ಕಳೆದ ಘಟನೆಗಳ ಮೆಲುಕಿನೊಂದಿಗೆ… ಹೊಸ ವರ್ಷದ ಶುಭಾಶಯಗಳೊಂದಿಗೆ…..

ಇವೆಲ್ಲವುಗಳ ನಡುವೆಯೇ 2024 ನಮ್ಮೆಲ್ಲರನ್ನು ಬರ ಮಾಡಿಕೊಂಡಿದೆ… ಭಾರತೀಯರ ಪಾಲಿಗೆ ಜನರ ಬದುಕು ಭವಿಷ್ಯಗಳನ್ನು ನಿರ್ಧರಿಸುವಲ್ಲಿ ಇದು ಬಹಳ ಮುಖ್ಯವಾದ ವರ್ಷ. ಕಾರಣ, ಬರುವ ಏಪ್ರಿಲ್- ಮೇಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ...

Most read

ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ

ಈ ಜಗ ಓಡುತಿದೆ

ಪ್ರಗತಿಯ ಹಂತಕೊ

ಪ್ರಳಯ ದುರಂತಕೊ

ಹಳತ ನೋಡಿ ತಾ ಕಿಲಕಿಲ ನಗುತಲಿ

ಈ ಜಗ ಓಡುತಿದೆ…

ಎಂದು ಕವಿ ಪು.ತಿ.ನ ಹೇಳಿದಂತೆ ಕಾಲ ಅದೆಷ್ಟು ಬೇಗ ಘಟಿಸುತ್ತದೆ! ಹೀಗೆ ಬಂದು ಹಾಗೆ ಮಾಯವಾಗಿ ಬಿಡುವ ಒಂದು ವರುಷದಲ್ಲಿ ಅದೆಷ್ಟೊಂದು ಘಟನೆಗಳು ಸಂಭವಿಸಿಬಿಡುತ್ತವೆ!

  • 2023 ಅನೇಕ ಘಟನಾವಳಿಗಳಿಗೆ ಸಾಕ್ಷಿಯಾಯಿತು. ಭಾರತ ಜನಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿತು. 142.52 ಕೋಟಿ ಜನರಿರುವ ಚೀನಾವನ್ನು ಹಿಂದಿಕ್ಕೆ 142.86 ಕೋಟಿ ಜನಸಂಖ್ಯೆ ಸಾಧಿಸಿದ ಭಾರತ ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದೆನಿಸಿಕೊಂಡಿತು. ಡೆಮಗ್ರಫಿಕ್ ಡಿವೆಡೆಂಡ್ (demographic dividend) ವಿಷಯದಲ್ಲಿ ಅತಿ ಹೆಚ್ಚು ಅವಕಾಶಗಳನ್ನು ಹೊಂದಿರುವ ಭಾರತಕ್ಕೆ ಅದು ಹೊಂದಿರುವ ಯುವಜನರ ಸಂಖ್ಯೆ ದೊಡ್ಡ ಆಸ್ತಿಯಾಗಿದೆ. ಆದರೆ ಈ ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ದೇಶ ನಿರ್ಮಾಣಕ್ಕೆ ತೊಡಗಿಸಬಲ್ಲ ಸಮರ್ಥ ಸರ್ಕಾರಗಳದ್ದೇ ಕೊರತೆ.
  • ಚಂದ್ರಯಾನ 2ರ ವಿಫಲತೆಯೊಂದಿಗೆ ಅಂತರಿಕಕ್ಷ ಸಂಶೋಧನೆಯಲ್ಲಿ ತುಸು ಹಿನ್ನಡೆ ಕಂಡಿದ್ದ ಭಾರತದ ಇಸ್ರೋ ಚಂದ್ರಯಾನ 3ನ್ನು ಯಶಸ್ವಿಯಾಗಿ ನೆರವೇರಿಸಿ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ (Vikram Lander) ಮತ್ತು ಪ್ರಗ್ಯಾನ್ ರೋವರ್ (Pragyan Rover) ಇಳಿಸಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಪಂಚ ಮಟ್ಟದಲ್ಲಿ ತನ್ನ ಛಾಪು ಮೂಡಿಸಿತು. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಟ್ಟುಕೊಳ್ಳುವ ಕೆಲಸವನ್ನು ಇಸ್ರೋ ವಿಜ್ಞಾನಿಗಳು ಮಾಡಿದರು.
  • ಕರ್ನಾಟಕದ ಜನತೆಯ ಪಾಲಿಗೆ 2023 ನಿರಾಳತೆಯನ್ನು ತಂದ ವರ್ಷವಾಯ್ತು. ಹಿಂದಿನ ಮೂರು ನಾಲ್ಕು ವರ್ಷಗಳಲ್ಲಿ ಆಳಿದ ಬಿಜೆಪಿ ಸರ್ಕಾರದ ಜನವಿರೋಧಿತನ ಯಾವ ಮಟ್ಟ ತಲುಪಿತ್ತೆಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಸರ್ಕಾರ ಎಂದರೆ ಕಮಿಷನ್ ಲೂಟಿ ಎಂಬ ಮಟ್ಟಕ್ಕೆ ಹೋಗಿ ನಿಂತದ್ದು ನಾಚಿಕೆಗೇಡಿನ ಸಂಗತಿ ಎನ್ನಬಹುದು. ಹೀಗಾಗಿ ವಿಧಾನ ಸಭಾ ಚುನಾವಣೆಯಲ್ಲಿ ತೀವ್ರಮಟ್ಟದ ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಯಿತು. ಹೊಸ ಸರ್ಕಾರ ತಂದ ಗ್ಯಾರಂಟಿ ಯೋಜನೆಗಳು ಕೊಳ್ಳುವ ಶಕ್ತಿಯೇ ಕುಂದಿ ಹೋಗಿದ್ದ ಜನರ ಪಾಲಿಗೆ ದೊಡ್ಡ ನಿಟ್ಟುಸಿರು ನೀಡಿದವು ಎನ್ನಬಹುದು. ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಎಂತಹುದೇ ಆರ್ಥಿಕತೆಯೂ ನೆಲ ಕಚ್ಚುತ್ತದೆ ಎನ್ನುವುದು ಕನಿಷ್ಟ ಆರ್ಥಿಕ ತಿಳುವಳಿಕೆ. ಕಳೆದ ಎಂಟು ಹತ್ತು ವರ್ಷಗಳಲ್ಲಿ ದೇಶದ ಜನರು ಹೊಡೆತಗಳ ಮೇಲೆ ಹೊಡೆತ ತಿಂದು ತಮ್ಮ ಕೊಳ್ಳುವ ಶಕ್ತಿ ಕಳೆದುಕೊಂಡಿರುವುದನ್ನು ಆರ್ಥಿಕ ತಜ್ಞರು ಹೇಳುತ್ತಲೇ ಬಂದಿದ್ದಾರೆ. ನೋಟ್ ಬ್ಯಾನ್ (Demonetization) ಮತ್ತು ಜಿಎಸ್ಟಿ (GST) ಹಾಗೂ ಬೆಲೆ ಏರಿಕೆಗಳ ಗಾಯದ ಮೇಲೆ ಕೊವಿಡ್ ದೊಡ್ಡ ಬರೆ ಎಳೆದಿತ್ತು. ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲ್ ಬೆಲೆ ಏರಿಕೆಗಳು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಗಳ ಜನರಿಗೆ ಬಾರೀ ಹೊಡೆತ ನೀಡಿದ್ದವು. ಇಂತಹ ಸಂದರ್ಭದಲ್ಲಿ ಹೊಸ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ನೀರಿನಲ್ಲಿ ಮುಳುಗುವವರಿಗೆ ಹುಲ್ಲು ಕಡ್ಡಿಯ ಆಸರೆ ಎಂಬಂತೆ ಆಸರೆ ನೀಡಿದ್ದು ಸುಳ್ಳಲ್ಲ.
  • ಜಾಗತಿಕವಾಗಿ ನೋಡಿದಾಗ   ಇಡೀ ಜಗತ್ತಿನ ಜನರನ್ನು ತಲ್ಲಣಗೊಳಿಸುವ ಘಟನೆಗಳು 2023ರ ಕಡೆಯಲ್ಲಿ ನಡೆದವು. ಅಕ್ಟೋಬರ್ ನಂತರದಲ್ಲಿ ಪ್ಯಾಲೆಸ್ತೀನಿನ ಗಾಜಾದಲ್ಲಿ ನಡೆದ ಇಸ್ರೇಲ್ ದಬ್ಬಾಳಿಕೆಯ ಕೃತ್ಯಗಳು, ಅದನ್ನು ಅನುಸರಿಸಿ ನಡೆದ ಹಮಾಸ್ (Hamas) ನಡೆಸಿದ ಹಿಂಸಾತ್ಮಕ ದಾಳಿ, ನಂತರದ ಇಸ್ರೇಲ್ ಸೈನ್ಯ ತಿಂಗಳುಗಟ್ಟಲೆ ನಡೆಸಿದ ನರಹತ್ಯೆಯ ಘಟನೆಗಳು ಮತ್ತೊಮ್ಮೆ ಮನುಷ್ಯತ್ವದ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದವು. ಕೆಲವೇ ವರ್ಷಗಳ ಹಿಂದೆ ಒಂದೇ ಒಂದು ವೈರಸ್- ಕೊರೊನಾ ವೈರಸ್- ಇಡೀ ಮನುಷ್ಯ ಎಷ್ಟು ಕುಬ್ಜ ಎಂದು ತೋರಿಸಿಕೊಟ್ಟಿದ್ದರೂ ಯಾವುದರಿಂದಲೂ ಮನುಷ್ಯ ಪಾಠ ಕಲಿಯಲಾರ ಎಂದು ಇಸ್ರೇಲ್- ಪ್ಯಾಲೆಸ್ತೀನ್ ಹಿಂಸೆಗಳಲ್ಲಿ ಮತ್ತೆ ಸಾಬೀತಾಯಿತು. ಹೆಂಗಸರು ಮಕ್ಕಳೆನ್ನದೆ, ಶಾಲೆ ಆಸ್ಪತ್ರೆ ಎನ್ನದೆ ರಾಕೆಟ್, ಕ್ಷಿಪಣಿ ಹಾರಿಸಿ ಜೀವಗಳನ್ನು ಬಲಿ ತೆಗೆದುಕೊಳ್ಳುವುದು ಯಾವ ದೇಶಾಭಿಮಾನ, ಯಾವ ಧರ್ಮಾಭಿಮಾನ ಯಾವ ಬಗೆಯ ಶೌರ್ಯ? ಈ ದಾಳಿಗಳ ಹಿನ್ನೆಲೆಯಲ್ಲಿ ಬುದ್ಧಿಜೀವಿ ಜಗತ್ತಿನಲ್ಲಿ ನಡೆದ ಒಂದು ವಿರೋಧಾಭಾಸದ ಸಂಗತಿಯನ್ನಿಲ್ಲಿ ಹೇಳಬೇಕು. ಜಿಯೋನಿಸ್ಟ್ (ZIONIST) ಕೌಟುಂಬಿಕ ಹಿನ್ನೆಲೆಯಿಂದಲೇ ಬಂದಂತಹ ಮಹಾ ಬುದ್ಧಿಜೀವಿ ನೋಮ್ ಚಾಮ್ಸ್ಕಿ (Noam Chomsky) ಎಂದಿನಂತೆ ಈ ಹೊತ್ತಿನಲ್ಲೂ ಇಸ್ರೇಲ್- ಅಮೆರಿಕ ಜಂಟಿ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದರು. ಇಸ್ರೇಲ್ ನಡೆಸುತ್ತಿರುವುದು ದಕ್ಷಿಣ ಆಫ್ರಿಕ ಪಾಲಿಸಿದ ಅಪಾರ್ಥೈಡ್ ನೀತಿಗಿಂತಲೂ ಕ್ರೂರವಾದ ಅಪಾರ್ಥೈಡ್ ಜನಾಂಗಭೇದ (Apartheid) ನೀತಿ ಪಾಲಿಸುತ್ತಿದೆ ಎಂದರು ದಿಟ್ಟತನದಿಂದ. ಇದೇ ಸಂದರ್ಭದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಒಬ್ಬ ಪ್ರಮುಖ ಪಬ್ಲಿಕ್ ಇಂಟಲೆಕ್ಚುವಲ್ ಎಂದು ಮೆಚ್ಚುಗೆ ಪಡೆದಿದ್ದ ಮತ್ತೊಬ್ಬ ಇಸ್ರೇಲಿನ ಚಿಂತಕ ಮತ್ತು ಲೇಖಕ, ಸೇಪಿಯನ್ಸ್ ಕೃತಿಯಿಂದ ವಿಶ್ವಖ್ಯಾತಿ ಪಡೆದಿರುವ ಯುವಾಲ್ ನೋವಾ ಹರಾರಿ (Yucal Nova Harari) ಮಾತ್ರ ಇಸ್ರೇಲ್- ಪ್ಯಾಲೆಸ್ತೀನ್ ವಿಷಯದಲ್ಲಿ ತಾವೇ ಹಿಂದೆ ವ್ಯಕ್ತಪಡಿಸಿದ್ದ ನಿಲುವುಗಳಿಗೆ ಯೂಟರ್ನ್ ಹೊಡೆದು ಸಂಪೂರ್ಣ ವ್ಯತಿರಿಕ್ತವಾಗಿ ಇಸ್ರೇಲ್ ನ ದಬ್ಬಾಳಿಕೆಯ ಪರವಾಗಿ ನಿಂತಿದ್ದು ಮಾತ್ರ ಒಂದು ಬೌದ್ಧಿಕ ದುರಂತವೆಂದೇ ಹೇಳಬೇಕು. ವ್ಯಕ್ತಿಗಳಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಎಂಬುದು ಎಷ್ಟು ಮುಖ್ಯ ಎಂಬುದಕ್ಕೆ ಈ ವಿದ್ಯಮಾನ ಸಾಕ್ಷಿಯಾಗಿದೆ.

ನಲ್ಮೆಯ ಓದುಗರೆ,

ಇವೆಲ್ಲವುಗಳ ನಡುವೆಯೇ  2024 ನಮ್ಮೆಲ್ಲರನ್ನು ಬರ ಮಾಡಿಕೊಂಡಿದೆ… ಭಾರತೀಯರ ಪಾಲಿಗೆ ಜನರ ಬದುಕು ಭವಿಷ್ಯಗಳನ್ನು ನಿರ್ಧರಿಸುವಲ್ಲಿ ಇದು ಬಹಳ ಮುಖ್ಯವಾದ ವರ್ಷ. ಕಾರಣ, ಬರುವ ಏಪ್ರಿಲ್- ಮೇಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ. ಈಗಾಗಲೇ ಜನರ ಮನಸ್ಸನ್ನು ಭಾವುಕವಾಗಿ ಪ್ರಚೋದಿಸುವ, ಕೆರಳಿಸುವ ಹಲವು ತಂತ್ರಗಾರಿಕೆಯಲ್ಲಿ ಪಕ್ಷಗಳು ನಿರತವಾಗಿವೆ. ಈ ಚುನಾವಣೆಯಲ್ಲಿ ಜನರ ದೈನಂದಿನ ಸಮಸ್ಯೆಗಳು, ಬದುಕಿನ ಸ್ಥಿತಿ ಗತಿಗಳು, ಬದುಕಿನ ಭದ್ರತೆಯ ವಿಚಾರಗಳು, ದೇಶದ ಏಳಿಗೆಗೆ ಸಂಬಂಧಿಸಿದ ವಿಚಾರಗಳು ಚರ್ಚೆಗೆ ಬರುತ್ತವೆಯೋ ಅಥವಾ ಕೇವಲ ಭಾವನಾತ್ಮಕ ಧಾರ್ಮಿಕ ವಿಚಾರಗಳು ಚರ್ಚೆಗೆ ಬರುತ್ತವೆಯೋ ಎಂಬುದರ ಮೇಲೆ ಚುನಾವಣೆಯ ಫಲಿತಾಂಶವನ್ನೂ ಊಹಿಸಬಹುದು. ಬೇರೆ ಬೇರೆ ರಾಜಕೀಯ ಶಕ್ತಿಗಳು, ಸಾಂಸ್ಕೃತಿಕ ರಾಜಕಾರಣಗಳು ಈ ಚರ್ಚೆಯನ್ನು ತಮಗೆ ಬೇಕಾದ ಕಡೆಗೆ ತಿರುಗಿಸಲು ತಮ್ಮ ತಮ್ಮ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ವಿ ದ ಪೀಪಲ್ ಆಫ್ ಇಂಡಿಯಾ ಅಂದರೆ ಭಾರತದ ಜನತೆಯಾದ ನಾವು- ಈ ನಾವುಗಳಿಗೆ ಒಂದು ವಿಶೇಷ ಹೊಣೆಗಾರಿಕೆ ಬಂದೊದಗಿದೆ. ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ನಮಗೆ ಒಂದು ಅವಕಾಶ ಕೂಡಾ.

ಈ ಚಾರಿತ್ರಿಕ ಅವಕಾಶಕ್ಕೆ ಬೆನ್ನು ತೋರದೇ ನಮ್ಮ ಹೆಗಲ ಮೇಲೆ ಹೊಣೆಗಾರಿಕೆಯ ಭಾರವನ್ನು ಹೊರಲು ಸಿದ್ಧರಾಗೋಣ. ಈ ನಿಟ್ಟಿನಲ್ಲಿ ಕನ್ನಡ ಪ್ಲಾನೆಟ್ ನಿಮ್ಮ ಕಣ್ಮಣಿಯಾಗಿ, ನಿಮ್ಮ ಕಣ್ಣೋಟವಾಗಿ ಹಾಗೂ ಜನ ಸಾಮಾನ್ಯರ ಪಾಲಿನ ಅಕ್ಷರದಾಸರೆಯಾಗಿ ನಿಮ್ಮೊಂದಿಗೆ ಯಾವತ್ತೂ ಇರುತ್ತದೆ..

ಪ್ರೀತಿಯಿಂದ

ಹೊಸ ವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ

ಕನ್ನಡ ಪ್ಲಾನೆಟ್ ಬಳಗ

More articles

Latest article