದು ಹಂತದ ನಂತರ ಒಮ್ಮಗೆ ಏರಿಕೆಯಾಗ ಬಹುದು) ಷೇರುಗಳ ಬೆಲೆಯಲ್ಲಿ ಹೀಗೆ ಏರಿಳಿತವಾಗುತ್ತದೆ.

ಷೇರುಗಳ ಬೆಲೆಯನ್ನು ಕೃತಕವಾಗಿ ಏರಿಸುವುದರಿಂದ ಏನು ಲಾಭ?

ಷೇರುಗಳ ಬೆಲೆಯನ್ನು ಕೃತಕವಾಗಿ ಏರಿಸುವುದರಿಂದ ಕಂಪೆನಿಯು ಷೇರುಗಳನ್ನು ಭದ್ರತೆಯಾಗಿ ಒದಗಿಸಿ ಹಣಕಾಸು ಸಂಸ್ಥೆಗಳಿಂದ ದೊಡ್ಡ ಮೊತ್ತದ ಸಾಲ ಪಡೆಯುವ ಮೂಲಕ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು. ತನಗೆ ಪ್ರತಿಸ್ಪರ್ಧಿಗಳಾಗಿರುವ ಇತರ ಕಂಪೆನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು. ಉದಾಹರಣೆಗೆ ಅದಾನಿ ಸಮೂಹ ಕಂಪೆನಿಗಳು ಹೇಗೆ ಕಳೆದ ಹತ್ತು ವರ್ಷಗಳಲ್ಲಿ ವ್ಯವಹಾರ ವಿಸ್ತರಿಸಿದುವು, ರಿಲಯನ್ಸ್ ಸಮೂಹ ಬೆಳೆದುವು ಎನ್ನುವ ಕುರಿತ ವಿವರಗಳು ಕಾರ್ಪೋರೇಟ್ ವಲಯದ ಕುರಿತು ಇನ್ನಷ್ಟು ಹೆಚ್ಚಿನ ಒಳನೋಟ ನೀಡಬಹುದು ಎನಿಸುತ್ತದೆ.

ಕುಣಿಯುವ ನವಿಲು ಮತ್ತು ಕಾಣದ ಕೈಗಳು

ಸೆಬಿಯ ಮುಖ್ಯಸ್ಥರಾಗಿರುವ ಮಾಧಬಿ ಬುಚ್

ಹಿಂಡನ್ ಬರ್ಗ್ ಸಂಸ್ಥೆ 2023ರ ತನಿಖಾ ವರದಿಯಲ್ಲಿ ಅದಾನಿ ಸಮೂಹದ ಕಂಪೆನಿಗಳ ದಾಖಲೆಗಳು ವಾಸ್ತವ ಪರಿಸ್ಥಿತಿಗಿಂತ ಬೇರೆಯೇ ಆಗಿದ್ದು, ನಿಜವಾದ ಹಣಕಾಸಿನ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಆರೋಪಿಸಿತ್ತು. ಆ ಸಂದರ್ಭದಲ್ಲಿ ದೇಶದ ಸುಪ್ರೀಂಕೋರ್ಟ್ ಸೆಬಿಯ ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಸೆಬಿ ತನಿಖೆ ನಡೆಸಿ, ಹಿಂಡನ್ ಬರ್ಗ್ ಮಾಡಿದ ಆರೋಪಗಳಲ್ಲಿ ಹುರುಳಿಲ್ಲ ಎಂದು ಸುಪ್ರೀಂಕೋರ್ಟಿಗೆ ತಿಳಿಸಿತ್ತು ಕೂಡಾ. ಆದರೆ ಕಳೆದ ವಾರದ ಕೊನೆಗೆ ಹಿಂಡನ್ ಬರ್ಗ್ ಬಯಲುಗೊಳಿಸಿದ ವರದಿಯಲ್ಲಿ, ಸೆಬಿಯ ಮೂಲಕ ನಡೆಸಲಾದ ತನಿಖೆ, ಸತ್ಯಾಂಶಗಳನ್ನು ತಿಳಿಯುವ ಪ್ರಯತ್ನಗಳನ್ನು ಮಾಡಲಿಲ್ಲ ಮತ್ತು ಇದಕ್ಕೆ ಪ್ರಮುಖ ಕಾರಣ ಸೆಬಿಯ ಮುಖ್ಯಸ್ಥರಾಗಿರುವ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಸಮೂಹ ಸಂಬಂಧ ಕಂಪೆನಿಗಳಲ್ಲಿ ಮಾಡಿರುವ ಹೂಡಿಕೆಯೇ ಆಗಿದೆ ಎನ್ನುವ ಆರೋಪ ಮಾಡುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ತೋಳವೇ ಕುರಿಯನ್ನು ಕಾಯುತ್ತಿರುವ ಕತೆಯಾಗಲಿದೆ. ಸದ್ಯಕ್ಕೆ ಈ ಆರೋಪವನ್ನು ನಿರಾಕರಿಸಿ ಸೆಬಿಯ ಮುಖ್ಯಸ್ಥರು ಹೇಳಿಕೆಯೊಂದನ್ನು ನೀಡಿದ್ದು ಇದು ರಾಜಕೀಯ ಪ್ರೇರಿತ ದುರುದ್ದೇಶದ ಕ್ರಮವೆಂದು ಹೇಳಿದೆ. ಆಡಳಿತಾರೂಢ ಪಕ್ಷ ಯಥಾ ಪ್ರಕಾರ ದೇಶದ ಹಿತಾಸಕ್ತಿಗೆ ಧಕ್ಕೆ ತರುವ ವಿಪಕ್ಷಗಳ ಸಂಚು ಎಂದು ಆರೋಪಿಸುತ್ತಿದೆ. ಹಿಂಡನ್‌ ಬರ್ಗ, ಮತ್ತು ಮೊಹುವಾ ಮೊಯಿತ್ರಾ ಅವರು ಎತ್ತಿರುವ ಪ್ರಶ್ನೆಗಳು ಕೇವಲ ಅವರದ್ದು ಮಾತ್ರ ಆಗಿರದೆ, ಭಾರತೀಯ ಬಂಡವಾಳ ಮಾರುಕಟ್ಟೆಯ ಹಿತ ಬಯಸುವ ನಮ್ಮೆಲ್ಲರದೂ ಕೂಡಾ.  2024 ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಡೆದ ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದ ಮತದಾರರು ನೀಡಿರುವ ಸಂದೇಶವನ್ನು ರಾಜಕೀಯ ನಾಯಕರು ನೆನಪು ಮಾಡಿಕೊಳ್ಳುವುದು ಒಳ್ಳೆಯದು. ಒಂದಂತೂ ನಿಜ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಜನಸಾಮಾನ್ಯರ ಉಳಿತಾಯದ ರಕ್ಷಣೆ ಮತ್ತು ಹಿತಾಸಕ್ತಿಯ ಕುರಿತು ಸರಿಯಾದ ತನಿಖೆ ನಡೆದು ಸತ್ಯ ಹೊರಬರಬೇಕಿದೆ. ಪ್ರಶ್ನೆ ಕೇಳುವವರ ಬಾಯಿ ಮುಚ್ಚಿಸುವ ಪ್ರಯತ್ನಗಳು ಎಂದಿಗೂ ಸಮರ್ಪಕ ಉತ್ತರವಾಗಲಾರದು ಎನ್ನುವುದನ್ನು ಸೆಬಿ ಮತ್ತು ಸರಕಾರ ಅರಿತುಕೊಳ್ಳಬೇಕು. ಅಲ್ಪಾವಧಿ ಮಾರಾಟ ವ್ಯವಹಾರದಲ್ಲಿ ಪರಿಣಿತ ಸಂಸ್ಥೆ ಹಿಂಡನ್ ಬರ್ಗ್ ತಪ್ಪು ಮಾಡಿದ್ದರೂ ಅವರ ವಿರುದ್ಧವೂ ಸೂಕ್ತ ಕ್ರಮವಾಗಲಿ.‌

ಮೇಲಿನ ವಿವರಗಳ ಹಿನ್ನೆಲೆಯಲ್ಲಿ ಈಗಾಗಲೇ ಎದ್ದಿರುವ ಪ್ರಶ್ನೆಗಳಿಗೆ ವಿವರವಾದ ನಿಪ್ಪಕ್ಷಪಾತ ತನಿಖೆಯಿಂದ ಸೂಕ್ತ ಉತ್ತರ ದೊರೆಯುವವರೆಗೆ ಮಾಧವಿ ಬುಚ್ ಅವರು ಸೆಬಿಯ ಮುಖ್ಯಸ್ಥರ ಹುದ್ದೆಯಿಂದ ದೂರ ಉಳಿಯುವುದು ಒಳಿತು. ಕೇವಲ ಆರೋಪ ಕೇಳಿ ಬಂದಾಗ ರಾಜ್ಯಗಳ ಮುಖ್ಯಮಂತ್ರಿಗಳು ರಾಜಿ ನೀಡುವಂತೆ ಒತ್ತಾಯಿಸುವ, ಬಂಧನವನ್ನೂ ಮಾಡಿರುವ, ಬಂಧಿತರು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ತನಿಖಾ ಸಂಸ್ಥೆಗಳ ಮೂಲಕ ಅದಕ್ಕೆ ನಿರಂತರ ಅಡ್ಡಿಪಡಿಸುತ್ತಾ ಬಂದ ಉದಾಹರಣೆಗಳು ನಮ್ಮ ಮುಂದಿರುವಾಗ ಹಿಂಡನ್ ಬರ್ಗ್ ವರದಿ ಮಾಡಿದ ಆರೋಪಗಳ ವಿಷಯದಲ್ಲಿ ಮಾತ್ರ ಉದಾರತೆ ತೋರುವ ಅಗತ್ಯವೇನಿದೆ?

ಡಾ. ಉದಯಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು


ಈ ಸುದ್ದಿಯನ್ನೂ ಓದಿ- ಅದಾನಿ ಬೇನಾಮಿ ಕಂಪನಿಗಳಲ್ಲಿ ಸೆಬಿ ಮುಖ್ಯಸ್ಥರ ಹೂಡಿಕೆ: ಹಿಂಡನ್‌ಬರ್ಗ್ ತನಿಖೆಯಿಂದ ಬಯಲು

More articles

Latest article